ನಗ್ರೊಟಾ ಸೇನಾ ನೆಲೆ ಮೇಲೆ ಉಗ್ರರ ದಾಳಿಗೆ ಇಬ್ಬರು ಯೋಧರು ಹುತಾತ್ಮ, ಸಾಂಬಾದಲ್ಲಿ 3 ನುಸುಳುಕೋರರನ್ನು ಹೊಸಕಿ ಹಾಕಿದ ಬಿಎಸ್ಎಫ್

ಡಿಜಿಟಲ್ ಕನ್ನಡ ಟೀಮ್:

ಜಮ್ಮು ಕಾಶ್ಮೀರದಲ್ಲಿ ಉಗ್ರರ ನುಸುಳುವಿಕೆ ಹಾಗೂ ಸೈನಿಕರ ಮೇಲಿನ ದಾಳಿ ಮುಂದುವರಿದಿದ್ದು, ಭಾರತದ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಮತ್ತೊಂದೆಡೆ ಸಾಂಬಾ ಪ್ರದೇಶದಲ್ಲೂ ಇದೇ ರೀತಿಯ ಉಗ್ರರ ನುಸುಳುವಿಕೆ ಪ್ರಯತ್ನ ನಡೆದಿದ್ದು, ಭಾರತೀಯ ಸೇನೆ ಇಬ್ಬರು ಉಗ್ರರನ್ನು ಹೊಡೆದು ಹಾಕಿದೆ.

ಜಮ್ಮುವಿನ ಹೊರವಲಯದಲ್ಲಿರುವ ನಗ್ರೊಟಾ ಪ್ರದೇಶದಲ್ಲಿರುವ ಸೇನಾ ತುಕಡಿಯ ಮೇಲೆ ಮಂಗಳವಾರ ಬೆಳಗಿನ ಜಾವ 5 ಗಂಟೆ ಸುಮಾರಿಗೆ 3-4 ಉಗ್ರರು ನುಗ್ಗಿ ದಾಳಿ ನಡೆಸಿದ್ದಾರೆ. ಪರಿಣಾಮ ಇಬ್ಬರು ಯೋಧರು ಪ್ರಾಣ ತೆತ್ತಿದ್ದಾರೆ. ಕೆಲ ಮಾಧ್ಯಮಗಳ ವರದಿ ಪ್ರಕಾರ ಈ ಕಾರ್ಯಾಚರಣೆ ವೇಳೆ ಭಾರತೀಯ ಸೇನೆ ಓರ್ವ ಉಗ್ರನನ್ನು ಎನ್ ಕೌಂಟರ್ ಮಾಡುವಲ್ಲಿ ಯಶಸ್ವಿಯಾಗಿದೆ. ಉಳಿದ ಉಗ್ರರು ಸೇನಾ ನೆಲೆಯ ಊಟದ ಗೃಹದಲ್ಲಿ ಅಡಗಿರುವುದಾಗಿಯೂ ತಿಳಿದು ಬಂದಿದ್ದು, ಕಾರ್ಯಾಚರಣೆ ಮುಂದುವರಿದಿದೆ.

ಭಾರತ ಮತ್ತು ಪಾಕಿಸ್ತಾನ ನಡುವಣ ಗಡಿ ಪ್ರದೇಶದಲ್ಲಿನ ಬಿಗು ವಾತಾವರಣವನ್ನು ತಿಳಿಗೊಳಿಸುವ ಹಿನ್ನೆಲೆಯಲ್ಲಿ ಮಾತುಕತೆಗೆ ಸಿದ್ಧ ಎಂದು ಪಾಕಿಸ್ತಾನ ಮುಂದೆ ಬಂದಿರುವ ಬೆನ್ನಲ್ಲೇ ಈ ಉಗ್ರರ ದಾಳಿ ನಡೆದಿದೆ. ಇದರೊಂದಿಗೆ ಪಾಕಿಸ್ತಾನ ಮತ್ತೊಮ್ಮೆ ಮಾತುಕತೆಗೆ ಕರೆದು ಮತ್ತೊಂದೆಡೆ ಉಗ್ರರನ್ನು ಛೂ ಬಿಡುವ ನೀಚ ಬುದ್ಧಿ ಮುಂದುವರಿಸಿದೆ.

ಸೇನಾ ನೆಲೆಯ 166ನೇ ತುಕಡಿಯ 16 ಕಾರ್ಪ್ಸ್ ಮುಖ್ಯಕಚೇರಿಗೆ ಈ ಉಗ್ರರು ನುಗ್ಗಿರುವುದಾಗಿ ಸೇನಾ ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಿದ್ದು, ಈ ಬಗ್ಗೆ ಹೆಚ್ಚಿನ ವಿವರ ನೀಡಲು ನಿರಾಕರಿಸಿದ್ದಾರೆ. ಅತ್ಯುತ್ತಮ ಭದ್ರತೆ ಹೊಂದಿರುವ ಸೇನಾ ನೆಲೆಯ ಮೇಲೆ ಈ ಉಗ್ರರು ನುಗ್ಗಿದ್ದು ಹೇಗೆ ಎಂಬುದರ ಬಗ್ಗೆ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.

ಇದೇ ರೀತಿಯಲ್ಲಿ ಜಮ್ಮು ಕಾಶ್ಮೀರದ ಸಾಂಬಾ ಪ್ರದೇಶದಲ್ಲೂ ದಾಳಿಗೆ ಮುಂದಾಗಿದ್ದ ನುಸುಳುಕೋರರನ್ನು ಭಾರತೀಯ ಸೇನೆ ಹೊಸಕಿ ಹಾಕಿದೆ. ನಿನ್ನೆ ಮಧ್ಯರಾತ್ರಿ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಪ್ರದೇಶದಲ್ಲಿ ಅನುಮಾನಾಸ್ಪದ ಬೆಳವಣಿಗೆಗಳನ್ನು ಗಮನಿಸಿದ ಗಡಿ ಭದ್ರತಾ ಪಡೆ ಅಕ್ರಮವಾಗಿ ಗಡಿಯೊಳಗೆ ನುಸುಳುತ್ತಿದ್ದ ಮೂವರು ಉಗ್ರರನ್ನು ಸದೆಬಡಿದಿದೆ. ರಾಮ್ಘರ್ ಪ್ರದೇಶದ ಚಾಮ್ಲಿಯಾದ ಫತ್ವಾಲ್ ಹಳ್ಳಿಯಲ್ಲಿ ಈ ಕಾರ್ಯಾಚರಣೆ ನಡೆದಿದೆ. ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶ ಎಂದರೆ, ಇತ್ತೀಚಿನ ದಿನಗಳಲ್ಲಿ ಶಾಂತವಾಗಿದ್ದ ಚಾಮ್ಲಿಯಾ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಉಗ್ರರ ನುಸುಳುವಿಕೆ ಪ್ರಯತ್ನ ನಡೆದಿದ್ದು, ಈ ಪ್ರಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸುವಲ್ಲಿ ಯಶಸ್ವಿಯಾಗಿದೆ.

Leave a Reply