ಸಿನಿಮಾ ನೋಡೋಕು ಮೊದಲು ದೇಶಪ್ರೇಮ ಸಾಬೀತು ಮಾಡಿ- ಚಿತ್ರಮಂದಿರದಲ್ಲಿ ರಾಷ್ಟ್ರಗೀತೆ ಕಡ್ಡಾಯ ಎಂದ ಸುಪ್ರೀಂ, ಸರ್ಕಾರದಿಂದ ರೈತರಿಗೆ ಬಾಡಿಗೆ ರೂಪದಲ್ಲಿ ಕೃಷಿ ಯಂತ್ರ, ಬೆಳಗಾವಿ ಅಧಿವೇಶನದ ಪ್ರಮುಖ ಅಂಶಗಳು

ಕಬ್ಬು ಬೆಳೆಗಾರರಿಗೆ ಕೂಲಿ ಕಾರ್ಮಿಕರ ಕೊರತೆ ನೀಗಿಸುವ ಸಲುವಾಗಿ ಕಟಾವು ಯಂತ್ರವನ್ನು ಬಾಡಿಗೆ ರೂಪದಲ್ಲಿ ನೀಡುವ ಯೋಜನೆಗೆ ಬುಧವಾರ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೃಷಿ ಸಚಿವ ಕೃಷ್ಣಭೈರೇಗೌಡ.

ಡಿಜಿಟಲ್ ಕನ್ನಡ ಟೀಮ್:

ಚಿತ್ರ ಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ

ದೇಶದಲ್ಲಿರುವ ಪ್ರತಿಯೊಂದು ಚಿತ್ರಮಂದಿರಗಳಲ್ಲೂ ಸಿನಿಮಾ ಆರಂಭವಾಗುವ ಮುನ್ನ ರಾಷ್ಟ್ರಗೀತೆಯನ್ನು ಹಾಕಲೇಬೇಕು… ರಾಷ್ಟ್ರಗೀತೆ ಕೇಳಿ ಬರುತ್ತಿರುವಾಗ ಚಿತ್ರಮಂದಿರ ಪರದೆಯ ಮೇಲೆ ರಾಷ್ಟ್ರಧ್ವಜ ಖಡ್ಡಾಯವಾಗಿ ಮೂಡಿರಲೇಬೇಕು… ಇದು ಬುಧವಾರ ಸುಪ್ರೀಂ ಕೋರ್ಟ್ ಕೊಟ್ಟ ಮಹತ್ವದ ತೀರ್ಪು. ಇದರೊಂದಿಗೆ ಇನ್ನುಮುಂದೆ ಪ್ರತಿಯೊಬ್ಬರು ಚಿತ್ರಮಂದಿರಗಳಲ್ಲಿ ಸಿನಿಮಾ ನೋಡುವ ಮುನ್ನ ರಾಷ್ಟ್ರಗೀತೆಗೆ ಗೌರವ ಸಲ್ಲಿಸಬೇಕಿದೆ.

ಈ ಪ್ರಕರಣದ ಆರಂಭವೇ ವಿಭಿನ್ನ. ಅದೇನಂದ್ರೆ ಈ ಪ್ರಕರಣದಲ್ಲಿ ಅರ್ಜಿದಾರರಾಗಿರುವ ಶ್ಯಾಮ್ ನಾರಾಯಣ್ 2002ರಲ್ಲಿ ಹಿಂದಿಯ ‘ಕಬಿ ಖುಷಿ ಕಬಿ ಘಮ್’ ಚಿತ್ರವನ್ನು ನೋಡಲು ತೆರಳುತ್ತಾರೆ. ಈ ಚಿತ್ರದಲ್ಲಿ ಶಾರುಖ್ ಖಾನ್ ಪುತ್ರ (ಚಿತ್ರದ ಪಾತ್ರ) ರಾಷ್ಟ್ರಗೀತೆಯನ್ನು ಹಾಡುವ ದೃಶ್ಯವೊಂದಿದೆ. ಈ ದೃಶ್ಯ ಆರಂಭವಾಗುತ್ತಿದ್ದಂತೆ ಶ್ಯಾಮ್ ಎದ್ದು ನಿಂತು ಗೌರವ ಸಲ್ಲಿಸುತ್ತಾರೆ. ಆದರೆ ಚಿತ್ರವನ್ನು ನೋಡಲು ಬಂದಿದ್ದ ಇತರೆ ಪ್ರೇಕ್ಷಕರು ಎದ್ದು ನಿಲ್ಲಲಿಲ್ಲ. ಅಲ್ಲದೆ ರಾಷ್ಟ್ರಗೀತೆಗೆ ಗೌರವ ಸೂಚಿಸಲು ಎದ್ದು ನಿಂತ ಶ್ಯಾಮ್ ಅವರಿಗೂಆಕ್ಷೇಪ ವ್ಯಕ್ತಪಡಿಸುತ್ತಾರೆ ಹಾಗೂ ಹಾಸ್ಯ ಮಾಡುತ್ತಾರೆ. ಶ್ಯಾಮ್ ಈ ಬಗ್ಗೆ ಚಿತ್ರಮಂದಿರದ ಮ್ಯಾನೆಜರ್ ಬಳಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ಶ್ಯಾಮ್ ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ಆ ಮೂಲಕ ಈ ಪ್ರಕರಣ ಸುಪ್ರೀಂ ಕೋರ್ಟ್ ಮುಂದೆ ವಿಚಾರಣೆಗೆ ಬಂದು ನಿಲ್ಲುತ್ತದೆ.

ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪು ನೀಡಿದೆ. ಈ ತೀರ್ಪನ್ನು ಒಂದು ವಾರದ ಒಳಗಾಗಿ ಜಾರಿಗೆ ತರುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ.

‘ಭಾರತೀಯ ಸಂವಿಧಾನದಲ್ಲಿ ತಿಳಿಸಿರುವ ಹಾಗೆ ದೇಶದ ಪ್ರತಿಯೊಬ್ಬ ಪ್ರಜೆಯು ರಾಷ್ಟ್ರಗೀತೆ ಹಾಗೂ ರಾಷ್ಟ್ರ ಧ್ವಜಕ್ಕೆ ಗೌರವ ನೀಡಬೇಕಿರುವುದು ಪ್ರಮುಖ ಕರ್ತವ್ಯ. ಜನರಲ್ಲಿ ಈ ದೇಶ ನನ್ನದು, ನನ್ನ ತಾಯ್ನಾಡು ಎಂಬ ದೇಶಭಕ್ತಿ ಹಾಗೂ ರಾಷ್ಟ್ರಪ್ರೇಮ ಭಾವನೆ ಮೂಡಬೇಕು. ಇನ್ನು ರಾಷ್ಟ್ರಗೀತೆಯನ್ನು ಎಲ್ಲೆಂದರಲ್ಲಿ ಮುದ್ರಣ ಮಾಡುವಂತಿಲ್ಲ. ಹಾಗೂ ಎಲ್ಲೆಡೆ ಅದರ ವಿಭಿನ್ನ ರೀತಿಯಲ್ಲಿ ಹಾಡುವಂತಿಲ್ಲ’ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ನ್ಯಾಯಾಲಯದ ಈ ತೀರ್ಪಿಗೆ ರಾಜಕೀಯ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು ಅವು ಹೀಗಿವೆ…

‘ನ್ಯಾಯಾಲಯದ ಈ ತೀರ್ಪಿನಿಂದ ದೇಶದ ಜನರಲ್ಲಿ ರಾಷ್ಟ್ರಭಕ್ತಿಯನ್ನು ಬಿತ್ತಲಿದೆ. ಇದೊಂದು ಉತ್ತಮ ನಿರ್ಧಾರವಾಗಿದ್ದು, ಈಗಿನ ಯುವ ಜನರಲ್ಲಿ ರಾಷ್ಟ್ರಪ್ರೇಮದ ಬಗ್ಗೆ ಅರಿವು ಮೂಡಿಸಲು ನೆರವಾಗಲಿದೆ. ಈ ನಿರ್ಧಾರದ ಬಗ್ಗೆ ನನಗೆ ಸಂಪೂರ್ಣ ಸಂತೋಷವಾಗಿದೆ’ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ ಕೇಂದ್ರ ಸಚಿವ ವೆಂಕಯ್ಯ ನಾಯ್ಡು.

‘ನ್ಯಾಯಾಲಯದ ಈ ನಿರ್ಧಾರವನ್ನು ಪಾಲಿಸಲೇಬೇಕು. ಆದರೆ ರಾಷ್ಟ್ರಗೀತೆ ಹಾಡುವಾಗ ಜನರು ಎದ್ದು ನಿಲ್ಲಲೇಬೇಕೆ? ಹಾಗೂ ಇದರಿಂದ ರಾಷ್ಟ್ರಪ್ರೇಮ ಹಾಗೂ ದೇಶಭಕ್ತಿಯನ್ನು ಹೆಚ್ಚಿಸಲು ಸಾಧ್ಯವೇ? ಎಂಬ ಪ್ರಶ್ನೆ ಮೂಡುತ್ತದೆ. ಈ ದೇಶಪ್ರೇಮ ಎಂಬ ಅಂಶವನ್ನು ಚಿಕ್ಕವರಿಂದಲೇ ಎಲ್ಲರ ಮನಸ್ಸಿನಲ್ಲಿ ಬಿತ್ತಬೇಕು ಜತೆಗೆ ಸರ್ಕಾರವು 1971ರ ನ್ಯಾಷನಲ್ ಹಾನರ್ ಆಕ್ಟ್ ಅನ್ನು ತಿದ್ದುಪಡಿ ಮಾಡಬೇಕಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ ಎಐಎಂಐಎಂ ಮುಖ್ಯಸ್ಥ ಅಸಾವುದ್ದೀನ್ ಒವೈಸಿ.

ರೈತರಿಗೆ ಆಧುನಿಕ ಯಂತ್ರಗಳ ಬಾಡಿಗೆ

ಕೂಲಿ ಕಾರ್ಮಿಕರ ಸಮಸ್ಯೆ ಎದುರಿಸುತ್ತಿರುವ ರೈತರಿಗೆ ನೆರವಾಗಲು ಆಧುನಿಕ ಕೃಷಿ ಯಂತ್ರಗಳನ್ನು ಬಾಡಿಗೆ ರೂಪದಲ್ಲಿ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಕಬ್ಬು ಕಟಾವು ಮಾಡುವ ಯಂತ್ರಗಳಿಗೆ ಹಸಿರು ನಿಶಾನೆ ತೋರಿ ಮಾತನಾಡಿದ ಸಿಎಂ, ‘ರಾಜ್ಯದ ಎಲ್ಲ ಹೋಬಳಿ ಕೇಂದ್ರಗಳಲ್ಲಿ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಪ್ರಾರಂಭಿಸಿ, ರೈತರಿಗೆ ಅತ್ಯಂತ ಕಡಿಮೆ ಬಾಡಿಗೆ ದರದಲ್ಲಿ ಯಂತ್ರಗಳು ಲಭ್ಯವಾಗುವಂತೆ ನೋಡಿಕೊಳ್ಳಲಾಗುವುದು. ಇದರಿಂದ ರೈತರ ಸಮಯ ಹಾಗೂ ಹಣ ಉಳಿತಾಯವಾಗಲಿದೆ. ಕೂಲಿ ಕಾರ್ಮಿಕರ ಕೊರತೆ ಕಬ್ಬು ಬೆಳೆಗಾರರಿಗೆ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಕಬ್ಬು ಕಟಾವು ಕಾರ್ಯವನ್ನು ಈಗ ಯಾಂತ್ರೀಕರಣಗೊಳಿಸಲಾಗಿದೆ. ಒಂದು ದಿನದಲ್ಲಿ 40 ಕೂಲಿ ಕಾರ್ಮಿಕರು 40 ಮೆಟ್ರಿಕ್ ಟನ್ ಕಬ್ಬು ಕಟಾವು ಮಾಡುತ್ತಾರೆ. ಆದರೆ ಈ ಯಂತ್ರ 110ರಿಂದ 125 ಮೆಟ್ರಿಕ್ ಟನ್ ಕಟಾವು ಮಾಡಲಿದೆ. 3 ದಿನಗಳ ಕೆಲಸವನ್ನು 8-12 ಗಂಟೆಗಳಲ್ಲಿ ಮಾಡಲಿದೆ’ ಎಂದರು.

ಬೆಳಗಾವಿ ಅಧಿವೇಶನದ ಬುಧವಾರ ಕಲಾಪದ ಪ್ರಮುಖ ಅಂಶಗಳು…

  • ರಾಜ್ಯದಲ್ಲಿ ಎದುರಾಗಿರುವ ಮರಳು ಕೊರತೆಯನ್ನು ಮುಂದಿನ ಒಂದು ತಿಂಗಳಲ್ಲಿ ಪೂರೈಸಲಾಗುವುದು ಎಂದಿದ್ದಾರೆ ಗಣಿ ಸಚಿವ ವಿನಯ್ ಕುಲಕರ್ಣಿ. ಪ್ರಶ್ನೋತ್ತರ ವೇಳೆಯಲ್ಲಿ ಶಿವರಾಮ್ ಹೆಬ್ಬಾರ್ ಅವರ ವಿಷಯ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ‘ಮರಳು ನೀತಿಗೆ ನಿಯಮಾವಳಿಗಳನ್ನು ಸರಳೀಕರಣಗೊಳಿಸಿದ್ದು, ಹೊಸ ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗುವುದು’ ಎಂದರು.
  • ಜಮ್ಮುವಿನ ನಗ್ರೊಟಾ ಸೇನಾ ನೆಲೆಯ ಮೇಲಿನ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಬೆಂಗಳೂರು ಮೂಲದ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಗಿರೀಶ್ ಕುಮಾರ್ ಸೇರಿದಂತೆ ಈ ದಾಳಿಯಲ್ಲಿ ಮುತರಾದ 7 ಸೈನಿಕರಿಗೆ ಸಂತಾಪ ಸೂಚಿಸಲಾಯಿತು. ಈ ವೇಳೆ ಮಾತನಾಡಿದ ಸಿಎಂ ಪರಿಹಾರದ ಬಗ್ಗೆ ಭರವಸೆ ನೀಡಿದರು.
  • ಶುದ್ಧ ಕುಡಿಯುವ ನೀರು ಘಟಕಗಳನ್ನು ಸರಿಯಾಗಿ ನಿರ್ವಹಿಸದೇ ಲೋಪ ಎಸಗುವ ಏಜೆನ್ಸಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಎಚ್.ಕೆ ಪಾಟೀಲ್ ವಿಧಾನಸಭೆಯಲ್ಲಿ ತಿಳಿಸಿದರು. ಈಗಾಗಲೇ ಸೂಕ್ತ ನಿರ್ವಹಣೆ ಇಲ್ಲದೆ ಕೆಲವು ಘಟಕಗಳು ಸ್ಥಗಿತಗೊಂಡಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಮಾಜಿ ಸಚಿವರಿಗೆ ಸಮನ್ಸ್

ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಶಾಸಕ ಬಾಬುರಾವ್ ಚಿಂಚನಸೂರ್ ಅವರಿಗೆ 15ನೇ ಎಸಿಎಂಎಂ ನ್ಯಾಯಾಲಯ ಸಮನ್ಸ್ ಜಾರಿ ಮಾಡಿ ಖುದ್ದು ಹಾಜರಾಗುವಂತೆ ತಿಳಿಸಿದೆ. ಅಂಜನಾ ಎಂಬುವವರಿಂದ ₹ 12 ಕೋಟಿ ಪಡೆದು, ಆನಂತರ ಅದನ್ನು ಹಿಂತಿರುಗಿಸದೇ ವಚಿಸಲಾಗಿತ್ತು. ಆನಂತರ ಬಾಬುರಾವ್ ಅವರು ಚೇಕ್ ನೀಡಿದ್ದರು. ಆ ಚೆಕ್ ಬೌನ್ಸ್ ಆದ ಹಿನ್ನೆಲೆಯಲ್ಲಿ ಅವರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು.

ಎಸ್ಸಿ ಪಟ್ಟಿಯಿಂದ ಬೋವಿ, ಲಂಬಾಣಿಯನ್ನು ಕೈ ಬಿಡಲ್ಲ

ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಬೋವಿ ಮತ್ತು ಲಂಬಾಣಿ ಜಾತಿಗಳನ್ನು ಕೈಬಿಡುವುದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಸ್ಪಷ್ಟಪಡಿಸಿದ್ದಾರೆ. ಸದ್ಯ ನ್ಯಾ. ಸದಾಶಿವ ಆಯೋಗ ವರದಿ ಅಂಗೀಕಾರದ ಬಗ್ಗೆ ಪರ-ವಿರೋಧದ ಚರ್ಚೆಯಾಗುತ್ತಿದೆ ಎಂಬ ಆತಂಕ ಎದುರಾಗಿದೆ. ಈ ವರದಿ ಅಂಗೀಕಾರ ಮಾಡುವುದು ಬಿಡುವುದು ಸಿಎಂಗೆ ಬಿಟ್ಟ ವಿಚಾರ ಎಂದರು.

Leave a Reply