ರಷ್ಯಾದ ಜತೆಗೂಡಿ ಒಪೆಕ್ ತೈಲ ರಾಷ್ಟ್ರಗಳು ಕೊಟ್ಟಿವೆ ಅಮೆರಿಕ- ಯುರೋಪುಗಳಿಗೆ ಪ್ರತಿಏಟು, ಏರುತ್ತದೆಯೇ ತೈಲರೇಟು, ಭಾರತದ ಪಾಲಿಗೆ ಹೇಗಿರಲಿದೆ ಇದರ ಘಾಟು?

praveen kumar shetty (2)ಪ್ರವೀಣ್ ಕುಮಾರ್ ಶೆಟ್ಟಿ, ಕುವೈತ್

ಬದನೆಕಾಯಿಗೆ ಏನಾದರೂ ಮಾರುಕಟ್ಟೆಯಲ್ಲಿ ಕೆಜಿಗೆ ಒಂದು ಸಾವಿರ ರೂಪಾಯಿ ಬೆಲೆ ಬಂದರೆ, ಬರೇ ಹಣವಷ್ಟೆ ಇದ್ದು ತಮ್ಮಲ್ಲಿ ಚದರ ಅಡಿಯಷ್ಟು ಸಾಗುವಳಿ ಭೂಮಿಯಿಲ್ಲದವರೂ ಬಾಡಿಗೆ ಜಮೀನಿನಲ್ಲಿ, ಅಧಿಕ ಕೂಲಿ ನೀಡಿ ಬದನೆ ಬೆಳೆಯಲು ತೊಡಗಿಬಿಡುತ್ತಾರೆ. ವೆಚ್ಚಕ್ಕಿಂತಲೂ ಲಾಭವೇ ಅಧಿಕಪಟ್ಟು ಹೆಚ್ಚಾಗಿದ್ದರಿಂದ ಮತ್ತಷ್ಟು ಬಾಡಿಗೆ ಬದನೆ ಬೆಳೆಗಾರರು ಹುಟ್ಟಿಕೊಂಡುಬಿಡುತ್ತಾರೆ. ಬಾಡಿಗೆ ಬೆಳೆಗಾರರಿಂದ ಮಾರುಕಟ್ಟೆಯಲ್ಲಿ ಬದನೆ ಬೆಲೆಯಲ್ಲಿ ಸ್ಪರ್ಧೆಯುಂಟಾದಾಗ ಸಂಕಷ್ಟಕ್ಕೊಳಗಾದ ಪರಂಪರಾಗತ ರೈತ ಕಠಿನ ನಿರ್ಧಾರವೊಂದಕ್ಕೆ ಬಂದು ಬಿಡುತ್ತಾನೆ. ತನ್ನ ಖಾಯಂ ಖರೀದಿದಾರರನ್ನು ಕಳೆದುಕೊಳ್ಳಲು ಬಯಸದೇ ಅಧಿಕ ಬದನೆ ಬೆಳೆದು ಮಾರುಕಟ್ಟೆಗೆ ಯಾವಾಗ ತಂದನೋ ಅವಾಗ ಬದನೆಕಾಯಿ ಬೆಲೆಯಲ್ಲಿ ಸರಸರನೆ ಇಳಿಕೆ ಕಾಣಲಾರಂಭಿಸಿತು. ಯಾವಾಗ ಬದನೆಕಾಯಿ ದರವು ಬಾಡಿಗೆ ಬದನೆ ಬೆಳೆಗಾರರ ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆಯಾಗತೊಡಗಿತೋ ಆಗ ಪರಂಪರಾಗತ ರೈತ ಮಾತ್ರ ಮಾರುಕಟ್ಟೆಗೆ ಬದನೆ ಬೆಳೆದು ತರಲು ಮಾತ್ರ ಸಾಧ್ಯವಾಯಿತು. ಆಲ್ಪಸ್ವಲ್ಪ ಲಾಭದಿಂದಲೇ ವ್ಯವಹಾರದಲ್ಲಿ ಮುಂದುವರಿದ ಪರಂಪರಾಗತ ರೈತ ಕ್ರಮೇಣ ಒಂದೆರಡು ವರ್ಷದಲ್ಲಿ ಬಾಡಿಗೆ ಸಾಗುವಳಿದಾರು ಕಾಲ್ಕೀಳುವಂತೆ ಮಾಡಿ ಅವರ ಬಾಡಿಗೆ ಭೂಮಿಯನ್ನು ಬಂಜರು ಮಾಡಿದ. ಈಗ ಬದನೆ ಬೆಳೆಯಲ್ಲಿ ಸ್ವಲ್ಪ ಕಡಿತಗೊಳಿಸಿ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುವಂತೆ ನೋಡಿಕೊಂಡು ಮತ್ತು ಬದನೆಯ ಬೆಲೆಯನ್ನು ಬಾಡಿಗೆ ಬದನೆ ಬೆಳೆಗಾರರ ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆಯಿರುವಂತೆ ನೋಡಿಕೊಂಡರೆ ಪರಂಪರಾಗತ ರೈತ ಗೆದ್ದೇ ಬಿಟ್ಟಂತೆ. ಇಲ್ಲದಿದ್ದರೆ ಮತ್ತೇ ಬಾಡಿಗೆ ಬದನೆ ಬೆಳೆಗಾರರು ಮರಳಿ ಬರುವ ಸಾಧ್ಯತೆ ಇದ್ದೇ ಇದೆ.

ಕಳೆದ ಒಂದು ದಶಕದಲ್ಲಿ ಜಾಗತಿಕ ತೈಲ ಉತ್ಪಾದನ ಕ್ಷೇತ್ರ ಮತ್ತು ತೈಲ ಮಾರುಕಟ್ಟೆಯಲ್ಲಿ ಇದೇ ನಡೆದದ್ದು. ಸೌದಿ ಅರೇಬಿಯಾ, ರಷ್ಯಾದಂತಹ ರಾಷ್ಟ್ರಗಳು ಪರಂಪರಾಗತ ತೈಲ ಉತ್ಪನ್ನ ದೇಶಗಳಾದರೆ, ಆಪ್ರಿಕ, ಯುರೋಪ್ ಮತ್ತು ಅಮೇರಿಕಾದಲ್ಲಿ ತೈಲ ಉತ್ಪಾದನೆಗೆ ಹೂಡಿಕೆ ಮಾಡಿದ ಹೂಡಿಕೆದಾರರು ಬಾಡಿಗೆ ತೈಲ ಉತ್ಪಾದಕರು. ಈ ಹೂಡಿಕೆದಾರ ಬಾಡಿಗೆ ತೈಲ ಉತ್ಪಾದಕರಿಗೆ ಸ್ವಂತವೆಂಬ ತೈಲ ಭೂಮಿಯಿರಲಿಲ್ಲ, ಆದರೆ ದುಡ್ಡು ಹಾಕಿ ತೈಲ ತೆಗೆಯುವ ತಾಕತ್ತಿತ್ತು. ತೈಲ ಬ್ಯಾರಲ್ಲಿಗೆ 130 ಡಾಲರಿನಷ್ಟು ಬೆಲೆಬಂದಾಗ ಅಧಿಕ ವೆಚ್ಚವಾಗುವ ಆಳ ಸಮದ್ರದಲ್ಲಿ ತೈಲಗಾರಿಕೆ ನಡೆಸಿಯೂ ಲಾಭಮಾಡಿಕೊಂಡವರು. ತೈಲಬಂಡೆಗಳ ಪದರುಗಲ್ಲುಗಳ ನಡುವೆ ಅಧಿಕ ಒತ್ತಡದಲ್ಲಿ ನೀರನ್ನು ಹಾಯಿಸಿ, ಆ ನೀರಿನಲ್ಲಿ ತೇಲಿ ಬರುವ ತೈಲವನ್ನು ಸಂಸ್ಕರಿಸಿ (Shale Oil) ಮಾರಾಟ ಮಾಡಲಾರಂಭಿಸಿದರು.  ಈ ತರಹದ ಬಾಡಿಗೆ ತೈಲ ಉತ್ಪಾದಕರ ತೈಲ ಉತ್ಪಾದನೆಯ ವೆಚ್ಚವೇ ಬ್ಯಾರೊಲ್ಲೊಂದಕ್ಕೆ ಸುಮಾರು 60-70 ಡಾಲರಿನಷ್ಟಿತ್ತು. ಹಾಗಾಗಿ ತೈಲಬೆಲೆಯು ಮಾರುಕಟ್ಟೆಯಲ್ಲಿ ನೂರಕ್ಕೂ ಮೇಲಿದ್ದಾಗ ಪರಂಪರಾಗತ ತೈಲ ಉತ್ಪನ್ನ ದೇಶಗಳ ಖಾಯಂ ಗ್ರಾಹಕರನ್ನು ಸುಲಭವಾಗಿ ಸೆಳೆದುಕೊಳ್ಳಲಾರಂಭಿಸಿದವು. ಮಾರುಕಟ್ಟೆಯಲ್ಲಿ ಅಧಿಕ ತೈಲದ ಆವಕವಾಗಿ ಬೆಲೆ ಕುಸಿಯಲಾರಂಭಿಸಿದಾಗ ಸಾಮಾನ್ಯವಾಗಿ ತೈಲ ಉತ್ಪಾದನೆಯನ್ನು ಕಡಿತಗೊಳಿಸುತ್ತಿದ್ದ OPEC ಸದಸ್ಯ ರಾಷ್ಟ್ರಗಳು ಅಧಿಕ ತೈಲ ಉತ್ಪಾದಿಸಿ ತೈಲ ಬೆಲೆಯನ್ನು ಬ್ಯಾರಲ್ಲೊಂದಕ್ಕೆ 30 ಡಾಲರಿಗೆ ತಂದು ಬಾಡಿಗೆ ತೈಲ ಉತ್ಪಾದಕರ ನಿದ್ದೆ ಕೆಡಿಸಿಬಿಟ್ಟರು. ಯಾರಿಗೆ ತಮ್ಮ ಉತ್ಪಾದನಾ ವೆಚ್ಚವನ್ನು ಸರಿದೂಗಿಸಲಾಗದಾಯಯಿತೋ ಅಂತವರು ತಮ್ಮ ತೈಲ ಉತ್ಪಾದನಾ ವ್ಯವಹಾರವನ್ನು ತ್ಯಜಿಸಿಬಿಟ್ಟರು.

ಇಂತಹ ಸನ್ನಿವೇಶದಲ್ಲಿ ಕಳೆದೆರಡು ವರ್ಷಗಳಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯನ್ನು ಅಪರಂಪಾರಗತ ತೈಲ ಉತ್ಪಾದಕರ ಉತ್ಪಾದನೆಯ ವೆಚ್ಚಕ್ಕಿಂತಲೂ ಕಡಿಮೆಯಿರುವಂತೆ ನೋಡಿಕೊಂಡ OPEC ಸದಸ್ಯ ರಾಷ್ಟ್ರಗಳು ಮತ್ತು OPEC ಸದಸ್ಯನಲ್ಲದ ರಷ್ಯಾದೇಶವು ಈಗ ತೈಲ ಮಾರುಕಟ್ಟೆಯನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲಾರಂಭಿಸಿದೆ. ಕಳೆದೆರಡು ವರ್ಷಗಳಲ್ಲಿ ತೈಲಬೆಲೆಯ ಕುಸಿತದಿಂದ ಚೀನಾ ಮತ್ತು ಭಾರತದಂತಹ ತೈಲ ಉಪಭೋಕ್ತ ದೇಶಗಳಿಗೆ ತಕ್ಷಣದ ಲಾಭವಾಗಿದ್ದರೂ, ದೀರ್ಘಕಾಲದಲ್ಲಿ ಪರೋಕ್ಷವಾಗಿ ನಷ್ಟ ಅನುಭವಿಸಲಾರಂಭಿಸಿದ್ದವು. ತೈಲೋತ್ಪನ್ನ ರಾಷ್ಟ್ರಗಳಿಗೆ ಇಂಜಿನಿಯರಿಂಗ್, ಮಾಹಿತಿ ತಂತ್ರಜ್ಞಾನದಂತಹ ಸೇವೆ ನೀಡುತ್ತಿದ್ದ ಕಂಪನಿಗಳು ಗಲ್ಫ್ ರಾಷ್ಟ್ರಗಳಲ್ಲಿ ವ್ಯವಹಾರವನ್ನು ಕಳೆದುಕೊಳ್ಳುವಂತಾಯಿತು. ವಿಶ್ವದಲ್ಲಿ ಮತ್ತೆ ಆರ್ಥಿಕ ಬಿಕ್ಕಟ್ಟಿನ ಕಾರ್ಮೋಡ ಕವಿದು ಬರುತ್ತಿರುವಾಗಲೇ ಕಳೆದ ಎಂಟು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪೆಟ್ರೋಲಿಯಂ ರಫ್ತು ರಾಷ್ಟ್ರಗಳ ಸಂಘಟನೆಯ (OPEC)ಸದಸ್ಯಗಳು ಕಚ್ಚಾ ತೈಲ ಉತ್ಪಾದನೆಯನ್ನು ಕಡಿತಗೊಳಿಸಲು ಒಪ್ಪಿಕೊಂಡಿವೆ. ಇದೇ ಬರುವ ಜನವರಿ 2017 ರಿಂದ ಒಟ್ಟು 12 ಲಕ್ಷ ಬ್ಯಾರೆಲಿನಷ್ಟು ದೈನಂದಿನ ತೈಲಉತ್ಪಾದನೆಯನ್ನು ಕಡಿತಗೊಳಿಸಲಿದೆ. ಇದರೊಂದಿಗೆ ರಷ್ಯಾದೇಶವೂ ದಿನಕ್ಕೆ 6 ಲಕ್ಷ ಬ್ಯಾರೆಲ್ಲಿನಷ್ಟು ಕಡಿತಗೊಳಿಸಲಿದೆ. ತೈಲ ಉತ್ಪಾದನೆಯನ್ನು ಕಡಿತಗೊಳಿಸಲು ತನ್ನೊಂದಿಗೆ OPEC ಸದಸ್ಯನಲ್ಲದ ರಷ್ಯಾದೇಶವನ್ನು ಒಪ್ಪಿಸಿದ ಸೌದಿ ಅರೇಬಿಯಾದ ಪ್ರಯತ್ನ ವಿಶ್ವದ ಆರ್ಥಿಕ ಪರಸ್ಥಿತಿಯನ್ನು ಸುಧಾರಿಸುವಲ್ಲಿ ಮಹತ್ತರ ಪಾತ್ರ ವಹಿಸಲಿದೆ.

ಡೀಸೆಲ್ ಜನರೇಟರ್ ಗಳಿಂದ ಹವಾ ನಿಯಂತ್ರಣ ವ್ಯವಸ್ಥೆಯನ್ನು ನಿರ್ವಹಿಸುತ್ತಿರುವ ಬಹುತೇಕ OPEC ಸದಸ್ಯ ರಾಷ್ಟ್ರಗಳಲ್ಲಿ ಈಗ ಬೇಸಿಗೆ ಮುಗಿದು ಚಳಿಗಾಲ ಆರಂಭವಾಗಿರುವುದರಿಂದ, ಆಂತರಿಕ ತೈಲಬೇಡಿಕೆಯೂ ಕಡಿಮೆಯಾಗಿ ಕಚ್ಚಾ ತೈಲ ಉತ್ಪಾದನೆಯ ಕಡಿತದ ತೀರ್ಮಾನದಿಂದ ತಕ್ಷಣಕ್ಕೆ ಹೆಚ್ಚೇನು ಹೊರೆಯಾಗಲಾರದು. ಆದರೆ OPEC ನ ಈ ನಡೆಯಿಂದ ಮಾರುಕಟ್ಟೆಯಲ್ಲಿ ಮುಂಬರುವ ದಿನಗಳಲ್ಲಿ ತೈಲಬೆಲೆಯಲ್ಲಿ ಏರಿಕೆ ಕಾಣುವ ಸಾಧ್ಯತೆ ಇರುವುದರಿಂದ Future trading ಮತ್ತು Hedge ವ್ಯವಹಾರಗಳು ನಡೆದು ಈಗಿಂದಲೇ ಮುಂಬರುವ ದಿನಗಳಿಗೆ ಮುಂಗಡ ಬೆಲೆಯಲ್ಲಿ ಗ್ರಾಹಕರು ತೈಲವನ್ನು ಕಾದಿರಿಸಬಹುದು. ಮುಂಬರುವ ಖಚಿತ ತೈಲ ಮಾರಾಟ ಆದಾಯದ ಅಂದಾಜಿನ ಮೇಲೆ ಭಾರತೀಯ ಕಂಪೆನಿಗಳಿಗೆ ದೊಡ್ಡ ದೊಡ್ಡ ವ್ಯವಹಾರಗಳು ತೈಲಕ್ಷೇತ್ರದಲ್ಲಿ ಸಿಗಬಹುದು. ನಿರ್ಮಾಣ, ಉದ್ಯೋಗ ಕ್ಷೇತ್ರಗಳಲ್ಲಿ ಚೇತರಿಕೆ ಕಾಣಿಸಿಕೊಳ್ಳಲಿದೆ.

ಆದರೆ ಯಾವಾಗ ತೈಲಬೆಲೆಯಲ್ಲಿ ಏರಿಕೆ ಕಂಡಿತೋ ಆವಾಗಲೇ ಬಾಡಿಗೆ ತೈಲ ಉತ್ಪಾದಕರು ಪುನಃ ಉತ್ಪಾದನೆ ಆರಂಭಿಸಲಾರರು. ಒಮ್ಮೆ ತ್ಯಜಿಸಿ ಬಿಟ್ಟಿರುವ ತೈಲ ಕ್ಷೇತ್ರವನ್ನು ಪುನರುಜ್ಜೀವನಗೊಳಿಸಲು ಅವರಿಗೆ ವರ್ಷಾನುಗಟ್ಟಲೆ ಸಮಯಬೇಕಾಗುತ್ತದೆ. ತೈಲಬೆಲೆಯು ಮತ್ತೆ ಬ್ಯಾರೆಲ್ಲಿಗೆ 75 ಡಾಲರಿಗಿಂತಲೂ ಮೇಲೆರಿದರೇ ಅವರುಗಳು ಮತ್ತೇ ಬಂದು ಬಿಡಾರ ಹೂಡಿಯಾರು. ಆದರೆ ತೈಲಬೆಲೆಯು ಆ ಮಟ್ಟಕ್ಕೆ ಏರಲು ಇನ್ನೂ ಒಂದೆರಡು ವರ್ಷಗಳೇ ಬೇಕು ಎಂಬುದು ಬಹುತೇಕ ಪಂಡಿತರ ಅಭಿಪ್ರಾಯವಿರುವುದರಿಂದ ಅವರುಗಳು ಕಾದುನೋಡುವ ತಂತ್ರ ಉಪಯೋಗಿಸಬಹುದು. ಇದೇ ಸಂದರ್ಭದಲ್ಲಿ OPEC ಸದಸ್ಯ ರಾಷ್ಟ್ರಗಳು ಮತ್ತು ರಷ್ಯಾದೇಶಗಳು ಒಗ್ಗೂಡಿಕೊಂಡು ತೈಲಬೆಲೆಯನ್ನು ಎಂದಿಗೂ 60-70 ಡಾಲರಿನ ಮಟ್ಟಕ್ಕಿಂತಲೂ ಮೇಲೆರದಂತೆ ನೋಡಿಕೊಳ್ಳುವ ಮೂಲಕ ಬಾಡಿಗೆ ಹೂಡಿಕೆದಾರರಿಗೆ ಮತ್ತೆ ಆಸೆ ಚಿಗುರೊಡೆಯದಂತೆ ನೋಡಿಕೊಳ್ಳುತ್ತಾರೋ ಎಂಬುವುದರ ಮೇಲೆ ಮುಂದಿನ ದಿನಗಳ ತೈಲ ಬೆಲೆಯು ನಿರ್ಧಾರವಾಗಲಿದೆ. ಬ್ಯಾರೆಲ್ಲಿಗೆ 60-70 ಡಾಲರಿನ ಬೆಲೆ ಪರಂಪಾರಗತ ತೈಲ ಉತ್ಪಾದಕರಿಗೂ ಮತ್ತು ವಿಶ್ವದ ಗ್ರಾಹಕರಿಗೂ ಸಮವಾಗಿ ಲಾಭವಾಗಲಿದೆ ಮತ್ತು ಮಾರುಕಟ್ಟೆಯಲ್ಲಿ ಸ್ಥಿರತೆ ಕಾಣಿಸಬಲ್ಲದು.

(ಲೇಖಕರು ತೈಲ ಕ್ಷೇತ್ರದಲ್ಲೇ ಕಾರ್ಯನಿರ್ವಹಿಸುತ್ತಿದ್ದು ಈ ವಿಭಾಗದ ಆಳ ಅಗಲವನ್ನು ಬಲ್ಲವರು.)

Leave a Reply