ಮೈಸೂರು ಮಲ್ಲಿಗೆ- ಕವಿತೆಯಾಗಿ ಹರಿದು, ಸಿನಿಮಾವಾಗಿ ಅರಳಿ ಮತ್ತೆ ಅಕ್ಷರರೂಪವಾಗುತ್ತಿರುವ ಬೆರಗಿನ ಕ್ಷಣ

author-ssreedhra-murthyಜಾಗತಿಕವಾಗಿ ಸಿನಿಮಾ ಪ್ರಬಲ ವಾಣಿಜ್ಯ ಮಾಧ್ಯಮವಾಗಿ ಬೆಳೆಯುತ್ತಿರುವಂತೆಯೇ ಅಕಾಡಮಿಕ್ ಆಗಿ ಕೂಡ ಗಂಭೀರ ಅಧ್ಯಯನಕ್ಕೆ ಒಳ ಪಡುತ್ತಿದೆ.  ಕರ್ನಾಟಕದಲ್ಲಿ ಕೂಡ ಅಕಾಡಮಿಕ್ ಅಧ್ಯಯನ ನಿಧಾನವಾಗಿಯಾದರೂ ಬೆಳವಣಿಗೆ ಕಾಣುತ್ತಿದೆ. ಇದಕ್ಕೆ ಪೂರಕವಾಗುವಂತೆ  ಚಿತ್ರಕಥೆಗಳು ಪುಸ್ತಕರೂಪದಲ್ಲಿ ಪ್ರಕಟವಾಗುತ್ತಿರುವುದು ಒಳ್ಳೆಯ ಬೆಳವಣಿಗೆ . ಹೊಸ ಸೇರ್ಪಡೆಯಾಗಿ ಇವತ್ತು(ಡಿಸಂಬರ್ 2) ಟಿ.ಎಸ್.ನಾಗಾಭರಣ ಅವರ ನಿರ್ದೇಶನದ ‘ಮೈಸೂರು ಮಲ್ಲಿಗೆ’ಯ ಚಿತ್ರಕಥೆ ಪುಸ್ತಕ ರೂಪದಲ್ಲಿ ಪ್ರಕಟವಾಗುತ್ತಿದೆ. ಇದರಲ್ಲೊಂದು ವಿಶೇಷವಿದೆ. ಈ ಚಿತ್ರ ಪ್ರೇರಣೆ ಪಡೆದಿದ್ದು ಅಕ್ಷರದ ನೆಲೆಯಿಂದಲೇ! ಕೆ.ಎಸ್.ನರಸಿಂಹ ಸ್ವಾಮಿಯವರ  ‘ಮೈಸೂರು ಮಲ್ಲಿಗೆ’ ಆಧುನಿಕ ಕನ್ನಡ ಕಾವ್ಯದ ಅತ್ಯಂತ ಜನಪ್ರಿಯ ಕಾವ್ಯಗಳಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವಂತಹದು.  1942ರಲ್ಲಿ ಬೆಳಕು ಕಂಡ, ನಾಲ್ಕೈದು ಅನುವಾದಿತ ಕವನಗಳೂ ಸೇರಿ 49 ಕವಿತೆಗಳಿರುವ ಈ ಸಂಕಲನ ಕನ್ನಡ ಮನಸ್ಸಿನ ಸಾಂಸ್ಕೃತಿಕ ದಾಖಲೆ. ಮುಕ್ಕಾಲು ಶತಮಾನ ಕಳೆಯುತ್ತಾ ಬಂದರೂ ಮೈಸೂರು ಮಲ್ಲಿಗೆಯ ಸೊಬಗು ಇನ್ನೂ ಬಾಡಿಲ್ಲ. ಬಾಡುವಂತೆಯೂ ಇಲ್ಲ. ಇಂತಹ ಕೃತಿ ತೆರೆಯ ಮೇಲೆ ಬಂದಾಗ ಒಂದು ಡಾಕ್ಯುಮೆಂಟರಿ ಶೈಲಿಯಲ್ಲಿ  ಕವಿಯ ಜೀವನದ ಕಥಾನಕವಾಗಿ ಬರುತ್ತದೆ (ಮೈಸೂರು ಮಲ್ಲಿಗೆ ನಾಟಕ ರೂಪವನ್ನು ಪಡೆದಾಗ ಇಂತಹ ಸಾಧ್ಯತೆ ಕಂಡಿರುವುದನ್ನು ಇಲ್ಲಿ ಗಮನಿಸ ಬಹುದು) ಇಲ್ಲವೆ ಕವಿತೆಗಳ ಜನಪ್ರಿಯತೆಯನ್ನು ನೆಚ್ಚಿಕೊಂಡು ಅದಕ್ಕೆ  ದೃಶ್ಯರೂಪವನ್ನು ಜೋಡಿಸಿಕೊಂಡಿರುತ್ತದೆ. ಭಾರತದಲ್ಲಿ ಮಾತ್ರವಲ್ಲ ಜಗತ್ತಿನೆಲ್ಲೆಡೆ ಆಗಿರುವುದು ಹೀಗೆಯೇ. ಸಾಹಿತ್ಯ ಮತ್ತು ಸಿನಿಮಾ ನಡುವಿನ ಸಂಬಂಧ ಸಂಕೀರ್ಣವಾಗುವುದು ಇಂತಹ ನೆಲೆಯಲ್ಲಿಯೇ. ಆದರೆ ‘ಮೈಸೂರು ಮಲ್ಲಿಗೆ’ ಚಲನಚಿತ್ರ ಈ ಎರಡೂ ಜನಪ್ರಿಯ ಹಾದಿಗಳನ್ನೂ ಬಿಟ್ಟು ಕವಿತೆಗೆ ಹೊಂದುವ ಸ್ವತಂತ್ರ ಕಥಾನಕವೊಂದನ್ನು ರೂಪಿಸಿಕೊಂಡಿತ್ತು. ಹೀಗಿದ್ದರೂ ಕವಿತೆ ಕಟ್ಟಿಕೊಟ್ಟ ಸಾಂಸ್ಕೃತಿಕ ಲೋಕ ಚಿತ್ರದ ಮೂಲಕ ಹೆಚ್ಚು ಜೀವಂತವಾಗಿತ್ತು.’ ಮೈಸೂರು ಮಲ್ಲಿಗೆ’ಯ ಚಿತ್ರಕಥೆ ಪುಸ್ತಕರೂಪವನ್ನು ಪಡೆಯುತ್ತಿರುವ ಕುರಿತು ನನಗಿರುವ ಉತ್ಸಾಹದ ಕಾರಣ ಕೂಡ ಇದೇ.

‘ಮೈಸೂರು ಮಲ್ಲಿಗೆ’ ಚಲನಚಿತ್ರ ತೆರೆ ಕಂಡಿದ್ದು 1992ರಲ್ಲಿ. ಅಷ್ಟು ಹೊತ್ತಿಗೆ ಕವನ ಸಂಕಲನ ಬಂದು ಐವತ್ತು ವರ್ಷಗಳು ಕಳೆದಿದ್ದವು. ಅಲ್ಲಿನ ಕವಿತೆಗಳು ಜನ ಮಾನಸದಲ್ಲಿ ಭದ್ರಸ್ಥಾನವನ್ನು ಪಡೆದುಕೊಂಡಿದ್ದವು. ಇದರ ಜೊತೆಗೆ ಈ ಕಾವ್ಯಪ್ರಪಂಚ ಕಟ್ಟಿಕೊಟ್ಟ ರಮ್ಯಲೋಕ ಅಂದಿನ ತಲ್ಲಣದ ಕಾಲಕ್ಕೆ ಅಪ್ರಸ್ತುತವೆನ್ನಿಸ ಬಹುದಾಗಿತ್ತು. ‘ಹನ್ನೆರಡು ತುಂಬಿಹುದು ಮದುವೆಯಿಲ್ಲ’ ಎನ್ನುವ ಬಾಲ್ಯ ವಿವಾಹದ ಆಚರಣೆ, ಒಳಮನೆಯಲಿ ‘ನೀರಾಯಿತು’ ಎನ್ನುವ ಸಾಂಪ್ರದಾಯಿಕತೆ, ಬಾಗಿಲಿಗೆ ಬಂದು ‘ಒಳಗೆ ಬರಲಪ್ಪಣೆಯೇ’ ಎನ್ನುವ ಬಳೆಗಾರ, ಅಕ್ಕಿಯಾನೆ ಉಪ್ಪಿನಾನೆಯ ಪದ್ಧತಿಗಳು ಎಲ್ಲವೂ ಹಳೆಯದಾಗಿದ್ದವು. ಇದರ ಜೊತೆಗೆ ಕವಿತೆಗಳು ಕಟ್ಟಿಕೊಟ್ಟಿರುವ ‘ಕಥೆಯ’ ಹರಹು ಇನ್ನೂ ಚಿಕ್ಕದು.  ಅಕ್ಕಪಕ್ಕದ ಹಳ್ಳಿಗಳಾದ ನವಿಲೂರು ಹೊನ್ನೂರು, ನವಿಲೂರಿನ ಶ್ಯಾನುಭೋಗರು, ಅವರ ಮಗಳು ಪದ್ಮ, ಅವಳ ತಂಗಿ ತುಂಗಾ ಪದ್ಮಾಳನ್ನು ಮದುವೆಯಾಗುವ ಹೊನ್ನೂರಿನ ಹೆಸರಿಲ್ಲದ ಶಾಲಾಶಿಕ್ಷಕ ಇವಿಷ್ಟೇ ಪುನರಾವರ್ತಿತವಾಗುವ ವಿವರಗಳು. ಅಪರೂಪಕ್ಕೊಮ್ಮೆ ಬಳೆಗಾರ ಚೆನ್ನಯ್ಯ, ಹೂವಿನ ಚಂದಮ್ಮನಂತಹ ಪಾತ್ರಗಳು ಬರುತ್ತವೆ. ಎಲ್ಲೂ ಕ್ರಿಯಾಶೀಲ ಕಥೆ ಎನ್ನುವುದೇ ಇಲ್ಲ. ಇದರ ಜೊತೆಗೆ ಬೇಂದ್ರೆಯವರು ಗುರುತಿಸಿದಂತೆ ‘ಇಲ್ಲಿನ ಲಾವಣ್ಯವು ಅಪ್ಸರೆಯ ಸೊಬಗಿನಂತೆ ಈ ಮಣ್ಣಿನದಲ್ಲ’ ಎನ್ನಿಸಿ ಬಿಟ್ಟಿತ್ತು.  ಹೀಗಾಗಿ ಇದನ್ನು ಸಿನಿಮಾವಾಗಿಸುವುದು ಕಥೆಯೇ ಇಲ್ಲದ ಅನುಭವಕ್ಕೆ ಜೀವ ಕೊಡುವಂತಹದಾಗಿತ್ತು.. ಒಂದು ರೀತಿಯಲ್ಲಿ ಇದನ್ನು ಚಲನಚಿತ್ರವಾಗಿಸಲು ಹೊರಟಿದ್ದ ಶ್ರೀಹರಿ ಖೋಡೆಯವರು ದೊಡ್ಡ ರಿಸ್ಕ್ ತೆಗೆದುಕೊಂಡಿದ್ದರು.

ಈ ಸವಾಲನ್ನು ಒಪ್ಪಿಕೊಂಡ ನಾಗಾಭರಣ ಕಥಾನಕವನ್ನು  ಸ್ವಾತಂತ್ರ್ಯ ಪೂರ್ವ ಕಾಲಕ್ಕೆ  ಹೊಂದಿಸಿಕೊಂಡರು. ಕವಿತೆಗಳು ರಚನೆಯಾಗಿದ್ದೂ ಕೂಡ ಇದೇ ಕಾಲಘಟ್ಟದಲ್ಲಾದ್ದರಿಂದ ಒಳಸೂಚನೆಗಳು ಇಲ್ಲಿ ಬಳಕೆಯಾದವು. ಸ್ವಾತಂತ್ರ್ಯ ಚಳವಳಿಯಲ್ಲಿ ಶ್ಯಾನುಭೋಗರು ಬ್ರಿಟಿಷ್ ಸರ್ಕಾರದ ಪರವಾಗಿಯೂ ಮತ್ತು ಶಾಲಾ ಶಿಕ್ಷಕರು ಚಳುವಳಿಯ ಪರವಾಗಿಯೂ ಇದ್ದರು ಎನ್ನುವುದು ಚಾರಿತ್ರಿಕ ಸತ್ಯವಾದ್ದರಿಂದ ಕವಿತೆಗಳ ಕ್ರಿಯಾಶರೀರಕ್ಕೆ ಗಟ್ಟಿತನ ದೊರಕಿತು. ನನಗೆ ಬಹಳ ಇಷ್ಟವಾದ ಅಂಶವೆಂದರೆ ಕೆ.ಎಸ್.ನರಸಿಂಹ ಸ್ವಾಮಿಯವರ ಕವಿತೆಗಳಲ್ಲಿ ಬಹಳ ಚಿಕ್ಕ ವಿವರವಾಗಿ ಬರುವ ಬಳೆಗಾರ ಚೆನ್ನಯ್ಯ ಚಿತ್ರದಲ್ಲಿ ಪ್ರಧಾನ ಪಾತ್ರವಾಗಿ ಬೆಳೆದ ರೀತಿ. ಅವನು ಪದ್ಮಾ ಮತ್ತು ಮಂಜುನಾಥರ ನಡುವಿನ ಪ್ರೇಮದ ಸೂತ್ರಧಾರ ಮಾತ್ರವಲ್ಲ ಸ್ವಾತಂತ್ರ್ಯ ಚಳುವಳಿಯಲ್ಲಿಯೂ ಸಕ್ರಿಯ. ಇದರಿಂದ ‘ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹನು’ ಕವಿತೆ ಹೊಸ ಅರ್ಥ ಪರಂಪರೆಯನ್ನೇ ಪಡೆದುಕೊಳ್ಳುತ್ತದೆ. ಇದರಂತೆ ‘ರಾಯರು ಬಂದರು’ ‘ಒಂದಿರಳು ಕನಸಿನಲಿ’ ನಂತಹ ಜನಪ್ರಿಯ ಗೀತೆಗಳು  ಚಿತ್ರಶಿಲ್ಪದಲ್ಲಿ ಕಥಾನಕದ ಭಾಗವಾಗಿಯೇ ಬೆರೆತಿರುವ ರೀತಿ ಅನನ್ಯವೆನ್ನಿಸುವಂತಿದೆ. ಕವಿತೆಯ ಪಿಸುಮಾತುಗಳು ಮುಕ್ಕಾಗದೆ ಉಳಿದಿರುವುದೇ ನನ್ನ ಮಟ್ಟಿಗೆ ಚಿತ್ರದ ಬಹು ದೊಡ್ಡ ಸಾಧನೆ. ಇದರ ಜೊತೆಗೆ ಬಿ.ಸಿ. ಗೌರಿಶಂಕರ್ ಛಾಯಾಗ್ರಹಣ, ಸಿ. ಅಶ್ವತ್ಥ್ ಸಂಗೀತ ಮತ್ತು ಸುಧಾರಾಣಿಯವರ ಅಭಿನಯ ಚಿತ್ರದ ಸಾಧ್ಯತೆಗಳನ್ನು ವಿಸ್ತರಿಸಿದ್ದವು.

sudharani

1942 ರಲ್ಲಿ ‘ಮೈಸೂರು ಮಲ್ಲಿಗೆ’ ಪ್ರಕಟವಾದರೂ 1972 ರವರೆಗೆ ಅದರ ಕುರಿತು ಅವಲೋಕನ, ವಿಮರ್ಶೆ ಯಾವುದೂ ನಡೆಯಲಿಲ್ಲ. ಈ ಮೂವತ್ತು ವರ್ಷಗಳಲ್ಲಿ ಅದು ಅಪಾರ ಜನಪ್ರಿಯತೆಯನ್ನು ಪಡೆಯಿತು. ಅನೇಕ ಗಾಯಕರೂ ಆಗ ತಾನೆ ರೂಪುಗೊಂಡಿದ್ದ ಆಕಾಶವಾಣಿಯ ಮೂಲಕ ಕವಿತೆಗಳನ್ನು ಜನರಿಗೆ ತಲುಪಿಸಿದರು. 1972 ರಲ್ಲಿ ಕೆ.ಎಸ್.ನ ಗೌರವ ಗ್ರಂಥ ‘ಚಂದನ’ ಬಂದ ನಂತರ ಅಕಾಡಮಿಕ್ ಆಗಿ ಕೂಡ ಅದಕ್ಕೆ ಮನ್ನಣೆ ದೊರಕಿತು. ಅಕಾಡಮಿಕ್ ಮತ್ತು ಜನಪ್ರಿಯತೆ ಎರಡೂ ಸಂದ ಅಪರೂಪದ ಹೆಗ್ಗಳಿಕೆ ಮೈಸೂರ ಮಲ್ಲಿಗೆ ಕವನ ಸಂಕಲನದ್ದು. ಚಲನಚಿತ್ರ ಕೂಡ ಇದೇ ಮಾದರಿಯಲ್ಲಿ ಸಾಗಿತು. 25 ವಾರಗಳ ಯಶಸ್ವಿ ಪ್ರದರ್ಶನವನ್ನು ಕಂಡಿದ್ದರ ಜೊತೆಗೆ ಐದು ರಾಜ್ಯ ಪ್ರಶಸ್ತಿ, ಮೂರು ಫಿಲಂಫೇರ್ ಬಹುಮಾನಗಳನ್ನು ಪಡೆಯಿತು. ಎಲ್ಲಕ್ಕಿಂತ ಮುಖ್ಯವಾಗಿ ಈ ಚಿತ್ರಕ್ಕಾಗಿಯೇ ಕೆ.ಎಸ್.ನರಸಿಂಹ ಸ್ವಾಮಿಯವರು ಬರೆದ ‘ಬಿಡುಗಡೆ’ ಕವಿತೆಗೆ ರಾಷ್ಟ್ರಪ್ರಶಸ್ತಿ ದೊರಕಿತು. ಕನ್ನಡ ಚಿತ್ರಗೀತೆಯೊಂದಕ್ಕೆ ರಾಷ್ಟ್ರಪ್ರಶಸ್ತಿ ಬಂದ ಮೊದಲ ಸಂದರ್ಭ ಅದು. ‘ಮೈಸೂರು ಮಲ್ಲಿಗೆ’ ಇನ್ನೊಂದು ಹೊಸ ರೂಪ ಪಡೆದು ನಮ್ಮ ಮುಂದೆ ಬಂದಿದೆ. ಅದರಲ್ಲೂ  ಸಿನಿಮಾ ಮತ್ತು ಸಾಹಿತ್ಯ ಎರಡಕ್ಕೂ ಸಹಕಾರಿಯಾಗಿ!

Leave a Reply