ಮೇಜರ್ ಗಿರೀಶ್ ಮತ್ತು 6 ಮಂದಿ ಸೈನಿಕರು 8 ನಾಗರೀಕರನ್ನು ಕಾಪಾಡುತ್ತ ಹುತಾತ್ಮರಾದ ನಗ್ರೊಟಾ ಕಾರ್ಯಾಚರಣೆಯ ವೀರಗಾಥೆ

ನಗ್ರೊಟಾ ಸೇನಾ ನೆಲೆಯ ಮೇಲಿನ ಉಗ್ರರ ದಾಳಿಯಲ್ಲಿ ಹತರಾದ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಅವರು ತಮ್ಮ ಮಗುವಿನ ಜತೆಗಿದ್ದ ಚಿತ್ರ.

ಡಿಜಿಟಲ್ ಕನ್ನಡ ಟೀಮ್:

ನಗ್ರೊಟಾದ ಸೇನಾ ನೆಲೆಯ ಮೇಲಿನ ಉಗ್ರರ ದಾಳಿಯಲ್ಲಿ ಈವರೆಗೂ 7 ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ. ಆ ಪೈಕಿ ಇಬ್ಬರು ಸೇನಾ ಅಧಿಕಾರಿಗಳಾಗಿದ್ದು, ಒಬ್ಬರು ಬೆಂಗಳೂರು ಮೂಲದ ಮೇಜರ್ ಅಕ್ಷಯ್ ಗಿರೀಶ್ ಕುಮಾರ್. ಇನ್ನೊಬ್ಬರು ಮೇಜರ್ ಗೊಸವಿ ಕುನಾಲ್ ಮನ್ನಾದಿರ್. ಈ ಯೋಧರ ಬಲಿದಾನಕ್ಕೆ ಶ್ರದ್ಧಾಂಜಲಿ ಸಲ್ಲಿಸಲು ಸಂಸತ್ ಅಧಿವೇಶನದಲ್ಲಿ ಆಗ್ರಹಿಸಲಾಯಿತು. ಆಗ ಕೇಂದ್ರ ಸರ್ಕಾರ ಈ ಕಾರ್ಯಾಚರಣೆ ಇನ್ನು ಚಾಲ್ತಿಯಲ್ಲಿದ್ದು, ಮುಕ್ತಾಯವಾದ ನಂತರ ಶ್ರದ್ಧಾಂಜಲಿ ಸಲ್ಲಿಸೋಣ ಎಂದಿತು. ಇದಕ್ಕೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದರು.

ಇವಿಷ್ಟೂ ಈ ಯೋಧರ ಹುತಾತ್ಮದ ಕುರಿತಾದ ಪ್ರಮುಖ ಬೆಳವಣಿಗೆಗಳು. ಆದರೆ, ಈ ಕಾರ್ಯಾಚರಣೆಯಲ್ಲಿ 7 ಯೋಧರು ಏಕೆ ಪ್ರಾಣತೆರಬೇಕಾಯ್ತು ಎಂಬ ಹತಾಶೆಯ ಪ್ರಶ್ನೆಗೆ ಉತ್ತರ ಹುಡುಕಿದಾಗ ನಮಗೆ ಸಿಕ್ಕ ಅಂಶ ಎಂದರೆ… ಈ ಯೋಧರು ಅಷ್ಟು ತ್ವರಿತವಾಗಿ ನುಗ್ಗಿ ಪ್ರಾಣತ್ಯಾಗ ಮಾಡುವುದಕ್ಕೆ ಕಾರಣವಾಗಿದ್ದು- ಸೇನಾನೆಲೆಯಲ್ಲಿದ್ದ 2 ಕಂದಮ್ಮಗಳು, 2 ಮಹಿಳೆಯರು ಹಾಗೂ ನಾಲ್ವರು ಶಸ್ತ್ರರಹಿತರು ಉಗ್ರರಿಗೆ ಒತ್ತೆಯಾಳಾಗಿ ಸಿಗಬಾರದೆಂಬ ಉದ್ದೇಶ.

ಜಮ್ಮುವಿನಿಂದ 20 ಕಿ.ಮೀ ದೂದಲ್ಲಿರುವ ಸೇನಾ ನೆಲೆಗೆ ಪ್ರವೇಶಿಸಲು ಪೊಲೀಸರು ಉಡುಗೆ ಧರಿಸಿದ್ದ ಉಗ್ರರ ತಂಡ ಸುಲಭವಾಗಿ ಸೇನಾ ನೆಲೆಯನ್ನು ಪ್ರವೇಶಿಸಿತ್ತು. ನಂತರ ಈ ಉಗ್ರರ ತಂಡ ಮೂರು ಗುಂಪುಗಳಾಗಿ ಬೇರೆಯಾದವು. ಈ ಹಂತದಲ್ಲಿ ಎರಡು ಗುಂಪು 2 ಕಟ್ಟಡಗಳಿಗೆ ನುಗ್ಗಿದರು. ಈ ಹಂತದಲ್ಲಿ 2 ಮಗು, 2 ಮಹಿಳೆಯರು (ಸೇನಾ ಅಧಿಕಾರಿಗಳ ಪತ್ನಿಯರು) ಹಾಗೂ ನಾಲ್ವರು ಶಸ್ತ್ರರಹಿತರನ್ನು ಈ ಉಗ್ರರು ಸಮೀಪಿಸತೊಡಗಿದರು. ಇವರು ಒತ್ತೆಯಾಳಾಗಿ ಸಿಲುಕಿ ಉಗ್ರರ ಮುಂದಿನ ಬೇಡಿಕೆಗಳಿಗೆ ಮುನ್ನುಡಿಯಾಗುವ, ಇಲ್ಲವೇ ಕೊಲ್ಲಲ್ಪಡುವ ಸಾಧ್ಯತೆ ಇತ್ತು. ಇದನ್ನು ತಪ್ಪಿಸುವುದಕ್ಕೆಂದೇ ಮೇಜರ್ ಅಕ್ಷಯ್ ಹಾಗೂ ಮೇಜರ್ ಕುನಾಲ್ ಅವರ ತಂಡ ಧಾವಿಸಿತು. ತಲಾ 15 ಮಂದಿ ತಂಡದೊಂದಿಗೆ ಇವರು ಉಗ್ರರನ್ನು ನಿಗ್ರಹಿಸಲು ಮುಂದಾದರು.

ಉಗ್ರರು ಕಟ್ಟಡವನ್ನು ಪ್ರವೇಶಿಸುತ್ತಿದ್ದಂತೆ ಸೇನಾ ಅಧಿಕಾರಿಗಳ ಪತ್ನಿಯರು ಅಪಾಯದ ಮುನ್ಸೂಚನೆಯನ್ನು ಅರಿತು, ಉಗ್ರರು ತಮ್ಮ ಮನೆಯೊಳಗೆ ಪ್ರವೇಶಿಸದಂತೆ ಬಾಗಿಲು ಮುಚ್ಚಿ ಗೃಹಪಯೋಗಿ ವಸ್ತುಗಳನ್ನು ಅಡ್ಡವಾಗಿಟ್ಟರು. ಈ ಹಂತದಲ್ಲಿ ಉಗ್ರರಿಗೆ ಇವರನ್ನು ಪೂರ್ಣ ಪ್ರಮಾಣದಲ್ಲಿ ಒತ್ತೆಯಾಳಾಗಿ ಇರಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಒಂದು ವೇಳೆ ಈ ಮಹಿಳೆಯರು ತಮ್ಮ ಕಂದಮ್ಮಗಳೊಂದಿಗೆ ಉಗ್ರರ ಸೆರೆಯಾಗಿ ಬಿಟ್ಟಿದ್ದರೆ, ಈ ಅವಕಾಶವನ್ನು ಬಳಸಿಕೊಂಡು ಉಗ್ರರು ಇನ್ನಷ್ಟು ಹೆಚ್ಚಿನ ಪ್ರಾಣಾಪಾಯ ಮಾಡುವ ಸಾಧ್ಯತೆ ಇತ್ತು. ಈ ಹಂತದಲ್ಲಿ ಕಾರ್ಯಾಚರಣೆಗೆ ಇಳಿದ ಭಾರತೀಯ ಸೇನಾ ಪಡೆಗೆ ಉಗ್ರರಿಂದ ಪ್ರತಿ ದಾಳಿ ಎದುರಾಯಿತು. ಈ ಹಂತದಲ್ಲಿ ಕಟ್ಟಡದ ಒಂದು ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತು. ಬೆಂಕಿಯ ಪ್ರಭಾವ ಹೆಚ್ಚಾಗುವ ಮುನ್ನ ಕಟ್ಟಡದಲ್ಲಿದ್ದ ಈ ಮಹಿಳೆಯರು ಮಕ್ಕಳು ಹಾಗೂ ನಾಲ್ವರು ಯೋಧರನ್ನು ರಕ್ಷಿಸುವ ಒತ್ತಡ ಭಾರತೀಯ ಸೇನಾ ಪಡೆಯನ್ನು ಮತ್ತಷ್ಟು ಒತ್ತಡಕ್ಕೆ ಸಿಲುಕಿಸಿತು. ಸುದೀರ್ಘ 5 ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಭಾರತೀಯ ಯೋಧರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು, ಕಟ್ಟಡದ ಒಳಗೆ ಸೇರಿಕೊಂಡಿದ್ದ ಉಗ್ರರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾದರು. ಆ ಮೂಲಕ ಒತ್ತೆಯಾಳು ಪರಿಸ್ಥಿತಿಗೆ ಸಿಲುಕಲಿದ್ದ ನಾಲ್ವರು ಶಸ್ತ್ರರಹಿತ ಯೋಧರು, ಸೇನಾ ಅಧಿಕಾರಿಗಳ ಪತ್ನಿಯರು ಮತ್ತು ಮಕ್ಕಳನ್ನು ರಕ್ಷಿಸಲಾಯಿತು.

ಮತ್ತೊಂದು ಗುಂಪಾಗಿ ಚದುರಿದ್ದ ಉಗ್ರರು ತಪ್ಪಿಸಿಕೊಂಡಿದ್ದು, ಈ ಕಾರ್ಯಾಚರಣೆ ಇನ್ನು ಸಾಗುತ್ತಿದೆ.

Leave a Reply