ನೋಟು ಅಮಾನ್ಯ- ದಲಿತರ ಹೆಸರಲ್ಲಿ ಪ್ರತಿಪಕ್ಷಗಳ ಪ್ರತಿಭಟನೆ, ಇವೆರಡೂ ವರಸೆ ತಲೆಕೆಳಗಾಗಿಸಿ ಬಿಜೆಪಿಯ ಹರಸಿರುವ ಗುಜರಾತ್ ಚುನಾವಣೆ!

ಡಿಜಿಟಲ್ ಕನ್ನಡ ಟೀಮ್:

ನಿನ್ನೆಯಷ್ಟೇ ಮಹಾರಾಷ್ಟ್ರ ಸ್ಥಳೀಯ ಚುನಾವಣೆಯಲ್ಲಿ ಜಯ ಸಾಧಿಸಿದ್ದ ಬಿಜೆಪಿ, ಇಂದು ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್ ನಲ್ಲೂ ಭರ್ಜರಿ ಜಯ ಸಾಧಿಸಿದೆ. ಈ ಎರಡು ರಾಜ್ಯಗಳ ಸ್ಥಳೀಯ ಚುನಾವಣೆ ಫಲಿತಾಂಶಗಳು ‘ಕೇಂದ್ರದ ನೋಟು ಅಮಾನ್ಯ ನಿರ್ಧಾರದಿಂದ ಜನ ಬಿಜೆಪಿಯನ್ನು ಕಡೆಗಣಿಸಲಿದ್ದಾರೆ’ ಎಂಬ ವಾದ ಹಳ್ಳ ಹಿಡಿಯುವಂತೆ ಮಾಡಿದೆ. ಜತೆಗೆ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಬಿಜೆಪಿಯ ಆತ್ಮಸ್ಥೈರ್ಯ ಹೆಚ್ಚಿಸಿದೆ.

ಗುಜರಾತಿನ 16 ಜಿಲ್ಲೆಗಳ ನಗರ ಪಾಲಿಕೆ ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆಯ 126 ಸೀಟುಗಳ ಪೈಕಿ ಬಿಜೆಪಿ 109 ಸೀಟುಗಳನ್ನು ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅದರಲ್ಲೂ ಬಿಜೆಪಿಯು ಕಳೆದ ಬಾರಿ ಕಾಂಗ್ರೆಸ್ ತೆಕ್ಕೆಯಲ್ಲಿದ್ದ 40 ಸೀಟುಗಳನ್ನು ತನ್ನ ಮಡಿಲಿಗೆ ಸೆಳೆದುಕೊಳ್ಳುವಲ್ಲಿ ಸಫಲವಾಗಿದ್ದು, ನೋಟು ಅಮಾನ್ಯ ನಿರ್ಧಾರದ ನಂತರ ಬಿಜೆಪಿ ಜನರ ವಿಶ್ವಾಸವನ್ನು ಎಷ್ಟರ ಮಟ್ಟಿಗೆ ಸಂಪಾದಿಸಿದೆ ಎಂಬುದು ಸಾಬೀತಾಗಿದೆ. ಇತ್ತ ಕಾಂಗ್ರೆಸ್ ಕೇವಲ 17 ಸೀಟುಗಳನ್ನು ಪಡೆಯಲಷ್ಟೇ ಶಕ್ತವಾಗಿದ್ದು ಕುಸಿತದ ಹಾದಿಯಲ್ಲಿ ತನ್ನ ಪಯಣ ಮುಂದುವರಿಸಿದೆ. ಕಳೆದ ಬಾರಿ ಚುನಾವಣೆಯಲ್ಲಿ ಬಿಜೆಪಿ 69 ಹಾಗೂ ಕಾಂಗ್ರೆಸ್ 52 ಸೀಟುಗಳನ್ನು ಹೊಂದಿತ್ತು.

ಹೇಳಿ ಕೇಳಿ ಗುಜರಾತ್ ಪ್ರಧಾನಿ ಮೋದಿ ಅವರ ತವರು ರಾಜ್ಯ. ಹೀಗಾಗಿ ಈ ಫಲಿತಾಂಶ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುವುದಿಲ್ಲ ಎಂದು ಭಾವಿಸಿದರೆ ಅದು ತಪ್ಪಾಗುತ್ತದೆ. ಈ ಚುನಾವಣೆಯ ಫಲಿತಾಂಶ ಬಿಜೆಪಿ ಪಾಲಿಗೆ ಮಹತ್ವವಾಗಿತ್ತು. ಕಾರಣ, ಮುಂದಿನ ವರ್ಷ ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಹಣಿಯಲು ವಿರೋಧ ಪಕ್ಷಗಳು ಇತ್ತೀಚೆಗೆ ದಲಿತರ ಮೇಲಿನ ಹಲ್ಲೆ ಪ್ರಕರಣಗಳನ್ನು ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳುವ ಸಿದ್ಧತೆಯಲ್ಲಿವೆ. ಊನಾ ಹೋರಾಟ ಇತ್ಯಾದಿಗಳ ಮೂಲಕ ಗುಜರಾತಿನಲ್ಲಿ ದಲಿತರ ಮೇಲಾದ ದೌರ್ಜನ್ಯಕ್ಕೆ ಅಲ್ಲಿನ ಬಿಜೆಪಿ ಸರ್ಕಾರವೇ ಹೊಣೆ ಎಂಬ ಗ್ರಹಿಕೆ ರೂಪಿಸುವುದಕ್ಕೆ ಪ್ರತಿಪಕ್ಷಗಳು ಹಾಗೂ ಪ್ರಗತಿಪರ ಕೂಟಗಳೆಲ್ಲ ಹೋರಾಡಿದ್ದವು. ಇಂತಹ ಸಂದರ್ಭದಲ್ಲಿ ಬೇರುಮಟ್ಟದಲ್ಲಿ ಬಿಜೆಪಿ ಜನರ ವಿಶ್ವಾಸ ಸಂಪಾದಿಸಿರುವುದು ಪಕ್ಷದ ಬಲವರ್ಧನೆಗೆ ಸಿಕ್ಕ ಆನೆ ಬಲ ಎಂದೇ ಪರಿಗಣಿಸಬಹುದು.

ನೋಟು ಅಮಾನ್ಯದ ನಕಾರಾತ್ಮಕ ಪರಿಣಾಮ ಬಿಜೆಪಿ ಮೇಲೆ ಆಗಿಲ್ಲ ಎಂಬುದರ ಜತೆಯಲ್ಲೇ ಊನಾ ಹೋರಾಟದ ಆಕ್ರೋಶವನ್ನೆಲ್ಲ ಬಿಜೆಪಿ ಮೇಲೆ ತಿರುಗಿಸುವಲ್ಲಿ ಪ್ರತಿಪಕ್ಷ ಮತ್ತು ಹೋರಾಟಗಾರರ ಪಾಳೆಯಗಳು ಯಶಸ್ವಿಯಾಗಿಲ್ಲ ಎಂಬುದನ್ನೂ ಫಲಿತಾಂಶ ಸೂಚಿಸುತ್ತಿದೆ. ಏಕೆಂದರೆ, ಊನಾ ವಿಷಯವಿಟ್ಟುಕೊಂಡೇ ಗುಜರಾತಿನಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುತ್ತೇವೆ ಎಂಬ ಆಶಯದಲ್ಲಿ ಪ್ರತಿಪಕ್ಷಗಳು ಮತ್ತು ಹೋರಾಟದ ಹೊಸಮುಖ ಜಿಗ್ನೇಶ್ ಮೆವಾನಿ ಅಂದುಕೊಂಡಿದ್ದರು.

ಈ ಫಲಿತಾಂಶದಿಂದ ನೋಟು ಬದಲಾವಣೆಯ ನಂತರ ಜನರು ಬಿಜೆಪಿಯ ಮೇಲಿನ ವಿಶ್ವಾಸ ಕಳೆದುಕೊಂಡಿದ್ದಾರೆ ಎಂಬ ವಾದವನ್ನು ಹೇಗೆ ಪೊಳ್ಳಾಗಿಸಿದೆಯೋ, ಅದೇ ರೀತಿ ಗುಜರಾತಿನಲ್ಲಿ ದಲಿತರ ಮೇಲಿನ ಹಲ್ಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ, ಇವಕ್ಕೆಲ್ಲ ಬಿಜೆಪಿಯೇ ಕಾರಣ ಎಂಬ ವಿಪಕ್ಷಗಳ ವಾದದಲ್ಲೂ ಗಟ್ಟಿತನ ಇಲ್ಲವೆಂಬುದು ಸಾಬೀತಾಗಿದೆ. ಒಟ್ಟಿನಲ್ಲಿ ನೋಟು ಅಮಾನ್ಯ ನಿರ್ಧಾರವನ್ನು ದೇಶದ ಜನ ಖಂಡಿಸುತ್ತಿದ್ದು ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂಬ ವಿರೋಧ ಪಕ್ಷ ನಾಯಕರು ನುಡಿದಿದ್ದ ಭವಿಷ್ಯ ಪ್ರತಿ ಹಂತದಲ್ಲೂ ಸುಳ್ಳಾಗುತ್ತಲೇ ಸಾಗಿದೆ.

ಗುಜರಾತ್ ನಲ್ಲಿ ಸಿಕ್ಕ ಫಲಿತಾಂಶದ ಬಗ್ಗೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಪ್ರತಿಕ್ರಿಯೆ ನೀಡಿರೋದು ಹೀಗೆ..

‘ದೇಶದ ಜನತೆ ನೋಟು ಅಮಾನ್ಯ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಮಹಾರಾಷ್ಟ್ರ ಹಾಗೂ ಗುಜರಾತಿನ ಸ್ಥಳೀಯ ಚುನಾವಣೆ ಫಲಿತಾಂಶ ದೇಶದಲ್ಲಿ ಜನರು ಬಿಜೆಪಿ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಸಾಕ್ಷಿಯಾಗಿದೆ. ಇದರಿಂದ ದೇಶದ ಜನರು ನಮ್ಮೊಟ್ಟಿಗಿದ್ದಾರೆ ಎಂಬುದನ್ನು ನಾವು ಗಮನಿಸಿದ್ದೇವೆ.’

Leave a Reply