ಐಟಿಯಲ್ಲಿ ನಾವೇ ನಂಬರ್ ಒನ್- ಮುಮಂ, ನೋಟು ಅಮಾನ್ಯದಿಂದ ಬಿಜೆಪಿಗೆ ಹೊಡೆತವಾಗಿಲ್ಲವೆಂದು ನಿರೂಪಿಸಿದ ಮಹಾ ಸ್ಥಳೀಯ ಚುನಾವಣೆ, ಸಿನಿಮಿಯ ರೀತಿಯಲ್ಲಿ ಜೈಲಿಂದ ತಪ್ಪಿಸಿಕೊಂಡ ಉಗ್ರ ಸಿಕ್ಕಿಬಿದ್ದ, ಅಮಿತ್ ಶಾ ವಿರುದ್ಧ ಸಿದ್ದರಾಮಯ್ಯ ಕಿಡಿ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಆರಂಭವಾದ ಐಟಿ ಇ ಬಿಜ್ ಕಾರ್ಯಕ್ರಮ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರು…

ಡಿಜಿಟಲ್ ಕನ್ನಡ ಟೀಮ್:

ಐಟಿ ಕ್ಷೇತ್ರದಲ್ಲಿ ರಾಜ್ಯದ ಅಭಿವೃದ್ಧಿ ಕುರಿತಂತೆ ಸಿಎಂ ಮಾತು

ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೋಮವಾರ ಪ್ರತಿಷ್ಠಿತ ಐಟಿ ಬಿಜ್ 2016 ಕಾರ್ಯಕ್ರಮ ಉದ್ಘಾಟನೆಯಾಗಿದೆ. ಕಳೆದ 19 ವರ್ಷಗಳಿಂದ ನಗರದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ಐಟಿ ಕ್ಷೇತ್ರದಲ್ಲಿ ಸಾಧನೆ ಮಾಡಲು ಹೊಸ ವೇದಿಕೆಯಾಗಿದೆ. ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಐಟಿ ಕ್ಷೇತ್ರದಲ್ಲಿ ರಾಜ್ಯದ ಪ್ರಗತಿ ಬಗ್ಗೆ ಹೇಳಿದಿಷ್ಟು:

‘ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿದೆ. ಈ ಕ್ಷೇತ್ರದಲ್ಲಿ ಹೆಚ್ಚು ಬಂಡವಾಳ ಪಡೆಯಲು ಡಿಜಿಟಲೀಕರಣದಂತಹ ಯೋಜನೆಗಳು ಮುಖ್ಯ. ರಾಜ್ಯದ ಸಣ್ಣ, ಅತಿ ಸಣ್ಣ, ಮಧ್ಯಮ ಕೈಗಾರಿಕಾ ಕಂಪನಿಗಳಿಗೆ ಉತ್ತೇಜನ ನೀಡಲು ಮುಂದಾಗಿರುವ ಸರ್ಕಾರ ಎಲ್ಲ ರೀತಿಯಲ್ಲೂ ಕೈಗಾರಿಕಾ ಕ್ಷೇತ್ರಕ್ಕೆ ಒತ್ತು ನೀಡಿದೆ. ಅದರಲ್ಲೂ ಸ್ಟಾರ್ಟ್ ಅಪ್ ಕಂಪನಿಗಳಿಗೆ ಆದ್ಯತೆ ನೀಡಲಾಗುತ್ತಿದೆ.’

‘ಡಿಜಿಟಲಿಕರಣದ ಮೂಲಕ ನ್ಯಾಷನಲ್ ಆಪ್ಟಿಕಲ್ ಸೈಬರ್ ನೆಟ್ವರ್ಕ್ ಸೇವೆಯನ್ನು ಗ್ರಾಮಾಂತರ ಪ್ರದೇಶಗಳಿಗೂ ವಿಸ್ತರಿಸಿ ಈ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಬೇಕು. ಸರ್ಕಾರ 2 ಮತ್ತು 3ನೇ ಹಂತದ ನಗರಗಳಲ್ಲೂ ತಂತ್ರಜ್ಞಾನ ಆಧಾರಿತ ಕೈಗಾರಿಕೆಗಳ ಬೆಳವಣಿಗೆಗೆ ಉತ್ತೇಜನ ನೀಡುತ್ತಿದೆ. ಇದರಿಂದಾಗಿ ಮೈಸೂರು, ಬೆಳಗಾವಿ, ಹುಬ್ಬಳ್ಳಿ ಧಾರವಾಡ, ಕಲಬುರಗಿ, ಮಂಗಳೂರಿನಂತಹ ನಗರಗಳು ಈ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಲು ಸಾಧ್ಯ. ಸರ್ಕಾರದ ಮೂಲಕ 3ಡಿ ಪ್ರಿಂಟಿಂಗ್ ಶಾಲೆ, ಅನಿಮೇಷನ್ ವಿಷ್ಯುಯಲ್ ಎಕ್ಸ್ ಪೋಜರ್ ಕುರಿತ ತಂತ್ರಜ್ಞಾನದಿಂದ ಉದ್ಯೋಗ ಕಲ್ಪಿಸಲು ಸಾಧ್ಯ.’

ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ಜಯ

ನೋಟು ರದ್ದತಿ ನಂತರ ಮಹಾರಾಷ್ಟ್ರದಲ್ಲಿ ನಡೆದ ನಗರ ಪಾಲಿಕೆ ಮತ್ತು ಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ಮಹಾರಾಷ್ಟ್ರದ ಸ್ಥಳೀಯ ಚುನಾವಣೆ ಏಕೆ ಮಹತ್ವ ಎಂದು ಕೇಳೊದಾದ್ರೆ, ಕೇಂದ್ರ ಸರ್ಕಾರ ನೋಟು ರದ್ದತಿ ನಿರ್ಧಾರ ತೆಗೆದುಕೊಂಡ 11 ದಿನಗಳ ನಂತರ ಅಂದರೆ ನ.19ರಂದು ಈ ಚುನಾವಣೆ ನಡೆದಿತ್ತು. ಕೇಂದ್ರದ ನಿರ್ಧಾರದಿಂದ ಜನ ಬೇಸತ್ತಿದ್ದು ಈ ಚುನಾವಣೆಯಲ್ಲಿ ಜನರು ಬಿಜೆಪಿಯನ್ನು ಸೋಲಿಸಲಿದ್ದಾರೆ ಎಂಬ ಮಾತುಗಳು ಹರಿದಾಡಿದ್ದವು. ಆದರೆ, ಸೋಮವಾರ ಪ್ರಕಟವಾದ ಫಲಿತಾಂಶದಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ಸಂಜೆ 6 ಗಂಟೆ ಸುಮಾರಿಗೆ ಪ್ರಕಟವಾದ ಫಲಿತಾಂಶದಲ್ಲಿ 147 ನಗರಪಾಲಿಕೆಗಳ ಪೈಕಿ 142 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ 50, ಶಿವಸೇನೆ 25 ಕ್ಷೇತ್ರಗಳನ್ನು ಗೆದ್ದು ಭರ್ಜರಿ ಮುನ್ನಡೆ ಸಾಧಿಸಿತ್ತು. ಕಾಂಗ್ರೆಸ್ 24 ಹಾಗೂ ಎನ್ಸಿಪಿ 14 ಕ್ಷೇತ್ರಗಳನ್ನು ಗೆದ್ದು ತೀವ್ರ ಹಿನ್ನಡೆ ಅನುಭವಿಸಿವೆ.

ಇನ್ನು ನಗರ ಪಂಚಾಯ್ತಿ ಚುನಾವಣೆಯ 3,705 ಕ್ಷೇತ್ರಗಳ ಪೈಕಿ 2501 ಕ್ಷೇತ್ರಗಳ ಫಲಿತಾಂಶ ಹೊರಬಿದ್ದಿದ್ದು, ಅದರಲ್ಲಿ ಬಿಜೆಪಿ 610, ಶಿವಸೇನೆ 402, ಎನ್ಸಿಪಿ 482, ಕಾಂಗ್ರೆಸ್ 408, ಎಂಎನ್ಎಸ್ 12, ಬಿಎಸ್ಪಿ 4, ಇತರೆ 583 ಗೆದ್ದುಕೊಂಡಿವೆ.

ಪರಾರಿಯಾದ 24 ತಾಸಿನಲ್ಲೇ ಸಿಕ್ಕಿ ಬಿದ್ದ ಉಗ್ರ

ಸಿನಿಮೀಯ ರೀತಿಯಲ್ಲಿ ಜೈಲಿನಿಂದ ಪರಾರಿಯಾಗಿದ್ದ ಖಲಿಸ್ತಾನ್ ಲಿಬರೇಷನ್ ಫ್ರಂಟ್ ಮುಖ್ಯಸ್ಥ ಉಗ್ರ ಹರ್ಮಿಂದರ್ ಮಿಂಟೋನನ್ನು ಪೊಲೀಸರು 24 ತಾಸುಗಳಲ್ಲಿ ಬಂಧಿಸಿದ್ದಾರೆ. ಭಾನುವಾರ ಪಂಜಾಬ್ ಜೈಲಿನಿಂದ ಪರಾರಿಯಾಗಿದ್ದ ಮಿಂಟೋನನ್ನು ಪೊಲೀಸರು ಸೋಮವಾರ ನವದೆಹಲಿಯ ರೈಲ್ವೇ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಹರ್ಮಿಂದರ್ ಜೈಲಿನಿಂದ ಪರಾರಿಯಾದ ಘಟನೆ ಯಾವುದೇ ಸಿನಿಮಾ ದೃಶ್ಯಕ್ಕೂ ಕಮ್ಮಿ ಇರಲಿಲ್ಲ. ಭಾನುವಾರ ಬೆಳಗ್ಗೆ 12-14 ಮಂದಿ ಶಸ್ತ್ರಸಜ್ಜಿತರು ಅದರಲ್ಲಿ ಕೆಲವರು ಪೊಲೀಸರ ವೇಶದಲ್ಲಿದ್ದರು. ಇವರು ಅತ್ಯಂತ ಭದ್ರತೆಯನ್ನು ಹೊಂದಿರುವ ಪಂಜಾಬಿನ ಪಟಿಯಾಲದ ನಭಾ ಕೇಂದ್ರ ಕಾರಾಗೃಹದ ಭದ್ರತಾ ಸಿಬ್ಬಂದಿ ಮೇಲೆ ದಾಳಿ ನಡೆಸಿದರು. ನಂತರ ಇವರು ಮಿಂಟೋನನ್ನು ಪರಾರಿ ಮಾಡಿ ಕರೆದೊಯ್ದರು. ಈ ಉಗ್ರನ ಜತೆಗೆ ಜೈಲಿನಲ್ಲಿದ್ದ ಐವರು ಗ್ಯಾಂಗ್ ಸ್ಟರ್ ಗಳು ಪರಾರಿಯಾಗಿದ್ದರು.

ಈ ಕೃತ್ಯಕ್ಕೆ ಸಹಾಯ ಮಾಡಿದ ವ್ಯಕ್ತಿ ಕಂಬಳಿಯಲ್ಲಿ ಶಸ್ತ್ರಾಸ್ತ್ರಗಳನ್ನು ಬಚ್ಚಿಟ್ಟಿದ್ದ. ಜತೆಗೆ ಹೆಚ್ಚುವರಿಯಾಗಿ ಪೊಲೀಸ್ ಸಮವಸ್ತ್ರವನ್ನು ಹೊಂದಿದ್ದ. ಈ ಜೈಲಿನಿಂದ ಪರಾರಿಯಾಗುವ ಯೋಜನೆ ರೂಪಿಸಿದ್ದ ಮಾಸ್ಟರ್ ಮೈಂಡ್ ಪರ್ಮಿಂದರ್ ಸಿಂಗ್ ಅಲಿಯಾಸ್ ಪೈಂಡಾ ಎಂಬಾತನನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದರು. 10 ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದ ಹರ್ಮಿಂದರ್ ನನ್ನು ಥಾಯ್ಲೆಂಡ್ 2014 ರಲ್ಲಿ ಬಹಿಷ್ಕರಿಸಿತ್ತು. ಆಗ ಆತನನ್ನು ಭಾರತೀಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

ಹರ್ಮಿಂದರ್ ನನ್ನು ಬಂಧಿಸುವ ಪ್ರಯತ್ನದಲ್ಲಿ ಓರ್ವ ಯುವತಿ ರೀನಾ (24) ಬಲಿಯಾಗಬೇಕಾಯಿತು. ಪೊಲೀಸರ ಚೆಕ್ ಪೋಸ್ಟ್ ಅನ್ನು ಉಲ್ಲಂಘಿಸಿದ ಆರ್ಕೆಸ್ಟ್ರಾ ತಂಡದ ಬಸ್, ಮುಂದೆ ಸಾಗಿತು. ಈ ಹಂತದಲ್ಲಿ ನೆರ್ವಿ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ಉಗ್ರರ ತಡೆಯ ಕರ್ತವ್ಯದ ಮೇಲಿದ್ದ ಪೊಲೀಸರು ಹಾರಿಸಿದ ಗುಂಡಿಗೆ ರೀನಾ ಬಲಿಯಾದರು.

ಇನ್ನುಳಿದಂತೆ ನೀವು ತಿಳಿಯಬೇಕಿರೋ ಪ್ರಮುಖ ಸುದ್ದಿಗಳು…

  • ಕೇಂದ್ರ ಸರ್ಕಾರವು 83 ಕಲ್ಲಿದ್ದಲು ಬ್ಲಾಕ್ ಗಳನ್ನು ಹರಾಜು ಮಾಡುವ ಮೂಲಕ ಒಟ್ಟು ಸುಮಾರು ₹ 2779 ಕೋಟಿ ಆದಾಯ ಗಳಿಸಿದೆ ಎಂದು ಸಂಸತ್ತಿನಲ್ಲಿ ಮಾಹಿತಿ ಕೊಟ್ಟಿದ್ದಾರೆ ಕಲ್ಲಿದ್ದಲು, ಗಣಿಗಾರಿಕೆ ರಾಜ್ಯ ಸಚಿವ ಪಿಯೂಶ್ ಗೋಯಲ್. 2015ರ ಕಲ್ಲಿದ್ದಲು ಗಣಿಗಾರಿಕೆ ಕಾಯ್ದೆ ಅಡಿಯಲ್ಲಿ ಈ ಕಲ್ಲಿದ್ದಲು ಬ್ಲಾಕ್ ಗಳನ್ನು ಸಾರ್ವನಿಕ ಹಾಗೂ ಖಾಸಗಿ ಕಂಪನಿಗಳಿಗೆ ನೀಡಲಾಗಿದೆ ಎಂದು ಅವರು ತಿಳಿಸಿದರು.
  • ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರಾಜ್ಯ ಸರ್ಕಾರವನ್ನು ಟೀಕಿಸುವ ಯಾವುದೇ ನೈತಿಕತೆ ಹೊಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಮೋದಿ ಅವರು ಪ್ರಧಾನಿ ಆಗದೇ ಸಿಬಿಐ ಅನ್ನು ದುರ್ಬಳಕೆ ಮಾಡಿಕೊಳ್ಳದಿದ್ದರೆ ಅಮಿತ್ ಶಾ ಅವರು ಇಷ್ಟು ಹೊತ್ತಿಗಾಗಲೇ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದರು ಎಂದರು. ಆ ಮೂಲಕ ಭಾನುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದ ವೇಳೆ ಅಮಿತ್ ಶಾ ಅವರು ರಾಜ್ಯ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದಕ್ಕೆ ಸಿಎಂ ಪ್ರತಿದಾಳಿ ಮಾಡಿದ್ದಾರೆ.

Leave a Reply