ಅಮೃತಸರದಲ್ಲಿ ಭಾರತ- ಅಫಘಾನಿಸ್ತಾನಗಳಿಂದ ಸಿದ್ಧಗೊಂಡ ಪಾಕ: ಸ್ಯಾಂಡ್ವಿಚ್ ಪಾಕಿಸ್ತಾನ

ಡಿಜಿಟಲ್ ಕನ್ನಡ ಟೀಮ್:

ಅಮೃತಸರದಲ್ಲಿ ನಡೆಯುತ್ತಿರುವ ಹಾರ್ಟ್ ಆಫ್ ಏಷ್ಯ ಸಮಾವೇಶದಲ್ಲಿ ಭಾರತ ಮತ್ತು ಅಫಘಾನಿಸ್ತಾನಗಳ ನಡುವಿನ ಮಾತುಕತೆಯೇ ಪ್ರಮುಖವಾಗುತ್ತಿದೆ. ಪಾಕಿಸ್ತಾನದ ಪ್ರತಿನಿಧಿಗಳೂ ಇಲ್ಲಿ ಹಾಜರಿದ್ದಾರಾದರೂ ಭಾರತ ಮತ್ತು ಅಫಘಾನಿಸ್ತಾನಗಳ ಮೈತ್ರಿ ಹಿಡಿತದ ಮಧ್ಯೆ ಸ್ಯಾಂಡ್ವಿಚ್ ಆಗುತ್ತಿದೆ. ಚೀನಾ, ರಷ್ಯಾ ಸೇರಿದಂತೆ 14 ದೇಶಗಳು ಸಮಾವೇಶದಲ್ಲಿ ಭಾಗವಹಿಸಿವೆ. 2011ರಲ್ಲಿ ಹಾರ್ಟ್ ಆಫ್ ಏಷ್ಯದ ಮೊದಲ ಸಮಾವೇಶ ನಡೆದಿತ್ತು.

ಈ ವೇದಿಕೆಯಲ್ಲಿ ಪಾಕಿಸ್ತಾನವನ್ನು ಮಾತಿನಲ್ಲಿ ನುಜ್ಜುಗುಜ್ಜುಗೊಳಿಸುತ್ತಿರುವುದರಲ್ಲಿ ಅಫಘಾನಿಸ್ತಾನದ ಹುರುಪೇ ಮುಂಚೂಣಿಯಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಸಹ, ಇಡೀ ಖಂಡವನ್ನು ಭಾದಿಸುತ್ತಿರುವ ಉಗ್ರ ಜಾಲಗಳನ್ನು ಮಟ್ಟ ಹಾಕಬೇಕಿರುವ ತುರ್ತಿನ ಬಗ್ಗೆ ಮಾತನಾಡಿದರು. ಈ ವಿಷಯದಲ್ಲಿ ಯಾವ ದೇಶವೂ ನಿರ್ಲಕ್ಷ್ಯ ವಹಿಸುವಂತೆಯೇ ಇಲ್ಲ ಎಂದರು.

ವಾಸ್ತವದಲ್ಲಿ ಭಾರತಕ್ಕೆ ಬೇಕಿರುವುದು ಅಫಘಾನಿಸ್ತಾನದ ಜತೆಗೆ ವ್ಯಾಪಾರ ಮಾರ್ಗ ಸುಧಾರಣೆ. ಮಧ್ಯದಲ್ಲಿರುವ ಪಾಕಿಸ್ತಾನವು ಭಾರತ- ಅಫಘಾನಿಸ್ತಾನಗಳ ನಡುವಿನ ವಹಿವಾಟಿಗೆ ಸುಗಮ ಸಂಪರ್ಕ ಕಲ್ಪಿಸುತ್ತಿಲ್ಲ. ಈ ಕುಂದನ್ನು ಪರಿಹರಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಮಾತುಕತೆಗಳು ನಡೆದಿವೆ.

ಅಫಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಗನಿ ಮಾತ್ರ ಭಯೋತ್ಪಾದನೆ ಬಗ್ಗೆ ಮಾತನಾಡುತ್ತ ಪಾಕಿಸ್ತಾನದ ಹೆಸರೆತ್ತುವುದಕ್ಕೆ ಯಾವ ಮುಜುಗರವನ್ನೂ ಇಟ್ಟುಕೊಳ್ಳಲಿಲ್ಲ. ಎಷ್ಟರಮಟ್ಟಿಗೆ ಎಂದರೆ, ಅಫಘಾನಿಸ್ತಾನದ ಮರುನಿರ್ಮಾಣ ಕಾರ್ಯಕ್ಕೆ ಪಾಕಿಸ್ತಾನ ನೀಡಲು ಹೊರಟ ಹಣವನ್ನೇ ನಿರಾಕರಿಸುವ ಧಾಟಿ ಅವರಲ್ಲಿತ್ತು.

‘ಅಫಘಾನಿಸ್ತಾನದ ಮರು ನಿರ್ಮಾಣ ಕಾರ್ಯಕ್ಕೆ 500 ಮಿಲಿಯನ್ ಡಾಲರ್ ಸಹಾಯ ನೀಡುತ್ತಿರುವುದಾಗಿ ಪಾಕಿಸ್ತಾನ ಹೇಳಿದೆ. ಮಿಸ್ಟರ್ ಅಜೀಜ್ (ಪಾಕಿಸ್ತಾನದ ವಿದೇಶಿ ನೀತಿಗಳ ಮುಖ್ಯಸ್ಥ) ಈ ಮೊತ್ತವನ್ನು ಉಗ್ರವಾದ ಹತ್ತಿಕ್ಕುವುದಕ್ಕೆ ಬಳಸಿ’ ಎಂದಿದ್ದಾರೆ ಗನಿ.

‘ಪಾಕಿಸ್ತಾನದ ಆಶ್ರಯವಿಲ್ಲದಿದ್ದರೆ ನಾವು ವಾರಗಳ ಕಾಲವೂ ಬದುಕಲು ಸಾಧ್ಯವಿಲ್ಲ ಎಂದು ಅಫ್ಘನ್ ತಾಲಿಬಾನಿ ಉಗ್ರರ ಮುಖ್ಯಸ್ಥನೇ ಹೇಳಿದ್ದಾನೆ. ಕಳೆದ ವರ್ಷ ಅಫಘಾನಿಸ್ತಾನವು ಅತಿ ಹೆಚ್ಚು ಸಾವುಗಳನ್ನು ಕಂಡಿದೆ. ಇದನ್ನು ಸಹಿಸುವುದಕ್ಕೆ ಸಾಧ್ಯವಿಲ್ಲ’ ಎಂದು ಗುಡುಗಿದ್ದಾರೆ ಗನಿ.

ಉಳಿದಂತೆ ಅಫಘಾನಿಸ್ತಾನವು ಭಾರತದಿಂದ ಮಿಲಿಟರಿ ಉಪಕರಣಗಳಿಗೂ ಎದುರು ನೋಡುತ್ತಿದೆ. ಈ ನಿಟ್ಟಿನ ಹಲವು ಬೇಡಿಕೆಗಳನ್ನು ಹಿಂದಿನಿಂದಲೂ ವ್ಯಕ್ತಪಡಿಸುತ್ತಿದೆ. ಉಭಯ ದೇಶಗಳ ಮಧ್ಯೆ ಈ ಅಂಶವೂ ಮಾತುಕತೆಯ ಪ್ರಮುಖಾಂಶ ಆಗಲಿದೆ.

Leave a Reply