ಕರ್ನಾಟಕದ ಕಾಳ ಅಧಿಕಾರಿಗಳ ಮೇಲೆ ಐಟಿ ದಾಳಿ ಮಾಡಿದವರಿಗೆ ಪ್ರಧಾನಿಯಿಂದಲೇ ಅಭಿನಂದನೆ, ಒತ್ತಡಕ್ಕೆ ಮಣಿದು ಆರೋಪಿಗಳನ್ನು ಅಮಾನತುಗೊಳಿಸಿದ ರಾಜ್ಯ ಸರ್ಕಾರ, ತನ್ನದೂ ಒಂದಿರ್ಲಿ ತನಿಖೆ ಅಂತಿದೆ ಎಸಿಬಿ!

ಡಿಜಿಟಲ್ ಕನ್ನಡ ಟೀಮ್:

ನೋಟು ಅಮಾನ್ಯ ಪರ್ವದಲ್ಲಿ ಕರ್ನಾಟಕದ ಮೇಲಿನ ಗಮನ ತೀವ್ರವಾಗಿದೆ. ಕಾರಣ, ಐಟಿ ದಾಳಿಗಳು ತೀವ್ರವಾಗುತ್ತಿವೆ. ಅಂತೆಯೇ ಈಗಾಗಲೇ ಸಿಕ್ಕಿ ಹಾಕಿಕೊಂಡಿರುವ ಕಾಳಧನ ಅಧಿಕಾರಿಗಳ ಮೇಲಿನ ಪ್ರಕರಣವೂ ಮೊನಚಾಗಿದೆ.

ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಚಿಕ್ಕರಾಯಪ್ಪ, ರಾಜ್ಯ ಹೆದ್ದಾರಿ ಮುಖ್ಯಯೋಜನಾ ಅಧಿಕಾರಿ ಜಯಚಂದ್ರ ಭ್ರಷ್ಟಾಚಾರ ಹಗರಣವನ್ನು ಸಿಬಿಐ ಸ್ವಯಂ ಪ್ರೇರಿತವಾಗಿ ಕೈಗೆತ್ತಿಕೊಂಡಿದೆ. ಅಲ್ಲದೇ ಇಡೀ ವಿದ್ಯಮಾನದಲ್ಲಿ ಸ್ಫೂರ್ತಿ ತುಂಬುತ್ತಿರುವ ಅಂಶವೆಂದರೆ, ಪ್ರಧಾನಿ ನರೇಂದ್ರ ಮೋದಿಯವರು ಈ ಅತಿದೊಡ್ಡ ಕುಳಗಳಿಗೆ ಬಲೆ ಬೀಸಿ ಹಿಡಿದ ಐಟಿ ಅಧಿಕಾರಿಗಳಿಗೆ ದೂರವಾಣಿಯಲ್ಲಿ ಸಂಪರ್ಕಿಸಿ ಅಭಿನಂದಿಸಿದ್ದಾರಲ್ಲದೇ, ಯಾವ ಭೀತಿಯೂ ಇಲ್ಲದೇ ಮುನ್ನುಗ್ಗಿ- ನಿಮ್ಮೊಂದಿಗೆ ನಾನಿದ್ದೇನೆ ಎಂಬ ಸಂದೇಶ ರವಾನಿಸಿದ್ದಾರೆ ಎಂಬುದು. ದಾಳಿಯ ಮುಂಚೂಣಿಯಲ್ಲಿದ್ದ ಇಬ್ಬರು ಅಧಿಕಾರಿಗಳಿಗೆ ಪ್ರಧಾನಿ ದೂರವಾಣಿಯಲ್ಲಿ ಅಭಿನಂದಿಸಿದ್ದಾರೆನ್ನಲಾಗಿದೆ. ಇದು ಕೇವಲ ಈ ಇಬ್ಬರೇ ಅಧಿಕಾರಿಗಳಿಗಲ್ಲದೇ ಈ ಹಣಕಾಸು ಸೂಕ್ಷ್ಮ ಸಂದರ್ಭದಲ್ಲಿ ಕಾಳಧನಿಕರ ಮೇಲೆ ದಾಳಿಗೆ ಹೊರಡುವ ಎಲ್ಲ ಅಧಿಕಾರಿಗಳಿಗೂ ಸ್ಫೂರ್ತಿದಾಯಕವಾಗಿದೆ.

ಗುರುವಾರ ವರದಿಯಾದಂತೆ, ಸಿಕ್ಕ ಹಣ ₹4.6 ಕೋಟಿ ಅಲ್ಲ, ₹5.7 ಕೋಟಿ ಎಂಬುದು ತೆರಿಗೆ ಇಲಾಖೆ ಶುಕ್ರವಾರ ನೀಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟವಾಗಿದೆ. ಇದು ನಗದಿನ ವಿಷಯವಾದರೆ, ಈ ಇಬ್ಬರು ಅಧಿಕಾರಿಗಳು ಆದಾಯ ಮೂಲಕ್ಕಿಂತ ಹೆಚ್ಚಿನ ₹152 ಕೋಟಿ ಮೌಲ್ಯದ ಸಂಪತ್ತು ಹೊಂದಿರುವುದಾಗಿ ಹಾಗೂ ₹290 ಕೋಟಿ ಮೌಲ್ಯದ ಬೇನಾಮಿ ಸಂಪತ್ತು ಹೊಂದಿರುವ ಬಗ್ಗೆ ದಾಖಲೆ ಲಭ್ಯವಾಗಿರುವುದಾಗಿ ಆದಾಯ ತೆರಿಗೆ ಇಲಾಖೆ ಪ್ರಕಟಣೆ ಹೇಳಿದೆ.

ಬೇರು ಹುಡುಕುತ್ತಿರುವ ತನಿಖೆ: ಈ ಇಬ್ಬರು ಅಧಿಕಾರಿಗಳ ಬಳಿ ಅಪಾರ ಪ್ರಮಾಣದ ಹೊಸನೋಟು ಬಂದಿದ್ದು ಹೇಗೆ ಎಂಬ ಪ್ರಶ್ನೆ ಈಗ ತನಿಖೆಯನ್ನು ತಮಿಳುನಾಡಿನ ಈರೋಡ್ ಬ್ಯಾಂಕಿಗೆ ಕೊಂಡೊಯ್ದು ನಿಲ್ಲಿಸಿದೆ. ಅದಾಗಲೇ ನಾಲ್ಕು ಬ್ಯಾಂಕ್ ಅಧಿಕಾರಿಗಳಿಗೆ ನೊಟೀಸ್ ಜಾರಿಯಾಗಿದೆ. ರಾಜ್ಯದ ಗುತ್ತಿಗೆದಾರರೊಬ್ಬರು ಶೇ. 20ರ ಕಮಿಷನ್ ಆಧಾರದಲ್ಲಿ ಆ ಬ್ಯಾಂಕಿನಿಂದ ಹಳೆನೋಟಿಗೆ ಬದಲಾಗಿ ಹಣ ತರಿಸಿಕೊಟ್ಟಿದ್ದಾರೆ ಎಂಬ ಸುಳಿವು ತೆರೆದುಕೊಳ್ಳುತ್ತಿದೆ.

ಸಚಿವ ಮಹದೇವಪ್ಪ ಅವರಿಗೆ ಆಪ್ತರೆನ್ನಲಾದ ರಾಜ್ಯ ರಸ್ತೆ ಅಭಿವೃದ್ಧಿ ಯೋಜನಾ ಅಧಿಕಾರಿ ಜಯಚಂದ್ರ ಮೇಲೆ ಅನುಮಾನ ಮೂಡುವುದಕ್ಕೆ ಕಾರಣವಾಗಿದ್ದು, ನೋಟು ಅಮಾನ್ಯದ ಬೆನ್ನಲ್ಲೇ ಮಗನಿಗೆ ₹6 ಕೋಟಿ ಮೌಲ್ಯದ ಲ್ಯಾಂಬೊರ್ಗಿನಿ ಉನ್ನತ ದರ್ಜೆ ಕಾರು ಕೊಡಿಸಿದ್ದು. ಈ ಬಗ್ಗೆ ಪರಿಚಿತರು ನೀಡಿದ ಮಾಹಿತಿ ಮೇರೆಗೆ ಈ ಅಧಿಕಾರಿಯ ಪೂರ್ವಾಪರ ವಿಚಾರಣೆ ಶುರುವಾಗಿ ದಾಳಿಯವರೆಗೆ ಕೊಂಡೊಯ್ದಿತು.

ರಾಜ್ಯದ್ದೇನು ಪ್ರತಿಕ್ರಿಯೆ?: ವಿಧಾನ ಮಂಡಲ ಅಧಿವೇಶನದಲ್ಲಿ ಪ್ರತಿಪಕ್ಷಗಳು ಈ ಇಬ್ಬರು ಅಧಿಕಾರಿಗಳನ್ನು ತಕ್ಷಣಕ್ಕೆ ಅಮಾನತು ಮಾಡಬೇಕೆಂದು ಪಟ್ಟು ಹಿಡಿದವು. ಪ್ರಾರಂಭದಲ್ಲಿ ಗೃಹ ಸಚಿವ ಪರಮೇಶ್ವರ ಅವರು, ಆ ಅಧಿಕಾರ ತಮಗಿಲ್ಲ ಎಂದರಾದರೂ ನಂತರದಲ್ಲಿ ಅಮಾನತು ಆದೇಶ ನೀಡುತ್ತಿರುವುದಾಗಿ ಘೋಷಿಸಲಾಯಿತು.

ಲೋಕಾಯುಕ್ತದ ಮಹತ್ವ ಕಡಿಮೆಯಾಗಲೆಂದೇ ರೂಪಿತವಾದಂತಿರುವ ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳ ಸಹ ಈಗ ಎಚ್ಚೆತ್ತುಕೊಂಡು, ಈ ವಿಷಯದಲ್ಲಿ ತಾನೂ ತನಿಖೆ ನಡೆಸುತ್ತೇನೆಂದು ಆದಾಯ ಇಲಾಖೆಯನ್ನು ಮಾಹಿತಿಗಾಗಿ ಕೋರಿದೆ. ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳೆರಡೂ ಅದಾಗಲೇ ತನಿಖೆ ವಹಿಸಿಕೊಂಡಿವೆ.

ಶುಕ್ರವಾರವೂ ಸಿಕ್ಕವೆ ಗಂಟುಗಳು!: ಬೆಂಗಳೂರಿನಲ್ಲಿ ಕಿರಣ್ ಮತ್ತು ಕುಮಾರ್ ಎನ್ನುವವರಿಂದ ₹46 ಲಕ್ಷ ಮೌಲ್ಯದ ಹೊಸನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಮಿಷನ್ ಆಸೆಗೆ ಇವರು ಮಧ್ಯವರ್ತಿಗಳಾಗಿ ವ್ಯವಹರಿಸುತ್ತಿದ್ದರೆಂಬುದು ಸದ್ಯಕ್ಕೆ ತಿಳಿದುಬಂದಿರುವ ಮಾಹಿತಿ. ಕಾರ್ಕಳದ ಬೈಲೂರಿನಲ್ಲಿ ಆಸಿಫ್, ದೀಪಕ್ ಮತ್ತು ಇಮ್ರಾನ್ ಎಂಬುವವರಿಂದ ₹71 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ತಾವು ಬಿಸಿನೆಸ್ ಗೆ ಹಣ ಒಯ್ಯುತ್ತಿರುವುದಾಗಿ ಹೇಳಿರುವ ಈ ಮೂವರನ್ನು ಮೂರು ತಾಸುಗಳ ವಿಚಾರಣೆ ಬಳಿಕೆ ಐಟಿ ಅಧಿಕಾರಿಗಳು ಬಿಟ್ಟಿದ್ದಾರಾದರೂ, ಆದಾಯ ಮೂಲಕ್ಕೆ ದಾಖಲೆ ಒದಗಿಸುವಂತೆ ಕೇಳಿದ್ದಾರೆ. ದಾಖಲೆಗಳ ವಿಷಯ ಏನೇ ಇದ್ದರೂ ಇವರ ಬಳಿ ಇಷ್ಟು ಶೀಘ್ರವಾಗಿ ₹2000 ಮುಖಬೆಲೆಯ ನೋಟುಗಳು ದೊಡ್ಡ ಪ್ರಮಾಣದಲ್ಲಿ ಜಮೆಯಾಗಿದ್ದು ಹೇಗೆ ಎಂಬುದು ಎಲ್ಲರೂ ಕೇಳುತ್ತಿರುವ ಪ್ರಶ್ನೆ.

Leave a Reply