ಗುರಿ ನಿರ್ದಿಷ್ಟ ದಾಳಿಗೆ ಶ್ರೇಯಸ್ಸು ಪಡೆದ ರಾಜಕೀಯ ನಾಯಕತ್ವವು ಸೇನಾ ನೆಲೆ ಮೇಲಿನ ದಾಳಿ ತಡೆಯಲಾಗದ್ದಕ್ಕೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕಲ್ಲವೇ?

New Delhi: Defence Minister Manohar Parrikar addressing during the 7th International Conference Aerospace,Defence & Homeland Security, in New Delhi on Monday. PTI Photo by Manvender Vashist

 

ಚೈತನ್ಯ ಹೆಗಡೆ

ಪಠಾನ್ಕೋಟ್, ಉರಿ, ನಗ್ರೊಟಾ… ಸೇನಾ ನೆಲೆಗಳ ಮೇಲೆ ಆಗುತ್ತಿರುವ ದಾಳಿಗಳು ನಿಂತಿಲ್ಲ. ಹೀಗಾಗಿ ಭಕ್ತಗಣದ ಕಣ್ಣಲ್ಲಿ ‘ದೇಶದ್ರೋಹಿ’ ಎನ್ನಿಸಿಕೊಳ್ಳುವ ಪ್ರಶ್ನೆಯೊಂದನ್ನು ಕೇಳಲೇಬೇಕಾಗಿದೆ.

ಗುರಿ ನಿರ್ದಿಷ್ಟ ದಾಳಿಗೆ ಮೋದಿ ಸರ್ಕಾರವು ರಾಜಕೀಯ ನಾಯಕತ್ವದ ಶ್ರೇಯಸ್ಸನ್ನು ಪಡೆದುಕೊಂಡಿತು. ಅದರ ಯಶಸ್ಸು ಸೇನೆಯದ್ದೇ ಆದರೂ ರಾಜಕೀಯ ನಿರ್ಧಾರ ತೆಗೆದುಕೊಂಡ ನಾಯಕತ್ವಕ್ಕೂ ಶ್ರೇಯಸ್ಸು ಸಲ್ಲಬೇಕಾಗುತ್ತದೆ ಎಂಬುದನ್ನು ಬಿಜೆಪಿ ಪ್ರತಿಪಾದಿಸಿಕೊಂಡುಬಂತು. ನಿವೃತ್ತ ಸೇನಾಧಿಕಾರಿಗಳಿಂದಲೂ ಇದೊಂದು ಅಪರೂಪದ ಕಾರ್ಯಾಚರಣೆ ಎಂದು ಕರೆಸಿಕೊಂಡಿತಲ್ಲದೇ ಅಲ್ಲಿಯೂ ರಾಜಕೀಯ ನಾಯಕತ್ವ ಪ್ರಶಂಸೆ ಪಡೆಯಿತು. ದೇಶದ ಹಲವೆಡೆಗಳಲ್ಲಿ ‘ಸೇನೆಯ ಪರವಾಗಿ’ ರಕ್ಷಣಾ ಮಂತ್ರಿ ಪಾರಿಕರ್ ಅವರು ಸನ್ಮಾನ ಸ್ವೀಕರಿಸಿ ವೀರಾವೇಶದ ಮಾತುಗಳನ್ನೂ ಆಡಿದರು.

ಎಲ್ಲವೂ ಫೈನ್… ಅವತ್ತು ರಾಜಕೀಯ ನಾಯಕತ್ವದ ಶ್ರೇಯಸ್ಸು ಪಡೆದ ಮೋದಿ ಸರ್ಕಾರ ಇವತ್ತು 7 ಮಂದಿ ಯೋಧರ ಬಲಿದಾನವಾಗಬೇಕಾಗಿ ಬಂದಿದ್ದಕ್ಕೂ ಉತ್ತರದಾಯಿ ಆಗಲೇಬೇಕಲ್ಲವೇ?

ಏಕೆಂದರೆ, ಇದು ಗಡಿಯಾಚೆಗಿಂದ ತೂರಿಬಂದ ಶೆಲ್ಲಿಂಗ್ ಅಥವಾ ಗುಂಡಿನ ಚಕಮಕಿಗೆ ನಮ್ಮ ಯೋಧರು ಪ್ರಾಣ ತೆತ್ತಿರುವ ಘಟನೆ ಅಲ್ಲ. ಇಲ್ಲಿ ಪಾಕ್ ಉಗ್ರರು ಸರ್ವ ತಯಾರಿಯೊಂದಿಗೆ ಸೇನಾ ನೆಲೆಯನ್ನೇ ಗುರಿಯಾಗಿಸಿಕೊಂಡು ಬಂದಿದ್ದಾರೆ ಹಾಗೂ ದಾಳಿಯಲ್ಲಿ ಯಶಸ್ವಿಯಾಗಿದ್ದಾರೆ.

ಈ ಸಂದರ್ಭದಲ್ಲಿ ಯೋಧರು ಮೆರೆದ ಶೌರ್ಯದ ಬಗ್ಗೆ ಎರಡು ಮಾತಿಲ್ಲ. ಆದರೆ ಈ ಸರ್ಕಾರದ ಅವಧಿಯಲ್ಲಿ ಇಂಥ ಘಟನೆಗಳು ಸರಣಿಯೋಪಾದಿಯಲ್ಲಿ ಆಗುತ್ತಿವೆಯಲ್ಲ? ‘ವೈರಿಗಳ ಕಣ್ಣು ಕಿತ್ತು ಬಿಡುತ್ತೇವೆ’ ಎಂಬ ವಾಚಾಳಿ ರಕ್ಷಣಾ ಮಂತ್ರಿಗಳ ಮಾತುಗಳಲ್ಲೇ ಭಾರತೀಯರು ವಾಸ್ತವವನ್ನು ಮರೆಯಬೇಕೇ? ಆ ಕ್ಷಣದ ನೈತಿಕ ಸ್ಥೈರ್ಯ ಹೆಚ್ಚಿಸಿಕೊಳ್ಳುವುದಕ್ಕೆ ಇಂಥ ವೀರಾವೇಶಗಳು ಸರಿ. ಆದರೆ ಮಾತಲ್ಲೇ ಮೈಮರೆತಿರುವುದರಿಂದಲೇ ಸೇನಾ ನೆಲೆಗಳ ಮೇಲೆ ನಿರಂತರ ದಾಳಿಗಳು ಆಗುತ್ತಿವೆ ಎನಿಸುವುದಿಲ್ಲವೇ?

ಪಠಾನ್ಕೋಟ್ ವಾಯುನೆಲೆಗೆ ಉಗ್ರರು ಹೇಗೆ ನುಗ್ಗಿದರು ಎಂಬುದೇ ಲೋಪಗಳತ್ತ ಬೊಟ್ಟು ಮಾಡುವ ಅತಿ ಆತಂಕದ ವಿಷಯ. ಅದಾದ ನಂತರ ಉರಿ ಸೇನಾನೆಲೆಯಲ್ಲಿ ಪಹರೆ ಬದಲಾಗುತ್ತಿದ್ದ ಸಂದರ್ಭದಲ್ಲೇ ಪಾಕ್ ದಾಳಿ ಮಾಡಿ 20 ಸೈನಿಕರ ಜೀವ ಹರಣ ಮಾಡಿದ್ದು ಯಾರು ಮರೆಯಲಾದೀತು? ಗುರಿ ನಿರ್ದಿಷ್ಟ ದಾಳಿಯ ಉತ್ತರದಿಂದ ಭಾರತವನ್ನೇನೋ ಸಂತೈಸಿದ್ದು ಶ್ಲಾಘನೀಯವೇ. ಅದರರ್ಥ ಎಲ್ಲವೂ ಮುಗಿಯಿತು ಎಂದಲ್ಲವಲ್ಲ. ಅಷ್ಟಾದ ನಂತರವೂ ಸೇನಾನೆಲೆಯಂಥ ಸೂಕ್ಷ್ಮ ಪ್ರದೇಶದ ಮೇಲೆಯೇ ಉಗ್ರರು ದಾಳಿ ನಡೆಸುವ ಸಾಮರ್ಥ್ಯ ಇರಿಸಿಕೊಂಡಿದ್ದಾರೆ ಎಂದಾದರೆ ಅದು ನಾವೆಷ್ಟೇ ಮುಚ್ಚಿಟ್ಟುಕೊಳ್ಳಲು ನೋಡಿದರೂ ಜಗತ್ತಿನೆದುರು ನಮ್ಮ ಕುಂದುಗಳನ್ನು ಬಿಂಬಿಸುತ್ತದೆ.

ನಿಜ. ಈ ಹಿಂದೆ ಗಡಿಯಲ್ಲಿ ಅಪ್ರಚೋದಿತ ದಾಳಿಗಳಾದಾಗ ಸೇನೆ ಅದಕ್ಕೆ ತಕ್ಕ ಉತ್ತರ ನೀಡಿದೆ. ಅತ್ತ ಪಾಕಿಸ್ತಾನದ ಯೋಧರನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗಿ ಪಡೆದಿದೆ. ಇವೆಲ್ಲ ಸರಿ. ಆದರೆ ಇವ್ಯಾವವೂ ನಮ್ಮ ಸೇನಾ ನೆಲೆಗಳ ಮೇಲಾಗುತ್ತಿರುವ ಪುನರಾವರ್ತಿತ ದಾಳಿಗಳಿಗೆ ಸಮಾಧಾನ ಹೇಳಲಾರವು.

ಈ ಬಗೆಯ ದಾಳಿಗಳಾದಾಗ ನಮ್ಮ ಯೋಧರ ಬಲಿದಾನ ಹೆಚ್ಚಾಗಿಯೇ ಇರುತ್ತದೆ. ಏಕೆಂದರೆ ಗಡಿಯಲ್ಲಿನ ಚಕಮಕಿಗಿಂತ ಹೆಚ್ಚಿನ ಒತ್ತಡ ಇಲ್ಲಿನ ನಿರ್ವಹಣೆಯಲ್ಲಿ ರೂಪುಗೊಳ್ಳುತ್ತದೆ. ಸೇನಾನೆಲೆಯಲ್ಲಿರುವ ಸೂಕ್ಷ್ಮ ಪ್ರದೇಶಗಳಿಗೆ ಲಗ್ಗೆ ಇಡದಂತೆ ಉಗ್ರರನ್ನು ತ್ವರಿತವಾಗಿ ತಡೆಯಬೇಕಾಗುತ್ತದೆ. ಸೇನಾ ಕುಟುಂಬವನ್ನು ಒತ್ತೆಯಾಳಾಗಿ ಇರಿಸಿಕೊಂಡು ಉಗ್ರರು ಏನೆಲ್ಲ ಬೇಡಿಕೆಗಳನ್ನು ಇಡುವ ಸಂಭವವಿರುತ್ತದೆ. ವಾಸ್ತವವಾಗಿ ನಗ್ರೊಟಾದಲ್ಲಿ ಇಬ್ಬರು ಮೇಜರ್ ಹಾಗೂ ಐವರು ಯೋಧರು ಹುತಾತ್ಮರಾಗಬೇಕಾಗಿದ್ದು ಈ ಕಾರಣದಿಂದಲೇ. ಸೇನಾನೆಲೆಯಲ್ಲಿದ್ದ ಯೋಧರ ಕುಟುಂಬ ಒತ್ತೆಯಾಳಾಗದಂತೆ ತಡೆಯುವುದಕ್ಕೆ ಈ ಯೋಧರು ಹಿಂದೆ-ಮುಂದೆ ನೋಡದೇ ಮುನ್ನುಗ್ಗಬೇಕಾಯಿತು. ಇಲ್ಲಿ ವ್ಯವಸ್ಥಿತ ವ್ಯೂಹ ಹೆಣೆಯುವುದಕ್ಕೆ, ಉಗ್ರರನ್ನು ಒಂದೆಡೆ ಬರುವಂತೆ ಮಾಡುವುದಕ್ಕೆ ಸಮಯವೇ ಇರುವುದಿಲ್ಲ. ಹೀಗಾಗಿ ಯೋಧರ ಪ್ರಾಣತ್ಯಾಗವೂ ದೊಡ್ಡಮಟ್ಟದಲ್ಲಿ ಆಗುತ್ತದೆ.

ಸೇನಾನೆಲೆಯನ್ನೇ ಗುರಿಯಾಗಿಸಿಕೊಂಡು ಪಾಕ್ ಮಾಡುವ ಇಂಥ ದಾಳಿಗಳಿಂದ ಗುರಿ ನಿರ್ದಿಷ್ಟ ದಾಳಿಯಲ್ಲಿ ಸಾಧಿಸಿದ್ದ ವರ್ಚಸ್ಸು ಹಳ್ಳ ಹಿಡಿಯುತ್ತದೆ. ಉಗ್ರರು ಹೀಗೆ ಸೇನಾ ಶಿಬಿರಗಳಿಗೇ ನುಗ್ಗಿ ವಿಧ್ವಂಸ ಸೃಷ್ಟಿಸಬಲ್ಲರು ಎಂಬುದು ಒಂದೆಡೆ ನಮ್ಮ ಸನ್ನದ್ಧತೆಯ ಬಗ್ಗೆ ಪ್ರಶ್ನೆಗಳನ್ನು ಮೂಡಿಸಿದರೆ ಇನ್ನೊಂದೆಡೆ ಪಾಕಿಸ್ತಾನದ ಮಿಲಿಟರಿ ಸ್ಥೈರ್ಯವನ್ನು ಹಿಗ್ಗಿಸುವ ಬೆಳವಣಿಗೆಯಾಗುತ್ತದೆ.

ಒಂದು ಹಂತದಲ್ಲಿ ಭಾರತವು ಪಾಕಿಸ್ತಾನವನ್ನು ಮಿಲಿಟರಿ ಮತ್ತು ರಾಜತಾಂತ್ರಿಕ ನೆಲೆಯಲ್ಲಿ ಕುಗ್ಗಿಸಿದ್ದು ನಿಜ. ಆದರೆ ಜಾಗತಿಕ ಸ್ಥಿತಿ ಹೇಗಿದೆಯೆಂದರೆ ತಿಂಗಳ ಹಿಂದಿನ ಹಳೆಕತೆಯಲ್ಲಿ ಮೈಮರೆಯುವಂತೆಯೇ ಇಲ್ಲ. ಯಾವ ಪಾಕಿಸ್ತಾನವನ್ನು ತೀರ ಏಕಾಂಗಿಯಾಗಿಸಿದ್ದೆವು ಅಂದುಕೊಂಡೆವೋ ಅದರ ಜತೆ ರಷ್ಯಾ ಮಿಲಿಟರಿ ಅಭ್ಯಾಸ ನಡೆಸಿದೆ, ಚೀನಾ ನಿರ್ಮಿಸುತ್ತಿರುವ ಗ್ವಾದಾರ್ ಬಂದರಿನ ಮೂಲಕ ತಾನೂ ವಹಿವಾಟಿನಲ್ಲಿ ಪಾಲ್ಗೊಳ್ಳುವ ಉತ್ಸುಕತೆಯಲ್ಲಿದೆ ಹಾಗೂ ಇದಕ್ಕೆ ಪಾಕಿಸ್ತಾನ ಸಮ್ಮತಿಸಿದೆ.

ಈ ಎಲ್ಲ ಹಿನ್ನೆಲೆಗಳಲ್ಲಿ ರಕ್ಷಣಾ ಸಚಿವ ಪಾರಿಕರ್ ಅವರ ಇತ್ತೀಚಿನ ವಾಚಾಳಿತನ ಆ ಕ್ಷಣದ ರೋಚಕತೆ- ಚಪ್ಪಾಳೆ ಹುಟ್ಟುಹಾಕುತ್ತಿರುವುದುಬಿಟ್ಟರೆ ಮತ್ಯಾವ ಪರಿಣಾಮ ಕೊಡುತ್ತಿಲ್ಲ ಎಂಬುದನ್ನು ಗಮನಿಸಬೇಕು. ‘ಗಡಿಯಲ್ಲಿ ಚಕಮಕಿ ನಿಲ್ಲಿಸಿ ಅಂತ ಪಾಕಿಸ್ತಾನಿಯರೇ ನಮ್ಮನ್ನು ಬೇಡಿಕೊಂಡರು’ ಅಂತ ರಕ್ಷಣಾ ಸಚಿವರು ಹೇಳಿದ್ದಕ್ಕೆ ವಾವ್, ವಾ ಎಂದಿದ್ದಾಗಿದೆ. ‘ನಮಗೆ ಯುದ್ಧ ಬೇಡ. ಆದರೆ ಪಾಕಿಸ್ತಾನ ಉಗ್ರವಾದ ಮುಂದುವರಿಸಿದರೆ ವೈರಿಗಳ ಕಣ್ಣು ಕೀಳುತ್ತೇವೆ’ ಎಂದಿದ್ದಕ್ಕೆ ಶಹಬ್ಬಾಸ್ ಎಂದಿದ್ದಾಗಿದೆ. ಇವೆಲ್ಲದರ ಹೊರತಾಗಿಯೂ ಕಳೆದ ಯುಪಿಎ ಮತ್ತು ಈಗಿನ ಎನ್ಡಿಎ ಆಡಳಿತದಲ್ಲಿ ವಾಸ್ತವ ಒಂದೇ. ಯೋಧರ ಶವಪೆಟ್ಟಿಗೆಗಳು ಮನೆ ಹೊಸ್ತಿಲಲ್ಲಿಳಿದು ಮನ ಭಾರವಾಗುವುದು ತಪ್ಪಿಲ್ಲ.

Leave a Reply