ಸ್ವಪಕ್ಷೀಯರಿಂದಲೇ ಬ್ಯಾಂಕ್ ಲೆಕ್ಕ ಕೇಳಿ ನೈತಿಕತೆಯ ಮಹಾ ಜಿಗಿತ ಪ್ರದರ್ಶಿಸಿದ ಪ್ರಧಾನಿ ಮೋದಿ

ಡಿಜಿಟಲ್ ಕನ್ನಡ ಟೀಮ್:

ನೋಟು ರದ್ದತಿ ವಿಷಯದಲ್ಲಿ ಪ್ರತಿ ಪಕ್ಷಗಳ ಆರೋಪಗಳನ್ನೆಲ್ಲಾ ಉಡಾಯಿಸುವ ನಿರ್ಧಾರವೊಂದನ್ನು ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡಿದ್ದಾರೆ. ಅದೇನಂದ್ರೆ, ಇದೇ ತಿಂಗಳು 8ರಂದು ನೋಟು ರದ್ದತಿ ತೀರ್ಮಾನ ಪ್ರಕಟವಾದ ನಂತರ ಬಿಜೆಪಿಯ ಸಂಸದರು ಮತ್ತು ಶಾಸಕರು ಬ್ಯಾಂಕಿನಲ್ಲಿ ಎಷ್ಟು ಹಣ ಠೇವಣಿ ಮಾಡಿದ್ದಾರೆ, ಎಷ್ಟು ವ್ಯವಹಾರ ನಡೆಸಿದ್ದಾರೆ ಎಂಬ ಬ್ಯಾಂಕಿನ ಮಾಹಿತಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಬಳಿ ಸಲ್ಲಿಸಬೇಕು ಎಂದು.

ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ವಿರೋಧ ಪಕ್ಷಗಳು ಸಂಸತ್ತಿನಲ್ಲಿ ತೀವ್ರ ವಿರೋಧ ನಡೆಸುತ್ತಿರುವ ಬೆನ್ನಲ್ಲೇ ಮಂಗಳವಾರ ಬಿಜೆಪಿ ಸಂಸದೀಯ ಸಭೆ ನಡೆಸಿದ ಮೋದಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ನವೆಂಬರ್ 8 ರಂದು ನಿರ್ಧಾರ ಪ್ರಕಟವಾದ ಮೇಲೆ ಬಿಜೆಪಿ ನಾಯಕರು ಡಿಸೆಂಬರ್ 31ರ ವರೆಗೆ ಬ್ಯಾಂಕಿನಲ್ಲಿ ಎಷ್ಟು ವಹಿವಾಟು ನಡೆಸಿದ್ದಾರೆ ಎಂಬುದರ ಮಾಹಿತಿಯನ್ನು ಮುಂದಿನ ವರ್ಷ ಜನವರಿ 1 ರಂದು ಅಮಿತ್ ಶಾ ಅವರಿಗೆ ಸಲ್ಲಿಸಬೇಕು. ಇದರೊಂದಿಗೆ ಸ್ವತಃ ಬಿಜೆಪಿ ಪಕ್ಷದ ನಾಯಕರಿಗೆ ಮೋದಿ ಪರೋಕ್ಷವಾಗಿ ಬರೆ ಎಳೆದಿದ್ದಾರೆ.

ಮೋದಿ ತಮ್ಮ ಪಕ್ಷದ ನಾಯಕರಿಗೆ ನಡುಕ ಹುಟ್ಟಿಸುವ ಈ ನಿರ್ಧಾರ ತೆಗೆದುಕೊಳ್ಳುವ ಮೂಲಕ ನೋಟು ರದ್ದತಿಯ ವಿಚಾರದಲ್ಲಿ ನೈತಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಅದು ಹೇಗೆ ಅಂದರೆ, ಮೋದಿ ಅವರು ನವೆಂಬರ್ 8ರಂದು ನೋಟು ರದ್ದತಿ ನಿರ್ಧಾರ ಪ್ರಕಟಿಸಿದ ನಂತರ, ವಿರೋಧ ಪಕ್ಷಗಳು ಟೀಕೆ ಮಾಡಿದ್ದವು. ಅಲ್ಲದೆ ‘ಈ ವಿಚಾರ ಬಿಜೆಪಿಯ ಹಲವು ನಾಯಕರಿಗೆ ಮುಂಚಿತವಾಗಿಯೇ ಗೊತ್ತಿತ್ತು. ಇದರಲ್ಲಿ ದೊಡ್ಡ ಹಗರಣವೇ ಅಡಗಿದೆ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಂದ ಹಿಡಿದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿವರೆಗೂ ವಿರೋಧ ಪಕ್ಷದ ನಾಯಕರು ಸರ್ಕಾರದ ವಿರುದ್ಧ ಆರೋಪ ಮಾಡಿದ್ದರು.

ಅಷ್ಟೇ ಅಲ್ಲ, ‘ರಾಜಕೀಯ ಸುಧಾರಣೆ ಮಾಡದ ಹೊರತಾಗಿ ಕಪ್ಪು ಹಣ ನಿಯಂತ್ರಣ ಸಾಧ್ಯವಿಲ್ಲ. ಹೀಗಾಗಿ ರಾಜಕೀಯ ಸುಧಾರಣೆ ಬಗ್ಗೆ ಮೋದಿ ಗಮನ ಹರಿಸಬೇಕು’ ಎಂಬ ಪಂಡಿತರ ಅಭಿಪ್ರಾಯ ಕೇಳಿಬಂದಿತ್ತು. ಆ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರಧಾನಿಯ ಈ ನಿರ್ಧಾರ ಹೆಚ್ಚಿನ ತೂಕ ಪಡೆದಿದೆ. ಈಗ ಮೋದಿ ಅವರು ತಮ್ಮ ಪಕ್ಷದ ನಾಯಕರನ್ನೇ ಇಕ್ಕಟ್ಟಿಗೆ ಸಿಲುಕಿಸಿ ಯಾರು ಎಷ್ಟು ಹಣ ಠೇವಣಿ ಮಾಡಿದ್ದಾರೆ ಎಂಬುದರ ಬಗ್ಗೆ ವಿವರ ಕೇಳಿದ್ದಾರೆ. ಈ ನಿರ್ಧಾರವೂ ಸಹ ಒಂದು ರಾಜಕೀಯ ಸುಧಾರಣೆ ಹೆಜ್ಜೆಯಾಗಿದ್ದು, ನಿಜಕ್ಕೂ ಮಹತ್ವ ಪಡೆದುಕೊಂಡಿದೆ.

Leave a Reply