ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಟೋ ಚಾಲಕರ ಸಂಘದ ವತಿಯಿಂದ ಮಂಗಳವಾರ ಬೆಂಗಳೂರು ನಗರ ರೈಲ್ವೇ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೂ ನಡೆದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ನೂರಾರು ಆಟೋ ಚಾಲಕರು.
ಡಿಜಿಟಲ್ ಕನ್ನಡ ಟೀಮ್:
ತೆರಿಗೆ ಸಂಗ್ರಹದಲ್ಲಿ ಹೆಚ್ಚಳ
ಕಳೆದ ವರ್ಷಕ್ಕಿಂತ ಪ್ರಸಕ್ತ ಸಾಲಿನಲ್ಲಿ ರಾಜ್ಯ ಸರ್ಕಾರಕ್ಕೆ ತೆರಿಗೆ ಆದಾಯದಲ್ಲಿ ಶೇ.11.5 ರಷ್ಟು ಹೆಚ್ಚಳವಾಗಿದೆ ಎಂದು ಮಾಹಿತಿ ನೀಡಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ. ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶ ವಿಧಾನಸಭೆ ಕಲಾಪದಲ್ಲಿ ಮಂಗಳವಾರ ಮಾತನಾಡಿದ ಸಿದ್ದರಾಮಯ್ಯನವರು ಹೇಳಿದಿಷ್ಟು:
‘ಪ್ರಸಕ್ತ ಹಣಕಾಸು ವರ್ಷದ ಆರಂಭಿಕ ಆರು ತಿಂಗಳಲ್ಲಿ ರಾಜ್ಯ ಗಣನೀಯ ಸಾಧನೆ ಮಾಡಿದೆ. ವಾಣಿಜ್ಯ ತೆರಿಗೆ, ಅಬಕಾರಿ, ಮೋಟಾರು ವಾಹನ, ನೋಂದಣಿ ಮತ್ತು ಮುದ್ರಾಂಕ ಸೇರಿದಂತೆ ರಾಜ್ಯದ ಸ್ವಂತ ತೆರಿಗೆ ರಾಜಸ್ವ ಸಂಗ್ರಹದಲ್ಲಿ ಏರಿಕೆ ಕಂಡುಬಂದಿದೆ. ವಾಣಿಜ್ಯ ತೆರಿಗೆ ಮೂಲಕ ₹24792 ಕೋಟಿ, ಅಬಕಾರಿ ಮೂಲಕ ₹ 8063 ಕೋಟಿ, ಮೋಟಾರು ವಾಹನ ₹ 2584 ಕೋಟಿ, ನೋಂದಣಿ ಮತ್ತು ಮುದ್ರಾಂಕ ₹ 4006 ಕೋಟಿ ಮತ್ತು ಇತರೆಯಾಗಿ ₹ 316 ಕೋಟಿ ತೆರಿಗೆ ಸಂಗ್ರಹಿಸಲಾಗಿದೆ. ಈವರೆಗಿನ ಆಯವ್ಯಯ ಅಂದಾಜಿನ ಪ್ರಕಾರ ₹ 83,864 ಕೋಟಿ ಅಂದರೆ ಶೇ.47 ರಷ್ಟು ಈಗಾಗಲೇ ತೆರಿಗೆ ಸಂಗ್ರಹವಾಗಿದೆ.’
ಉಳಿದಂತೆ ವಿಧಾನ ಮಂಡಲ ಅಧಿವೇಶನದ ಕಲಾಪಗಳಲ್ಲಿ ಮಂಗಳವಾರದ ಪ್ರಮುಖ ಅಂಶಗಳು ಹೀಗಿವೆ…
- ಸೌರ ವಿದ್ಯುತ್ ಉತ್ಪಾದನೆ ಸಂಬಂಧ ಖಾಸಗಿ ವ್ಯಕ್ತಿಗಳೊಂದಿಗೆ ಮಾಡಿಕೊಂಡ ಒಪ್ಪಂದಗಳು ಕಾನೂನು ಬಾಹಿರವಾಗಿದ್ದು, ಒಟ್ಟು 47 ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ವಿಧಾನ ಪರಿಷತ್ತಿನಲ್ಲಿ ಇಂಧನ ಸಚಿವ ಡಿ.ಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ. ತಾರಾ ಅನುರಾಧ ಅವರ ಪ್ರಶ್ನೆಗೆ ಉತ್ತರಿಸುತ್ತಾ ಈ ಮಾಹಿತಿ ನೀಡಿದ ಸಚಿವರು, ಬೆಸ್ಕಾಂನಲ್ಲಿ 24, ಚೆಸ್ಕಾಂನಲ್ಲಿ 3, ಎಸ್ಕಾಂ 16 ಹಾಗೂ ಜೆಸ್ಕಾಂನಲ್ಲಿ 4 ಸೇರಿದಂತೆ 47 ಅಧಿಕಾರಿಗಳು ಅಮಾನತುಗೊಂಡಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 26 ಇತರೆ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗಿದೆ.
- ಮಂಡ್ಯ ಜಿಲ್ಲೆಯ ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಮುಂದಿನ ವರ್ಷ ಜನವರಿ 15ರ ಒಳಗೆ ಪುನರಾರಂಭಿಸಲು ರಾಜ್ಯ ಸರ್ಕಾರ ಎಲ್ಲ ರೀತಿಯ ಶೀಘ್ರ ಕ್ರಮ ಕೈಗೊಂಡಿದೆ ಎಂದು ಸಹಕಾರ ಮತ್ತು ಸಕ್ಕರೆ ಸಚಿವ ಎಚ್.ಎಸ್ ಮಹದೇವಪ್ರಸಾದ್ ವಿಧಾನ ಪರಿಷತ್ತಿನಲ್ಲಿ ತಿಳಿಸಿದರು. ಕೆ.ಟಿ ಶ್ರೀಕಂಠಗೌಡ ಅವರು ವಿಷಯ ಪ್ರಸ್ತಾಪಿಸಿದ ನಂತರ ಮಾತನಾಡಿದ ಸಚಿವರು ಕಾರ್ಖಾನೆಯ ಆಧುನಿಕ ಮತ್ತು ದುರಸ್ತಿ ಕಾರ್ಯ ಭರದಿಂದ ಸಾಗುತ್ತಿದ್ದು, ಒಂದು ಬಾಯ್ಲರ್ ದುರಸ್ತಿ ಪೂರ್ಣಗೊಳ್ಳಲಿದೆ. ಹೀಗಾಗಿ ರೈತರು ತಮ್ಮ ಕಬ್ಬನ್ನು ಕಾರ್ಖಾನೆಗೆ ಸಾಗಾಣೆ ಮಾಡಬಹುದು ಎಂದರು.
- ಪ್ರಶ್ನೋತ್ತರ ವೇಳೆಯಲ್ಲಿ ಸಿ.ಟಿ ರವಿ ಅವರು ಪೋಲೀಸ್ ಅಧಿಕಾರಿಗಳ ವೇತನ ಪರಿಷ್ಕರಣೆ ಕುರಿತು ಕೇಳಿದ ನಂತರ ಗೃಹ ಸಚಿವ ಪರಮೇಶ್ವರ್ ಅವರು ಸುದೀರ್ಘ ಉತ್ತರ ನೀಡಿದರು. ಕಳೆದ 40 ವರ್ಷದಿಂದ ಈ ವಿಷಯದ ಬಗ್ಗೆ ಯಾರು ತಲೆಕೆಡಿಸಿಕೊಂಡಿರಲಿಲಿಲ್ಲ.. ಈಗ ನಾವು ಇದನ್ನು ಮಾಡಲು ಮುಂದಾಗಿದ್ದೇವೆ. ಹೀಗಾಗಿ ಎಲ್ಲರು ಪ್ರಶ್ನೆ ಮಾಡಲು ಆರಂಭಿಸಿದ್ದಾರೆ ಎಂದರು. ಇದೇ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ನಡುವೆ ಮಾತಿನ ಚಕಮಕಿ ನಡೆಯಿತು.
- ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ 127 ಅನಧಿಕೃತ ಬಡಾವಣೆಗಳನ್ನು ಗುರುತಿಸಿದ್ದು, ಇನ್ನು ಮುಂದೆ ಅನಧಿಕೃತ ಬಡಾವಣೆಗಳಿಗೆ ನೀರು, ವಿದ್ಯುತ್ ಸೇರಿದಂತೆ ಯಾವುದೇ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದಿಲ್ಲ ಎಂದು ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಪ್ರಶ್ನೋತ್ತರ ವೇಳೆಯಲ್ಲಿ ಗೋಪಾಲಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಉತ್ತರಹಳ್ಳಿ, ಕೆಂಗೇರಿ, ಯಶವಂತಪುರ, ಅತ್ತಿಬೆಲೆ, ವರ್ತೂರು, ಬೇಗೂರು, ಕೆ.ಆರ್ ಪುರಂ, ಬಿದರಹಳ್ಳಿ, ಯಲಹಂಕ, ಜಾಲ, ಕಸಬಾ, ದಾಸನಪುರ ಹೊಬಳಿಯ ಹಲವು ಗ್ರಾಮಗಳಲ್ಲಿ 127ಕ್ಕೂ ಹೆಚ್ಚು ಅಕ್ರಮ ಬಡಾವಣೆಗಳು ತಲೆ ಎತ್ತಿವೆ. ಇವುಗಳಿಗೆ ಮೂಲ ಸೌಕರ್ಯ ನೀಡುವುದಿಲ್ಲ ಎಂದು ತಿಳಿಸಿದರು.
- ಬರದಿಂದ ತತ್ತರಿಸಿರುವ ರೈತರಿಗೆ ಇರುವ ಜಲಮೂಲವನ್ನೇ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವಂತೆ ಮಾಡಲು ಕೃಷಿ ಹೊಂಡ ಯೋಜನೆಗೆ ಒತ್ತು ನೀಡಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ₹1050 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ವಿಧಾನ ಪರಿಷತ್ತಿನಲ್ಲಿ ಕೃಷಿ ಸಚಿವ ಕೃಷ್ಣಭೈರೇಗೌಡ ತಿಳಿಸಿದರು. ಎಂ.ಕೆ ಪ್ರಾಣೇಶ್ ಅವರ ಪ್ರಸ್ತಾವಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಈ ಹಿಂದೆ ಬಜೆಟ್ ನಲ್ಲಿ ಕೃಷಿಗೆ ₹ 200 ಕೋಟಿ ಮೀಸಲಿಟ್ಟಿದ್ದರು. ಬೇಡಿಕೆ ಹೆಚ್ಚಿದರ ಪರಿಣಾಮ ₹300 ಕೋಟಿ ಹೆಚ್ಚುವರಿ ಅನುದಾನ ನೀಡಿದ್ದೇವೆ. ಕೃಷಿ ಹೊಂಡ ಯೋಜನೆ ಯಶಸ್ವಿಯಾಗಿದ್ದು, ಕೃಷಿ ಭಾಗ್ಯ ಯೋಜನೆಯಲ್ಲಿ ಫಲಾನುಭವಿಗಳಿಗೆ ಈ ಕೃಷಿ ಹೊಂಡ ನಿರ್ಮಾಣ ಮಾಡಲು ಪಾಲಿಥಿನ್ ಹೊದಿಕೆ, ಸೂಕ್ಷ್ಮ ನೀರಾವರಿಘಟಕ, ಬೆಳೆ ಪ್ರಾತ್ಯಕ್ಷಿಕೆ ಘಟಕ ರಿಯಾಯಿತಿ ದರದಲ್ಲಿ ಒದಗಿಸಲಾಗುವುದು ಎಂದರು.
ಆಂಗ್ಲರನ್ನು ಮಣಿಸಿದ ಭಾರತ
ಆಲ್ರೌಂಡರ್ ರವಿಚಂದ್ರನ್ ಅಶ್ವಿನ್ ಹಾಗೂ ರವಿಂದ್ರ ಜಡೇಜಾ ಅವರ ಆಕರ್ಷಕ ಪ್ರದರ್ಶನದ ನೆರವಿನಿಂದ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯವನ್ನು 8 ವಿಕೆಟ್ ಗಳ ಅಂತರದಲ್ಲಿ ಗೆದ್ದುಕೊಂಡಿದೆ. ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲ ಇನಿಂಗ್ಸ್ ನಲ್ಲಿ ಕೇವಲ 283 ರನ್ ಗಳಿಗೆ ಆಲೌಟ್ ಆದ ಪ್ರವಾಸಿಗರು ಆರಂಭದಲ್ಲೇ ಪಂದ್ಯದಲ್ಲಿ ನಿಯಂತ್ರಣ ಕಳೆದುಕೊಂಡರು. ಭಾರತ ಮೊದಲ ಇನಿಂಗ್ಸ್ ನಲ್ಲಿ 417 ರನ್ ಗಳಿಸಿ 134 ರನ್ ಗಳ ಮುನ್ನಡೆ ಸಾಧಿಸಿತು. ಎರಡನೇ ಇನಿಂಗ್ಸ್ ನಲ್ಲೂ ಭಾರತ ತಂಡದ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿದ ಆಂಗ್ಲರು 236 ರನ್ ಗಳಿಸಲಷ್ಟೇ ಶಕ್ತರಾದರು. ಆ ಮೂಲಕ ಭಾರತ ಜಯ ಸಾಧಿಸಲು 103 ರನ್ ಗಳ ಗುರಿ ನೀಡಿತು. ಈ ಗುರಿಯನ್ನು ಭಾರತ 2 ವಿಕೆಟ್ ಗಳನ್ನಷ್ಟೇ ಕಳೆದು ಕೊಂಡು ಯಶಸ್ವಿಯಾಗಿ ತಲುಪಿತು. ಆ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಭಾರತ 2-0 ಮುನ್ನಡೆ ಸಾಧಿಸಿದೆ. ಪಂದ್ಯದಲ್ಲಿ ಆಲ್ರೌಂಡ್ ಪ್ರದರ್ಶನ ನೀಡಿದ ರವಿಂದ್ರ ಜಡೇಜಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಮುಂದಿನ ಪಂದ್ಯ ಡಿಸೆಂಬರ್ 8ರಿಂದ ಮುಂಬೈನಲ್ಲಿ ನಡೆಯಲಿದೆ.
ಇನ್ನುಳಿದಂತೆ ನೀವು ತಿಳಿಯಬೇಕಿರುವ ಪ್ರಮುಖ ಸುದ್ದಿ ಸಾಲುಗಳು…
- ಬೆಂಗಳೂರಿನಲ್ಲಿ ಎಟಿಎಂಗೆ ತುಂಬಿಸಲು ಸಾಗಿಸಲಾಗುತ್ತಿದ್ದ ಹಣವನ್ನು ದೋಚಿ ಪರಾರಿಯಾಗಿದ್ದ ವಾಹನ ಚಾಲಕ ಡೊಮಿನಿಕ್ ಸೆಲ್ವರಾಜ್ ನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಡೊಮಿನಿಕ್ ಕೆ.ಆರ್ ಪುರದ ಟಿನ್ ಫ್ಯಾಕ್ಟರಿ ಬಳಿಯಲ್ಲಿ ತನ್ನ ಸ್ನೇಹಿತನನ್ನು ಭೇಟಿ ಮಾಡಲು ಬರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರೆಣೆಗೆ ಇಳಿದು ಆತನನ್ನು ಬಂಧಿಸಿದ್ದಾರೆ. ಈತನನ್ನು ಉಪ್ಪಾರ ಪೇಟೆ ಪೊಲೀಸರ ವಶಕ್ಕೆ ನೀಡಲಾಗಿದೆ ಎಂದು ಪಶ್ಚಿಮ ವಲಯ ಡಿಜಿಪಿ ಅನುಚೇತ್ ತಿಳಿಸಿದ್ದಾರೆ.
- ಇಂದು ಬೆಳಗಿನ ಜಾವ 5 ಗಂಟೆ ಸುಮಾರಿಗೆ ನಗ್ರೊಟಾ ಸೇನೆ ನೆಲೆಗೆ ನುಗ್ಗಿ ದಾಳಿ ಮಾಡಿದ್ದ ಉಗ್ರರನ್ನು ಸದೆಬಡಿಯುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ. ಸುದೀರ್ಘ ಎಂಟು ತಾಸುಗಳ ಕಾಲ ನಡೆದ ಕಾರ್ಯಾಚರಣೆಯ ನಂತರ ನಾಲ್ವರು ಉಗ್ರರನ್ನು ಹತ್ಯೆ ಮಾಡುವಲ್ಲಿ ಭದ್ರತಾ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಈ ದಾಳಿಯ ಕುರಿತಂತೆ ಡಿಜಿಟಲ್ ಕನ್ನಡ ನೀಡಿದ್ದ ವರದಿಗೆ ಇಲ್ಲಿ ಕ್ಲಿಕ್ ಮಾಡಿ.
- ಸುದೀರ್ಘ ಐದು ವರ್ಷಗಳ ಕಾನೂನು ಹೋರಾಟದ ನಂತರ ಮಹಿಳಾ ಸಂಘಟನೆ ಕಾರ್ಯಕರ್ತೆಯರು ಮುಂಬೈನಲ್ಲಿರುವ ಹಾಜಿ ಅಲಿ ದರ್ಗಾಕ್ಕೆ ಪ್ರವೇಶ ನೀಡಿದ್ದಾರೆ. ಮಂಗಳವಾರ ಮಧ್ಯಾಹ್ನ 75-80 ಮಹಿಳೆಯರು ಈ ದರ್ಗಾಕ್ಕೆ ಪ್ರವೇಶಿಸಿ ಪ್ರಾರ್ಥನೆ ಸಲ್ಲಿಸಿದರು. ಆ ಮೂಲಕ ದರ್ಗಾ ಪ್ರವೇಶಕ್ಕೆ ಮಹಿಳೆಯರ ಮೇಲೆ ಹೇರಲಾಗಿದ್ದ ನಿಷೇಧವನ್ನು ಅಧಿಕೃತವಾಗಿ ತೆಗೆದು ಹಾಕಲಾಗಿದೆ. ಇಸ್ಲಾಂ ಸಂತ ಪೀರ್ ಹಾಜಿ ಅಲಿ ಶಾ ಬುಖಾರಿ ಅವರ ಸಮಾಧಿ ಇರುವ ಈ ದರ್ಗಾಕ್ಕೆ 2012ರವರೆಗೂ ಮಹಿಳೆಯರಿಗೆ ಅವಕಾಶವಿತ್ತು. ಆನಂತರ ದಿಢೀರನೆ ಮಹಿಳೆಯರು ಈ ದರ್ಗಾಕ್ಕೆ ಪ್ರವೇಶಿಸುವಂತಿಲ್ಲ ಎಂಬ ನಿಷೇಧ ಹೇರಲಾಗಿತ್ತು. ಈ ನಿರ್ಧಾರವನ್ನು ಖಂಡಿಸಿ ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ ಸಂಘಟನೆ ನ್ಯಾಯಾಲಯದ ಮೆಟ್ಟಿಲೇರಿತ್ತು.