ಕಪ್ಪುಹಣ ಬಿಳಿ ಮಾಡಿಕೊಳ್ಳಲು ಕೇಂದ್ರದಿಂದ ಮತ್ತೊಂದು ಅವಕಾಶ

ಡಿಜಿಟಲ್ ಕನ್ನಡ ಟೀಮ್:

₹ 500 ಮತ್ತು 1000 ಮುಖಬೆಲೆಯ ನೋಟು ರದ್ದತಿಯ ನಂತರವೂ ಕಪ್ಪು ಹಣವನ್ನು ಕಾನೂನುಬದ್ಧವಾಗಿ ಬಿಳಿ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಈಗ ಮತ್ತೊಂದು ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಅದು ಹೇಗೆ ಅಂದ್ರೆ, ಕೇಂದ್ರ ಸರ್ಕಾರ ಈಗ ಪ್ರಧಾನಮಂತ್ರಿ ಗರೀಬ್ (ಬಡವರ) ಕಲ್ಯಾಣ ಯೋಜನೆ 2016ಯನ್ನು ಪರಿಚಯಿಸಿದ್ದು, ಆ ಮೂಲಕ ಕಪ್ಪುಹಣ ಹೊಂದಿರುವವರು ತಮ್ಮ ಬಳಿ ಇರುವ ಕಾನೂನು ಬಾಹೀರ ಹಣಕ್ಕೆ ಶೇ.50 ರಷ್ಟು ತೆರಿಗೆ ಕಟ್ಟಿ ಹಣವನ್ನು ಕಾನೂನುಬದ್ಧವಾಗಿ ಮಾಡಿಕೊಳ್ಳಬಹುದಾಗಿದೆ.

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸೋಮವಾರ ಲೋಕಸಭೆಯಲ್ಲಿ ಆದಾಯ ತೆರಿಗೆ ಕಾಯ್ದೆ 2016 (ತಿದ್ದುಪಡಿ) ಮಂಡಿಸಿದ್ದು, ಆ ಮೂಲಕ ಕಪ್ಪುಹಣದ ತೆರಿಗೆ ಪ್ರಮಾಣವನ್ನು ಶೇ.30ರಿಂದ 60ಕ್ಕೆ ಹೆಚ್ಚಿಸಲಾಗಿದೆ. ಈಗಾಗಲೇ ಕೇಂದ್ರ ಸರ್ಕಾರ ನೋಟು ರದ್ದತಿ ನಿರ್ಧಾರ ತೆಗೆದುಕೊಳ್ಳುವ ಮುನ್ನವೇ ತಮ್ಮ ಆಸ್ತಿಯನ್ನು ಘೋಷಿಸಿ ತೆರಿಗೆ ಕಟ್ಟುವ ಮೂಲಕ ಕಪ್ಪು ಹಣವನ್ನು ಬಿಳಿ ಮಾಡಿಕೊಳ್ಳಲು ಒಂದು ಅವಕಾಶ ನೀಡಿತ್ತು. ಈಗ ಮತ್ತೊಂದು ಅವಕಾಶ ನೀಡುತ್ತಿದ್ದು, ದುಬಾರಿ ತೆರಿಗೆ ಕಟ್ಟಿ ತಮ್ಮ ಹಣವನ್ನು ಕಾನೂನುಬದ್ಧವಾಗಿಸಿಕೊಳ್ಳಬಹುದಾಗಿದೆ. ಒಂದು ವೇಳೆ ಈ ಅವಕಾಶವನ್ನು ಕೈಚೆಲ್ಲಿ ಕಪ್ಪುಹಣದ ಜತೆ ಸಿಕ್ಕಿ ಬಿದ್ದರೆ ಅತಿ ದುಬಾರಿ ದಂಡವನ್ನೇ ತೆರಬೇಕಿದೆ.

ಆದಾಯ ತೆರಿಗೆ ಕಾಯ್ದೆಯನ್ನು ತಿದ್ದುಪಡಿ ಮಾಡಿ ಹೊಸದಾಗಿ ಪರಿಚಯಿಸಲಾಗಿರುವ ಕಾಯ್ದೆಯ ಪ್ರಮುಖ ಅಂಶಗಳು ಹೀಗಿವೆ…

  • ಕಪ್ಪುಹಣ ಹೊಂದಿರುವವರು ತಮ್ಮಲ್ಲಿರುವ ಹಣದ ಪ್ರಮಾಣವನ್ನು ಘೋಷಿಸಿಕೊಂಡು ಅದರಲ್ಲಿ ಶೇ.50 ರಷ್ಟು ತೆರಿಗೆ ಕಟ್ಟಿ, ಮಿಕ್ಕ ಹಣವನ್ನು ಕಾನೂನು ಪ್ರಕಾರವಾಗಿ ಬಿಳಿ ಮಾಡಿಕೊಳ್ಳಬಹುದು.
  • ಇಲ್ಲಿ ಕಪ್ಪುಹಣದ ಘೋಷಣೆಯ ನಂತರ ಸರ್ಕಾರಕ್ಕೆ ನೀಡಲಿರುವ ಶೇ.50 ರಷ್ಟು ಪ್ರಮಾಣದ ತೆರಿಗೆಯಲ್ಲಿ ಶೇ.30 ರಷ್ಟು ಸಾಮಾನ್ಯ ತೆರಿಗೆಯಾಗಿದ್ದು, ಹೆಚ್ಚುವರಿಯಾಗಿ ಶೇ.10ರಷ್ಟು ದಂಡವಾಗಿರಲಿದೆ. ಇನ್ನು ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಗೆ ತೆರಿಗೆ ಪ್ರಮಾಣದ (ಶೇ.30) ಶೇ.33 ರಷ್ಟು ಹೆಚ್ಚುವರಿ ತೆರಿಗೆ ಕಟ್ಟಬೇಕು. ಈ ಎಲ್ಲವೂ ಸೇರಿ ಕಪ್ಪುಹಣ ಘೋಷಿತನು ಒಟ್ಟು ಶೇ.50 ರಷ್ಟನ್ನು ಸರ್ಕಾರಕ್ಕೆ ನೀಡಬೇಕು.
  • ಕಪ್ಪುಹಣ ಘೋಷಿತರು ತಾವು ಠೇವಣಿ ಮಾಡಲಿರುವ ಕಪ್ಪು ಹಣದಲ್ಲಿ ಶೇ.25ರಷ್ಟನ್ನು ಕೇಂದ್ರ ಸರ್ಕಾರದ ಬಡತನ ನಿರ್ಮೂಲನಾ ಕಾರ್ಯಕ್ರಮಕ್ಕೆ ನಾಲ್ಕು ವರ್ಷಗಳ ಅವಧಿಗೆ ಬಡ್ಡಿ ರಹಿತವಾಗಿ ಠೇವಣಿ ಇಡಬೇಕು. ನಾಲ್ಕು ವರ್ಷಗಳ ನಂತರ ಆತನಿಗೆ ಈ ಹಣ ದೊರೆಯಲಿದೆ.
  • ಈ ರೀತಿಯಾಗಿ ದಂಡದ ಮೂಲಕ ಬರುವ ಹಣವನ್ನು ನೀರಾವರಿ, ವಸತಿ, ಶೌಚಾಲಯ ನಿರ್ಮಾಣ, ಮೂಲಸೌಕರ್ಯ ನಿರ್ಮಾಣ, ಪ್ರಾಥಮಿಕ ಶಿಕ್ಷಣ, ಆರೋಗ್ಯ, ಜೀವನೋಪಾಯ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲಾಗುವುದು.
  • ಆದಾಯ ತೆರಿಗೆ ಕಾಯ್ದೆ 2016 (ತಿದ್ದುಪಡಿ)ಯಲ್ಲಿ ಕಪ್ಪುಹಣ ಇಟ್ಟುಕೊಂಡಿರುವವರು ಸಿಕ್ಕಿ ಬಿದ್ದರೆ, ಅವರಿಗೆ ಶೇ.60 ರಷ್ಟು ತೆರಿಗೆ ಹಾಗೂ ತೆರಿಗೆಯಲ್ಲಿ ಶೇ.25 ರಷ್ಟು (ಅಂದರೆ ಶೇ.15) ಹೆಚ್ಚುವರಿ ತೆರಿಗೆ ವಿಧಿಸಲಾಗುವುದು. ಇನ್ನು ಶೇ.10 ರಷ್ಟನ್ನು ದಂಡವಾಗಿ ವಿಧಿಸಿ ಒಟ್ಟಾರೆಯಾಗಿ ಸಿಕ್ಕಿ ಬಿದ್ದ ಕಪ್ಪುಹಣದಲ್ಲಿ ಶೇ.85 ರಷ್ಟನ್ನು ಸರ್ಕಾರಕ್ಕೆ ನೀಡಬೇಕು.

Leave a Reply