ಕಾಳಧನ ತಡೆಯ ನೋಟು ಅಮಾನ್ಯ ನೀತಿಯ ಉದ್ದೇಶವನ್ನು ಹಳ್ಳ ಹಿಡಿಸುತ್ತಿದ್ದಾರೆಯೇ ಕೆಲ ಭ್ರಷ್ಟ ಬ್ಯಾಂಕ್ ಮ್ಯಾನೇಜರುಗಳು?

 

ಡಿಜಿಟಲ್ ಕನ್ನಡ ವಿಶೇಷ:

ತಮಿಳುನಾಡು ಬಿಜೆಪಿ ಯುವ ವಿಭಾಗದ ಜೆವಿಆರ್ ಅರುಣ್ ಎಂಬಾತ 20.55 ಲಕ್ಷ ರುಪಾಯಿಗಳ ನಗದಿನ ಜತೆ ಸಿಕ್ಕಿಬಿದ್ದಿದ್ದಾನೆ.

ಒಂದು ಕಡೆ ಫೇಸ್ಬುಕ್ ಪೋಸ್ಟ್ ಗಳಲ್ಲಿ ಸರ್ಕಾರದ ನೋಟು ಅಮಾನ್ಯ ನೀತಿಯನ್ನು ಸಮರ್ಥಿಸುತ್ತ, ದೇಶದ ಒಳಿತಿಗಾಗಿ ಸರದಿಯಲ್ಲಿ ನಿಲ್ಲಲು ಸಿದ್ಧ ಎಂದೆಲ್ಲ ಬರೆದುಕೊಂಡವನೇ ಈ ಪ್ರಮಾಣದ ಹಣ ಸಂಗ್ರಹಿಸಿದ್ದ.

ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಈ ಪ್ರಮಾಣದ ಹಣದ ಪೈಕಿ ₹2000ದ 926 ನೋಟುಗಳಿದ್ದವು. ಉಳಿದವು ಬೇರೆ ಬೇರೆ ಮುಖಬೆಲೆಯವು.

ಇಲ್ಲಿ ಪ್ರಶ್ನೆಯಿಷ್ಟೆ. ಜನರೆಲ್ಲ ತಾಸುಗಟ್ಟಲೇ ಕ್ಯೂ ನಿಂತು ನಾಲ್ಕೈದು ಸಾವಿರ ಬಿಡಿಸಿಕೊಂಡು ಬರುವಾಗಲೇ ಹೆಣಗಾಡುತ್ತಿರುವಾಗ ಈತನಿಗೆ ಈ ಪ್ರಮಾಣದ ಹೊಸ ನೋಟುಗಳು ಸಿಕ್ಕಿದ್ದು ಹೇಗೆ? ಅದ್ಯಾವ ಬ್ಯಾಂಕ್ ಮ್ಯಾನೇಜರ್ ಈತನಿಗೆ ಅವಕಾಶ ಒದಗಿಸಿದ್ದ?

ಬಿಜೆಪಿ ಈತನನ್ನು ಅದಾಗಲೇ ಪಕ್ಷದಿಂದ ಹೊರಹಾಕಿರುವುದಾಗಿ ಹೇಳಿದೆ.

ಆದರೆ ಮುಖ್ಯ ಪ್ರಶ್ನೆ ಅದಲ್ಲವೇ ಅಲ್ಲ. ಹೀಗೆ ಸರಾಗವಾಗಿ ಹೊಸನೋಟುಗಳನ್ನು ಪಡೆದ ಅವೆಷ್ಟು ಮಂದಿ ಸಿಕ್ಕಿಬೀಳದೇ ತಪ್ಪಿಸಿಕೊಂಡಿದ್ದಾರೆ? ಖಾತೆಯಲ್ಲಿ ಎಷ್ಟೇ ಹಣವಿದ್ದರೂ ಹೊರತೆಗೆದುಕೊಳ್ಳುವುದರ ಮೇಲೆ ಇಷ್ಟೊಂದು ಲಗಾಮುಗಳಿರುವಾಗ ಎರಡು ಸಾವಿರ ರುಪಾಯಿಗಳ ಗರಿ ಗರಿ ನೋಟುಗಳು ಹೇಗೆ ತಾನೇ ಒಬ್ಬರಲ್ಲಿ ಅಪಾರ ಪ್ರಮಾಣದಲ್ಲಿ ಜಮೆಯಾಗಲು ಸಾಧ್ಯ? ಕಪ್ಪುಹಣವನ್ನು ಬಿಳಿ ಮಾಡಿಕೊಡಲು ಬ್ಯಾಂಕಿಂಗ್ ವ್ಯವಸ್ಥೆಯ ಉನ್ನತ ಅಧಿಕಾರಿಗಳಲ್ಲಿ ಕೆಲವರು ಟೊಂಕ ಕಟ್ಟಿ ನಿಂತಿರುವುದನ್ನು ಇದು ಸೂಚಿಸುತ್ತಿದೆಯಲ್ಲವೇ?

ಇದೊಂದೇ ಪ್ರಕರಣವಲ್ಲ. ಕೊಲ್ಕತಾದಿಂದ ಬುಧವಾರ ವರದಿಯಾಗಿರುವ ಇನ್ನೊಂದು ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವೈದ್ಯನೊಬ್ಬನಿಂದ ₹10 ಲಕ್ಷ ರುಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ ಹಾಗೂ ಇವೆಲ್ಲವೂ ಇದ್ದದ್ದು ₹2000ದ ಹೊಸ ನೋಟಿನಲ್ಲೇ.

ನೋಟು ಅಮಾನ್ಯವಾಗಿರುವ ಇಷ್ಟು ಸಣ್ಣ ಅವಧಿಯಲ್ಲಿ ಈತ ಹೊಸ ನೋಟುಗಳಲ್ಲಿ ಇಷ್ಟು ಹಣವನ್ನು ಇಟ್ಟಿರುವುದಾದರೂ ಹೇಗೆ ಎಂಬುದು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಪ್ರಶ್ನೆ.

ನವೆಂಬರ್ 21ಕ್ಕೆ ದೆಹಲಿ ಪೊಲೀಸರು ₹3.5 ಕೋಟಿ ಹೊಂದಿದ್ದ ಹವಾಲಾ ದಂಧೆಕೋರನೊಬ್ಬನನ್ನು ಹಿಡಿಯುತ್ತಾರೆ. ಹೊಸ ಕರೆನ್ಸಿಗಳು ಅದಾಗಲೇ ಈತನ ಕೈಗೆ ಬಂದಿದ್ದು ಹೇಗೆಂದು ವಿಚಾರಿಸಿದಾಗ, ಕಾಶ್ಮೀರಿಗೇಟ್ ಪ್ರಾಂತ್ಯದ ಆ್ಯಕ್ಸಿಸ್ ಬ್ಯಾಂಕಿನ ಇಬ್ಬರು ಅಧಿಕಾರಿಗಳು ಸೇರಿಕೊಂಡು ಬರೋಬ್ಬರಿ 30 ಕೋಟಿ ರುಪಾಯಿಗಳ ಮೊತ್ತವನ್ನು ಹಳೆ ಕರೆನ್ಸಿಯಿಂದ ಹೊಸದಕ್ಕೆ ಬದಲು ಮಾಡಿಕೊಟ್ಟಿದ್ದು ಬೆಳಕಿಗೆ ಬಂದು ಅವರಿಬ್ಬರೂ ಈಗ ಕಂಬಿ ಎಣಿಸುತ್ತಿದ್ದಾರೆ.

ಚೆನ್ನೈನ ಶಾಸ್ತ್ರಿ ನಗರ ಬ್ರಾಂಚಿನಲ್ಲಿ 25 ಲಕ್ಷ ರುಪಾಯಿಗಳ ಹಳೆಯ ಕರೆನ್ಸಿಯನ್ನು ಹೊಸದರಲ್ಲಿ ಪರಿವರ್ತಿಸುವ ಸಂದರ್ಭದಲ್ಲಿಯೇ ಎಸ್ಬಿಐ ಹಾಗೂ ಆ್ಯಕ್ಸಿಸ್ ಬ್ಯಾಂಕಿಗೆ ಸೇರಿದ ಆರು ಅಧಿಕಾರಿಗಳನ್ನು ಬಂಧಿಸಲಾಗಿತ್ತು.

ಇಲ್ಲೆಲ್ಲ ಇವರು ಸಿಕ್ಕಿಬಿದ್ದರು. ಆದಾಯ ತೆರಿಗೆ, ಜಾರಿ ನಿರ್ದೇಶನಾಲಯಗಳ ಕಾರ್ಯವೈಖರಿ ಮೆಚ್ಚುವಂಥದ್ದು. ಆದರೆ ಬಿಳಿ ಮಾಡುವ ಪ್ರಕ್ರಿಯೆಯಲ್ಲಿ ಯಶ ಪಡೆದುಕೊಂಡವರೆಷ್ಟಿರಬಹುದೆಂಬ ಪ್ರಶ್ನೆ ಹಾಕಿಕೊಂಡಾಗ ಗಾಬರಿಯಾಗುತ್ತದೆ.

ಹೀಗೊಂದು ಅನುಮಾನಕ್ಕೆ ಕಾರಣವೂ ಇದೆ. 500-1000 ಮುಖಬೆಲೆಯ 14 ಲಕ್ಷ ಕೋಟಿಯಷ್ಟು ಹಣ ಚಲಾವಣೆಯಲ್ಲಿತ್ತಷ್ಟೆ. ಆ ಪೈಕಿ ಎರಡು ದಿನದ ಹಿಂದಿನ ಅಂಕಿಅಂಶದಂತೆ 8 ಲಕ್ಷ ಚಿಲ್ಲರೆ ಕೋಟಿ ರುಪಾಯಿ ಬ್ಯಾಂಕುಗಳಲ್ಲಿ ಸಂದಾಯವಾಗಿದೆ. ಎರಡು ಲಕ್ಷ ಚಿಲ್ಲರೆ ಕೋಟಿಯಷ್ಟು ಮತ್ತೆ ವಿತರಣೆ ಆಗಿದೆ. ಅರ್ಥಾತ್ ಗಡವು ಮುಗಿಯುವುದಕ್ಕೆ ಇನ್ನೂ ತಿಂಗಳಿರುವಾಗಲೇ ಈ ಪ್ರಮಾಣದ ಹಣ ಬಂದುಬಿಟ್ಟಿದೆ ಎಂದಾದರೆ ಉಳಿದ ಕಪ್ಪುಹಣವೆಷ್ಟು ಎಂಬ ಪ್ರಶ್ನೆ ಏಳುತ್ತದೆ. ಡಿಸೆಂಬರ್ 31ರ ನಂತರವೂ 3 ಲಕ್ಷ ಕೋಟಿ ರುಪಾಯಿಗಳಷ್ಟಾದರೂ ಖೋತಾ ಬಿದ್ದರಷ್ಟೆ ನೋಟು ಅಮಾನ್ಯವು ಅಷ್ಟರಮಟ್ಟಿಗೆ ಕಾಳಧನವನ್ನು ಕಡಿಮೆ ಮಾಡಿತೆಂದು ಸಂಭ್ರಮಿಸಬಹುದು. ಅದಿಲ್ಲವಾದರೆ, ಇಷ್ಟೆಲ್ಲ ಅಸೌಖ್ಯ ಉಂಟುಮಾಡಿದ ನೋಟು ಅಮಾನ್ಯತೆ ಕಾಳಧನದ ವಿಷಯದಲ್ಲಂತೂ ಬೆಟ್ಟ ಅಗೆದು ಇಲಿ ಹಿಡಿದಂತಾಗುತ್ತದೆ.

ಈ ಅಂಶವನ್ನು ಗಮನಕ್ಕೆ ತೆಗೆದುಕೊಂಡಾಗಲೇ ಮೇಲೆ ಸಿಕ್ಕಿಬೀಳುತ್ತಿರುವವರ ಮಹತ್ವ ಅರ್ಥವಾಗಿ, ಇನ್ನೆಷ್ಟು ಮಂದಿ ಸಿಕ್ಕಿಬೀಳದೇ ಪಾರಾಗಿರಬಹುದೆಂಬ ಪ್ರಶ್ನೆಯೂ ಹುಟ್ಟಿ, ಸಾಮಾನ್ಯರನ್ನು ಸರದಿಯಲ್ಲಿ ನಿಲ್ಲಿಸಿದ ಅವೆಷ್ಟು ಬ್ಯಾಂಕುಗಳು ಹಿಂಬಾಗಿಲ ವ್ಯವಹಾರ ಮಾಡಿರಬಹುದು ಎಂಬ ಆತಂಕದ ಪ್ರಶ್ನೆ ಕಾಡುತ್ತದೆಯಲ್ಲದೇ, ಹೀಗೆ ಅವೆಷ್ಟು ಕಾಳಧನಿಕರು ಬಿಳಿನಗೆ ನಕ್ಕುಬಿಟ್ಟಿದ್ದಿರಬಹುದು ಎಂಬ ಹತಾಶೆಯೂ ಕಾಡುತ್ತದೆ.

Leave a Reply