ವರ್ತಮಾನದ ಸಮರ್ಪಕ ನಿರ್ವಹಣೆಯಿಂದಲೇ ಭವಿಷ್ಯ ಅರಳುತ್ತದೆ.. ಮಾಟದಿಂದಲ್ಲ

author-geetha‘ಅದ್ಯಾವುದೋ ದೇವಸ್ಥಾನದಲ್ಲಿ ಎಳ್ಳೆಣ್ಣೆ ದೀಪ ಹಚ್ಚಿಡೋಕ್ಕೆ ಹೇಳಿದ್ರು ನಮ್ಮ ಗುರುಗಳು ಮಾರ್ಕೆಟ್ಟಿನಲ್ಲಿ ಎಳ್ಳೆಣ್ಣೆಗೆ ಬರ ಬಂದು ಬಿಡ್ತು.’

‘ನಮ್ಮ ಗುರುಗಳು ಮಂಡಲ ಹಾಕಿ ಪೂಜೆ ಮಾಡಿ ಕೇಳಿಕೊಂಡ್ರೆ ಓಡಿ ಹೋದವರು ಓಡಿಕೊಂಡು ಹಿಂತಿರುಗಿ ಬರುತ್ತಾರೆ… ಆ ದೇವಿ ಅನುಗ್ರಹ ಇದೆ ನಮ್ಮ ಗುರುಗಳ ಮೇಲೆ.’

‘ಪುರುಷ ವಶೀಕರಣ, ಸ್ತ್ರೀ ವಶೀಕರಣದ ವಿಷಯದಲ್ಲಿ ನಮ್ಮ ಸ್ವಾಮೀಜಿಯವರು ಎತ್ತಿದ ಕೈ… ಹುಟ್ಟಿದ ವರ್ಷ ದಿನಾಂಕ, ಸಮಯ ಕೊಟ್ಟರೆ ಸಾಕು. ಸಿದ್ಧಿಸಿಕೊಡ್ತಾರೆ.’

‘ಒಂದು ಪ್ರಶ್ನೆಗೆ ಎರಡು ಸಾವಿರ ರುಪಾಯಿ. ತಟ್ಟಂಥ ಉತ್ತರ ಕೊಡದಿದ್ದರೆ ಕೇಳಿ…’

‘ಮುಖ ಸರ್.. ಮುಖ ನೋಡ್ತಾ ಇದ್ದ ಹಾಗೆ ನಿಮ್ಮ ಪೂರ್ವಾಪರ ಎಲ್ಲಾ ಹೇಳಿಬಿಡ್ತಾರೆ…’

‘ನಿಮ್ಮ ಯಾವ ಯಾವ ಅಂಗದ ಮೇಲೆ ಮಚ್ಚೆ ಇದೆ ಅಂತ ಹೇಳಿ.. ಅದರ ಫಲ ಏನು ಅಂತ ಹೇಳ್ತಾರೆ..’

‘ನಮ್ಮ ಗುರುಗಳು ಆರಾಧಿಸುವ ಶಕ್ತಿ ದೇವತೆ, ಶನಿಯ ಸ್ಥಾನವನ್ನೇ ಬದಲಿಸಿ, ನಿಮಗೆ ಫಲ ಸಿದ್ಧಿಸುವಂತೆ, ಶನಿ ಕಾಟ ದೂರವಾಗುವಂತೆ ಮಾಡುತ್ತಾರೆ.’

‘ನಾನು ಅಂದ್ರೆ ಸಂಖ್ಯಾಶಾಸ್ತ್ರ… ಸಂಖ್ಯಾಶಾಸ್ತ್ರ ಅಂದ್ರೆ ನಾನು.. ಅಂತ ಹೇಳ್ತಾರೆ ನಮ್ಮ ಗುರುಗಳು… ಕೈಯಿನ ಹತ್ತು ಬೆರಳುಗಳು ಸಾಕು ಅವರಿಗೆ. ಲೆಕ್ಕ ಹಾಕಿ, ಭಾಗ ಮಾಡಿ, ಗುಣಿಸಿ… ನಿಮ್ಮ ಭವಿಷ್ಯ ಹೇಳಿ ಬಿಡುತ್ತಾರೆ. ಅವರು ಹೇಳಿದ್ದು ಆಗುತ್ತೆ ಅಷ್ಟೇ..’

ಈ ಭವಿಷ್ಯ ಹೇಳೋ ತಮ್ಮನ್ನು ತಾವೇ ಗುರುಗಳು ಎಂದು ಕರೆದುಕೊಳ್ಳುವವರ ಶಿಷ್ಯರದೇ ಇಷ್ಟು ಮಾತುಗಳು… ಇದರ ಮಧ್ಯೆ ‘ನಿಮಗೆ ಗೊತ್ತಿಲ್ಲ ಮೇಡಂ’ ಅನ್ನೋ ಒಗ್ಗರಣೆ ಬೇರೆ.

ಮದುವೆ ಮನೆಯಲ್ಲಿ ಮಾತನಾಡುತ್ತಾ ಕುಳಿತಾಗ ಬಂದ ಮಾತುಗಳಿವು. ಗುರುಗಳು, ಭವಿಷ್ಯ, ವಶೀಕರಣ ಎಂದೆಲ್ಲಾ ಮಾತನಾಡಬಲ್ಲರು ಎಂದು ನಾನು ಅಂದುಕೊಂಡಿರದ ವ್ಯಕ್ತಿಗಳು ಹೀಗೆ ಮಾತನಾಡುತ್ತಿದ್ದರು. ನಾನು ಅಮಾಯಕಳಂತೆ ಕೇಳಿಸಿಕೊಳ್ಳುತ್ತಾ ಕುಳಿತಿದ್ದೆ ಎಂದೇನು ಅಲ್ಲ.

ಟಿವಿಯಲ್ಲಿ ಚಾನೆಲ್ ಬದಲಿಸುವಾಗ ಈ ಭವಿಷ್ಯ ಹೇಳುವ ಗುರುಗಳು, ಸ್ವಾಮಿಗಳನ್ನು ನೋಡದೆ ಇರಲು ಸಾಧ್ಯವೇ ಇಲ್ಲ. ಇವರುಗಳ ಸಹಾಯ ಪಡೆದು ನಾವು ಏನನ್ನು ಬೇಕಾದರೂ ಸಾಧಿಸಬಹುದು… ಮನೆ ಕಟ್ಟಬಹುದು, ಮದುವೆಯಾಗಬಹುದು, ನಮಗಿಷ್ಟ ಆದವರನ್ನು ವಶೀಕರಿಸಿಕೊಳ್ಳಬಹುದು, ವ್ಯಾಪಾರದಲ್ಲಿ ನಷ್ಟವಾಗಿದ್ದರೆ ಲಾಭವಾಗುವಂತೆ ಪೂಜೆಯೋ ಮಾಟವೋ ಮಾಡಿಸಬಹುದು, ಮಕ್ಕಳು ನಮ್ಮ ಮಾತು ಕೇಳದಿದ್ದರೆ, ಅವರುಗಳು ಕೇಳುವಂತೆ ಮಾಡಿಕೊಳ್ಳಬಹುದು.

ಢಾಳಾಗಿ ವಿಭೂತಿ ಹಚ್ಚಿಕೊಂಡು, ಹಲವಾರು ಸರಗಳನ್ನು ಹಾಕಿಕೊಂಡಿದ್ದ ಸ್ವಾಮಿಗಳೊಬ್ಬರು ‘ಹಾಗೆ ಆಗುತ್ತದೆ ಎಂದು ನಾನು ಹೇಳುತ್ತೇನೋ… ಅಥವಾ ನಾನು ಹೇಳಿದೆ ಎಂದು ಹಾಗೆ ಆಗುತ್ತದೋ… ಆ ದೇವಿಯ ಮಹಿಮೆ…’ ಎಂದು ತಮ್ಮನ್ನು ತಾವು ಹೊಗಳಿಕೊಂಡಿದ್ದು ಕೇಳಿ ದಂಗಾಗಿದ್ದೆ.

ಮತ್ತೊಂದು ಛಾನಲ್ಲಿಗೆ ಹೋದರೆ ಅಲ್ಲಿ ಮತ್ತೊಬ್ಬ ಗುರುಗಳು… ಯಾರೋ ಕರೆ ಮಾಡಿದವರೊಂದಿಗೆ ಮಾತನಾಡುತ್ತಿದ್ದರು…

‘ನೋಡಿ.. ಟಿವಿಯತ್ತ ಮುಖ ಮಾಡಿ ಕುಳಿತುಕೊಳ್ಳಿ… ಭೂಸ್ಪರ್ಷವಿರಲಿ… ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿ… ಹಾಂ.. ಈಗ ಕಣ್ಣು ಮುಚ್ಚಿಕೊಳ್ಳಿ ನಾನು ಈಗ ಇಲ್ಲಿಂದಲೇ ನಿಮ್ಮ ಖಾಯಿಲೆ ಗುಣಪಡಿಸುತ್ತೇನೆ… ನನ್ನ ಕೈಬೆರಳುಗಳ ಮೂಲಕ, ನನ್ನ ಕಂಗಳ ಮೂಲಕ, ನನ್ನ ದನಿಯ ಮೂಲಕ ಇಲ್ಲಿಂದಲೇ ಶಕ್ತಿಯನ್ನು ನಿಮ್ಮ ದೇಹದೊಳಗೆ ಹರಡುತ್ತೇನೆ. ನೀವು ಮನಸ್ಸು ಶಾಂತವಾಗಿಟ್ಟುಕೊಂಡು ನೀವು ಕಣ್ಣು ಮುಚ್ಚುವ ಮುನ್ನ ನನ್ನ ಕಂಗಳನ್ನು ನೋಡಿದ್ದರಲ್ಲ… ಅದನ್ನು ನಿಮ್ಮ ಮನಃಪಟಲದಲ್ಲಿ ಇಟ್ಟುಕೊಳ್ಳಿ. ಈಗ ನಿಮ್ಮ ಗಂಟಲು…’

ನನ್ನ ತಲೆಗೆ ಇದು ಅರ್ಥವಾಗಲು ಕೆಲವು ಕ್ಷಣಗಳು ಹಿಡಿದವು. ಅದೆಲ್ಲೊ ಸ್ಟುಡಿಯೋದಲ್ಲಿ ಕ್ಯಾಮೆರಾ ಮುಂದೆ ಕುಳಿತ ವ್ಯಕ್ತಿ. ನಾನು ನಮ್ಮ ಮನೆಯ ಟಿವಿಯ ಮುಂದೆ ಕುಳಿತು ಆ ಛಾನೆಲ್ಲಿಗೆ ಹೋಗಿ, ನನ್ನ ಮೊಬೈಲ್ ನಿಂದ ಅವರು ಕೊಟ್ಟ ನಂಬರ್ರಿಗೆ ಡೈಯಲ್ ಮಾಡಿ ನನ್ನ ತಾಪತ್ರಯ ಹೇಳಿಕೊಂಡರೆ.. ಆ ವ್ಯಕ್ತಿ ನನ್ನ ತಾಪತ್ರಯವನ್ನು ಅವನ ಕೈಬೆರಳುಗಳ ಆಟದಲ್ಲಿ ನಿವಾರಿಸುತ್ತಾನೆ!

ದಿನಪತ್ರಿಕೆಗಳಲ್ಲಿ ಬರುವ ದಿನ ಭವಿಷ್ಯ, ನಿಯತಕಾಲಿಕೆಗಳಲ್ಲಿ ಬರುವ ವಾರದ ಭವಿಷ್ಯ, ವರ್ಷ ಭವಿಷ್ಯಗಳನ್ನೆಲ್ಲಾ ಓದುತ್ತಿದ್ದ ಕಾಲವೊಂದಿತ್ತು. ಅದರ ನಿರರ್ಥಕತೆ ಅರಿವಾಗಿ ಬಿಟ್ಟಿದ್ದಾಗಿತ್ತು. (ನಾನು ಓದುವುದು) ಈಗ ಟಿ.ವಿಯಲ್ಲಿ ಈ ಮಾರಿ ಮಹಾ ಮಾರಿಯಾಗಿ ಬಂದಿದೆ.

ಜ್ಯೋತಿಷಿಗಳೇ ಚಾನೆಲ್ಲುಗಳಿಗೆ ಅರ್ಧಗಂಟೆಗೆ ಇಷ್ಟು ಎಂದು ದುಡ್ಡು ಕೊಟ್ಟು ಬಂದು ಕುಳಿತುಕೊಳ್ಳುತ್ತಾರೆ. ತಮ್ಮ ಅಂಗಡಿಯ ಅಥವಾ ಕಚೇರಿಯ ವಿಳಾಸ, ದೂರವಾಣಿ ಸಂಸ್ಖೆಯ ಕೊಟ್ಟು ಬನ್ನಿ ಎಂದು ಆಹ್ವಾನಿಸುತ್ತಾರೆ. ಬಾಯಿಗೆ ಬಂದಿದ್ದು ಹೇಳಿ ಜ್ಯೋತಿಷ್ಯಾಸ್ತ್ರವನ್ನು ಅಪಹಾಸ್ಯ ಮಾಡುತ್ತಾರೆ…

ಆಂಗ್ಲ ಪತ್ರಿಕೆಯೊಂದರಲ್ಲಿ ನಿತ್ಯವೂ ದಿನ ಭವಿಷ್ಯ ಪ್ರಕಟವಾಗುತ್ತದೆ. ನಮ್ಮ ರಾಶಿಯ ಕೆಳಗೆ ನಮ್ಮ ಅಂದಿನ ಭವಿಷ್ಯ. ಈ ಬಣ್ಣದ ಬಟ್ಟೆ ಇಂದು ಧರಿಸಿ ಶುಭವಾಗುತ್ತದೆ ಎಂಬ ಸಲಹೆ. ಭವಿಷ್ಯವೂ ಅಷ್ಟೇ ತಿಪ್ಪೆ ಸಾರಿಸಿದಂತೆ… ನಾಲ್ಕು ವಾಕ್ಯ… ಮೇಷಕ್ಕೆ ಇಂದು ನಾಲ್ಕು ವಾಕ್ಯವಾದರೆ ನಾಳೆ ಕುಂಭ ರಾಶಿಗೆ ಅದೇ ನಾಲ್ಕು ವಾಕ್ಯ. ನಾಡಿದ್ದು ಮೀನ ರಾಶಿಗೆ.. ಅದರದು ಇದಕ್ಕೆ ಇದರದು ಅದಕ್ಕೆ ವ್ಯಾಕ್ಯಗಳು..  ಈ ರೀತಿ ಭವಿಷ್ಯ ಹೇಳುವ ಲಕ್ಷಣಕ್ಕೆ ಅವರ ಮೇಲ್ ಐಡಿ ಬೇರೆ ಕೊಡುತ್ತಾರೆ.. ಹೆಚ್ಚಿನ ವಿವರಕ್ಕೆ…

ನೀವು ಭವಿಷ್ಯ ಬರೆಯುವುದು ಹೀಗೆ.. ಯಾಕೆ? ಎಂದು ಮೇಲ್ ಕಳಿಸಿದರೆ ‘ಹೌದೇ?’ ಎಂಬ ಒಂದು ಪದದ ಉತ್ತರ.

ಇದೇ ನವೆಂಬರ್ ಎಂಟೋ ಒಂಬತ್ತೋ.. ಈ ದಿನ ಪತ್ರಿಕೆಯ ಭವಿಷ್ಯದ ಕಾಲಂ… ಬರಿ ರಾಶಿಗಳ ಹೆಸರಿನೊಂದಿಗೆ ಪ್ರಕಟವಾಗಿತ್ತು… ಭವಿಷ್ಯವೇ ಇಲ್ಲ! (ಪಾಪಾ… page ರೆಡಿ ಮಾಡಿ ಇಟ್ಟುಕೊಂಡಿದ್ದಾರೆ. ಭವಿಷ್ಯ ಬರೆಯುವವರು ಬರೆದು ಕಳುಹಿಸಿಯೇ ಇಲ್ಲ!) ನೆನ್ನೆಯದೋ ಮೊನ್ನೆಯದೋ ಹಾಕಿದ್ದರೆ ಆಗುತ್ತಿತ್ತು. ಆದರೆ ಗಡಿಬಿಡಿಯಲ್ಲಿ ಮರೆತಿದ್ದಾರೆ. ಪತ್ರಿಕೆ ಹಾಗೆಯೇ ಬಂದಿದೆ. ಭವಿಷ್ಯ ಖಾಲಿ..! blank..! ಮೋದಿಯವರ ಕೃಪೆಯಿಂದ ಸುಮಾರು ಜನಕ್ಕೆ ಅದು ಸತ್ಯವೇ ಆಯಿತು ಎಂಬುದು ಬೇರೆ ವಿಚಾರ.

ಕಾಲ ಕಳೆದಂತೆ ಮೂಢ ನಂಬಿಕೆಗಳು ಮಾಯವಾಗುತ್ತದೆ. ಸ್ವಾಮಿಜಿ, ಗುರುಗಳು ಎಂದು ಪೋಸ್ ಕೊಟ್ಟು ಜನರ ಸುಲಿಗೆ ಮಾಡುವವರು ಮನೆಗೆ ಹೋಗುತ್ತಾರೆ… ಅವರುಗಳ ಆಟ ಏನಿದ್ದರೂ ನಾಲ್ಕು ದಿನ ಎಂದುಕೊಳ್ಳುತ್ತಿದ್ದೆವು. ಹೆಚ್ಚಿನ ಗಮನ ಬೇಡ… ಉದಾಸೀನ ಮಾಡುವುದೇ ಸರಿಯಾದ ದಾರಿ ಎಂದುಕೊಳ್ಳುತ್ತಿದ್ದೆವು. ಆದರೆ ನಾಲ್ಕು ಮಂದಿ ಮನೆಗೆ ಹೋದರೆ ನಲ್ವತ್ತು ಮಂದಿ ಹುಟ್ಟಿಕೊಳ್ಳುತ್ತಾರೆ.

ಈ ಮುಂಚೆ ಅವರುಗಳು ಎಲ್ಲಿದ್ದಾರೆ ಎಂದು ನಾವು ಹುಡುಕಿಕೊಂಡು, ಯಾರೋ ಹೇಳಿದ್ದು ಕೇಳಿಕೊಂಡು ಹೋಗಬೇಕಿತ್ತು. ಈಗ ಹಾಗಲ್ಲ. ಅವರುಗಳೇ ನಮ್ಮನ್ನು ಹುಡುಕಿಕೊಂಡು ನಮ್ಮ ಮನೆ ಹಾಲಿಗೆ ರೂಮಿಗೆ ಬರುತ್ತಾರೆ. ನಮ್ಮ ಭವಿಷ್ಯ ಹೇಳುತ್ತಾರೆ. ನಮ್ಮ ಸಂಕಷ್ಟಗಳನ್ನು ದೂರ ಮಾಡುವ ಭರವಸೆ ಕೊಡುತ್ತಾರೆ. ಒಂದು ಕರೆಗೆ ನಮ್ಮ ಸಂಕಷ್ಟಗಳು ದೂರವಾಗುತ್ತವೆ ಎಂದು ನಂಬಿ ಕರೆ ಮಾಡುತ್ತೇವೆ. ಮೂಢ ನಂಬಿರೆಗಳು ಹೊಸ ಹೊಸ ಆವಿಷ್ಕಾರಗಳ (ಟಿವಿ, ಫೋನ್, ಮೊಬೈಲ್ ಇತ್ಯಾದಿ) ಲಾಭ ಪಡೆದು ದೈತ್ಯಾಕಾರವಾಗಿ ಬೆಳೆಯುತ್ತಿದೆ. ಹೆಚ್ಚು ಹೆಚ್ಚು ಜನ ಮಾತಿನ ಮೋಡಿಗೆ ಮರಳಾಗುತ್ತಾರೆ. ಒಂದು ಕರೆ ಎಂದು ಶುರುವಾಗಿದ್ದು, ಒಂದು ಭೇಟಿ, ಒಂದು ಪೂಜೆ, ಒಂದು ಮಂಡಲ, ಒಂದು ಹೋಮ ಎಂದು ಬೆಳೆಯುತ್ತಾ ಹೋಗಿ ನಮ್ಮನ್ನು ಮುಳುಗಿಸಿ ಬಿಡುತ್ತದೆ.

ಭವಿಷ್ಯದ ಬಗ್ಗೆ ಅವೈಜ್ಞಾನಿಕವಾಗಿ ಯೋಚಿಸುತ್ತಾ, plan ಮಾಡುತ್ತಾ ಇಂದನ್ನು ಹಾಳುಗೆಡವಿಕೊಂಡು ಅಜ್ಞಾನದಿಂದ ಇಲ್ಲದ, ಬೇಡದ ತಾಪತ್ರಯಗಳನ್ನು ಮೈಮೇಲೆ ಎಳೆದುಕೊಳ್ಳುತ್ತೇವೆ.

ಕೊಡವಿಕೊಂಡು ಏಳಬೇಕು. ಇಂದನ್ನು ಸಮರ್ಪಕವಾಗಿ ನಿರ್ವಹಿಸಿದರೆ ಭವಿಷ್ಯ ಚೆನ್ನಾಗಿಯೇ ಇರುತ್ತದೆ. ಇರದಿದ್ದರೆ, ಅದನ್ನು ಅಂದೇ ಎದುರಿಸಿದರೆ ಆಯಿತು. ವಶೀಕರಣ, ಮಾಟ ಮಂತ್ರ ಗಳಿಂದ ನೆಮ್ಮದಿ ಕಂಡುಕೊಂಡವರು ಯಾರೂ ಇಲ್ಲ.

ಕವಿ ವಾಣಿಯಂತೆ… ಬದುಕೋಣ.

ನೆನ್ನೆ ನೆನ್ನೆಗೆ

ಇಂದು ಇಂದಿಗೆ

ಇರಲಿ ನಾಳೆಯು ನಾಳೆಗೆ…

Leave a Reply