₹500ರ ನೋಟೇಕೆ ಅತಿ ವಿರಳ? ಪ್ರಧಾನಿ ಮೋದಿಯೇಕೆ ಸಂಸತ್ತಿಗೆ ಬರಲೊಲ್ಲರು?

 

ಡಿಜಿಟಲ್ ಕನ್ನಡ ವಿಶೇಷ:

ನೋಟು ಅಮಾನ್ಯವೆಂಬ ಸರ್ಕಾರದ ನೀತಿ ಕಾಳಧನ ತಡೆಗೆ ಖಂಡಿತ ಕೊಡುಗೆ ನೀಡಲಿದೆ ಎಂದು ಬೆಂಬಲಿಸುತ್ತಿರುವ ಜನಸಾಮಾನ್ಯರೂ ಕೇಳುತ್ತಿರುವ ಪ್ರಶ್ನೆ ಇದು. ಅದೇಕೆ ₹2000 ನೋಟು ಸಿಕ್ಕಷ್ಟು ಸುಲಭದಲ್ಲಿ ₹500ರ ನೋಟು ಸಿಗುತ್ತಿಲ್ಲ ಅಂತ. ಇದು ಸಿಕ್ಕಿದ್ದೇ ಆದಲ್ಲಿ ವಹಿವಾಟಿನ ಸಮಸ್ಯೆಗಳು ಹಲವು ವಿಧದಲ್ಲಿ ಕಡಿಮೆ ಆಗಲಿವೆ ಎಂಬುದು ಹೆಚ್ಚಿನವರ ಅಭಿಮತ. ₹500-₹1000ಗಳಲ್ಲಿದ್ದ ಶೇ. 86ರಷ್ಟು ನಗದನ್ನೇ ಹೀರಿಬಿಟ್ಟಿರುವುದರಿಂದ ಐನೂರರ ನೋಟಿನ ಹೆಚ್ಚು ಪ್ರಚುರತೆ ಸಮಸ್ಯೆ ಬಗೆಹರಿಸೀತು ಎಂಬ ಗ್ರಹಿಕೆ ಇದೆ.

ಎಟಿಎಂ ಮರುವಿನ್ಯಾಸದ ಕತೆ ಇವತ್ತಿಗೆ ಹಳೆಯದಾದಂತೆ ತೋರುತ್ತಿದೆ. ₹500ರ ನೋಟಿನ ಅಲಭ್ಯತೆಗೆ ಬೇರೆಯೇ ಕಾರಣಗಳು ಇದ್ದಂತೆ ತೋರುತ್ತಿವೆ.

  • ಕಾಳಧನ, ಹವಾಲಾ ಮತ್ತು ಭಯೋತ್ಪಾದನೆ ನಿಯಂತ್ರಣ ಇವುಗಳೊಂದಿಗೆ ಶುರುವಾಗಿದ್ದ ನೋಟು ಅಮಾನ್ಯದ ಚರ್ಚೆಯನ್ನು ಪ್ರಧಾನಿ ಮೋದಿ ಇತ್ತೀಚಿನ ದಿನಗಳಲ್ಲಿ ‘ನಗದು ರಹಿತ ಅರ್ಥವ್ಯವಸ್ಥೆ’ಯತ್ತಲೇ ಹೆಚ್ಚು ಕೇಂದ್ರೀಕರಿಸಿರುವುದು ಅವರ ಮಾತುಗಳಲ್ಲಿ ವೇದ್ಯ. ಅಂದರೆ ಬಹುಪಾಲು ಜನವರ್ಗವಾದರೂ ಈ ನಗದಿನ ಕಿರಿಕಿರಿಯಿಂದಾಗಿ ಹೆಚ್ಚೆಚ್ಚು ಕಾರ್ಡುಗಳನ್ನು, ತಂತ್ರಜ್ಞಾನವನ್ನೂ ಬಲವಂತವಾಗಿಯಾದರೂ ಉಪಯೋಗಿಸಲಿ ಎಂಬ ಒತ್ತಡ ತಂತ್ರವೊಂದು ಇಲ್ಲಿದ್ದಂತೆ ತೋರುತ್ತಿದೆ. ಹೀಗಾಗಿ ಡಾಲರಿನಂತೆ ತೋರುವ ₹500 ಚಲಾವಣೆಗೆ ಬಂದರೂ ವ್ಯಾಪಕತೆ ಇಲ್ಲವಾಗಿದೆ.
  • ₹2000 ತಾತ್ಕಾಲಿಕ ವ್ಯವಸ್ಥೆಯಾಗಿದ್ದು ಮುಂದೆಂದೋ, ಅಮಾನ್ಯ ಮಾರ್ಗವಲ್ಲದಿದ್ದರೂ ಹಂತ ಹಂತವಾಗಿ ಹಿಂದಕ್ಕೆ ತೆಗೆದುಕೊಂಡಾರು ಎಂಬ ನಂಬಿಕೆಯೊಂದು ಅದು ಹೇಗೋ ಜನಮಾನಸದಲ್ಲಿ ಬೇರೂರುತ್ತಿದೆ. ಇದರ ಸಂಗ್ರಹದಿಂದ ಮುಂದೊಂದು ದಿನ ಕಳೆದುಕೊಳ್ಳಬಹುದಾದ ಮೊತ್ತದ ಸಾಧ್ಯತೆ ದೊಡ್ಡದು. ಆದರೆ ₹500 ನೋಟುಗಳ ಬಗ್ಗೆ ಇಂಥ ಆತಂಕವಿಲ್ಲ. ಈ ನೋಟುಗಳು ಬರುತ್ತಲೇ, ಈಗ ಸಾಮಾನ್ಯರ ಖಾತೆಗಳನ್ನು ಉಪಯೋಗಿಸಿಕೊಂಡು ಬಿಳಿ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿರುವವರು, ಇದೇ ಮಾರ್ಗದಲ್ಲಿ ಹೊಸ ₹500ರ ಸಂಗ್ರಹಕ್ಕೆ ಮುಂದಾದಾರು. ಹೀಗಾಗಿ ಡಿಸೆಂಬರ್ 30ರವರೆಗೆ ₹500ರ ನೋಟನ್ನು ವಿರಳವಾಗಿಯೇ ಬಿಡುಗಡೆ ಮಾಡುವ ಯೋಚನೆ ಇದೆಯೇ ಎಂಬ ಅನುಮಾನ ಕಾಡುತ್ತದೆ. ಅಷ್ಟರವರೆಗೆ ಬಡವರು, ಸಾಮಾನ್ಯರ ಖಾತೆ ಉಪಯೋಗಿಸಿಕೊಂಡು ಹಣ ತುಂಬಿ-ತೆಗೆಯುವ ಧನಾಢ್ಯರಿಗೆ ಕೆಂಗುಲಾಬಿ ಮತ್ತು ಕಡಿಮೆ ಮುಖಬೆಲೆ ನೋಟುಗಳೇ ಸಂದಾಯವಾಗುತ್ತವೆ. ಇವೆರಡೂ ಸಂಗ್ರಹಕ್ಕೆ ಪೂರಕವಾಗಿಲ್ಲ.
  •  ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರ ಮಾತುಗಳನ್ನು ನಂಬುವುದಾದರೆ ದೇಶದ ಮುದ್ರಣಾಲಯಗಳಿಗೆ ವರ್ಷಕ್ಕೆ 300 ಕೋಟಿ ಕರೆನ್ಸಿಗಳನ್ನು ಮಾತ್ರವೇ ಮುದ್ರಿಸುವ ಸಾಮರ್ಥ್ಯವಿದೆ. ಇದು ಹೌದೆಂದಾದಲ್ಲಿ ಸರ್ಕಾರ ತಾನು ಏನೇ ಪ್ರವಾಹೋಪಾದಿಯಲ್ಲಿ ಕೆಲಸ ಮಾಡುತ್ತಿದ್ದೇನೆಂದರೂ ₹500ರ ನೋಟುಗಳ ಮೂಲಕ ನಗದು ನಿರ್ವಾತವನ್ನು ತುಂಬುವುದಕ್ಕೆ ನಾಲ್ಕೈದು ತಿಂಗಳುಗಳೇ ಬೇಕಾಗುತ್ತವೆ.
  • ಬ್ಯಾಂಕ್ ಉದ್ಯೋಗಿಗಳನ್ನು ಮಾತನಾಡಿಸಿದರೆ ಅವರು ಇನ್ನೊಂದು ಸೂಕ್ಷ್ಮವನ್ನು ಹೇಳುತ್ತಾರೆ. ಆ ಪ್ರಕಾರ, ಕೇವಲ ಎಟಿಎಂಗಳ ಮರುವಿನ್ಯಾಸವಲ್ಲ, ಬ್ಯಾಕುಗಳ ತಂತ್ರಾಂಶ ಸಹ ಹೊಸ ₹500ರ ನೋಟುಗಳ ನೀಡಿಕೆಗೆ ಬದಲಾಗಬೇಕು. ₹500 ನೋಟು ವಿತರಣೆ ಗುರುತಿಗೇ ಪ್ರತ್ಯೇಕ ಕಾಲಂ ಬೇಕಾಗುತ್ತದೆ. ಏಕೆಂದರೆ, ಈಗ ಹಳೆಯ ನೋಟುಗಳನ್ನು ಬ್ಯಾಂಕಿಗೆ ಜಮಾ ಮಾಡುತ್ತಿರುವವರು ಹೆಚ್ಚಿನವರು ₹500ರ ಹಳೆನೋಟನ್ನೇ ಹಿಂತಿರುಗಿಸುತ್ತಿದ್ದಾರಷ್ಟೆ. ಇದಕ್ಕೆ ಪ್ರತಿಯಾಗಿ ₹500ರ ನೋಟನ್ನೇ ಕೊಡುವ ಸಂದರ್ಭದಲ್ಲಿ, ಬಂದ 500ರ ನೋಟುಗಳೆಷ್ಟು- ಬ್ಯಾಂಕಿಂದ ಹೋಗಿದ್ದೆಷ್ಟು ಎಂಬ ಲೆಕ್ಕ ಇಡುವಾಗ ತುಸುವೇ ಗೊಂದಲವಾದರೂ ಉದ್ಯೋಗಿ ತಲೆಗೆ ಬರುತ್ತದೆ. ಏಕೆಂದರೆ, ಬರುತ್ತಿರುವ ನೋಟುಗಳು ಲೀಗಲ್ ಟೆಂಡರ್ ಅಲ್ಲ. ಅದೇ ಮುಖಬೆಲೆಯ ಹೊರಹೋಗುತ್ತಿರುವ ನೋಟು ಲೀಗಲ್ ಟೆಂಡರ್. ಒತ್ತಡದ ಈ ದಿನಗಳಲ್ಲಿ ಕಂಪ್ಯೂಟರ್ ದಾಖಲೆಯಲ್ಲಿ ತುಸು ಏರುಪೇರಾದರೂ ಕೋಲಾಹಲವಾಗುತ್ತದೆ. ₹500 ನೋಟಿನ ವ್ಯಾಪಕತೆ ಕಡಿಮೆ ಇರುವುದಕ್ಕೆ ಇದೂ ಕಾರಣವಿದ್ದಿರಬಹುದು.
  •  ಈ ಮಹತ್ವದ ನಿರ್ಣಯದ ಬಗ್ಗೆ ಪ್ರಧಾನಿ ಮೋದಿ ಚರ್ಚೆಯಲ್ಲಿ ಭಾಗವಹಿಸಿ ಉತ್ತರದಾಯಿ ಆಗಬೇಕು ಎಂದು ಪ್ರತಿಪಕ್ಷಗಳು ಕೋರುವುದರಲ್ಲಿ ತಪ್ಪೇನೂ ಇಲ್ಲ. ಆದರೆ, ಈ ಮೇಲಿನ ಎಲ್ಲ ತಾಂತ್ರಿಕ ಕಾರಣಗಳನ್ನು ವಿವರಿಸುವ ತ್ರಾಸು ಏಕೆಂದೇ ಕಲಾಪದಲ್ಲಿ ಭಾಗವಹಿಸುವುದಕ್ಕೆ ಪ್ರಧಾನಿ ಹಿಂದೇಟೇ? ಈ ವಿಷಯದಲ್ಲಿ ಎಂಥದ್ದೇ ಸಮಾಧಾನಕರ ವಿವರಣೆ ಕೊಟ್ಟರೂ ಪ್ರತಿಪಕ್ಷಗಳು ಒಪ್ಪಲಾರವೆಂಬುದು ಸ್ಪಷ್ಟವಿರುವಾಗ, ಇವರ ನಡುವೆ ಇದ್ದು ಸಹಮತಿ ಮೂಡಿಸುವುದಕ್ಕೆ ಸಮಯ ಕಳೆಯುವುದರ ಬದಲು, ಜನರ ನಡುವೆಯೇ ಹೆಚ್ಚು ಹೆಚ್ಚು ಮಾತನಾಡೋಣ ಎಂಬುದು ಮೋದಿ ಕಾರ್ಯತಂತ್ರ ಇದ್ದಂತಿದೆ. ಕೊನೆಗೂ ಸರ್ಕಾರ ನೋಡಿಕೊಳ್ಳಬೇಕಿರುವುದು ಜನರ ನಗದು ತೊಂದರೆ ಆಕ್ರೋಶವಾಗಿ ಸಿಡಿಯದಂತೆಯೇ ಹೊರತು, ಪ್ರತಿಪಕ್ಷಗಳು ಗದ್ದಲ ಮಾಡಿಯೇ ಮಾಡುತ್ತವೆ. ಹಾಗೆಂದೇ ಖುಷಿನಗರದಲ್ಲಿ ಬಿಜೆಪಿ ಪರಿವರ್ತನಾ ಸಮಾವೇಶದಲ್ಲೂ ಮೋದಿ, ’70 ವರ್ಷ ಲೂಟಿ ಮಾಡಿರುವ ಹಣ ತಿರುಗಿ ತರುತ್ತಿದ್ದೇನೆ. ಇದರಿಂದ ಬಡವರ ಮನೆ ಬೆಳಗುತ್ತೇನೆ’ ಎಂಬ ಜನಪ್ರಿಯ ಮಾದರಿಯನ್ನೇ ಪ್ರಯೋಗಿಸಿದರು. ಅಲ್ಲದೇ, ಪ್ರಧಾನಿ ಚರ್ಚೆಯಲ್ಲಿ ಭಾಗವಹಿಸಿ ಪ್ರತಿಕ್ರಿಯಿಸಿದರಷ್ಟೇ ಆಗಲಿಲ್ಲ, ಅದರ ಮೇಲೆ ಸಂಸತ್ತಿನಲ್ಲಿ ಮತದಾನವಾಗಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸುತ್ತಿರುವುದನ್ನು ಬಿಜೆಪಿ ಒಪ್ಪದು ಎಂಬುದು ಸ್ಪಷ್ಟ.

Leave a Reply