ಮೇಜರ್ ಅಕ್ಷಯರಿಗೆ ಭಾವಪೂರ್ಣ ವಿದಾಯ, ಹೊಸನೋಟುಗಳ ಕಂತೆಗಳೊಂದಿಗೆ ಸಿಕ್ಕಿಬಿದ್ದಿದ್ದಾರೆ ಕರ್ನಾಟಕದ ಕಾಳಧನಿಕ ಅಧಿಕಾರಿಗಳು, ಮುಕೇಶ್ ಅಂಬಾನಿ ಕೊಟ್ಟಿರುವ ಹೊಸವರ್ಷದ ಜಿಯೊ ಆಫರ್ ಏನು?, ವಿಧಾನಮಂಡಲ ಅಧಿವೇಶನದಲ್ಲೇನಾಯಿತು?

ಮೇಜರ್ ಅಕ್ಷಯರಿಗೆ ವಿದಾಯ

ಜಮ್ಮು-ಕಾಶ್ಮೀರದ ನಗ್ರೋಟಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ನಗರದ ಮೇಜರ್ ಅಕ್ಷಯ್ ಗಿರೀಶ್‍ಕುಮಾರ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಮಿಲಿಟರಿ ಗೌರವಗಳೊಂದಿಗೆ ಗುರುವಾರ ಸಂಜೆ 4 ಗಂಟೆಗೆ ಹೆಬ್ಬಾಳದ ಚಿತಾಗಾರದಲ್ಲಿ ಅವರ ಕುಟುಂಬ ವರ್ಗ ಮತ್ತು ಮಿಲಿಟರಿ ಅಧಿಕಾರಿಗಳ ಸಮ್ಮುಖದಲ್ಲಿ ನೆರವೇರಿತು.

major-akshay1ಹುತಾತ್ಮ ಯೋಧ ಮೇಜರ್ ಅಕ್ಷಯ್ ಗಿರೀಶ್‍ಕುಮಾರ್ ಅವರ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದ, ಕಾನೂನು ಸಚಿವ ಟಿ.ಬಿ.ಜಯಚಂದ್ರ ಮೃತ ಯೋಧನ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಬಿಬಿಎಂಪಿ ವತಿಯಿಂದ ಹತ್ತು ಲಕ್ಷ ರೂ., ನೀಡಲಾಗುತ್ತದೆ. ಬೆಂಗಳೂರಿನಲ್ಲಿನ ಮೇಲ್ಸೇತುವೆಯೊಂದಕ್ಕೆ ಹುತಾತ್ಮ ಯೋಧನ ಹೆಸರನ್ನು ನಾಮಕರಣ ಮಾಡಲಾಗುವುದೆಂದು ತಿಳಿಸಿದ್ದಾರೆ.

ಸಂಬಂಧಿಕರು, ಸ್ನೇಹಿತರು, ಸಾರ್ವಜನಿಕರು ಅಂತಿಮ ದರ್ಶನ ಪಡೆದು ಹೆಮ್ಮೆಯ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು. ಸಾಕಷ್ಟು ಆಯ್ಕೆಗಳಿದ್ದರೂ ದೇಶಸೇವೆ ಮಾಡಬೇಕೆಂದು ಹೋಗಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಗಿರೀಶ್ ಅವರ ಸೇವೆ ಬಗ್ಗೆ ನೆರೆದಿದ್ದವರೆಲ್ಲ ಹೆಮ್ಮೆ ವ್ಯಕ್ತಪಡಿಸಿದರು.

ಕಾಳಧನ: ರಾಜ್ಯದಲ್ಲಿ ಐಟಿ ಅಧಿಕಾರಿಗಳ ದಾಳಿ ತೀವ್ರ

ಕಾವೇರಿ ನೀರಾವರಿ ನಿಗಮ ಮುಖ್ಯ ಎಂಜಿನಿಯರ್ ಚಿಕ್ಕರಾಯಪ್ಪ ಅವರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ ಇಂದು ಕೂಡ ಮುಂದುವರಿದಿದೆ.

ನಿನ್ನೆ ಐಟಿ ಅಧಿಕಾರಿಗಳು ಚಿಕ್ಕರಾಯಪ್ಪ, ಐಎಎಸ್ ಅಧಿಕಾರಿ ಮೋಹನ್ ಚಕ್ರವರ್ತಿ ಸೇರಿದಂತೆ ಹಲವರ ಮನೆಗಳ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳು ಹಾಗೂ ಅಪಾರ ಪ್ರಮಾಣದ ನಗದನ್ನು ವಶಪಡಿಸಿಕೊಂಡಿದ್ದರು. ಚಿಕ್ಕರಾಯಪ್ಪ ಅವರ ಕಚೇರಿ ಹಾಗೂ ನಿವಾಸದ ಮೇಲೆ ಆದಾಯ ಇಲಾಖೆ ಅಧಿಕಾರಿಗಳು ಗುರುವಾರ ದಾಳಿ ಮುಂದುವರಿಸಿದ್ದಾರೆ. ನಿನ್ನೆ ದಾಳಿ ವೇಳೆ ನಗದು ಹಾಗೂ ದಾಖಲೆಗಳು ಸಿಕ್ಕ ಹಿನ್ನೆಲೆಯಲ್ಲಿ ಸೂಕ್ತ ಉತ್ತರ ನೀಡುವಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನೋಟಿಸ್ ನೀಡಿದ್ದರು.

ರಾಜ್ಯ ಹೆದ್ದಾರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಯಚಂದ್ರ ಹಾಗೂ ಸಂಗೀತ ಕಣ್ಣನ್ ಗ್ರೂಪ್ ಸಿಬ್ಬಂದಿ ಮತ್ತು ಪ್ರತಿಷ್ಠಿತ ಕೊಲಂಬಿಯಾ ಏಷಿಯಾ ಆಸ್ಪತ್ರೆ ವೈದ್ಯ ನೋವೆಲ್ ಅಗರ್ವಾಲ್ ಅವರ ಮನೆಗಳ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ಬುಧವಾರ ಧನಲಕ್ಷ್ಮಿ ಕೋ-ಆಪರೇಟಿವ್ ಸೊಸೈಟಿ ವ್ಯವಸ್ಥಾಪಕ ಉಮಾಶಂಕರ್ ಅವರ ನಿವಾಸ ಹಾಗೂ ಕಚೇರಿಗಳ ಮೇಲೂ ದಾಳಿ ನಡೆದಿತ್ತು.

ದಾಳಿ ನಡೆಸಿದ ಕಡೆಗಳಲ್ಲಿ ₹2000ದ ದೊಡ್ಡ ಕಂತೆಗಳು ಪತ್ತೆಯಾಗಿರುವುದು, ಇಷ್ಟು ತ್ವರಿತವಾಗಿ ಇವರ ಬಳಿ ಹೇಗೆ ಹೊಸ ಹಣ ಸೇರಿತೆಂಬ ಪ್ರಶ್ನೆಗೆ ಕಾರಣವಾಗಿ, ಬ್ಯಾಂಕ್ ಅಧಿಕಾರಿಗಳ ಕಡೆಗೂ ಬೊಟ್ಟು ಮಾಡುವಂತಾಗಿದೆ.

ಒಂದೆಡೆ ಅಧಿಕಾರಿಗಳು ಐಟಿ ದಾಳಿಗೆ ತುತ್ತಾಗುತ್ತಿದ್ದರೆ, ಇನ್ನೊಂದೆಡೆ ರಿಯಲ್ ಎಸ್ಟೇಟ್ ಉದ್ಯಮಿಗಳ ₹83 ಲಕ್ಷ ಹಣ ದರೋಡೆಗೆ ಸಂಚು ರೂಪಿಸಿದ ಆರೋಪದ ಮೇಲೆ ಬಂಧಿತರಾಗಿರುವ ನಿವೃತ್ತ ಡಿವೈಎಸ್‍ಪಿ  ಬಾಬು ನರೋನಾ ಅವರು  ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ.

ರಿಲಾಯನ್ಸ್ ಜಿಯೊ- ಅಂಬಾನಿ ಭಾಷಣದಲ್ಲಿ ಸಿಕ್ಕಿದ್ದೇನು?

ರಿಲಾಯನ್ಸ್ ಜಿಯೊದ ಆಫರ್ ಡಿಸೆಂಬರಿಗೆ ಕೊನೆಯಾಗುತ್ತಲ್ಲ ಅಂತ ಬೇಜಾರಾದವರಿಗೆ ಪುಕ್ಕಟೆ ಭಾಗ್ಯ ಮಾರ್ಚ್ ವರೆಗೆ ಮುಂದುವರೆದಿದೆ. ಇದು ಡಿಸೆಂಬರ್ ನಾಲ್ಕರ ನಂತರ ಹೊಸ ಸಿಮ್ ತೆಗೆದುಕೊಂಡವರಿಗೂ ಈ ಭಾಗ್ಯ ಸಿಗುತ್ತದೆ. ಈಗಾಗಲೇ ಇರುವ ಗ್ರಾಹಕರನ್ನು ಸಹ ಟ್ರಾಯ್ ನಿಯಮಕ್ಕೆ ಅಡ್ಡಿಯಾಗದಂತೆ ವೆಲ್ಕಮ್ ಆಫರಿನ ಗ್ರಾಹಕರನ್ನು ಹೊಸ ವರ್ಷದ ಆಫರಿಗೆ ವರ್ಗಾಯಿಸಲಾಗುತ್ತದೆ.

ಆದರೆ ಹೊಸ ಆಫರಿನಲ್ಲಿ ಪ್ರತಿದಿನ 1ಜಿಬಿ ಡಾಟಾಕ್ಕೆ ಸೇವೆಯನ್ನು ಮಿತಿಗೊಳಿಸಲಾಗಿದೆ.

ಇವೆಲ್ಲವನ್ನೂ ತಮ್ಮ 20 ನಿಮಿಷಗಳ ಭಾಷಣದಲ್ಲಿ ರಿಲಾಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಘೋಷಿಸಿದ್ದಾರೆ. ಇದೇ ವೇಳೆ ತಮ್ಮ ಪ್ರತಿಸ್ಪರ್ಧಿಗಳ ಮೇಲೆ ಹರಿಹಾಯ್ದಿರುವ ಅವರು, ಜಿಯೊ ವೈಫಲ್ಯವಾಗಲೆಂದು ಅಂತರ ಸಂಪರ್ಕಗಳನ್ನು ಸರಿಯಾಗಿ ನೀಡದ ಎದುರಾಳಿ ಟೆಲಿಕಾಂ ಕಂಪನಿಗಳಿಂದ ಕರೆ ಸ್ಥಗಿತದಂಥ ಸಮಸ್ಯೆ ಆಗುತ್ತಿದೆ ಎಂದರು.

ಉಳಿದಂತೆ ಸುದ್ದಿಸಾಲುಗಳು…

  • ಸರ್ಕಾರಿ ಆಸ್ಪತ್ರೆಗಳಲ್ಲಿನ ವೈದ್ಯರ ಕೊರತೆ ನೀಗಿಸಲು ವಿವಿಧ ಇಲಾಖೆಗಳಲ್ಲಿ ಎರವಲು ಸೇವೆಯಲ್ಲಿರುವ ತಜ್ಞ ವೈದ್ಯರನ್ನು ಹಿಂದಕ್ಕೆ ಕರೆಸಿಕೊಳ್ಳಲಾಗುವುದು ಎಂದಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್‍ಕುಮಾರ್ ಡಿಸೆಂಬರ್ ಅಂತ್ಯದೊಳಗೆ ಖಾಲಿ ಇರುವ ವೈದ್ಯರ ಹುದ್ದೆಗಳನ್ನು ಪೂರ್ಣವಾಗಿ ಭರ್ತಿ ಮಾಡುವುದಾಗಿ ವಿಧಾನ ಸಭೆಯಲ್ಲಿಂದು ಘೋಷಿಸಿದ್ದಾರೆ. ಪ್ರಶ್ನೋತ್ತರ ವೇಳೆಯಲ್ಲಿ  ಮಹಾಲಿಂಗಪ್ಪ ಐಹೊಳೆ ಅವರ ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು ಖಾಸಗಿ ಆಸ್ಪತ್ರೆಗಳ ದರ ನಿಯಂತ್ರಣ ಆಸಾಧ್ಯ. ಇನ್ನು ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಬಡವರಿಗೆ ಮಾತ್ರ ಮುಖ್ಯಮಂತ್ರಿ ಪರಿಹಾರ ನಿಧಿ ನೆರವು ದೊರೆಯಲಿದೆ ಎಂದರು. 900 ಕ್ಕೂ ಹೆಚ್ಚು ತಜ್ಞ ವೈದ್ಯರ ಕೊರತೆ ಇದೆ. ಒಳ್ಳೆಯ ವೇತನ ನೀಡುತ್ತೇವೆ ಎಂದರೂ ವೈದ್ಯರು ಸೇವೆಗೆ ಬರುತ್ತಿಲ್ಲ. ಇಂತಹ ಸಮಯದಲ್ಲಿ ನಮ್ಮವರೇ ವಿವಿಧ ಇಲಾಖೆಗಳಲ್ಲಿ ಕ್ಲರಿಕಲ್ ಕೆಲಸ ಮಾಡಿಕೊಂಡಿದ್ದಾರೆ.ಇಂತಹವರಿಗೆ  ನಿಮ್ಮ ಕೆಲಸ ಏನು ಎಂದು ತೋರಿಸುತ್ತೇವೆ. ತಜ್ಞ ವೈದ್ಯರ ಕೊರತೆ ನೀಗಿಸಲು ನಮ್ಮ ವೈದ್ಯರಿಗೆ ಡಿಪ್ಲೊಮೋ ವೈದ್ಯಕೀಯ ಶಿಕ್ಷಣ ನೀಡಿ, ಅವರನ್ನು ತಜ್ಞ ವೈದ್ಯರನ್ನಾಗಿ ಮಾರ್ಪಡಿಸುವ ಕೆಲಸವೂ ಪ್ರಗತಿಯಲ್ಲಿದೆ ಎಂದರು.
  • ಗ್ರಾಮೀಣ ಅಭಿವೃದ್ಧಿ ಇಲಾಖೆಯಲ್ಲಿ ನಡೆದಿರುವ 10 ಸಾವಿರ ಕೋಟಿ ರೂ. ಅವ್ಯವಹಾರದ ತನಿಖೆಯನ್ನು ಎಸಿಬಿಗೆ ವಹಿಸಲಾಗಿದೆ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುದಾಗಿ ವಿಧಾನ ಪರಿಷತ್ತಿನಲ್ಲಿಂದು ತಿಳಿಸಿದ್ದಾರೆ. ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‍ನ ಅಪ್ಪಾಜಿಗೌಡ ಅವರ ಪ್ರಸ್ತಾವಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಅವರು, ಮೊದಲು ಪ್ರಕರಣಗಳನ್ನು ಲೋಕಾಯುಕ್ತ ತನಿಖೆಗೆ ವಹಿಸಲಾಗಿತ್ತು. ಎಸಿಬಿ ಅಸ್ತಿತ್ವಕ್ಕೆ ಬಂದ ನಂತರ ಆ ಸಂಸ್ಥೆಗೆ ಪ್ರಕರಣಗಳನ್ನು ವರ್ಗಾಯಿಸಲಾಗಿದೆ ಎಂದಿದ್ದಾರೆ.

Leave a Reply