ಹಾವು ತುಳಿದಂತಿರುವ ಬಿಜೆಪಿ ‘ಕಾಳನಾಯಕ’ರ ಮೇಲೆ ಹಲ್ಲಿ ಎಸೆದ ಮೋದಿ!

author-thyagarajಇವತ್ತಿಗೆ ಇಪ್ಪತ್ತು ದಿನ ಕಳೀತು. ಪ್ರಧಾನಿ ನರೇಂದ್ರ ಮೋದಿ ಅವರು ಕಾಳಧನಿಕರ ವಿರುದ್ಧ ಯುದ್ಧ ಸಾರಿ. ಇದರಿಂದ ಯಾರ್ಯಾರ ನಿದ್ದೆ ಹಾರಿ ಹೋಯ್ತು, ಬಿಡ್ತು ಅನ್ನೋದು ಬೇರೆ ಪ್ರಶ್ನೆ. ಆದರೆ ಅವರದೇ ಪಕ್ಷದ ಮುಖಂಡರು ಮಾತ್ರ ಹಾವು ತುಳಿದು, ಮೈಮೇಲೆ ಹಲ್ಲಿ ಬೀಳಿಸಿಕೊಂಡವರಂತೆ ಪತರುಗುಟ್ಟಿ ಹೋಗಿದ್ದಾರೆ.

ಐನೂರು ಮತ್ತು ಸಾವಿರ ರುಪಾಯಿ ನೋಟು ರದ್ದು ಮಾಡಿದ ನ. 8 ರಿಂದ ಇವತ್ತಿನ ತನಕ ಕಾಳಧನಿಕರ ವಿರುದ್ಧದ ಸಮರಕ್ಕೆ ನಾನಾ ತಿರುವು ನೀಡುತ್ತಲೇ ಬಂದಿರುವ ಮೋದಿ ಅವರು ಇದೀಗ ತಮ್ಮದೇ ಪಕ್ಷ ಬಿಜೆಪಿ ಸಂಸದರು ಮತ್ತು ಶಾಸಕರಿಗೆ ‘ಸ್ಪೆಷಲ್ ಎಫೆಕ್ಟ್’ ಕೊಟ್ಟಿದ್ದಾರೆ. ನ. 8 ರಿಂದ ಡಿ. 31 ರವರೆಗೆ ನಿಮ್ಮಿಂದಾದ ಬ್ಯಾಂಕ್ ವ್ಯವಹಾರದ ವಿವರಗಳನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ನೀಡಬೇಕು ಎಂದು ತಾಕೀತು ಮಾಡುವ ಮೂಲಕ ಮೊದಲೇ ನಡುಗಿ ಹೋಗಿದ್ದವರನ್ನು ಹುಲಿ ಬೋನಿಗೆ ತಳ್ಳಿದ್ದಾರೆ.

ನಿಜ, ನೋಟು ರದ್ದು ಕುರಿತ ಮೋದಿ ತೀರ್ಮಾನದಿಂದ ಅನ್ಯಪಕ್ಷದವರಿಗೆ ಆದಷ್ಟೇ ಶಾಕ್ ಬಿಜೆಪಿಯವರಿಗೂ ಆಗಿದೆ. ಈ ಶಾಕ್ ನಿಂದ ಸಾವರಿಸಿಕೊಂಡು ಪ್ರತಿಕ್ರಿಯೆ ನೀಡಲು ಕಾಂಗ್ರೆಸ್ ಮತ್ತಿತರ ಪ್ರತಿಪಕ್ಷಗಳಿಗೆ ಸ್ವಲ್ಪ ಸಮಯವೇ ಬೇಕಾಯಿತು. ಏಕೆಂದರೆ ಹಿಂದೆ-ಮುಂದೆ ನೋಡದೆ ಪ್ರತಿಕ್ರಿಯೆ ಕೊಟ್ಟರೆ ಜನ ತಮ್ಮನ್ನೇ ಅನುಮಾನದ ಕಣ್ಣುಗಳಿಂದ ನೋಡುತ್ತಾರೆ ಎಂಬ ಭೀತಿ ಅವರ ಬಾಯಿಯನ್ನು ಕಟ್ಟಿಹಾಕಿತ್ತು. ಆದರೂ ಏನಾದರೂ ಹೇಳಬೇಕಲ್ಲ. ಹೀಗಾಗಿ ಮೋದಿ ಬಿಜೆಪಿಯವರಿಗೆ ಮೊದಲೇ ಸೂಚನೆ ಕೊಟ್ಟು, ಅವರೆಲ್ಲ ಕಪ್ಪುಹಣ ಬಿಳಿ ಮಾಡಿಕೊಂಡ ನಂತರ 500, 1000 ರುಪಾಯಿ ನೋಟು ರದ್ದು ನಿರ್ಧಾರ ಪ್ರಕಟಿಸಿದ್ದಾರೆ. ಪ್ರತಿಪಕ್ಷಗಳನ್ನು ಸದೆಬಡಿಯುವ ದುರುದ್ದೇಶ ಇದರ ಹಿಂದಿದೆ ಎಂದೆಲ್ಲ ಟೀಕಿಸಿದ್ದರು. ದಿನಗಳೆದಂತೆ ಜನಸಾಮಾನ್ಯರಿಗೆ ನಿತ್ಯವ್ಯವಹಾರ ಸಂಬಂಧ ಎದುರಾದ ಬವಣೆಯನ್ನೇ ಮೋದಿ ಮತ್ತು ಆಡಳಿತ ಪಕ್ಷದ ವಿರುದ್ಧದ ಟೀಕೆ ಮತ್ತು ಪ್ರತಿಭಟನೆಗೆ ಎಣೆ ಮಾಡಿಕೊಂಡರು. ಆದರೆ ಮೋದಿ ನಿರ್ಣಯದಿಂದ ಬಾಧಿತರಾಗಿರುವ ಬಿಜೆಪಿ ಧನಿಕರಿಗೆ ಪ್ರತಿಪಕ್ಷಗಳಿಗೆ ಇರುವ ಪ್ರತಿರೋಧ ಅವಕಾಶ ಕೂಡ ಇಲ್ಲ. ಅನ್ನುವಂತಿಲ್ಲ, ಅನುಭವಿಸುವಂತಿಲ್ಲ. ಹೀಗಿರುವಾಗ ಇದೀಗ ಮೋದಿ ಅವರು ವಹಿವಾಟು ಲೆಕ್ಕ ಕೇಳಿರುವುದು ಬಿಜೆಪಿ ಸಂಸದರು ಮತ್ತು ಶಾಸಕರ ತಲೆ ಗಿರ್ರೆನ್ನುವಂತೆ ಮಾಡಿದೆ.

ಈ ಕಾಳಧನಿಕರು ಅಂದರೆ ಯಾರು? ಉದ್ಯಮಿಗಳು, ವ್ಯಾಪಾರಿಗಳು, ಸಮಾಜಘಾತುಕ ಶಕ್ತಿಗಳು, ಸರಕಾರಿ ಸೇವಕರು ಮತ್ತು ರಾಜಕಾರಣಿಗಳು. ಮೋದಿ ಅವರ ನಿರ್ಣಯದಿಂದ ಇವರೆಲ್ಲರಿಗೂ ಹೊಡೆತ ಬಿದ್ದಿದೆ ಎಂಬುದು ನಿಜ. ಆದರೆ ಸಮಾಜಸೇವೆಯನ್ನೇ ವ್ಯಾಪಾರೋದ್ಯಮವಾಗಿ ಮಾಡಿಕೊಂಡಿದ್ದ ರಾಜಕಾರಣಿಗಳಿಗೆ ಉಳಿದೆಲ್ಲರಿಗಿಂಥ ಕೊಂಚ ಹೆಚ್ಚಾಗಿಯೇ ಒದೆ ಬಿದ್ದಿದೆ. ಅದೂ ಪಕ್ಷಾತೀತವಾಗಿ. ಕಾಂಗ್ರೆಸ್, ಕಮ್ಯುನಿಷ್ಟ್, ಎಸ್ಪಿ, ಬಿಎಸ್ಪಿ, ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ ಸೇರಿದಂತೆ ಪ್ರತಿಪಕ್ಷದವರು ಪ್ರತಿಭಟಿಸಿ, ನರೇಂದ್ರ ಮೋದಿ ಅವರನ್ನು ಬಯ್ದುಕೊಂಡಾದರೂ ಆಕ್ರೋಶ, ಅಸಮಾಧಾನ ಹೊರಹಾಕಿಕೊಳ್ಳುತ್ತಿದ್ದಾರೆ. ಆದರೆ ಮೋದಿ ಸ್ವಪಕ್ಷೀಯರಿಗೆ ಮಾತ್ರ ಈ ಭಾಗ್ಯವೂ ಇಲ್ಲ!

ಯೆಸ್, ಸ್ವಾತಂತ್ರ್ಯ ಬಂದ ಎಪ್ಪತ್ತು ವರ್ಷಗಳಲ್ಲಿ ಅತಿಹೆಚ್ಚು ಕಾಲ ಈ ದೇಶವನ್ನಾಳಿದ ಕಾಂಗ್ರೆಸ್ಸಿಗರು ಕಾಳಧನದ ಬಹುಪಾಲು ವಾರಸುದಾರರು ಎಂಬುದು ಸಾಮಾನ್ಯ ಮಾತು. ಈ ದೇಶಕ್ಕೆ ಅವರು ಮಾಡಿದ ಸೇವೆಯನ್ನು ಅವರ ತಿಜೋರಿ ಪ್ರಮಾಣದಿಂದ ಅಳೆಯಲಾಗುತ್ತಿದೆ. ಹಾಗಂಥ ಉಳಿದ ಪಕ್ಷದವರೇನೂ ಸುಭಗರೆಂದು ಅರ್ಥವಲ್ಲ. ಅದು ಜನತಾ ಪರಿವಾರ ಆಗಿರಲಿ, ಕಮ್ಯುನಿಸ್ಟ್ ಇರಲಿ, ಸಮಾಜವಾದಿಗಳಿರಲಿ, ಎಲ್ಲಕ್ಕಿಂಥ ಮಿಗಿಲಾಗಿ ಈಗ ಕಪ್ಪು ಹಣದ ವಿರುದ್ಧ ಸಮರ ಸಾರಿರುವ ನರೇಂದ್ರ ಮೋದಿ ಅವರು ಪ್ರತಿನಿಧಿಸುತ್ತಿರುವ ಬಿಜೆಪಿಯರು ಸೇರಿದಂತೆ ಅಧಿಕಾರ ಅವಕಾಶ ಸಿಕ್ಕ ಯಾವುದೇ ಸರಕಾರಗಳು ಭ್ರಷ್ಟಾಚಾರ, ಹಗರಣ ಲೇಪವಿಲ್ಲದೆ ಪರಿಪೂರ್ಣತೆ ಕಂಡಿಲ್ಲ. ಹಾಗೆ ನೋಡಿದರೆ ಯಡಿಯೂರಪ್ಪ, ಗಣಿ ರೆಡ್ಡಿಗಳ ಕೂಟದ ಬಿಜೆಪಿ ಸರಕಾರದ ಅವಧಿಯಲ್ಲಿ ಕರ್ನಾಟಕದಲ್ಲಾದ ಲೂಟಿ ಪ್ರಮಾಣವನ್ನು ಅಷ್ಟೂ ಕಾಂಗ್ರೆಸ್ ಸರಕಾರಗಳ ಕಾಲದಲ್ಲಾದ ಕೊಳ್ಳೆಗಿಂತಲೂ ಒಂದು ತೂಕ ಹೆಚ್ಚಾಗಿಯೇ ಅಳತೆ ಮಾಡಿ ನೋಡಲಾಗುತ್ತದೆ. ಬರಗೆಟ್ಟು ಕೂತವರ ಕೈಗೆ ಸಿಕ್ಕ ಅಧಿಕಾರ ಹೇಗೆಲ್ಲ ದುರ್ವಿನಿಯೋಗ ಆಗಬಹುದು, ಎಲ್ಲೆಲ್ಲಿ, ಎಷ್ಟೆಲ್ಲ ಕನ್ನ ಕೊರೆಯಬಹುದು ಎಂಬುದನ್ನು ನಿರೂಪಿಸಿದ ಕೀರ್ತಿ ಖಂಡಿತವಾಗಿಯೂ ಆಗಿನ ಸರಕಾರಕ್ಕೆ ಸಲ್ಲುತ್ತದೆ. ಕೋರ್ಟು ಕಚೇರಿ ನಿರ್ಣಯಗಳು ಏನೇ ಇರಬಹುದು, ಆದರೆ ಜನಮಾನಸದಲ್ಲಿ ಅಚ್ಚೊತ್ತಿರುವ ನಿಲುವುಗಳೇ ಬೇರೆ. ನ್ಯಾಯದಾನ ಪ್ರಕ್ರಿಯೆ ಬೇಡುವ ಸಾಕ್ಷಿಗಳಿಗೂ ಮಿಗಿಲಾದ ಸಾಮಾನ್ಯ ಪ್ರಜ್ಞೆ ಅವರ ನಿಲುವುಗಳಲ್ಲಿ ಗಟ್ಟಿಯಾಗಿದೆ. ದೇಶದ ಉಳಿದೆಡೆ ಬಿಜೆಪಿ ಅಧಿಕಾರ ನಡೆಸಿದ ರಾಜ್ಯಗಳಲ್ಲಿ ಕರ್ನಾಟಕದಷ್ಟು ಭ್ರಷ್ಚಾಚಾರ, ಹಗರಣಗಳು ಕಂಡು ಬಂದಿಲ್ಲದಿರಬಹುದು, ಆದರೆ ಅದರಿಂದ ಮಕ್ತ ಎಂದೇನೂ ಅನ್ನಿಸಿಕೊಂಡಿಲ್ಲ. ಅವರವರ ಶಕ್ತಿ, ಸಾಮರ್ಥ್ಯಕ್ಕೆ ಅನುಗುಣವಾಗಿ ಅವರವರ ಖಜಾನೆಗಳು ತುಂಬಿವೆ. ಹೀಗಾಗಿ ಕಾಳಧನ ಎಂಬುದು ಸರ್ವಪಕ್ಷವ್ಯಾಪಿ. ಇದೀಗ ಮೋದಿ ಅವರು ಗರಿಷ್ಠ ಮುಖಬೆಲೆ ನೋಟುಗಳ ಅಮಾನ್ಯ ಮೂಲಕ ಕಾಳಧನಿಕರ ವಿರುದ್ಧ ಸಾರಿರುವ ಯುದ್ಧ ಬಿಜೆಪಿ ಧನಿಕರ ಸ್ಥಿತಿಯನ್ನೂ ಬಾಲಸುಟ್ಟ ಬೆಕ್ಕಿನಂತೆ ಮಾಡಿಟ್ಟಿದೆ. ಆದರೆ ಹೇಳುವಂತಿಲ್ಲ, ಅನುಭವಿಸುವಂತಿಲ್ಲ.

ನಿಜ, ಬಿಜೆಪಿಯಲ್ಲೂ ಸಾಕಷ್ಟು ಸಿರಿವಂತರಿದ್ದಾರೆ. ವ್ಯಾಪಾರಿಗಳಿದ್ದಾರೆ, ಉದ್ಯಮಿಗಳಿದ್ದಾರೆ. ಇವರಲ್ಲಿ ಅನೇಕ ಮಂದಿ ಸಂಸದರು ಮತ್ತು ಶಾಸಕರೂ ಆಗಿದ್ದಾರೆ. ಇವರಲ್ಲೂ ಸಾಕಷ್ಟು ಕಾಳಧನಿಕರಿದ್ದಾರೆ. ಉಳಿದ ಪಕ್ಷದವರಂತೆಯೇ ನೋಟು ರದ್ದು ನಿರ್ಣಯದಿಂದ ಅಸಮಾಧಾನದ ಕೊಪ್ಪರಿಗೆಯಲ್ಲಿ ಬಿದ್ದು ಬೇಯುತ್ತಿರುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಮೋದಿ ಅವರು ತರುತ್ತಿರುವ ದಿನಕ್ಕೊಂದು ಕಾನೂನು, ನಿರ್ಣಯಗಳ ನಡುವೆಯೂ ಕಪ್ಪು ಹಣ ಬಿಳಿ ಮಾಡಿಕೊಳ್ಳಲು ಸಾಧ್ಯವಿರುವ ಎಲ್ಲ ಆಟಗಳನ್ನೂ ಇವರು ಆಡಿದ್ದಾರೆ, ಆಡುತ್ತಿದ್ದಾರೆ. ಇಂಥ ಸನ್ನಿವೇಶದಲ್ಲಿ ತಿಂಗಳೊಪ್ಪತ್ತು ನಡೆಸಿರುವ ಬ್ಯಾಂಕ್ ವ್ಯವಹಾರಗಳ ವಿವರ ಕೇಳಿರುವುದು ಅವರ ಜಂಘಾಬಲ ಉಡುಗಿಸಿದೆ.

ಇತ್ತೀಚೆಗೆ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಮೋದಿ ಅವರು ನೋಟು ರದ್ದು ನಿರ್ಣಯ ಪರ ಸಂದೇಶ ರವಾನೆ ಸೂಚನೆ ನೀಡಿದಾಗ ಬಹುತೇಕರ ಮುಖ ಹುಳ್ಳಹುಳ್ಳಗೆ ಇತ್ತಂತೆ. ಪಾಪ ಅವರ ಕಷ್ಟ ಅವರಿಗೆ. ಬ್ಲಾಕ್ ಮನಿ ವೈಟ್ ಮಾಡಿಕೊಳ್ಳಲು ದಾರಿ ಕಾಣದೆ ವಿಲವಿಲ ಒದ್ದಾಡುತ್ತಿರುವಾಗ ಇಂಥ ಸೂಚನೆ ಕೊಡಿ ಎಂದರೆ ಹೇಗಾಗಿರಬೇಡ. ವಾಡಿಕೆಗೆಂದು ಗೋಣು ಅಲ್ಲಾಡಿಸಿದರೂ ‘ಬ್ಲಾಕ್ ಅಂಡ್ ವೈಟ್’ ಚಿಂತೆ ಮಾತ್ರ ಚಿತ್ತಶಾಂತಿಯನ್ನು ಕಬಳಿಸಿತ್ತಂತೆ. ‘ಇವರಿಗೇನೋ ಹಿಂದಿಲ್ಲ, ಮುಂದಿಲ್ಲ. ಆದರೆ ಎಲ್ಲ ಇರೋ ನಮ್ ಕತೆ ಯಾರಿಗೆ ಹೇಳೋಣ’ ಅಂತ ಕೆಲವರು ಗೊಣಗಿಕೊಂಡರಂತೆ. ಅಷ್ಟೇ, ಅದು ಬಿಟ್ಟು ಅವರಿಗೆ ಇನ್ನೇನೂ ಮಾಡಲು ಸಾಧ್ಯವಿಲ್ಲ. ಪ್ರತಿಪಕ್ಷದವರಂತೆ ವಿರೋಧಿಸುವಂತಿಲ್ಲ. ವಿರೋಧಿಸಬೇಕು ಅಂಥ ಮನಸ್ಸಿದ್ದರೂ, ಅಪಸ್ವರ ಎತ್ತಿ ಅರಗಿಸಿಕೊಳ್ಳುವ ತಾಕತ್ತು ಇಲ್ಲ.
ಉಗುಳು ನುಂಗಿ ಕೈಕೈ ಹಿಸುಕಿಕೊಳ್ಳಲ್ಲಷ್ಟೇ ಅಸಹನೆ ಸೀಮಿತ. ಅವರ ಮಾತುಗಳೇನಿದ್ದರೂ ‘ಆಫ್ ದಿ ರೆಕಾರ್ಡ್’. ಸಮಾನ ಬಾಧಿತರ ನಡುವೆ ಮಾತ್ರ ವಿನಿಮಯ. ಅದಕ್ಕೂ ಹೆಚ್ಚೆಂದರೆ ಕಲ್ಪನೆಯಲ್ಲೇ ನಿಂದನೆ ತೃಷೆ ತೀರಿಸಿಕೊಳ್ಳುವುದು.

ಮೋದಿ ಅವರು ಬ್ಯಾಂಕ್ ಲೆಕ್ಕ ಕೇಳಿರುವುದು ಮೇಲ್ನೋಟಕ್ಕೆ ಮೌಲ್ಯಾಧಾರಿತ ರಾಜಕಾರಣ, ನೈತಿಕತೆಯ ಪ್ರತೀಕ ಎಂದೆನಿಸಿದರೂ ಈ ವಿವರಗಳನ್ನು ಅವರಿಗಿರುವ ಅಧಿಕಾರ ಬಳಸಿ ಗುಪ್ತ ಮಾಹಿತಿ ಸಂಗ್ರಹ ವ್ಯವಸ್ಥೆ ಮೂಲಕವೂ ಪಡೆದುಕೊಳ್ಳಬಹುದಿತ್ತು. ಆದರೂ ಇದನ್ನು ಬಹಿರಂಗವಾಗಿ ಘೋಷಿಸುವ ಮೂಲಕ ಸಮಾಜಕ್ಕೊಂದು ಸಂದೇಶ ಮತ್ತು ಪ್ರತಿಭಟಿಸುತ್ತಿರುವ ಪ್ರತಿಪಕ್ಷಗಳಿಗೆ ಎದಿರೇಟು ನೀಡಲು ಬಳಸಿಕೊಂಡಿದ್ದಾರೆ. ಮೋದಿ ಅವರು ತಮ್ಮ ಪಕ್ಷದವರನ್ನೇ ಬಿಟ್ಟಿಲ್ಲ, ಇನ್ನು ತಮ್ಮದೇನೂ ಎನ್ನುವ ಭಾವನೆಯನ್ನು ಸಮಾಜದಲ್ಲಿ ಒಡಮೂಡಿಸುವುದರ ಜತೆಜತೆಗೆ ತಾಕತ್ತಿದ್ದರೆ ಪ್ರತಿಪಕ್ಷಗಳೂ ಇದನ್ನು ಮಾಡಲಿ ಎನ್ನುವ ಪರೋಕ್ಷ ಸವಾಲನ್ನೂ ಒಡ್ಡಿದ್ದಾರೆ. ಸಾಧಕ-ಬಾಧಕಗಳ ಬಗ್ಗೆ ಸಾಕಷ್ಟು ಮುಂದಾಲೋಚನೆ ಇದೆಯೋ ಇಲ್ಲವೋ ನೋಟು ರದ್ದು ನಿರ್ಣಯವನ್ನಂತೂ ತೆಗೆದುಕೊಂಡಾಗಿದೆ. ಅನುಷ್ಠಾನದ ಹಾದಿಯಲ್ಲಿ ಎದಿರಾಗಿರುವ ಸವಾಲುಗಳು ಪ್ರತಿಪಕ್ಷಗಳ ಪ್ರತಿಭಟನೆಯ ಅಸ್ತ್ರಗಳಾಗಿ ಪರಿಣಮಿಸಿವೆ. ಪ್ರತಿಪಕ್ಷಗಳನ್ನು ನಿಶ್ಯಸ್ತ್ರೀಕರಣ ಮಾಡಲು ಮೋದಿ ಅವರೂ ಸಾಕಷ್ಟು ಪ್ರತ್ಯಸ್ತ್ರಗಳನ್ನು ಬಿಡುತ್ತಿದ್ದಾರೆ. ಬಿಜೆಪಿ ಸಂಸದರು ಮತ್ತು ಶಾಸಕರಿಂದ ಬ್ಯಾಂಕ್ ವಿವರ ಕೇಳಿರುವುದೂ ಅವುಗಳಲ್ಲಿ ಒಂದು.

ಲಗೋರಿ : ಊರು ಗೆಲ್ಲಬೇಕೆನ್ನುವವನು ಮೊದಲು ತನ್ನನ್ನು ತಾನು ಗೆಲ್ಲಬೇಕು.

Leave a Reply