ರಾಹುಲ್ ಗಾಂಧಿ ಟ್ವಿಟ್ಟರಿಗೆ ಕನ್ನ ಬಿದ್ದಿರುವುದು ಇಡೀ ಡಿಜಿಟಲ್ ಪಾವತಿ ವ್ಯವಸ್ಥೆಯನ್ನೇ ಪ್ರಶ್ನಿಸುವ ವಿದ್ಯಮಾನವಾಗುತ್ತದೆಯೇ?

ಡಿಜಿಟಲ್ ಕನ್ನಡ ಟೀಮ್:

ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ಸಿನ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿರುವುದು ಹಾಗೂ ಮಮತಾ ಬ್ಯಾನರ್ಜಿ ಅವರ ವಿಮಾನ ತುರ್ತು ಭೂಸ್ಪರ್ಶ ಮಾಡಬೇಕಾಗಿ ಬಂದ ಪ್ರಕರಣಗಳು, ಮೋದಿ ವರ್ಸಸ್ ಪ್ರತಿಪಕ್ಷವೆಂಬ ಈ ಕಾಲಘಟ್ಟದಲ್ಲಿ ರಾಜಕೀಯ ಕಂಪನಗಳನ್ನು ಎಬ್ಬಿಸಿವೆ.

ಮೊದಲಿಗೆ, ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ಸಿನ ಟ್ವಿಟ್ಟರ್ ಖಾತೆಗಳು ಹ್ಯಾಕ್ ಆದ ಪ್ರಕರಣ. ಈ ಸಂಬಂಧ ಅದಾಗಲೇ ದೆಹಲಿ ಪೊಲೀಸರ ಬಳಿ ದೂರು ದಾಖಲಾಗಿದ್ದು, ಸೈಬರ್ ವಿಭಾಗದಿಂದ ತನಿಖೆ ಶುರುವಾಗಿದೆ. ‘ಈ ಬಗ್ಗೆ ವಿವರಗಳನ್ನು ತರಿಸಿಕೊಂಡು ಎಲ್ಲ ತುರ್ತು ಕ್ರಮಗಳನ್ನೂ ತೆಗೆದುಕೊಂಡಿದ್ದೇವೆ. ಡಿಜಿಟಲ್ ಭದ್ರತೆಗೆ ಸರ್ಕಾರ ಬದ್ಧವಾಗಿದೆ’ ಎಂದು ಮಾಹಿತಿ ತಂತ್ರಜ್ಞಾನ ಖಾತೆ ನಿಭಾಯಿಸುತ್ತಿರುವ ಸಚಿವ ರವಿಶಂಕರ್ ಪ್ರಸಾದ್ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ಪರ ಟಿವಿ ವಾಹಿನಿಗಳಲ್ಲಿ ಕಾಣಿಸಿಕೊಂಡ ವಕ್ತಾರರದ್ದೂ ಇದೇ ಮಾತು. ಆದರೆ ಟ್ವಿಟ್ಟರಿನಲ್ಲಿ ಮತ್ತು ಸಾಮಾಜಿಕ ತಾಣಗಳಲ್ಲಿ ಬಿಜೆಪಿ ಸಮರ್ಥಕರಿಂದ ಸಹಜವೆಂಬಂತೆ ರಾಹುಲ್ ಹಾಗೂ ಕಾಂಗ್ರೆಸ್ ವಿರುದ್ಧ ವ್ಯಂಗ್ಯ ವ್ಯಕ್ತವಾಗಿದೆಯಲ್ಲದೇ, ಇದು ಕಾಂಗ್ರೆಸ್ಸಿನ ಆಂತರಿಕ ಕೆಲಸವೇ ಆಗಿದ್ದಿರಬಹುದಲ್ಲ ಎಂಬ ಆರೋಪವೂ ಅಭಿವ್ಯಕ್ತವಾಗಿದೆ.

ಇಲ್ಲಿ ಆಯ್ಕೆಗಳಿರುವುದು ಎರಡೇ. ಒಂದು ಇದರ ತನಿಖೆಯಾಗುವವರೆಗೆ ಕಾಯುವುದು. ಅದಿಲ್ಲದೇ ಸಂಚಿನ ಸಿದ್ಧಾಂತ ಮತ್ತು ಸಾಧ್ಯತೆಗಳ ಮೇಲೆ ಮಾತನಾಡುವುದಾದರೆ ಅಂಥ ‘ಅಭಿವ್ಯಕ್ತಿ ಸ್ವಾತಂತ್ರ್ಯ’ ಕಾಂಗ್ರೆಸ್ಸಿಗೆ ಮಾತ್ರವಲ್ಲದೇ ಎಲ್ಲರಿಗೂ ಇದೆ ಅಂತ ಒಪ್ಪಿಕೊಂಡು ಎಲ್ಲ ಸಾಧ್ಯತೆಗಳನ್ನೂ ಚರ್ಚೆ ಮಾಡಬೇಕಾಗುತ್ತದೆ.

  • ಈ ಪ್ರಕರಣವನ್ನು ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಕಾರ್ಯಕ್ರಮ ಅಸುರಕ್ಷತೆಯಿಂದ ಕೂಡಿದೆ ಎಂದು ಪ್ರಚುರಪಡಿಸುವುದಕ್ಕೆ ಕಾಂಗ್ರೆಸ್ ಬಳಸಿಕೊಳ್ಳುತ್ತಿದೆ. ಪ್ರಧಾನಿ ಮೋದಿ ಈ ದೇಶದ ಸಾಮಾನ್ಯರೆಲ್ಲ ಡಿಜಿಟಲ್ ಪಾವತಿಯತ್ತ ಹೊರಳಬೇಕು ಎಂದು ಕರೆ ಕೊಡುತ್ತಿರುವಾಗ ಖಂಡಿತ ಇಲ್ಲಿನ ಭದ್ರತಾ ವ್ಯವಸ್ಥೆಗಳ ಬಗ್ಗೆ ಪರಾಮರ್ಶೆ ಬೇಕೇ ಬೇಕು. ಆದರೆ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ಸಿನ ಟ್ವಿಟ್ಟರ್ ಖಾತೆ ಹ್ಯಾಕ್ ಆಗುವುದಕ್ಕೂ ಇದಕ್ಕೂ ಸಂಬಂಧವಿಲ್ಲ. ಸಾಮಾಜಿಕ ತಾಣಗಳಲ್ಲಿ ಕೈಗೊಳ್ಳುವ ಮಾಹಿತಿ ಕಳ್ಳತನದ ವಿರುದ್ಧದ ಭದ್ರತಾ ವ್ಯವಸ್ಥೆಗಿಂತ ಹಣಕಾಸು ವಿಭಾಗದ ವ್ಯವಸ್ಥೆ ಹಲವು ಪಟ್ಟು ಹೆಚ್ಚು. ಕಾಂಗ್ರೆಸ್ಸಿನವರೇ ಆದ ಶಶಿ ತರೂರ್ ಸೇರಿದಂತೆ ಹಲವರ ಟ್ವಿಟ್ಟರ್ ಖಾತೆಗಳು ಈ ಹಿಂದೆ ಕಳ್ಳತನವಾಗಿ ಮರು ಸ್ಥಾಪಿತವಾಗಿವೆ. ಇದನ್ನು ಡಿಜಿಟಲ್ ಹಣಕಾಸು ವ್ಯವಹಾರದೊಂದಿಗೆ ಜೋಡಿಸಿ ಮಾತನಾಡುವುದು ರಾಜಕೀಯಪ್ರೇರಿತವಷ್ಟೆ.
  • ಬ್ಯಾಂಕಿಂಗ್ ನಲ್ಲೂ ಭದ್ರತೆಯ ಸಮಸ್ಯೆ ಇದ್ದೇ ಇದೆ. ಎಸ್ಬಿಐ ಸೇರಿದಂತೆ ಹಲವು ಬ್ಯಾಂಕುಗಳ 30 ಲಕ್ಷ ಡೆಬಿಟ್ ಕಾರ್ಡುಗಳ ಮಾಹಿತಿ ಕಳ್ಳತನವಾಗಿದ್ದ ವರದಿ ತಿಂಗಳ ಹಿಂದಷ್ಟೇ ವರದಿಯಾಗಿತ್ತು. ಇಲ್ಲೆಲ್ಲ ಗ್ರಾಹಕರಿಗೆ ನಷ್ಟ ತುಂಬಿಕೊಡಲಾಗಿದೆ. ಡಿಜಿಟಲ್ ಭದ್ರತಾ ಹೆಚ್ಚಳದ ಗಮನ ಆಗಲೇಬೇಕಾದರೂ ಅದಕ್ಕೆ ರಾಹುಲ್ ಟ್ವಿಟ್ಟರ್ ಖಾತೆ ಉದಾಹರಣೆ ನೀಡುವುದು ಬಾಲಿಶ. ಕಿಸೆಯಲ್ಲಿ ನಗದಿಟ್ಟುಕೊಂಡಿದ್ದಾಗ ಜೇಬುಗಳ್ಳತನವಾಯಿತೆಂದು ಇಡೀ ಹಣಕಾಸು ವ್ಯವಸ್ಥೆಯನ್ನು ಹೇಗೆ ದೂರಲಾಗುವುದಿಲ್ಲವೋ, ಅಂತೆಯೇ ಮಾಹಿತಿ ಕಳ್ಳತನದ ಸಾಧ್ಯತೆ ಇಟ್ಟುಕೊಂಡು ನಗದು ರಹಿತ ವ್ಯವಹಾರದ ಪರಿಕಲ್ಪನೆಯನ್ನೇ ಪ್ರಶ್ನಿಸುವುದು ಮೂರ್ಖತನ.
  • ಯುಪಿಐ, ಪೇಟಿಎಂ ಹೀಗೆ ಸ್ಮಾರ್ಟ್ ಫೋನ್ ಮೂಲಕ ಪಾವತಿಯನ್ನು ಭಾರತೀಯರು ಅಳವಡಿಸಿಕೊಳ್ಳಬೇಕು ಎಂದು ಬಯಸುವಾಗ, ಇಂಥ ಎಲ್ಲ ಸೇವೆಗಳು ಕೇವಲ ಇಂಗ್ಲಿಷಿನಲ್ಲಲ್ಲದೇ, ಪ್ರಾದೇಶಿಕ ಭಾಷೆಗಳಲ್ಲಿರಬೇಕಾದುದರ ಅಗತ್ಯ ಇದ್ದೇ ಇದೆ. ಇಲ್ಲದಿದ್ದರೆ ಈ ಗೊಂದಲದಲ್ಲೇ ಸಾಮಾನ್ಯ ಜನ ಹಲವು ಭದ್ರತಾ ಲೋಪ ಮಾಡಿಕೊಳ್ಳುತ್ತಾರಷ್ಟೆ. ಈ ಬೇಡಿಕೆ ತುಂಬ ಸಾಧುವೇ ಆದರೂ ಇದಕ್ಕೂ ರಾಹುಲ್ ಗಾಂಧಿ ಟ್ವಿಟ್ಟರ್ ಖಾತೆ ಮಾಹಿತಿ ಕಳ್ಳತನಕ್ಕೂ, ಡಿಜಿಟಲೀಕರಣದ ಆತಂಕಕ್ಕೂ ಹೇಗೆ ತಾನೇ ಬೆಸುಗೆ ಹಾಕಲಾದೀತು?
  • ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ಸಿನ ವಿರೋಧಿಗಳೇ ಇದನ್ನು ಮಾಡಿದ್ದಾರೆ ಎಂದು ತನಿಖೆಗೆ ಮುನ್ನವೇ ನಿರ್ಧಾರಕ್ಕೆ ಬರುವುದಾದರೆ, ಕಾಂಗ್ರೆಸ್ಸಿನ ಆಂತರಿಕ ವಿಭಾಗದಲ್ಲೇ ಭದ್ರತಾ ಲೋಪ ಆಗಿರಬಾರದೇಕೆ ಎಂಬ ಇನ್ನೊಂದು ವಾದವನ್ನೂ ಈ ಹಂತದಲ್ಲಿ ಪುರಸ್ಕರಿಸಬೇಕಾಗುತ್ತದೆ. ಏಕೆಂದರೆ ಈ ಹಿಂದೆ ಕಾಂಗ್ರೆಸ್ಸಿನ ಅಧಿಕೃತ ನಿಯತಕಾಲಿಕದಲ್ಲೇ ನೆಹರು ಟೀಕೆಯ ಲೇಖನವೊಂದು ಪ್ರಕಟವಾಗಿ ನಂತರ ಕೆಲವರ ಮೇಲೆ ಪಕ್ಷವು ಕ್ರಮ ತೆಗೆದುಕೊಂಡಿದ್ದ ಉದಾಹರಣೆ ಇದ್ದೇ ಇದೆ.

Leave a Reply