ಇದು ಬಡವರ ಕೊನೇ ಸರತಿ ಸಾಲು- ನೋಟು ಅಮಾನ್ಯದಲ್ಲಿ ಮೋದಿ ನಿರೂಪಿಸುತ್ತಿರುವ ಬಡವ ವರ್ಸಸ್ ಶ್ರೀಮಂತ ಕಥಾನಕದ ರಾಜಕೀಯ ಶಕ್ತಿ ಎಂಥಾದ್ದು?

ಡಿಜಿಟಲ್ ಕನ್ನಡ ವಿಶೇಷ:

ನೋಟು ಅಮಾನ್ಯ ನೀತಿಯಿಂದ ಪ್ರಧಾನಿ ನರೇಂದ್ರ ಮೋದಿ ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳೆಂಬ ಬಿಜೆಪಿಯ ಪಾರಂಪರಿಕ ಬೆಂಬಲಿತ ವರ್ಗವನ್ನು ಕಳೆದುಕೊಳ್ಳುವುದಿಲ್ಲವೇ? ಏಕೆಂದರೆ ನಗದು ಅಲಭ್ಯತೆ ಹಾಗೂ ನೋಟು ಅಮಾನ್ಯ ಕ್ರಮ ನೀಡಿರುವ ಆಘಾತದಿಂದ ವ್ಯಾಪಾರ- ವಹಿವಾಟು ಕಳೆಗುಂದಿರುವುದಂತೂ ಹೌದು. ಚೇತರಿಕೆಗೆ ಎರಡು ತಿಂಗಳಂತೂ ಬೇಕೆ ಬೇಕು. ಈ ಅವಧಿಯ ಕುಸಿತದ ಹೊಡೆತ ಕಂಡವರು 2019ರಲ್ಲಿ ಮೋದಿಯವರನ್ನು ಬೆಂಬಲಿಸುತ್ತಾರೆಯೇ? ಇದೊಂದು ರಾಜಕೀಯ ಕೌತುಕದ ಪ್ರಶ್ನೆ.

ಉತ್ತರ ಪ್ರದೇಶದ ಮೊರಾದಾಬಾದಿನಲ್ಲಿ ಶನಿವಾರ ಬಿಜೆಪಿಯ ಪರಿವರ್ತನಾ ಸಮಾವೇಶದಲ್ಲಿ ಮೋದಿ ಆಡಿದ ಮಾತುಗಳಲ್ಲಿ, ಪ್ರದರ್ಶಿಸಿದ ಕಥನಶಕ್ತಿಯಲ್ಲಿ ಇವೆಲ್ಲಕ್ಕೆ ಉತ್ತರ ಸಿಗುತ್ತಿದೆ. ಮೋದಿ ಯಾರನ್ನು ಕಳೆದುಕೊಳ್ಳುತ್ತಾರೋ ಗೊತ್ತಿಲ್ಲವಾಗಲೀ ನೋಟು ಅಮಾನ್ಯವನ್ನು ರೋಮಾಂಚಕಾರಿ ಕಥಾನಕವಾಗಿಸುತ್ತ ಉತ್ತರ ಪ್ರದೇಶದಂಥ ದೊಡ್ಡ ದೊಡ್ಡ ರಾಜ್ಯಗಳ ಸಾಮಾನ್ಯ ಮತದಾರರನ್ನಂತೂ ಸೆಳೆಯುತ್ತಿದ್ದಾರೆ. ಕಳೆದುಕೊಳ್ಳಬಹುದೆಂಬ ಆತಂಕದ ಬೆಂಬಲ ವರ್ಗಕ್ಕೆ ಹೋಲಿಸಿದರೆ, ಇದೀಗ ಹೊಸಕತೆ ಕೇಳಿ ತಲೆಯಾಡಿಸುತ್ತಿರುವ ವರ್ಗ ತುಂಬ ಎಂದರೆ ತುಂಬಾನೇ ದೊಡ್ಡದು.

ನೋಟು ಅಮಾನ್ಯ ಸರಿಯೋ ತಪ್ಪೋ, ಮೋದಿ ಸರಿಯೋ ತಪ್ಪೋ ಎಂಬೆಲ್ಲ ಪ್ರಶ್ನೆಗಳನ್ನು ಪಕ್ಕಕ್ಕಿಟ್ಟು ತುಸು ರಾಜಕೀಯ ದೃಷ್ಟಿಯಲ್ಲಿ ಮಾತ್ರವೇ ನೋಡೋಣ. ಆಗ ಅರಿವಾಗುವ ವಾಸ್ತವ ಏನೆಂದರೆ, ಬಡವ ವರ್ಸಸ್ ಶ್ರೀಮಂತ ಎಂಬ ವ್ಯಾಖ್ಯಾನ- ಕತೆಯನ್ನು ಯಾರೆಲ್ಲ ಚೆನ್ನಾಗಿ ಮನದಟ್ಟಾಗಿಸಬಲ್ಲರೋ ಅವರಿಗೆಲ್ಲ ಆಯಾ ಕಾಲಘಟ್ಟದಲ್ಲಿ ಯಶಸ್ಸು ಒಲಿದಿದೆ. ಈಗ ಮೂಲೆ ಸೇರಿರಬಹುದು, ಆದರೆ ಕಮ್ಯುನಿಸಂ ಮೆರೆದಿದ್ದು ಈ ಬಡವ ವರ್ಸಸ್ ಶ್ರೀಮಂತ ಎಂಬ ಕಥನ ನಿರೂಪಣೆಯಿಂದಲೇ. ಈಗ ನೋಡಿದರೆ ಸವಕಲೆನ್ನಿಸುವ ‘ಗರೀಬಿ ಹಠಾವೊ’ ಘೋಷವು ಕಾಂಗ್ರೆಸ್ಸಿಗೆ ಎಷ್ಟೊಂದು ದಶಕಗಳ ಕಾಲ ಕಸುವು ತುಂಬಿಕೊಂಡಿತ್ತೆಂಬುದು ಸುಳ್ಳಲ್ಲವಲ್ಲ.

ಇದೀಗ, ನೋಟು ಅಮಾನ್ಯ ವಿದ್ಯಮಾನದಲ್ಲೂ ಇಂಥದೊಂದು ಬಡವ ವರ್ಸಸ್ ಶ್ರೀಮಂತ ಕಥಾನಕವನ್ನು ಅದ್ಭುತವಾಗಿ ವ್ಯಾಖ್ಯಾನಿಸುತ್ತಿದ್ದಾರೆ ನರೇಂದ್ರ ಮೋದಿ ಎಂಬುದಕ್ಕೆ ಶನಿವಾರ ಮೊರಾದಾಬಾದ್ ಸಾಕ್ಷಿಯಾಯಿತು. ನೋಟು ಅಮಾನ್ಯ ನೀತಿ ಎಂಬುದು ಅರ್ಥಶಾಸ್ತ್ರದ ಸಂಕೀರ್ಣ ಪ್ರಕ್ರಿಯೆಯೇ ಆಗಿದ್ದಿರಬಹುದು. ಹಾಗಂತ ಜನಸಾಮಾನ್ಯನಾದವನು ಈ ಬಗ್ಗೆ ಅಮರ್ತ್ಯಾ ಸೇನ್ ಏನು ಹೇಳಿದ್ದಾರೆಂಬುದರ ಆಧಾರದಲ್ಲಿ ತಮ್ಮ ಅಭಿಪ್ರಾಯ ರೂಪಿಸಿಕೊಳ್ಳುವುದಿಲ್ಲ. ರಾಜಕೀಯ ನಾಯಕತ್ವವು ಇದರ ಗ್ರಹಿಕೆಯನ್ನು ಜನರಿಗೆ ಹೇಗೆ ದಾಟಿಸುತ್ತದೆ ಎಂಬಲ್ಲಿಯೇ ಇದರ ಯಶಸ್ಸಿನ ನಿರ್ಧಾರವಾಗುತ್ತದೆ. ಈ ನಿಟ್ಟಿನಲ್ಲಿ ಮೋದಿ ಒಬ್ಬ ಮಾಸ್ಟರ್ ಸ್ಟೋರಿ ಟೆಲ್ಲರ್…

  • ಜನಧನ ಖಾತೆಯಲ್ಲಿ ಉಳ್ಳವರ ಹಣ ಹಾಕುವುದಕ್ಕೆ ದಾರಿ ಮಾಡಿಕೊಡಬೇಡಿ ಎಂಬುದು ಪ್ರಧಾನಿಯಿಂದ ನಿರೀಕ್ಷಿತ ಮಾತು. ಆದರೆ ಇದನ್ನು ಬಡವ ವರ್ಸಸ್ ಶ್ರೀಮಂತ ಕಥಾನಕದಲ್ಲಿ ಮೋದಿ ಹಿಡಿದಿಟ್ಟಿದ್ದನ್ನು ಗಮನಿಸಬೇಕು. ‘ನಾನು ಬಡವರಿಗೆ ಬ್ಯಾಂಕ್ ಖಾತೆ ಕೊಡಿಸುತ್ತೇನೆಂದಾಗ ನನ್ನನ್ನು ಗೇಲಿ ಮಾಡಲಾಗಿತ್ತು. ನೀವೇ ಹೇಳಿ ಈಗದು ಉಪಯೋಗಕ್ಕೆ ಬರುತ್ತಿಲ್ಲವೇ? ಇವತ್ತೇನಾಗಿದೆ ನೋಡಿ. ಶ್ರೀಮಂತರು ಬಡವನ ಮನೆ ಎದುರು ನಿಂತು ಬೇಡಿಕೊಳ್ಳುತ್ತಿದ್ದಾರೆ. ನಂದೊಂದು ಎರಡು ಲಕ್ಷ ರುಪಾಯಿ ನಿನ್ನ ಖಾತೆಯಲ್ಲಿ ಹಾಕಿಕೋ ಅಂತ. ಹೀಗೇನಾದರೂ ನೀವು ಖಾತೆಯಲ್ಲಿ ಹಾಕಿಸಿಕೊಂಡವರಿದ್ದರೆ, ಅದರಿಂದ ಹಣ ವಾಪಸು ತೆಗೆದು ಧನಿಕನಿಗೆ ಕೊಡುವುದಿಲ್ಲ ಅಂತ ನನಗೆ ಮಾತು ಕೊಡಿ. ಒಂದು ರುಪಾಯಿಯನ್ನೂ ಹಿಂದೆ ಕೊಡಬೇಡಿ. ತೀರ ದಾದಾಗಿರಿಗೆ ಬಂದರೆ ಮೋದಿಗೆ ಪತ್ರ ಬರೆಯುತ್ತೇನೆ ಎಂದು ಹೇಳಿ. ಇಲ್ಲದಿದ್ದರೆ, ನೀನು ನನಗೆ ಹಣ ಕೊಟ್ಟಿದ್ದಕ್ಕೆ ಪುರಾವೆ ಎಲ್ಲಿದೆ ಅಂತ ಕೇಳಿ. ಇದೇನೂ ನಿಮ್ಮ ಮೇಲಿನ ಉಪಕಾರವಲ್ಲ. ನಿಮ್ಮಿಂದಲೇ ಅವರು ಸುಲಿಗೆ ಮಾಡಿದ್ದ ಹಣವಾಗಿತ್ತಿದು.’ ಈ ಮಾತುಗಳಿಗೆ ಜನ ಉನ್ಮತ್ತರಾಗಿ ಚಪ್ಪಾಳೆ-ಕೇಕೆ ಹಾಕುತ್ತಿದ್ದರು!
  • ಶ್ರೀಮಂತರೇಕೆ ಬ್ಯಾಂಕು-ಎಟಿಎಂಗಳೆದುರು ನಿಲ್ಲುತ್ತಿಲ್ಲ ಅಂತ ನೋಟು ಅಮಾನ್ಯವಾದ ಲಾಗಾಯ್ತಿನಿಂದಲೂ ಟಿವಿ ಆ್ಯಂಕರ್ ಗಳು ಕೇಳುತ್ತಿದ್ದ ಪ್ರಶ್ನೆ. ಜನರಿಗೆ ಕೂಡ ಇದು ಹೌದಲ್ಲ ಎನಿಸುವಂತಿತ್ತು. ಬಡವ ವರ್ಸಸ್ ಶ್ರೀಮಂತ ಎಂಬ ಕಥಾನಕದಲ್ಲೇ ಪ್ರಧಾನಿ ಈ ವಾದವನ್ನು ಅಡ್ಡ ಮಲಗಿಸಿದ್ದು ಹೀಗೆ- ‘ಶ್ರೀಮಂತರೇಕೆ ಬ್ಯಾಂಕಿನ ಮುಂದೆ ಸರದಿಯಲ್ಲಿಲ್ಲ ಎಂದು ಕೇಳುತ್ತಿದ್ದಾರೆ. ಅವರು ಹೇಗಾದರೂ ಬರುತ್ತಾರೆ ಹೇಳಿ? ನಿಯತ್ತಿಲ್ಲದ ಹಣವನ್ನು ಹೇಗೆ ತಾನೇ ಕಟ್ಟಿಯಾರು? ಹೀಗಾಗಿ ಇವತ್ತು ಬ್ಯಾಂಕಿನ ಮುಂದೆ ತಾಳ್ಮೆಯಿಂದ ನಿಂತಿರುವವರು ಈ ದೇಶದ ಪ್ರಾಮಾಣಿಕರು. ಶ್ರೀಮಂತರ ಕತೆಯೇನು ಎಂದು ನೋಡುವುದಕ್ಕೆ ನೀವು ಬಡವನ ಮನೆಗೆ ಹೋಗಬೇಕು. ಅಕ್ರಮ ಮಾರ್ಗದಲ್ಲಿ ಸಿರಿವಂತರಾದವರೆಲ್ಲ ಇವತ್ತು ಬಡವನ ಕಾಲು ಹಿಡಿಯುತ್ತಿದ್ದಾರೆ. ನಿನ್ನ ಅಜ್ಜ ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ, ನಿನ್ನಮ್ಮ ನಮ್ಮ ಮನೆಯಲ್ಲಿ ಬಟ್ಟೆ ಒಗೆಯುತ್ತಿದ್ದಳು… ಎಷ್ಟು ಒಳ್ಳೆ ಜನಗಳಪ್ಪಾ ನೀವು, ಒಂಚೂರು ನಮ್ಮ ಹಣ ನಿಮ್ಮ ಖಾತೆಗಳಲ್ಲಿ ಹಾಕಿಕೊಳ್ಳಿ ಎನ್ನುತ್ತಿದ್ದಾರೆ.’
  • ಜನರನ್ನು ಬ್ಯಾಂಕುಗಳ ಎದುರು ನಿಲ್ಲಿಸಿ ಸತಾಯಿಸಲಾಗುತ್ತಿದೆ ಎಂಬ ರಾಜಕೀಯ ಎದುರಾಳಿಗಳ ವಾದವನ್ನೂ, ಸರತಿ ಸಾಲನ್ನು ತೋರಿಸುತ್ತಿರುವ ಮಾಧ್ಯಮವನ್ನೂ ಪ್ರಧಾನಿ ಬಡವ ಪರ ಅಂಕಣದಲ್ಲಿ ನಿಂತು ಎದುರಿಸಿದ್ದು ಹೀಗೆ- ‘ನಾನು ಬಡವರ ಸಾಲು ಸೃಷ್ಟಿಸುತ್ತಿದ್ದೇನೆಂದು ದೂರುತ್ತಿರುವವರು ಇಷ್ಟು ವರ್ಷ ಅದೆಷ್ಟು ಸಾಲುಗಳನ್ನು ಸೃಷ್ಟಿಸಿಲ್ಲ ನೀವೇ ಹೇಳಿ. ಸಕ್ಕರೆಗೆ ಸಾಲು, ಸೀಮೆಎಣ್ಣೆಗೆ ಸಾಲು, ಪಡಿತರಕ್ಕೆ ಸಾಲು….ಈ ಎಲ್ಲ ಸಾಲುಗಳನ್ನು ಕೊನೆಗೊಳಿಸಲೆಂದೇ ನಾನು ಕೊನೆಯ ಬಾರಿಗೆ ಸಾಲು ಹಚ್ಚಿ ನಿಲ್ಲಿಸುತ್ತಿದ್ದೇನೆ.’ ‘ಐವತ್ತು ದಿನಗಳ ಅವಧಿ ಕೇಳಿದವನು ನಾನು. ಈ ಅವಧಿಯಲ್ಲಿ ತೊಂದರೆ ಎದುರಿಸಬೇಕಾಗುತ್ತದೆ ಅಂತಲೂ ಕೇಳಿಕೊಂಡಿದ್ದೆ. ಬ್ಯಾಂಕಿನ ಮುಂದೆ ನಿಂತ ಜನರಿಗೆ ಅವರ ಕಷ್ಟದ ಬಗ್ಗೆ ನಾನಾ ಪ್ರಶ್ನೆ ಕೇಳುವ ನಿರೂಪಕರಿಗೇ ಇವತ್ತು ಆಶ್ಚರ್ಯವಾಗುತ್ತಿದೆ. ತಾಸುಗಟ್ಟಲೇ ನಿಂತು ನಗದು ಸಿಗದಿದ್ದರೂ ಜನರಲ್ಲಿ ಸಿಟ್ಟು ಹಚ್ಚಿಸಲು ಆಗುತ್ತಿಲ್ಲವೇಕೆ, ಮೋದಿ ವಿರುದ್ಧ ಆಕ್ರೋಶ ಏಳುತ್ತಿಲ್ಲವೇಕೆ ಅಂತ ಇವರಿಗೆ ಆಶ್ಚರ್ಯವಾಗುತ್ತಿದೆ. ಈ ಕ್ರಮದ ಹಿಂದಿನ ಪ್ರಾಮಾಣಿಕ ಉದ್ದೇಶವನ್ನು ದೇಶದ ಜನ ಅರ್ಥಮಾಡಿಕೊಂಡಿದ್ದಾರೆ. ಹಾಗೆಂದೇ ತೊಂದರೆಗಳನ್ನು ಸಹಿಸುತ್ತಿದ್ದಾರೆ.’
  • ಬ್ಯಾಂಕು- ಎಟಿಎಂಗಳ ಮುಂದೆ ತಾಸುಗಟ್ಟಲೇ ನಿಂತ ನಿಮ್ಮೆಲ್ಲರ ತಪಸ್ಸು ವ್ಯರ್ಥವಾಗುವುದಕ್ಕೆ ನಾನು ಬಿಡುವುದಿಲ್ಲ. ಇಷ್ಟು ವರ್ಷ ನಿಮ್ಮಿಂದ ಲೂಟಿ ಮಾಡಿದ್ದ ಹಣವನ್ನೆಲ್ಲ ತೆಗೆಸುತ್ತಿದ್ದೇನೆ. ಆದರೆ ಇಷ್ಟಕ್ಕೆ ನಿಲ್ಲುವುದಿಲ್ಲ. ಮುಂದೆ ಇದು ಪುನರಾವರ್ತಿತವಾಗದಿರಲು ನಿಮ್ಮ ಸಹಕಾರ ಬೇಕು. ಎಟಿಎಂ ಮುಂದೆ ನಿಂತು ಹಣ ಹೊರಬರುವುದಕ್ಕೆ ಕಾಯುವ ದಿನಗಳು ಮುಗಿಯಿತು. ಈಗ ನೀವೆಲ್ಲ ನಿಮ್ಮ ಮೊಬೈಲ್ ಫೋನಿನಲ್ಲೇ ಬ್ಯಾಂಕಿದೆ ಎಂಬುದನ್ನು ಅರಿತುಕೊಳ್ಳಬೇಕು. ನೀವೆಲ್ಲ ವಾಟ್ಸ್ಯಾಪ್ ಕಳುಹಿಸುವುದಕ್ಕಿಂತ ಕಷ್ಟಕರ ಪ್ರಕ್ರಿಯೆ ಏನಲ್ಲ ಇದು. ಸುಲಭವಾಗಿ ಕಲಿಯಬಹುದು. ಈ ಹಿಂದಿನ ಸರ್ಕಾರಗಳು ನೋಟು ಪ್ರಿಂಟು ಮಾಡಿದ್ದೇ ಮಾಡಿದ್ದು. ಹೋಗಿದ್ದು ಮಾತ್ರ ಎಲ್ಲಿಗೋ. ಇದನ್ನು ಬದಲಿಸಬೇಕಾದರೆ ನೀವೆಲ್ಲ ಮೊಬೈಲ್ ಫೋನಿನಲ್ಲೇ ವ್ಯವಹಾರ ಮಾಡುವುದನ್ನು ಕಲಿಯಬೇಕು. ಈ ವಿಷಯದಲ್ಲೂ ನನ್ನನ್ನು ಪ್ರಶ್ನಿಸುತ್ತಿದ್ದಾರೆ. ಇದಕ್ಕೆಲ್ಲ ಭಾರತದ ಜನ ಸಿದ್ಧವಾಗಿದ್ದಾರೆ ಅಂತ. ಒಂದು ಮಾತು ಹೇಳ್ತೀನಿ. ನಮ್ಮದು ಅನಕ್ಷರಸ್ಥರ ದೇಶ ಅಂತ ಕೀಳಂದಾಜು ಮಾಡ್ತಾರಲ್ಲ…ಈ ಜನಗಳೇ ಎಲೆಕ್ಟ್ರಾನಿಕ್ ಯಂತ್ರದಲ್ಲಿ ಮತ ಒತ್ತುತ್ತಿದ್ದಾರೆ. ಮುಂದುವರಿದ ಅಮೆರಿಕದಂಥ ದೇಶಗಳು ಇನ್ನೂ ಬ್ಯಾಲೆಟ್ ಪೇಪರಿನಲ್ಲಿವೆ. ಜನಗಳಿಗೆ ಸಾಮರ್ಥ್ಯದ ಬಗ್ಗೆ ಹೇಳಿದಾಗ ಬದಲಾಗಿಯೇ ಆಗುತ್ತಾರೆ.
  • ಮನಿ ಮನಿ, ಮನಿ, ಮನಿ ಅಂತಿದ್ದವರೆಲ್ಲ ಈಗ ಮೋದಿ ಮೋದಿ ಮೋದಿ ಎಂದು ಉರಿಬೀಳುತ್ತಿದ್ದಾರೆ. ಅವರ ಇಷ್ಚು ವರ್ಷದ ಹಣ ಹೊರಹಾಕುತ್ತಿದ್ದೇನಲ್ಲ? ಅವರೇನು ಮಾಡಿಯಾರು? ಅಧಿಕಾರದಿಂದ ಕೆಳಗಿಳಿಸಿದರೆ ಈ ಫಕೀರನಿಗೆ ಏನೂ ಕಳೆದುಕೊಂಡಂತಾಗುವುದಿಲ್ಲ. ಆ ಬಗ್ಗೆ ಯೋಚನೆ ಇಲ್ಲ.

ನೋಟು ಅಮಾನ್ಯದ ದೀರ್ಘಾವಧಿ ರಾಜಕೀಯ ಪರಿಣಾಮ ಏನಾಗಲಿದೆ ಎಂಬುದರ ಬಗ್ಗೆ ನಿರ್ಣಯವನ್ನು ಕಾಲವೇ ಬಾಕಿ ಇರಿಸಿದೆ ಎಂದುಕೊಳ್ಳೋಣ. ಆದರೆ ವಿತ್ತೀಯ ಒಳಗೊಳ್ಳುವಿಕೆಗೆ ನರೇಂದ್ರ ಮೋದಿ ಹಾಕುತ್ತಿರುವ ಬಡವ ವರ್ಸಸ್ ಶ್ರೀಮಂತ ಕಥಾನಕ ರಾಜಕೀಯವಾಗಿ ಹಾಗೂ ವ್ಯವಸ್ಥೆ ದೃಷ್ಟಿಯಿಂದ ಒಂದುಮಟ್ಟದ ಪವಾಡ ಮಾಡಬಲ್ಲ ಸಾಮರ್ಥ್ಯವನ್ನು ಖಂಡಿತ ಹೊಂದಿದೆ.

Leave a Reply