ಗಿನ್ನೆಸ್ ದಾಖಲೆಗೆ ಡೈನೋಸಾರ್ ಲದ್ದಿ: ಸಂಗ್ರಹಿಸುವುದು ಸುಲಭವಲ್ಲ, ಬೇಕು ಶೋಧಕ ಬುದ್ಧಿ

author-ananthramuಈಗ 2017ರ ಗಿನ್ನೆಸ್ ರೆಕಾರ್ಡ್ ಬುಕ್ ಮಾರುಕಟ್ಟೆಗೆ ಬಂದಿದೆ. ಎಂದಿನಂತೆ ಅಪರೂಪದ ದಾಖಲೆಗಳು ಪುಟ ತಿರುವಿಹಾಕಿದಂತೆಲ್ಲ ಚಪ್ಪರಿಸುವಂತೆ ಮಾಡುತ್ತವೆ. ಒಂದೊಂದೂ ಕಂಡಿರದ, ಕೇಳಿರದ ದಾಖಲೆಗಳು. ಅಮೆರಿಕದ ಮಿಚಿಗನ್‍ನ ಡೆನ್ನಿಸ್ ಡೂರ್ಲಾಂಗ್, ಜಗತ್ತಿನ ಅತಿ ಎತ್ತರದ ನಾಯಿಯ ಒಡತಿ. ನಾಯಿಯ ಹೆಸರು ಜೇಯೂಸ್, 1.11 ಮೀಟರ್ ಎತ್ತರ. ಇದು ಒಂದು ದಾಖಲೆಯಾದರೆ 56,980 ಪ್ಲಾಸ್ಟಿಕ್ ಕಪ್‍ಗಳನ್ನು ಪಿರಮಿಡ್ ರೂಪದಲ್ಲಿ ನಿಲ್ಲಿಸಿರುವ ದೆಹಲಿ ವಿಶ್ವವಿದ್ಯಾಲಯದ ಹುಡುಗರದ್ದೂ ಒಂದು ದಾಖಲೆ. ಜಗತ್ತಿನ ಉದ್ದ ಮೂಗಿನ ಮನುಷ್ಯ, ಬಳ್ಳಿಯಂತೆ ಬೆರಳಿನ ಉಗುರನ್ನು ಬೆಳೆಸಿದ ಯುವತಿ, ಅತಿ ಅಪಾಯಕಾರಿ ಇರುವೆ, 69 ಮಕ್ಕಳನ್ನು ಹೆತ್ತ ವiಹಾತಾಯಿ ಹೀಗೆ ಚಿತ್ರವಿಚಿತ್ರ ರೆಕಾರ್ಡ್‍ಗಳನ್ನು ನೀವು ಎವೆಯಿಕ್ಕದೆ ಓದಿ ‘ಎಲಾ ಇವನ ಅಥವಾ ಎಲಾ ಇವಳಾ’ ಎಂದು ಕೂತಲ್ಲೇ ಶಹಬಾಸ್‍ಗಿರಿ ಕೊಡಬಹುದು.

ಈಗ ಹೇಳಹೊರಟಿರುವುದು ಈ ಬಗೆಯ ದಾಖಲೆಗಳನ್ನಲ್ಲ. ತುಂಬ ವಿಚಿತ್ರವಾದ ಅಪರೂಪದ ದಾಖಲೆ. ಏಳು ಶತಕೋಟಿ ಜನರಲ್ಲಿ ಒಬ್ಬ ಮಾತ್ರ ಮಾಡಿರುವ ಮಹಾಸಾಧನೆ. ಈತ ಅಮೆರಿಕದ ಹವ್ಯಾಸಿ ಪಳೆಯುಳಿಕೆ ಸಂಗ್ರಹಕಾರ ಜಾರ್ಜ್ ಫ್ರಾಂಡ್‍ಸನ್.  ಕೆರೆ ಬತ್ತಿದಾಗ ನೀವು ಜೇಡಿಮಣ್ಣನ್ನು ಕೆರೆದರೆ ಅವೆಷ್ಟೋ ಬಗೆಯ ಚಿಪ್ಪುಗಳು ನಿಮ್ಮ ಕೈಸೇರಬಹುದು. ಆದರೆ ಜಗತ್ತನ್ನೇ ತಮ್ಮ ಸಾಮ್ರಾಜ್ಯ ಮಾಡಿಕೊಂಡು 24 ಕೋಟಿ ವರ್ಷಗಳ ಹಿಂದಿನಿಂದ 6.5 ಕೋಟಿ ವರ್ಷಗಳ ಹಿಂದಿನವರೆಗೆ ಆಳಿ, ಅಳಿದುಹೋದ ಭಯಂಕರ ಜೀವಿಗಳಾದ ಡೈನೋಸಾರ್ ಪಳೆಯುಳಿಕೆಗಳನ್ನು ಹುಡುಕುವುದು ಸುಲಭವಲ್ಲ. ಅಮೆರಿಕದ ಮಾಂಟಾನ, ಅತ್ತ ಸೈಬೀರಿಯ, ಇತ್ತ ಗುಜರಾತಿನ ಖಚ್, ಗೋದಾವರಿ ಕಣಿವೆ, ಅತ್ತ ಮಂಗೋಲಿಯ ಗೋಬಿ ಮರುಭೂಮಿ ಇವೆಲ್ಲ ಅವುಗಳ ನೆಲೆಯಾಗಿದ್ದವು. ಅವುಗಳ ಅಸ್ಥಿಪಂಜರಗಳನ್ನು ತಂದು ಅವುಗಳ ಅಂಗಾಂಗವನ್ನು ಅದೇ ಜಾಗದಲ್ಲಿ ವೈಜ್ಞಾನಿಕವಾಗಿ ಕೂಡಿಸಿದರೇನೇ ಅದರ ನಿಜಸ್ವರೂಪ ತಿಳಿಯುವುದು.

ನೀವು 1993ರಲ್ಲಿ ತೆರೆಕಂಡ `ಜ್ಯುರಾಸಿಕ್ ಪಾರ್ಕ್’ ಸಿನಿಮಾ ನೋಡಿದ್ದರೆ ಅಂಬರದ ಅಂಟಿನಲ್ಲಿದ್ದ, ಡೈನೋಸಾರ್ ರಕ್ತ ಹೀರಿದ ಸೊಳ್ಳೆಯಿಂದ ಡಿ.ಎನ್.ಎ. ತೆಗೆದು `ಟೈರೋನೋಸಾರಸ್ ರೆಕ್ಸ್’ ಎಂಬ ಭಯಂಕರ ಮಾಂಸಹಾರಿ ಡೈನೋಸಾರನ್ನು ಸೃಷ್ಟಿಸಿ, ಅನಂತರ ಪಟ್ಟ ಪಾಡನ್ನು ನೀವು ಎದೆಯ ಡವಡವದೊಂದಿಗೆ ನೋಡಿರುತ್ತೀರಿ. ಇದು ಫಿಕ್ಷನ್-ಅದೇನೋ ಸರಿ. ಆದರೆ ಡೈನೋಸಾರ್‍ಗಳು ಬದುಕಿದ್ದು ಕಲ್ಪನೆಗೂ ಮೀರಿದ ವಾಸ್ತವತೆ. ಅವು ಸಾಮೂಹಿಕವಾಗಿ ಸತ್ತ ನಂತರ-ಉಲ್ಕೆ, ಕ್ಷುದ್ರಗ್ರಹಗಳು ಎರಗಿ, ಜ್ವಾಲಾಮುಖಿ ಸಿಡಿದಾಗ, ವಿಶಿಷ್ಟ ಸನ್ನಿವೇಶದಲ್ಲಿ ಪಳೆಯುಳಿಕೆಯಾದವು. ಕೆಲವೊಮ್ಮೆ ಜೀವಿಗಳ ಭಾಗಶಃ ದೇಹ ಪಳೆಯುಳಿಕೆಯಾಗಬಹುದು, ಕೆಲವೇ ಅಂಗಾಂಗಗಳು ಮಾತ್ರ ಪಳೆಯುಳಿಕೆಯಾಗಿ ಉಳಿಯಬಹುದು. ಯಾವುದೇ ಜೀವಿ ಸತ್ತನಂತರ ತ್ವರಿತವಾಗಿ ಹೂತುಹೋದರೆ, ಬೇಟೆ ಪ್ರಾಣಿಗಳಿಂದ ಹಾಗೆಯೇ ಬ್ಯಾಕ್ಟೀರಿಯಾಗಳಿಂದಲೂ ರಕ್ಷಿತವಾಗಿ ನಿಧಾನ ಗತಿಯಲ್ಲಿ ಪಳೆಯುಳಿಕೆಯಾಗಬಹುದು. ಸತ್ತ ಹಲವು ಕೋಟಿ ವರ್ಷಗಳ ನಂತರವೂ ಮೂಲರೂಪ ಹಾಗೆಯೇ ಉಳಿಯಬಹುದು. ಡೈನೋಸಾರ್‍ಗಳ ಅಸ್ಥಿಪಂಜರ ಹಾಗೆಯೇ ಅವುಗಳ ಮೊಟ್ಟೆಯೂ ಗುಜರಾತಿನ ಕೆಲವು ಭಾಗಗಳಲ್ಲಿ ಸಿಕ್ಕಿವೆ. ಭೂಇತಿಹಾಸ ಬಗೆದರೆ, ಆ ಜೀವಿಗಳ ಸಮೃದ್ಧ ಚರಿತ್ರೆಯೂ ಅನಾವರಣವಾಗುತ್ತದೆ.

ಹವ್ಯಾಸಿ ಪಳೆಯುಳಿಕೆ ಸಂಗ್ರಹಕಾರರು ಭಾರಿ ಹಣ ಮತ್ತು ಹೆಸರನ್ನು ಮಾಡಿರುವುದುಂಟು. ಅಮೆರಿಕದ `ಕಾರ್ನೆಗಿ ಇನ್‍ಸ್ಟಿಟ್ಯೂಟ್ ಆಫ್ ನ್ಯಾಚುರಲ್ ಹಿಸ್ಟರಿ’ಯಲ್ಲಿ ಟೈರನೋಸಾರಸ್ ರೆಕ್ಸ್’ನ ಇಡೀ ಅಸ್ಥಿಪಂಜರವನ್ನು ಜೋಡಿಸಿ ಪ್ರದರ್ಶನಕ್ಕಿಟ್ಟಿದೆ. ಇದನ್ನು ಸೌತ್ ಡಕೋಟಾದ ಹೆಲ್ ಕ್ರೀಕ್ ಎಂಬಲ್ಲಿ ಹೊಲವೊಂದರಲ್ಲಿ 1990ರಲ್ಲಿ ಪತ್ತೆಮಾಡಿದಾಗ `ಅದು ನನ್ನ ಆಸ್ತಿ’ ಎಂದು ದಬಾಯಿಸಿದ ರೈತನಿಗೆ ಮ್ಯೂಸಿಯಂ ಅಧಿಕಾರಿಗಳು 7.6 ಮಿಲಿಯನ್ ಡಾಲರ್ ಕೊಟ್ಟು ಖುಷಿಗೊಳಿಸಿ ಪಳೆಯುಳಿಕೆಯನ್ನು ಒಯ್ದರು. ಮೌಲ್ಯದ ದೃಷ್ಟಿಯಿಂದ ಇದೂ ಕೂಡ ಮುರಿಯದ ದಾಖಲೆ.

ಈಗ ಫ್ರಾಂಡ್‍ಸನ್ ದಾಖಲೆ ಸ್ಥಾಪಿಸಿದ್ದಾನೆ. ಅಮೆರಿಕದ ಫ್ಲೋರಿಡಾದಲ್ಲಿರುವ ಸೌತ್ ಫ್ಲೋರಿಡಾ ಮ್ಯೂಸಿಯಂನಲ್ಲಿ ಅವನು ಸಂಗ್ರಹಿಸಿದ ಪಳೆಯುಳಿಕೆಗಳು ಒಟ್ಟು 1,227.-ಪ್ರದರ್ಶನಕ್ಕೆ ಇಟ್ಟಿದ್ದಾನೆ. ಇವಾವೂ ಪ್ರಾಚೀನ ಜೀವಿಯ ಅಸ್ಥಿಪಂಜರವೂ ಅಲ್ಲ, ರುಂಡಮುಂಡ ಕೈಕಾಲುಗಳೂ ಅಲ್ಲ. ವಿಶೇಷವಾಗಿ ಮೊಸಳೆ ಮತ್ತು ಡೈನೋಸಾರ್‍ಗಳ ಲದ್ದಿ. ಈ ಲದ್ದಿಯೇನೂ ಗಬ್ಬೆಂದು ವಾಸನೆ ಹೊಡೆಯುವುದಿಲ್ಲ. ಬದಲು ಕಲ್ಲಾಗಿವೆ. ಅಂದರೆ ಮೂಲ ಸಾವಯವ ಪದಾರ್ಥಗಳ ಕಣಕಣಗಳನ್ನೂ ಸಿಲಿಕಾ ಸ್ಥಾನಾಂತರಮಾಡಿದೆ. ರೂಪವನ್ನು ಮಾತ್ರ ವಿಕೃತಗೊಳಿಸಿಲ್ಲ. ಈ ಲದ್ದಿಗಳ ಪೈಕಿ ಒಂದು 1.92 ಕಿ.ಗ್ರಾಂ. ತೂಕವಿರುವ, ಈಗಿನಿಂದ ಹಿಂದಕ್ಕೆ 2.4 ರಿಂದ 5.0 ದಶಲಕ್ಷಗಳ ನಡುವೆ ಜೀವಿಸಿದ್ದ ಮೊಸಳೆ ಇಟ್ಟ ಲದ್ದಿ. ಇದನ್ನು ಫ್ರಾಂಡ್‍ಸನ್ `ಅಮೂಲ್ಯ’ ಎಂದಿದ್ದಾನೆ, ಅದಕ್ಕೆ ಮುತ್ತಿಕ್ಕುತ್ತಾನೆ. ಲದ್ದಿ, ರತ್ನಾಭರಣಗಳನ್ನೂ ಮೀರಿದ ಗುಣವಾಚಕಕ್ಕೆ ಗುರಿಯಾಗಿರುವುದು ಇದೇ ಮೊದಲು.

ಈ ಮನುಷ್ಯ ಅಮೆರಿಕದ ಹದಿನೈದು ರಾಜ್ಯಗಳಲ್ಲೂ ಭೂಚರಿತ್ರೆ ಅಧ್ಯಯನಮಾಡಿ ಅಂಡಲೆದು ಲದ್ದಿ ಎಂಬ ನಿಧಿಗಾಗಿ ಶೋಧ ನಡೆಸಿದ, ಕೊನೆಗೂ ಆ ಅಮೂಲ್ಯ ನಿಧಿ ಸಿಕ್ಕಿತು. ಅಮೆರಿಕದಾಚೆ ಇನ್ನೂ ಎಂಟು ದೇಶಗಳಗೆ ಹೋಗಿ ಕಲ್ಲಾಗಿದ್ದ ಡೈನೋಸಾರ್ ಮೊಟ್ಟೆಗಳನ್ನು ಸಂಗ್ರಹಿಸಿದ್ದಾನೆ. ಗಿನ್ನೆಸ್ ರೆಕಾರ್ಡ್ ಸೇರಲು ಸಾಚಾ ಯಾವುದು? ಕೋಟಾ ಯಾವುದು? ಎಂಬುದನ್ನು ಪರೀಕ್ಷಿಸಿ ತಜ್ಞರು ಪ್ರಮಾಣಪತ್ರ ಕೊಡಬೇಕು. ಇದಕ್ಕಾಗಿಯೇ ಗಿನ್ನೆಸ್ ಸಂಸ್ಥೆ ಅಮೆರಿಕದ ಪ್ರಸಿದ್ಧ ಪ್ರಾಚೀನ ಜೀವಿ ವಿಜ್ಞಾನಿಯನ್ನು ಕರೆಸಿ, ಆತ ಹೌದು ಎಂದಮೇಲೆ ಇದನ್ನು ರೆಕಾರ್ಡ್‍ಗೆ ಸೇರಿಸಿತು. ಮೊಸಳೆಗಳು ಬಹು ಎಚ್ಚರಿಕೆಯಿಂದ ಅಂದರೆ ಲದ್ದಿ ವಿಕೃತಗೊಳ್ಳದ ಹಾಗೆ ಇಡುತ್ತವಂತೆ. ಆದರೆ ಡೈನೋಸಾರ್‍ಗಳು ಮಹಾ ದೈತ್ಯ ಜೀವಗಳು. ಕೆಲವಂತು ಐದು, ಆರು ಆನೆ ಪಟ್ಟು ತೂಕದವು. ಲದ್ದಿ ಹಾಕುವಾಗ ಅವು ದೊಪ್ಪೆಂದು ಬಿದ್ದು ಹರಡಿಕೊಳ್ಳುವುದೇ ಜಾಸ್ತಿ. ಪಳೆಯುಳಿಕೆಯಾಗುವುದು ಅಪರೂಪ. ಅಂಥವನ್ನೇ ಹುಡುಕಿ ಫ್ರಾಂಡ್‍ಸನ್ ಜಯಶೀಲನಾಗಿದ್ದಾನೆ. ಈಗ `ಪೂಜಿಯಂ’ (ಪೂ ಎಂದರೆ ಲದ್ದಿ ಎಂಬ ಹೆಸರು)ನಲ್ಲಿ ಜಗತ್ತಿನಾದ್ಯಂತ ಲಭ್ಯವಿರುವ ಪ್ರಾಚೀನ ಜೀವಿಗಳ ಹಿಕ್ಕೆ, ಪಿಚಕೆ, ಲದ್ದಿ ಇವುಗಳನ್ನು ಪ್ರದರ್ಶನಕ್ಕೆ ಮತ್ತು ವ್ಯಾಪಾರಕ್ಕೆ ಇಡಲಾಗಿದೆ. ಇವನ್ನೇ `ಕಾಪ್ರೋಲೈಟ್’ ಎನ್ನುತ್ತಾರೆ. ಜಗತ್ತಿನ ವಿವಿಧ ಖಂಡಗಳ ಪ್ರಾಚೀನ ಜೀವಿವಿಜ್ಞಾನಿಗಳು ಈ ಕುರಿತೇ ದೊಡ್ಡ ದೊಡ್ಡ ಸಂಶೋಧನೆಗಳನ್ನು ಮಾಡಿ ಜಗತ್ತಿನ ಗಮನ ಸೆಳೆದಿದ್ದಾರೆ.

coprolite-museum

ಮೌಲ್ಯ ತರುವುದು ಚಿನ್ನ, ಬೆಳ್ಳಿ, ವಜ್ರ ವೈಡೂರ್ಯಗಳಷ್ಟೇ ಅಲ್ಲ, ಲದ್ದಿಗೂ ಬೆಲೆಯಿದೆ. ಭೂಚರಿತ್ರೆಯನ್ನು ಖಚಿತವಾಗಿ ನಿರ್ಮಿಸಲು ಲದ್ದಿ ಕೂಡ ಪರಿಕರವಾಗಿ ಒದಗಿಬರುತ್ತವೆ.

1 COMMENT

Leave a Reply to kantharaju.v.r Cancel reply