ಮೊದಲು ವಿಮಾನದಲ್ಲೇ ಕೊಲ್ಲಲು ಸಂಚು, ಇದೀಗ ಸೇನಾಕ್ರಾಂತಿ ಮೂಲಕ ಮಮತಾರ ಮೇಲೆ ಹೊಂಚು! ಹೌದೇ? ಬಂಗಾಳದ ದೀದಿ ಏಕಿಷ್ಟು ವಿಚಲಿತರಾಗಿದ್ದಾರೆ?

ಡಿಜಿಟಲ್ ಕನ್ನಡ ಟೀಮ್:

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮಾತನ್ನು ನಂಬುವುದಾದರೆ, ರಾಜ್ಯ ಸರ್ಕಾರದ ಮೇಲೆ ಮಿಲಿಟರಿ ಮೂಲಕ ಕ್ಷಿಪ್ರಕ್ರಾಂತಿ ನಡೆಸಲಾಗುತ್ತಿದೆ. ಏಕೆಂದರೆ ಪಶ್ಚಿಮ ಬಂಗಾಳದ ಹಲವು ಜಿಲ್ಲೆಗಳ ಸುಂಕದ ಬಾಗಿಲ ಬಳಿ ಸೇನಾಯೋಧರು ನೆಲೆನಿಂತಿದ್ದಾರೆ. ಗುರುವಾರ ತಡರಾತ್ರಿ ಇದನ್ನು ವಿರೋಧಿಸುತ್ತ ಪತ್ರಿಕಾಗೋಷ್ಟಿ ನಡೆಸಿದ ಮುಖ್ಯಮಂತ್ರಿ, ತಮ್ಮನ್ನು ಹತ್ತಿಕ್ಕುವುದಕ್ಕೆ ಕೇಂದ್ರ ಸರ್ಕಾರವು ಸೇನೆಯನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರಲ್ಲದೇ, ರಾತ್ರಿಯಿಡೀ ಮನೆಗೆ ಹೋಗದೇ ಕಾರ್ಯಾಲಯದಲ್ಲೇ ಕುಳಿತು, ತಾವು ‘ಪ್ರಜಾಪ್ರಭುತ್ವ’ ಕಾಯುತ್ತಿರುವುದಾಗಿ ಹೇಳಿದ್ದಾರೆ.

ಅಂದಹಾಗೆ, ಈ ವರದಿ ಸಿದ್ಧವಾಗುವಷ್ಟರಲ್ಲಿ ಸೇನೆ ಅದಾಗಲೇ ಪಶ್ಚಿಮ ಬಂಗಾಳದಿಂದ ಹಿಂತೆಗೆದಿದೆ.

ಇಷ್ಟೆಲ್ಲ ನಡೆಯುತ್ತಿದೆ ಎಂದರೆ ಏನೋ ಆಗಿರಲೇಬೇಕಲ್ಲ? ಹಾಗೆಂದುಕೊಳ್ಳುವ ಮೊದಲು ಸೇನೆಯ ಪೂರ್ವ ವಿಭಾಗದ ಕಮಾಂಡ್ ಏನು ಹೇಳಿದೆ ಗಮನಿಸೋಣ. ‘ಇದೊಂದು ಈಶಾನ್ಯ ಭಾರತದಲ್ಲಿ ನಡೆಯುತ್ತಿರುವ ಸಾಮಾನ್ಯ ಅಭ್ಯಾಸ. ಅಸ್ಸಾಮಿನಲ್ಲಿ 18 ಕಡೆ, ಅರುಣಾಚಲ-13, ಪಶ್ಚಿಮ ಬಂಗಾಳ- 19, ಮಣಿಪುರ-6, ನಾಗಾಲ್ಯಾಂಡ್-5, ಮೇಘಾಲಯ-5, ತ್ರಿಪುರಾ ಮತ್ತು ಮಿಜೊರಾಂಗಳಲ್ಲಿ ಒಂದು ಕಡೆ ತಪಾಸಣೆ ನಡೆಸಲಾಗುತ್ತಿದೆ.’ ಎಂದು ಈಸ್ಟರ್ನ್ ಕಮಾಂಡಿನ ಟ್ವಿಟ್ಟರ್ ಖಾತೆ ತಿಳಿಸಿದೆ.

ಎರಡೂ ಕಡೆಯಿಂದ ಕೆಲವು ಸಂವಹನ ಕೊರತೆಗಳಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದ್ದರೂ ಸೇನೆ ಪಶ್ಚಿಮ ಬಂಗಾಳವನ್ನು ಕಬ್ಜಾ ಮಾಡಿಕೊಂಡಿದೆ ಎಂಬರ್ಥದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ಸಿನ ಮಾತುಗಳಲ್ಲಿ ಹುರುಳಿಲ್ಲ. ಈ ತಪಾಸಣೆಗಳನ್ನು ಪಶ್ಚಿಮ ಬಂಗಾಳದ ಪೊಲೀಸರಿಗೆ ತಿಳಿಸಿಯೇ ಮಾಡುತ್ತಿದ್ದೇವೆ ಎಂಬ ಸೇನೆಯ ಪೂರ್ವ ವಿಭಾಗದ ಹೇಳಿಕೆಯನ್ನು ಅಲ್ಲಿನ ಪೊಲೀಸ್ ಇಲಾಖೆ ಅಲ್ಲಗಳೆದಿದೆ. ಆದರೆ, ‘ಸೇನೆಗೇನು ಸುಂಕ ವಸೂಲಿ ಅಧಿಕಾರವಿದೆಯೇ’ ಎಂದು ತೃಣಮೂಲ ಕಾಂಗ್ರೆಸ್ಸಿನ ವಕ್ತಾರ ಡೆರಿಕ್ ಪ್ರಶ್ನಿಸುತ್ತಿರುವುದೂ ಅರ್ಥಹೀನವೇ. ಏಕೆಂದರೆ ಸೇನೆ ಅಲ್ಲಿ ಯಾವುದೇ ರೀತಿ ಸುಂಕ ವಸೂಲಿಯನ್ನೂ ಮಾಡುತ್ತಿಲ್ಲ. ಟ್ರಕ್ ನಂಬರುಗಳನ್ನು ದಾಖಲಿಸುತ್ತಿರುವುದು ಹಾಗೂ ಹಲವು ವಾಹನಗಳ ಚಾಲಕರ ದಾಖಲೆ ಪರೀಕ್ಷಿಸಿರುವುದು ಹೌದು. ಸೇನೆ ಹೀಗೆ ಮಾಡುತ್ತಿರುವುದರಿಂದ ಸುರಕ್ಷತೆ ಮತ್ತು ಸಂಚಾರ ವ್ಯವಸ್ಥೆಗೆ ತೊಂದರೆಯಾಗುತ್ತಿದೆ ಎಂಬ ಪಶ್ಚಿಮ ಬಂಗಾಳ ಪೊಲೀಸರ ಆಕ್ಷೇಪ ಮಾತ್ರ ಕ್ಷುಲ್ಲಕ. ಏಕೆಂದರೆ ಬಾಂಗ್ಲಾದೇಶದೊಂದಿಗೆ ಗಡಿ ಹಂಚಿಕೊಂಡಿರುವ ಪಶ್ಚಿಮ ಬಂಗಾಳದಲ್ಲಿ ಸೇನಾ ತಪಾಸಣೆಗಳ ಮಹತ್ವವನ್ನು ಅಲ್ಲಗಳೆಯಲಾಗುವುದಿಲ್ಲ.

ಈ ನಿಟ್ಟಿನಲ್ಲಿ ಸೇನೆಯೂ ನಿಖರ ಉದ್ದೇಶಗಳನ್ನು ಹೇಳಿಲ್ಲ. ಕಾರ್ಯ ಯೋಜನೆ ದೃಷ್ಟಿಯಿಂದ ಅದನ್ನು ಅಪೇಕ್ಷಿಸುವಂತೆಯೂ ಇಲ್ಲ. ಯಾವುದಾದರೂ ತುರ್ತು ಪರಿಸ್ಥಿತಿಗಳಿದ್ದಾಗ ಎಷ್ಟು ಸಾಗಾಣಿಕಾ ವಾಹನಗಳು ಲಭ್ಯ ಎಂಬುದನ್ನು ಸೇನೆ ಆಗಾಗ ಪರೀಕ್ಷಿಸುತ್ತಿರುತ್ತದೆ ಎಂದು ವಕ್ತಾರರೊಬ್ಬರು ಹೇಳಿದರೆ, ಇದು ಸಾಮಾನ್ಯವಾಗಿ ನಡೆಯುವ ವಿದ್ಯಮಾನವಷ್ಟೆ ಅಂತ ಟ್ವೀಟ್ ಮಾಹಿತಿ ಹೇಳುತ್ತಿದೆ. ಹೀಗಾಗಿ ಕೆಲ ಗೊಂದಲಗಳು ಏರ್ಪಟ್ಟಿದ್ದಿರಬಹುದು. ‘ಇವರು ಹುಡುಕುತ್ತಿರುವ ವಾಹನ ಸಂಖ್ಯೆ ಇತ್ಯಾದಿ ಮಾಹಿತಿಗಳು ಕೇಂದ್ರ ಸರ್ಕಾರದ ಇಲಾಖೆಗಳಲ್ಲೇ ಲಭ್ಯ ಇವೆ ಎಂಬುದು ನಮ್ಮ ತಿಳಿವಳಿಕೆ’ ಎಂಬುದು ತೃಣಮೂಲ ವಕ್ತಾರರ ಮಾತು.

ಇವೇನೇ ಇರಲಿ. ನಕ್ಸಲ್ ಸಮಸ್ಯೆ, ಒಳನುಸುಳುಕೋರರು, ಮುಸ್ಲಿಂ ಮತಾಂಧರು ಹಾಗೂ ಖೋಟಾ ನೋಟು ಕಾರಸ್ಥಾನ ಎಲ್ಲವೂ ಕೇಂದ್ರಿತವಾಗಿರುವ ಪಶ್ಚಿಮ ಬಂಗಾಳ ಮತ್ತು ಈಶಾನ್ಯ ಭಾರತಗಳಲ್ಲಿ ಸೇನೆಯ ಪರಿಶೀಲನೆ ಅಚ್ಚರಿ ಹುಟ್ಟಿಸುವಂಥ ವಿದ್ಯಮಾನವೇನಲ್ಲ. ಅದರಲ್ಲೂ ನೋಟು ಅಮಾನ್ಯದ ನಂತರ ಇದೇ ನಕ್ಸಲ್, ಉಗ್ರವಾದಿ ಹಾಗೂ ಹವಾಲಾ ಜಾಲಗಳು ನಗದನ್ನು ಹೊಸತಾಗಿಸಿಕೊಳ್ಳುವ ಯತ್ನದಲ್ಲಿರುವುದು ಸ್ಪಷ್ಟ. ಇದೇ ಈಸ್ಟರ್ನ್ ಕಮಾಂಡಿನ ಹಳೇ ಟ್ವೀಟ್ ಗಳನ್ನು ಗಮನಿಸಿದರೆ, ನವೆಂಬರ್ 24ರಂದು ಮಣಿಪುರದಲ್ಲಿ ₹44 ಲಕ್ಷಗಳ ಹಳೆ ನೋಟುಗಳನ್ನು ವಶಪಡಿಸಿಕೊಂಡಿದ್ದಾಗಿ ಪ್ರಕಟಿಸಿತ್ತು. ಬಹುಶಃ ನೋಟು ಅಮಾನ್ಯದ ನಂತರ ಹಣದ ಸುತ್ತದ ಹವಾಲಾ ವ್ಯವಹಾರಗಳ ತಡೆಗೂ ಇಂಥ ಕ್ರಮ ಆಗಿದ್ದಿರಬಹುದು. ಪಶ್ಚಿಮ ಬಂಗಾಳದ ಪೊಲೀಸರಂತೂ ಈ ನಿಟ್ಟಿನಲ್ಲಿ ಏನೂ ಮಾಡುವ ಸ್ಥಿತಿಯಲ್ಲಿಲ್ಲ. ಕಾರಣ ಏನೆಂಬುದು ಮಮತಾರ ವೀರಾವೇಶ ಗಮನಿಸುತ್ತಿರುವವರಿಗೆ ಅರ್ಥವಾಗಿರುತ್ತದೆ.

ನೋಟು ಅಮಾನ್ಯ ನೀತಿ ವಿರೋಧದಲ್ಲಿ ಬಿಹಾರದ ಜೆಡಿಯು ತಮ್ಮ ಜತೆಗಿಲ್ಲ ಎಂಬ ಕಾರಣಕ್ಕೆ ಮಮತಾ ಬ್ಯಾನರ್ಜಿ ಪರೋಕ್ಷವಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರರನ್ನು ವಿಶ್ವಾಸದ್ರೋಹಿ ಎಂದಿದ್ದರಲ್ಲ… ಅದಕ್ಕೆ ಪ್ರತಿಯಾಗಿ ಜೆಡಿಯುದ ಹರಿವಂಶ ನಾರಾಯಣ ಸಿಂಗ್ ಅವರು ಹೇಳಿರುವುದು ಇಲ್ಲಿ ಗಮನಾರ್ಹ. ‘ಪೂರ್ವ ಭಾರತದಲ್ಲಿ ಸುಮಾರು 200 ಕಂಪನಿಗಳು ಕಾಳಧನ ದಂದೆಯಲ್ಲಿ ತೊಡಗಿಸಿಕೊಂಡಿವೆ. ಆ ಪೈಕಿ ಹೆಚ್ಚಿನವುಗಳ ಕಾರಸ್ಥಾನ ಇರುವುದೇ ಪಶ್ಚಿಮ ಬಂಗಾಳದಲ್ಲಿ.’ ಎಂದು ಹರಿಹಾಯ್ದಿದ್ದಾರವರು.

ಇಂಥ ಯಾವುದೋ ಕಾರಸ್ಥಾನದ ಗುರಿಯೂ ಸೇನೆಗಿದ್ದಿರಬಹುದು ಹಾಗೂ ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ಅದು ಬಹಳ ಮುಖ್ಯವಾಗಿದ್ದಿರಬಹುದು ಎಂದು ನಾವು ಸೇನಾ ನಡೆಯನ್ನು ಅರ್ಥೈಸಿಕೊಳ್ಳಬಹುದು.

ಇಷ್ಟಾಗಿಯೂ, ಸೇನೆ ಇಂಥ ಕಾರ್ಯಾಚರಣೆಗೆ ಮೊದಲು ರಾಜ್ಯ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು ಅಂತ ವಾದಿಸುವುದಕ್ಕೆ ಖಂಡಿತ ಜಾಗವಿದೆ. ಆದರೆ, ಮೋದಿ ಸರ್ಕಾರ ಸೇನೆಯನ್ನು ಬಳಸಿಕೊಂಡು ಕ್ಷಿಪ್ರಕ್ರಾಂತಿ ನಡೆಸುತ್ತಿದೆ ಎಂದೆಲ್ಲ ಬೊಬ್ಬೆ ಹೊಡೆಯುವುದು, ಈವರೆಗೆ ಅಂಥ ಯಾವ ಕಳಂಕವೂ ಇಲ್ಲದ ಭಾರತೀಯ ಸೇನೆಯನ್ನು ಒಂದೇ ಮಾತಿನಲ್ಲಿ ಕೀಳಂದಾಜು ಮಾಡಿದಂತಾದೀತು.

ಅಂದಹಾಗೆ, ಈಗ ಸೇನಾಕ್ರಾಂತಿಯ ಭಯ ವ್ಯಕ್ತಪಡಿಸುತ್ತಿರುವ ಮಮತಾ ಬ್ಯಾನರ್ಜಿಯವರು ಒಂದು ದಿನದ ಹಿಂದಷ್ಟೆ, ವಿಮಾನದಲ್ಲಿ ಇಂಧನ ಕಡಿಮೆಯಾಗಿದ್ದರೂ ಇಳಿಯಗೊಡದೇ ತಮ್ಮನ್ನು ಸಾಯಿಸುವ ಸಂಚು ನಡೆದಿತ್ತು ಎಂದು ಆರೋಪಿಸಿದ್ದರು. ಅದು ಸಂಸತ್ತಿನಲ್ಲೂ ಗದ್ದಲಕ್ಕೂ ಕಾರಣವಾಯಿತು.

ಆದರೆ ಇಂಡಿಗೊ ವಿಮಾನ ಸಂಸ್ಥೆ ಸ್ಪಷ್ಟವಾಗಿ ಪ್ರಕಟಣೆ ನೀಡಿದ್ದಿಷ್ಟು- ‘ಪಟ್ನಾದಿಂದ ಕೊಲ್ಕತ್ತಾಕ್ಕೆ ಹೋದ ವಿಮಾನ ಕೋಲ್ಕತ್ತಾದಲ್ಲಿ ಸಹಜ ಸ್ಥಿತಿಯಲ್ಲೇ ಭೂಸ್ಪರ್ಶ ಮಾಡಿದೆ. ವಿಳಂಬವಾಗಿದ್ದು ಸಂಚಾರ ದಟ್ಟಣೆ ಕಾರಣದಿಂದ. ವಿಮಾನದಲ್ಲಿ ಇಳಿದ ನಂತರವೂ 8 ನಿಮಿಷಕ್ಕಾಗುವ ಇಂಧನವಿದೆ ಎಂದು ಪೈಲಟ್ ತಿಳಿಸಿದ್ದಾರೆ. ಇದನ್ನು ತಪ್ಪಾಗಿ ಅರ್ಥಮಾಡಿಕೊಂಡ ಏರ್ ಟ್ರಾಫಿಕ್ ಕಂಟ್ರೋಲರ್, ಎಂಟೇ ನಿಮಿಷಕ್ಕೆ ಸಾಕಾಗುವ ಇಂಧನ ಇದೆ ಎಂದು ಅರ್ಥ ಮಾಡಿಕೊಂಡರು. ನಮ್ಮ ಪೈಲಟ್ ಯಾವ ಹಂತದಲ್ಲೂ ತುರ್ತು ಪರಿಸ್ಥಿತಿ ಘೋಷಿಸಿಲ್ಲ. ವಿಮಾನ ಇಳಿಯುತ್ತಲೇ ಇಂಧನ ಸಿದ್ಧವಾಗಿದ್ದಿದ್ದಕ್ಕೆ ಕಾರಣ ವಿಮಾನವು ತಕ್ಷಣದಲ್ಲೇ ಮತ್ತೊಂದು ಸವಾರಿ ಹೊರಡುವುದಿತ್ತು.’

ಹಾಗಾದರೆ ಬಂಗಾಳದ ದೀದಿಯೇಕೆ ತಮ್ಮನ್ನು ಯಾರೋ ವಿಮಾನದಲ್ಲೇ ಮುಗಿಸಲು ಹೊಂಚು ಹಾಕಿದ್ದಾರೆ, ಕ್ಷಿಪ್ರಕ್ರಾಂತಿ ಮಾಡಿ ತಮ್ಮ ಸರ್ಕಾರವನ್ನೇ ತೆಗೆಯಲಿದ್ದಾರೆ ಅಂತೆಲ್ಲ ಮಾನಸಿಕ ದಿಗಿಲಿಗೆ ಬಿದ್ದಿದ್ದಾರೆ? ನೋಟು ಅಮಾನ್ಯದಿಂದ ಇನ್ನಿಲ್ಲದಂತೆ ವಿಚಲಿತವಾಗಿರುವ ರಾಜಕೀಯ ನೇತಾರರಲ್ಲಿ ಸರಳತೆಯ ದೀದಿಯೇ ಮುಂಚೂಣಿಯಲ್ಲಿದ್ದಾರೇಕೆ?

Leave a Reply