ದೀದಿಯ ಸೇನಾ ಸಂಚು ಸಿದ್ಧಾಂತವನ್ನು ದಾಖಲೆ ಸಮೇತ ಅಲ್ಲಗಳೆಯಿತು ಸೈನ್ಯ, ಈಗುಳಿದಿರುವ ಪ್ರಶ್ನೆ- ಯೋಧರನ್ನು ಹಣ ವಸೂಲಿ ವ್ಯಕ್ತಿಗಳಂತೆ ಬಣ್ಣಿಸಿದ ತೃಣಮೂಲದ ನೀಚತನದ ಮಟ್ಟವೆಷ್ಟು?

ಡಿಜಿಟಲ್ ಕನ್ನಡ ಟೀಮ್:

ಪಶ್ಚಿಮ ಬಂಗಾಳದಲ್ಲಿ ಸೇನೆ ಸುಂಕ ವಸೂಲಿ ಮಾಡುತ್ತಿತ್ತು ಎಂಬ ನಿಂದನಾತ್ಮಕ ಮಾತುಗಳನ್ನು ನಾವು ಖಂಡಿಸುತ್ತೇವೆ. ಇದು ಸೇನೆಯು ಪ್ರತಿವರ್ಷ ನಡೆಸಿಕೊಂಡುಬಂದಿರುವ ಅಭ್ಯಾಸ. ಹಿಂದಿನ ವರ್ಷ ನವೆಂಬರ್ 19-20ರ ದಿನಾಂಕದಂದು ಇವತ್ತು ಯಾವೆಲ್ಲ ಜಾಗದಲ್ಲಿ ನಡೆಸಿದ್ದೇವೋ ಅಂಥದೇ ತಪಾಸಣೆಗಳನ್ನು ನಡೆಸಿದ್ದೇವೆ. ಈ ವರ್ಷ ನವೆಂಬರ್ 28-29ರಂದು ತಪಾಸಣೆ ನಿಗದಿಯಾಗಿತ್ತು. ಆದರೆ ಬಂದ್ ಇರುವ ಕಾರಣದಿಂದ ಆ ದಿನಾಂಕವನ್ನು ಬದಲಿಸುವಂತೆ ಸ್ಥಳೀಯ ಪೊಲೀಸರೇ ಕೇಳಿಕೊಂಡಿದ್ದರು ಪತ್ರಿಕಾಗೋಷ್ಟಿಯಲ್ಲಿ ಇಂಥ ಸ್ಪಷ್ಟ ಮಾತುಗಳ ಮೂಲಕ ಈಸ್ಟರ್ನ್ ಕಮಾಂಡಿನ ಕಾರ್ಯಾಚರಣೆ ಮುಖ್ಯಸ್ಥರು ಪಶ್ಚಿಮ ಬಂಗಾಳ ಸರ್ಕಾರದ ಆರೋಪವನ್ನು ಹೊಡೆದುಹಾಕಿದ್ದಾರೆ.

ಇಷ್ಟೇ ಅಲ್ಲ, ಕೊಲ್ಕತಾ ಪೊಲೀಸರೊಂದಿಗೆ ಈ ನಿಟ್ಟಿನಲ್ಲಿ ಆಗಿರುವ ಪತ್ರ ವ್ಯವಹಾರಗಳ ದಾಖಲೆಗಳನ್ನೂ ಸೇನೆ ಬಿಡುಗಡೆ ಮಾಡಿದೆ. ಅಲ್ಲಿಗೆ ಸೇನೆಯಿಂದ ನಮಗೆ ಸೂಚನೆಗಳೇ ಇರಲಿಲ್ಲ ಎಂಬ ಕೊಲ್ಕತಾ ಪೊಲೀಸರ ಹೇಳಿಕೆಗಳು ಮಕಾಡೆ ಬಿದ್ದಿವೆ.

ಅತ್ತ ಲೋಕಸಭೆಯಲ್ಲಿ ಸಹ ರಕ್ಷಣಾ ಮಂತ್ರಿ ಮನೋಹರ ಪಾರಿಕರ್ ಇದೇ ವಿವರಣೆ ನೀಡಿ, ಸೇನಾಕ್ರಾಂತಿಯ ಆರೋಪವು ರಾಜಕೀಯ ಹತಾಶೆಯಿಂದ ಕೂಡಿದ್ದಲ್ಲದೇ ಮತ್ತೇನಲ್ಲ ಎಂದು ಪ್ರತಿಪಕ್ಷಗಳನ್ನು ಖಂಡಿಸಿದರು.

ಕಾಂಗ್ರೆಸ್, ಬಿಎಸ್ಪಿ, ತೃಣಮೂಲ ಇತ್ಯಾದಿ ಪಕ್ಷಗಳು ಮಾತ್ರ ಇಂದು ಸಂಸತ್ತಿನಲ್ಲಿ ಗದ್ದಲ ಎಬ್ಬಿಸುವುದಕ್ಕೆ ಹೊಸ ವಿಷಯ ಸಿಕ್ಕಿತೆಂಬಂತೆ ಘೋಷಣೆಗಳನ್ನು ಕೂಗುತ್ತಿದ್ದದ್ದು ಕಂಡುಬಂತು.

ಅದೇನೇ ಇದ್ದರೂ ಸೇನೆ ಮಾತ್ರ ತನ್ನ ಸ್ಪಷ್ಟ ಮಾತುಗಳ ಮೂಲಕ ಮಮತಾ ಬ್ಯಾನರ್ಜಿಯವರ ಸಂಚಿನ ಸಿದ್ಧಾಂತವನ್ನು ಒಡೆದು ಹಾಕಿದೆ.

ಇದು ಸೇನಾ ನಿಯೋಜನೆ ಅಲ್ಲವೇ ಅಲ್ಲ. ಹಿಂದಿನ ವರ್ಷ ಎಷ್ಟು ಸಂಖ್ಯೆಯ ಯೋಧರು ಇಂಥ ತಪಾಸಣೆ ನಡೆಸಿದ್ದರೋ ಅಷ್ಟೇ ಸಂಖ್ಯೆಯಲ್ಲಿ ಈ ಬಾರಿಯೂ ನಡೆಸಲಾಗಿದೆ. ಅಲ್ಲದೇ ಈ ಯೋಧರು ನಿರಾಯುಧರಾಗಿದ್ದರು. ಭಾರಿ ವಾಹನಗಳ ಪ್ರವೇಶ-ನಿರ್ಗಮನಗಳನ್ನು ಲೆಕ್ಕ ಮಾಡುವ ಈ ಪ್ರಕ್ರಿಯೆ ಮೊದಲಿನಿಂದಲೂ ನಡೆದು ಬಂದಿದೆ. ಲೆಕ್ಕಕ್ಕೆ ಸಿಕ್ಕ ವಾಹನಗಳಿಗೆ ಸ್ಟಿಕ್ಕರ್ ಅಂಟಿಸಿದ್ದು ಏಕೆಂದರೆ ಮತ್ತೆ ಮುಂದಿನ ಪೋಸ್ಟಿನಲ್ಲಿರುವವರಿಗೆ ತಪಾಸಣೆ ಅಗತ್ಯವಿಲ್ಲ ಎಂದು ಸೂಚಿಸುವುದಕ್ಕೆ ಮಾತ್ರ ಎಂದೆಲ್ಲ ಎಳೆ ಎಳೆಯಾಗಿ ವಿವರಿಸಿದ್ದಾರೆ ಸೇನಾ ವಕ್ತಾರರು.

ಈ ತಪಾಸಣೆ ಹಾಗೂ ಮಾಹಿತಿ ಕಲೆ ಹಾಕುವಿಕೆಯ ನಿಖರ ಉದ್ದೇಶವೇನು ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ಆ ಬಗ್ಗೆ ನಾವು ವಿವರ ನೀಡುವಂತಿಲ್ಲ ಎಂದಿದ್ದಾರೆ ವಕ್ತಾರರು. ಯುದ್ಧದಂಥ ತುರ್ತು ಪರಿಸ್ಥಿತಿಯಲ್ಲಿ ನಾಗರಿಕರ ವಾಹನಗಳ ಲಭ್ಯತೆ ಎಷ್ಟಿದೆ ಎಂದು ತಿಳಿದುಕೊಳ್ಳುವುದಕ್ಕೆ ಈ ಅಭ್ಯಾಸ ಎಂದರಲ್ಲದೇ ವಿವರಗಳಿಗೆ ನಿರಾಕರಿಸಿದರು.

ಇದೇ ವರ್ಷ ಸೆಪ್ಟೆಂಬರ್ 26ರಿಂದ ಮತ್ತು ಅಕ್ಟೋಬರ್ 1ರವರೆಗೆ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಗಳಲ್ಲೂ ಇದೇ ಅಭ್ಯಾಸ ನಡೆಸಲಾಗಿದೆ ಎಂದು ಈಸ್ಟರ್ನ್ ಕಮಾಂಡಿನ ಮೇಜರ್ ಜನರಲ್ ಸುನಿಲ್ ಯಾದವ್ ವಿವರಣೆ ನೀಡಿದ್ದಾರೆ.

ಸೇನೆಗೇನು ಸುಂಕ ಎತ್ತುವ ಅಧಿಕಾರವಿದೆಯೇ ಎಂದು ತೃಣಮೂಲ ಕಾಂಗ್ರೆಸ್ ವಕ್ತಾರ ಡೆರಿಕ್ ಒಬ್ರೆನ್ ಕೇಳಿದ್ದರು. ಇಂಥ ಆರೋಪ ನೋವು ಮತ್ತು ಆಕ್ರೋಶ ಉಂಟುಮಾಡಿರುವುದು ಸೇನಾ ವಕ್ತಾರರ ಪತ್ರಿಕಾಗೋಷ್ಟಿ ಪ್ರತಿಕ್ರಿಯೆಯಲ್ಲಿ ಬಹಳ ಮುಖ್ಯವಾಗಿ ಕಂಡುಬಂತು. ಸೇನೆ ಹಣ ವಸೂಲಿ ಮಾಡುತ್ತಿತ್ತೆಂಬ ಮಾತುಗಳನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ ಎಂದಿದ್ದಾರವರು.

ಉಳಿದಿದ್ದೇನೇ ಇರಲಿ, ಮೋದಿ ವಿರೋಧದ ತಮ್ಮ ರಾಜಕಾರಣಕ್ಕೆ ಸೇನೆಯ ಕರ್ತವ್ಯಕ್ಕೆ ಹಣ ವಸೂಲಿಯ ಬಣ್ಣ ಬಳಿದ ತೃಣಮೂಲ ಕಾಂಗ್ರೆಸ್ಸಿಗರ ನೀಚತನದ ಮಟ್ಟ ಅದೆಷ್ಟಿರಬಹುದು?

Leave a Reply