ನೈಸ್ ಅಕ್ರಮದಲ್ಲಿ ಐಸ್-ಪೈಸ್ ಆಡಲು ಹೋಗಿ ಸರಕಾರ ಹಾಗೂ ಸದನದ ಗೌರವ ಕಳೆದ ಸ್ಪೀಕರ್ ಕೋಳಿವಾಡರು!

ಡಿಜಿಟಲ್ ಕನ್ನಡ ವಿಶೇಷ:

ಸಾಮಾನ್ಯ ಜ್ಞಾನ ಇಲ್ಲದ ಎಡಬಿಡಂಗಿಗಳು ಸಭಾಧ್ಯಕ್ಷರ ಸ್ಥಾನದಲ್ಲಿದ್ದರೆ ಸದನದ ಗೌರವ ಹೇಗೆ ಮಣ್ಣುಪಾಲಾಗುತ್ತದೆ ಎಂಬುದಕ್ಕೆ ಬಹುದೊಡ್ಡ ನಿದರ್ಶನವಾಗಿ ನಿಂತಿದ್ದಾರೆ ವಿಧಾನಸಭೆ ಹಾಲಿ ಅಧ್ಯಕ್ಷ ಕೆ.ಬಿ. ಕೋಳಿವಾಡರು!

ಸಾವಿರಾರು ರೈತ ಕುಟುಂಬಗಳನ್ನು ಬೀದಿಗೆಳೆದು ಬಿಸಾಕಿದ ಕುಖ್ಯಾತಿ ನೈಸ್ ಕಾರಿಡಾರ್ ಯೋಜನೆಯದು. ತನ್ನ ವಿರುದ್ಧ ದಶಕಕ್ಕೂ ಮೀರಿದ ಹೋರಾಟ ಸಜೀವವಾಗಿರಿಸಿಕೊಂಡಿರುವ ಈ ಯೋಜನೆಯು ಸಾವಿರಾರು ಕೋಟಿ ರುಪಾಯಿ ಅಕ್ರಮಗಳನ್ನು ಹಾಸೊದ್ದು ಮಲಗಿದೆ. ಹಲವು ಪ್ರಭಾವಿ ರಾಜಕಾರಣಿಗಳ ನೇರ ಷಾಮೀಲು ಆಪಾದನೆ ಇರುವ ಈ ಹಗರಣದ ಬಗ್ಗೆ ತನಿಖೆ ನಡೆಸಿ ಸದನ ಸಮಿತಿ ವಾರದ ಹಿಂದೆ ಕೊಟ್ಟ ವರದಿಯನ್ನು ಅಸಂಗತ ಕಾರಣ ನೀಡಿ ಅಡಿಗಾಕಿಕೊಂಡು ಕೂತಿರುವ ಕೋಳಿವಾಡರು ತಾವು ಅಲಂಕರಿಸಿರುವ ಪೀಠಕ್ಕೇ ಅನುಮಾನದ ಬಲೆ ಸುತ್ತಿದ್ದಾರೆ.

ಸದನದಲ್ಲಿ ನಡೆದ ನೈಸ್ ಅಕ್ರಮಗಳ ವಿಸ್ತೃತ ಚರ್ಚೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಒತ್ತಾಸೆ ಮೇರೆಗೆ ಹಿಂದಿನ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ರಚಿಸಿದ್ದ 11 ಸದಸ್ಯರ ಸದನ ಸಮಿತಿಯ ಅವಧಿ ಇವತ್ತಿಗೆ ಅಂತ್ಯವಾಗುತ್ತಿದೆ. ಆದರೆ ಕಾನೂನು ಮತ್ತ ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ನೇತೃತ್ವದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸದಸ್ಯರನ್ನೊಳಗೊಂಡ ಸಮಿತಿಯು ವಾರದ ಹಿಂದೆಯೇ ಸ್ಪೀಕರ್ ಕೋಳಿವಾಡರಿಗೆ ವರದಿ ಸಲ್ಲಿಸಿದೆ. ಅವರು ಅದಕ್ಕೆ ಸಹಿ ಹಾಕಿ ನಂತರ ಸದನದ ಮುಂದಿಡಲು ಕ್ರಮ ತೆಗೆದುಕೊಳ್ಳಬೇಕಿತ್ತು. ಆದರೆ ಅದನ್ನು ತಾವಿನ್ನೂ ಓದಿಲ್ಲ, ಓದದೇ ಸಹಿ ಮಾಡುವ ಪ್ರಶ್ನೆಯೇ ಇಲ್ಲ ಎಂದು ಕೋಳಿವಾಡರು ನೀಡಿರುವ ಸಬೂಬು ಅವರ ಅಧಿಕಾರವ್ಯಾಪ್ತಿ ಮೀರಿದ್ದು, ಬುಧವಾರದ ಕಲಾಪದಲ್ಲಿ ಕೋಲಾಹಲ ಸೃಷ್ಟಿ ಮಾಡಿದೆ.

ಕೋಳಿವಾಡರ ನೆಪ ಅದೆಂಥ ಅವಿವೇಕತನದಿಂದ ಕೂಡಿದೆ ಎಂದರೆ ಸದನ ಸಮಿತಿ ಸಲ್ಲಿಸಿರುವ ವರದಿಯನ್ನು ತಿದ್ದುಪಡಿ ಮಾಡಲು ತಮಗೆ ಅಧಿಕಾರ ಇಲ್ಲ ಎಂಬುದೇ ಅವರಿಗೆ ಗೊತ್ತಿಲ್ಲ. ಸಭಾಧ್ಯಕ್ಷರು ತಮಗೆ ಸರಿ ಎನಿಸಿದ್ದನ್ನು ಸೇರಿಸಲೋ ಅಥವಾ ತೆಗೆದುಹಾಕಲೋ ಅವಕಾಶ ಇರುವುದಾಗಿದ್ದರೆ ಸದನ ಸಮಿತಿಯನ್ನು ರಚಿಸುವ ಪ್ರಮೇಯವೇನಿರುತ್ತಿತ್ತು? ಹನ್ನೊಂದು ಜನರ ಸಮಿತಿ ಕೂಲಂಕಷ ತನಿಖೆ ಮಾಡಿ, 30 ಕ್ಕೂ ಹೆಚ್ಚು ಸಭೆಗಳನ್ನು ನಡೆಸಿ 500 ಪುಟಗಳ ವರದಿ ಸಿದ್ಧಪಡಿಸುವ ದರ್ದಾದರೂ ಏನಿರುತ್ತಿತ್ತು? ಸದನ ಸಮಿತಿ ರಚಿಸುವುದು ಸಭಾಧ್ಯಕ್ಷರನ್ನು ತೃಪ್ತಿ ಪಡಿಸಲು ಅಲ್ಲ, ಬದಲಿಗೆ ನಿರ್ದಿಷ್ಟ ವಿಚಾರದ ಬಗ್ಗೆ ಸದನದಲ್ಲಿ ಒಡಮೂಡಿದ ಅನುಮಾನಗಳನ್ನು ಪರಿಹರಿಸಲು, ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು. ಇಂಥ ಕನಿಷ್ಟ ಜ್ಞಾನವೂ ಇಲ್ಲದ ಕೋಳಿವಾಡರು ನೈಸ್ ಕಾರಿಡಾರ್ ಯೋಜನೆಗೆ ಚಾಲನೆ ಕೊಟ್ಟ ತಮ್ಮದೇ ಪಕ್ಷದ ನಾಯಕರ ಮಾತು ಕೇಳಿಕೊಂಡು ಸಲ್ಲದ ಮಾತಾಡಿರುವುದು ವಿಧಾನಸಭಾಧ್ಯಕ್ಷ ಸ್ಥಾನದ ಘನತೆಯನ್ನೇ ಹರಾಜು ಹಾಕಿದೆ.

ಪಾಪ, ಮಂತ್ರಿ ಆಗಬೇಕೆಂದು ಏನೆಲ್ಲ ಕನಸು ಕಟ್ಟಿಕೊಂಡು, ಶಕ್ತಿ ಮೀರಿ ಕಸರತ್ತು ಮಾಡಿಯೂ ವಿಫಲರಾದ ಕೋಳಿವಾಡರು ಇದೀಗ ವಿಧಾನಸಭಾಧ್ಯಕ್ಷ ಸ್ಥಾನದಲ್ಲಿಯೇ ಸಚಿವ ಬಲದ ಲಾಭ-ಲೋಭಗಳನ್ನು ಆವಾಹನೆ ಮಾಡಿಕೊಳ್ಳಬೇಕೆಂಬ ಹಪಾಹಪಿಗೆ ಬಿದ್ದಿರುವಂತೆ ಕಾಣುತ್ತಿದೆ. ಸದನ ಸಮಿತಿ ತನಗೆ ವಹಿಸಿದ್ದ ಜವಾಬ್ದಾರಿಯನ್ನು ಅವಧಿಗೆ ಮೊದಲೇ ಪೂರೈಸಿ ವರದಿ ಸಲ್ಲಿಸಿದ್ದರೂ, ಪ್ರಭಾವಿಗಳ ಒತ್ತಡದಿಂದ ಸಮಿತಿ ತನಿಖೆ ಅವಧಿಯನ್ನು ವಿನಾಕಾರಣ ಇನ್ನೂ ಎರಡು ಮೂರು ತಿಂಗಳು ವಿಸ್ತರಿಸುವ ಪ್ರಯತ್ನ ನಡೆದಿತ್ತು, ಇದಕ್ಕೆ ಸ್ಪೀಕರ್ ಸಹಮತ ಕೂಡ ಇತ್ತು ಎಂಬ ಮಾತುಗಳೂ ಕೇಳಿಬಂದಿವೆ.

ಸದನ ಸಮಿತಿ ವರದಿ ಸಲ್ಲಿಸಿದ ಅಧಿವೇಶನ ಸಂದರ್ಭದಲ್ಲಿ ಕಾಲಾವಕಾಶ ಇದ್ದಿದ್ದೇ ಆದಲ್ಲಿ ವರದಿಯನ್ನು ಸದನದ ಮುಂದೆ ಮಂಡನೆ ಮಾಡುವುದು ವಾಡಿಕೆ. ಕೋಳಿವಾಡರಿಗೆ ಈ ವರದಿ ಸಿಕ್ಕಿರುವುದು ನವೆಂಬರ್ 24 ರಂದು. ಅಂದರೆ ಒಂದು ವಾರದ ಹಿಂದೆ. ವರದಿಯನ್ನು ಮುದ್ರಿತ ರೂಪದಲ್ಲಿ ಸದನದ ಮುಂದಿಡಲು ಈ ಒಂದು ವಾರದ ಕಾಲಾವಕಾಶ ಬೇಕಾದಷ್ಟಾಯಿತು. ಆದರೂ ಕೋಳಿವಾಡರು ಅದಕ್ಕೆ ಸಹಿ ಹಾಕದೇ ಕಾಲ ದೂಡಿರುವುದರ ಹಿಂದೆ ಕುತಂತ್ರ ಅರಸುವುದು ಸಹಜವೇ ಆಗಿದೆ.  ತಾವಿನ್ನು ವರದಿ ಓದಿಲ್ಲ ಎಂದು ಕೋಳಿವಾಡರು ಹೇಳಿಕೊಂಡಿರುವ ಮಾತನ್ನೇ ತೆಗೆದುಕೊಳ್ಳುವುದಾದರೆ 500 ಪುಟದ ವರದಿ ಓದಲು ತಿಂಗಳುಗಟ್ಟಲೆ ಏನು ಬೇಕಿಲ್ಲ. ಗರಿಷ್ಠ ಮೌಲ್ಯದ ನೋಟು ರದ್ದು ವಿರೋಧಿಸಿ ಅವರದೇ ಪಕ್ಷದವರು ಕರೆ ಕೊಟ್ಟಿದ್ದ ‘ಆಕ್ರೋಶ ದಿವಸ’ ಸೋಮವಾರ, ಅದರ ಹಿಂದಿನ ದಿನಗಳಾದ ಭಾನುವಾರ, ಶನಿವಾರ ಮತ್ತು ಶುಕ್ರವಾರ ಮಧ್ಯಾಹ್ನದ ನಂತರ ಕಲಾಪ ಏನೂ ಇರಲಿಲ್ಲ. ಅವರು ಓದಬೇಕು ಎಂದು ಮನಸ್ಸು ಮಾಡಿದ್ದರೆ ಈ ಅವಧಿ ದಂಡಿ-ದಂಡಿ. ಆದರೂ ಅವರು ಓದಿಲ್ಲ ಎಂದರೆ ಅವರಿಗೆ ಓದುವುದು ಬೇಕಿರಲಿಲ್ಲ ಎಂದೇ ಅರ್ಥ. ಒರಿಜಿನಲ್ ಸಂಚಿನ ಪ್ರಕಾರ ಸದನ ಸಮಿತಿ ಅವಧಿಯನ್ನು ವಿನಾಕಾರಣ ಎರಡು-ಮೂರು ತಿಂಗಳು ಮುಂದಕ್ಕೆ ಹಾಕಿ, ಈ ಅವಧಿಯಲ್ಲಿ ಏನೇನು ಡೀಲ್ ಮಾಡಬೇಕೆಂದುಕೊಂಡಿದ್ದರೋ ಗೊತ್ತಿಲ್ಲ. ಆದರೆ ಅಷ್ಟರಲ್ಲಿ ವರದಿ ಇಟ್ಟುಕೊಂಡು ಅವರಾಡುತ್ತಿರುವ ಆಟ ಬೆಳಕಿಗೆ ಬಂದಿದೆ. ಸಹಿ ಹಾಕದಿದ್ದರೆ ಸದನ ಸಮಿತಿ ಸದಸ್ಯರು ವರದಿ ಸಲ್ಲಿಸಿರುವ ವಿಷಯ ಬಹಿರಂಗ ಮಾಡುತ್ತಾರೆ ಎಂಬುದನ್ನೂ ಯೋಚಿಸಲು ಹೋಗಿಲ್ಲ ಎಂದರೆ ಅವರಿಗೆ ಸಾಮಾನ್ಯ ಜ್ಞಾನ ಎಷ್ಟರ ಮಟ್ಟಿಗೆ ಕೈಕೊಟ್ಟಿರಬಹುದು ಅಥವಾ ಅದೆಂಥ ಧಾರ್ಷ್ಟ್ಯ ಅವರನ್ನು ಹುಂಬತನಕ್ಕೆ ದೂಡಿರಬಹುದು ಎಂಬುದು ಗೊತ್ತಾಗುತ್ತದೆ. ಕೋಳಿವಾಡರು ಆಡಿರುವ ಆಟ ಪ್ರತಿಪಕ್ಷಗಳ ಕೈಗೆ ಪ್ರತಿಭಟನೆ ಅಸ್ತ್ರ ಕೊಟ್ಟಿದೆ. ಸಿಕ್ಕ ಅವಕಾಶವನ್ನು ಯಶಸ್ವಿಯಾಗಿ ಬಳಸಿಕೊಂಡಿರುವ ಬಿಜೆಪಿ ಮತ್ತು ಜೆಡಿಎಸ್ ಸರಕಾರವನ್ನು ಇಕ್ಕಟ್ಟಿನಲ್ಲಿ ಸಿಕ್ಕಿಸಿ, ಒಂದೆರಡು ದಿನದಲ್ಲಿ ವರದಿ ಮಂಡನೆ ವಾಗ್ದಾನವನ್ನು ಪಡೆದುಕೊಂಡಿವೆ. ಅಲ್ಲಿಗೆ ಕೋಳಿವಾಡರ ರಹಸ್ಯ ಕಾರ್ಯಾಚರಣೆ ದಾರಿ ತಪ್ಪಿದೆ.

Leave a Reply