ಮೋದಿ ಸರ್ಕಾರ ಹೊಸ ತೆರಿಗೆ ಕಾಯ್ದೆ ಮೂಲಕ ಕಾಳಧನಿಕರಿಗೆ 50-50 ಆಫರ್ ಕೊಟ್ಟಿದೆಯಾ? ಉಹುಂ… ಲೆಕ್ಕ ಅಷ್ಟು ಸರಳವಿಲ್ಲ

ಡಿಜಿಟಲ್ ಕನ್ನಡ ಟೀಮ್:

ತೆರಿಗೆ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಇಂದು ಲೋಕಸಭೆಯು ಪ್ರತಿಪಕ್ಷಗಳ ಗದ್ದಲದ ನಡುವೆಯೇ ಪಾಸು ಮಾಡಿತು. ಸೋಮವಾರ ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿದ್ದ ಈ ಮಸೂದೆ, ಈಗಿನ ನೋಟು ಅಮಾನ್ಯ ನೀತಿಯಲ್ಲಿ ಕಾಳಧನ ಘೋಷಣೆಗೆ ಇನ್ನೊಂದು ಅವಕಾಶ ನೀಡುವಂಥದ್ದಾಗಿದೆ. ಮಂಗಳವಾರ ದಿನವಿಡೀ ಚರ್ಚೆಯಾಗಬೇಕಿದ್ದ ಮಸೂದೆಯು ಕೇವಲ ಗದ್ದಲವನ್ನಷ್ಟೇ ಕಂಡು ಪಾಸಾಗಿದ್ದು ದುರಂತವೇ.

ಈ ಮಸೂದೆ ಅಧ್ಯಯನಕ್ಕೆ ಸಮಯ ಬೇಕು, ಇದರ ಮೇಲೆ ಮತದಾನವಾಗಬೇಕು ಎಂಬುದು ಪ್ರತಿಪಕ್ಷಗಳ ಪಟ್ಟಾಗಿದ್ದರೆ, ಮೊದಲು ಚರ್ಚೆ ಮಾಡಿ, ಈ ಚರ್ಚೆಯಲ್ಲಿ ಪ್ರಸ್ತಾಪವಾಗುವ ತಿದ್ದುಪಡಿಗಳನ್ನು ಸರ್ಕಾರ ಪರಿಶೀಲಿಸುತ್ತದೆ ಎಂಬುದು ಆಡಳಿತ ಪಕ್ಷದ ಪಟ್ಟಾಗಿತ್ತು.

ಇದು ಕಾಳಧನಿಕರಿಗೆ ಮೋದಿ ಸರ್ಕಾರ ಕೊಡುತ್ತಿರುವ ಫಿಫ್ಟಿ ಫಿಫ್ಟಿ ಆಫರ್. ಇದರಲ್ಲಿ ನೈತಿಕತೆಯೇ ಇಲ್ಲ ಎಂಬುದು ಪ್ರತಿಪಕ್ಷ ಪಾಳೆಯದ ಹಲವರ ಆಕ್ಷೇಪ.

ಸರಿ-ತಪ್ಪುಗಳ ವಿಶ್ಲೇಷಣೆ ಏನೇ ಇದ್ದರೂ ತೀರ ಇದು ಪ್ರತಿಪಕ್ಷಗಳು ಹೇಳುವಂತೆ 50-50 ಆಮಿಷ ಅಲ್ಲವೇ ಅಲ್ಲ ಎಂಬುದು ಕೂಲಂಕಷ ಪರಿಶೀಲನೆಯಿಂದ ತಿಳಿಯುತ್ತದೆ. ಇದರ ದಂಡದ ಆಯಾಮಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಿದ್ದರೆ ಗೊಂದಲ ಸಹಜ.

ದೆಹಲಿ ಆಪ್ ಸರ್ಕಾರದಲ್ಲಿ ಆರೋಗ್ಯ ಮಂತ್ರಿ ಆಗಿರುವ ಸತ್ಯೇಂದ್ರ ಜೈನ್ ಮಂಗಳವಾರ ಮಾಡಿದ್ದ ಟ್ವೀಟೊಂದು ಅಪವ್ಯಾಖ್ಯಾನಕ್ಕೆ ಒಳ್ಳೆಯ ಉದಾಹರಣೆ. ‘30% ತೆರಿಗೆ, 10% ದಂಡ, 33% ಸರ್ಚಾರ್ಜ್ ಅಂತಂದ್ರೆ 73% ಆಗ್ಬೇಕಲ್ಲ. ಆದರೆ ಒಟ್ಟೂ ತೆರಿಗೆ 50% ಅಂತಾರೆ’ ಅಂತೊಂದು ಟ್ವೀಟ್ ಹರಿಬಿಟ್ಟು, ಟ್ವೀಟಿಗರೆಲ್ಲ ಅವರಿಗೆ ಲೆಕ್ಕದ ಕ್ಲಾಸು ತೆಗೆದುಕೊಂಡು, ಕಂದಾಯ ವಿಭಾಗದಲ್ಲಿ ಅಧಿಕಾರಿಯಾಗಿದ್ದ ನಿಮ್ಮ ಬಾಸ್ ಕೇಜ್ರಿವಾಲರಿಂದ ಇದನ್ನೇ ಕಲಿತ್ರಾ ಅಂತ ತರಾಟೆಗೆ ತೆಗೆದುಕೊಂಡಿದ್ದೂ ಆಯಿತು.

twwet-satyendra

twwet-styendra-response

ಸತ್ಯೇಂದ್ರ ಜೈನ್ ಗೆ ಕಾಡಿರುವ ಅನುಮಾನ ನಮ್ಮ ಬಳಿ ಸುಳಿಯಬಾರದೆಂಬುದಕ್ಕೆ, ಇದೀಗ ಕಾಳಧನಿಕರೆದುರು ಮೋದಿ ಸರ್ಕಾರ ಹರವಿಟ್ಟಿರುವ ಲೆಕ್ಕವನ್ನು ಹೀಗೆ ಅರ್ಥಮಾಡಿಕೊಳ್ಳಬೇಕಾಗುತ್ತದೆ.

ಇದೀಗ ಒಬ್ಬರ ಬಳಿ ಲೆಕ್ಕ ನೀಡಿರದ 10 ಲಕ್ಷ ರುಪಾಯಿಗಳು ಇದೆ ಅಂದುಕೊಳ್ಳೋಣ. ಆತನೀಗ ಹೊಸ ಕಾಯ್ದೆ ಉಪಯೋಗಿಸಿಕೊಂಡರೆ, ಮೂಲಧನದಲ್ಲಿ 30% ಅಂದರೆ ₹3,00,000 ಮೊದಲಿಗೆ ಎತ್ತಿಡಬೇಕು. 10% ದಂಡ ಮತ್ತೆ 1 ಲಕ್ಷ ರುಪಾಯಿಗಳು. ನಂತರದ 33% ಅನ್ನೋದು ತೆರಿಗೆ ಕಟ್ಟಿದ್ದರ ಮೇಲಿನ ಸರ್ಚಾರ್ಜ್- ₹99,000. ಅಲ್ಲಿಗೆ ₹10 ಲಕ್ಷ ಕಾಳಧನಕ್ಕೆ ಆತ ಅನಾಮತ್ತು ಕಟ್ಟಬೇಕಿರುವುದು ₹4,99,000. ಅಲ್ಲಿಗೆ 50-50 ಸ್ಕೀಮ್ ಅನ್ನೋದು ಸರಿಹೋಯ್ತಲ್ಲ ಎಂದಿರಾ? ಇಲ್ಲ… ಕಾಯ್ದೆಯಲ್ಲಿ ಮತ್ತೊಂದು ಅಂಶವಿದೆ. ಘೋಷಿತ ಹಣದ 25%ವನ್ನು ಆತ ನಾಲ್ಕು ವರ್ಷಗಳ ಅವಧಿಗೆ, ಯಾವುದೇ ಬಡ್ಡಿ ಇಲ್ಲದೇ, ‘ಪ್ರಧಾನ ಮಂತ್ರಿ ಬಡವರ ಕಲ್ಯಾಣ ಛೇವಣಿ ಯೋಜನೆ’ಯಲ್ಲಿ ಇಡಬೇಕಾಗುತ್ತದೆ.

ಈ ಉದಾಹರಣೆಯಲ್ಲಿ ಆತ ತೊಡಗಿಸಬೇಕಾದ ಮೊತ್ತ ₹2,50,000. ಹೀಗಾಗಿ ಸಧ್ಯಕ್ಕೆ ಆತನ ಕೈಗೆ ಸಿಗುವುದು ₹ 2,51,000 ಮಾತ್ರ. ನಾಲ್ಕು ವರ್ಷಗಳ ನಂತರ ಯಾವುದೇ ಬಡ್ಡಿಯಿಲ್ಲದೇ ಮರಳುವ ಹಣವನ್ನೂ ಸೇರಿಸಿಕೊಂಡಾಗ ಮೊತ್ತ ₹5,01,000 ಆಗುತ್ತದೆ.

ಹೀಗೆ ಸರ್ಕಾರದ ಖಾತೆಯಲ್ಲಿ ಸಂಗ್ರಹವಾಗುವ ಹಣವನ್ನು ಬಡವರಿಗೆ ಮನೆ ನಿರ್ಮಾಣ, ನೀರಾವರಿ, ರಸ್ತೆ, ಪ್ರಾಥಮಿಕ ಆರೋಗ್ಯ, ಪ್ರಾಥಮಿಕ ಶಿಕ್ಷಣ, ಶೌಚಾಲಯ ಇತ್ಯಾದಿಗಳಿಗೆ ಬಳಸಿಕೊಳ್ಳಲಾಗುವುದು. ಇಲ್ಲೊಂದು ಸಾಮಾಜಿಕ ನ್ಯಾಯದ ಕಲ್ಪನೆ ಇದೆ ಎಂಬುದು ಸರ್ಕಾರದ ಪ್ರತಿಪಾದನೆ.

ಈ ಯೋಜನೆಯನ್ನು 50-50 ಸ್ಕೀಮ್ ಎಂದು ಹೇಳುವವರು, ಕಪ್ಪುಹಣ ಹೊಂದಿರುವವರು ಸಿಕ್ಕಿ ಬಿದ್ದರೆ ಶೇ.85 ರಷ್ಟು ದಂಡ ವಿಧಿಸಬೇಕು ಎಂಬ ಹೊಸ ನಿಯಮವನ್ನು ಗಮನಿಸಬೇಕು. ಇಷ್ಟು ದಿನಗಳ ಕಾಲ ಶೇ.85ರಷ್ಟು ದಂಡದ ನಿಯಮ ಇರಲಿಲ್ಲ ಇದನ್ನು ಈ ತಿದ್ದುಪಡಿ ಮೂಲಕ ಜಾರಿಗೆ ತರಲಾಗಿದೆ.

Leave a Reply