ನಕಲಿ ನೋಟುಗಳ ತಡೆಗೆ ಎಷ್ಟರಮಟ್ಟಿಗೆ ಸಹಕರಿಸಲಿದೆ ಅನಾಣ್ಯೀಕರಣ? ಉಳಿದ ದೇಶಗಳು ವಹಿಸಿರುವ ಎಚ್ಚರಿಕೆ ಎಂಥಾದ್ದು?

authors-rangaswamyಅನಾಣ್ಯೀಕರಣ(demonetization) ನಕಲಿ ನೋಟು ತಡೆಯಲು ಇರುವ ಏಕೈಕ ವಿಧಾನವೇ? ನಕಲಿ ನೋಟುಗಳ ಹಾವಳಿ ನಮ್ಮದೇಶದಲ್ಲಿ ಮಾತ್ರವೂ ಅಥವಾ ಬೇರೆ ಮುಂದುವರೆದ ದೇಶಗಳಲ್ಲೂ ಇದೆಯೋ? ಪ್ಯಾರಿಸ್ನಿಂದ ಹೀಗೊಂದು ಮಿಂಚಂಚೆ ಕಳಿಸಿದ್ದು ಗೆಳತಿ ಪ್ರಣತಿ. ಈ ಪ್ರಶ್ನೆಯನ್ನು, ಉತ್ತರವನ್ನು ಹಣಕ್ಲಾಸುವಿನಲ್ಲಿ ಬರೆದರೆ ಇದೇ ಪ್ರಶ್ನೆ ಹೊಂದಿರುವ ಅನೇಕರಿಗೆ ಉಪಯೋಗವಾದೀತು ಎನ್ನುವ ಚಿಂತನೆಯಿಂದ ಇದು ಇಲ್ಲಿ ಬೆಳಕು ಕಂಡಿದೆ. ಇರಲಿ ಉತ್ತರ ನೋಡೋಣ ಬನ್ನಿ.

ನಕಲಿ ನೋಟು ತಡೆಗೆ ಪೇಪರ್ ಕರೆನ್ಸಿ ಗಿಂತ ಪ್ಲಾಸ್ಟಿಕ್ ಕರೆನ್ಸಿ ಬಹಳ ಉತ್ತಮ. ಪ್ಲಾಸ್ಟಿಕ್ ನೋಟುಗಳನ್ನ ಪಾಲಿಮರ್ ನೋಟುಗಳು ಎಂದು ಕರೆಯುತ್ತಾರೆ. ಪೇಪರ್ ನೋಟಿನಲ್ಲಿ ಬಳಸಲು ಸಾಧ್ಯವಾಗದೆ ಇರುವ ಇಂಕು, ಮುದ್ರಣ ಶೈಲಿ ಮತ್ತು ಹಲವು ರಕ್ಷಣಾ ವಿಧಗಳನ್ನ ಪಾಲಿಮರ್ ನೋಟಿನಲ್ಲಿ ಬಳಸಬಹುದು. ಸಾಮಾನ್ಯ ಪೇಪರ್ ಹಣದಲ್ಲಿ ಮಾಡಲು ಆಗದ ಮೂರು ಹಂತದ ರಕ್ಷಣಾ ಶ್ರೇಣಿಗಳನ್ನ ಪಾಲಿಮರ್ ನೋಟಿನಲ್ಲಿ ಅಳವಡಿಸಬಹುದು. ಮೊದಲ ಹಂತದಲ್ಲಿ ಲೋಹವನ್ನ ಚಿನ್ಹೆಯಂತೆ ಬಳಸುವುದು ಇದನ್ನು ಸಾಮಾನ್ಯ ನಾಗರೀಕ ಕೂಡ ಗುರುತಿಸಬಲ್ಲ. ಎರಡನೇ ಹಂತದಲ್ಲಿ ಅಸಲಿ ನಕಲಿ ಗುರುತು ಹಿಡಿಯಲು ಮಷೀನ್ ನಿಂದ ಸಾಧ್ಯವಾಗುವ ಎಳೆಗಳನ್ನ ಅಳವಡಿಸುವುದು. ಮೂರನೇ ಹಂತದಲ್ಲಿ ಬ್ಯಾಂಕ್ ಮಾತ್ರ ಗುರುತಿಸಬಲ್ಲ  ರಕ್ಷಣಾ ದಾರವನ್ನ ಅಳವಡಿಸುವ ಅವಕಾಶವಿದೆ.  ಹೀಗಾಗಿ polymer  ಬ್ಯಾಂಕ್ ನೋಟುಗಳು ಅನಾಣ್ಯೀಕರಣಕ್ಕಿಂತ ಬಹಳ ಉತ್ತಮ. ಅನಾಣ್ಯೀಕರಣದಿಂದ  ಸಮಸ್ಯೆಯ ತಾತ್ಕಾಲಿಕ ಶಮನ ಸಿಗುತ್ತದೆ. ಸಮಯ ಕಳೆದಂತೆ ಹೊಸ ನೋಟುಗಳ ಮತ್ತೆ ನಕಲು ಮಾಡಲು ಬರುವುದಿಲ್ಲ ಎನ್ನುವಂತಿಲ್ಲ.

ಕ್ಯಾಶ್ ಲೆಸ್ ಅರ್ಥಾತ್ ನಗದು ರಹಿತ ಸಮಾಜ ನಿರ್ಮಿಸುವುದು ಎಲ್ಲಕ್ಕಿಂತ ಹೆಚ್ಚು ಸುರಕ್ಷಿತ ಮತ್ತು ಎಲ್ಲಕ್ಕಿಂತ ಹೆಚ್ಚು ಪಾರದರ್ಶಕ. ಆದರೆ ಕ್ಯಾಶ್ ಲೆಸ್ ಸಮಾಜ ನಿರ್ಮಿಸುವುದಕ್ಕೆ ಮುಂಚೆ ಅದಕ್ಕೆ ಅಗತ್ಯ ಮೂಲಸೌಕರ್ಯ ನಿರ್ಮಿಸುವ ಅವಶ್ಯಕತೆ ಇದೆ. ಎಲ್ಲಕ್ಕೂ ಮುಖ್ಯವಾಗಿ ಸಮಾಜವನ್ನ ಸಾಕ್ಷರತೆಯೆಡೆಗೆ ಕರೆದೊಯ್ಯಬೇಕಿದೆ. ಹಾಗಾಗಿ ಭಾರತದಂತ ದೇಶದಲ್ಲಿ ಕ್ಯಾಶ್ ಲೆಸ್ ಸಮಾಜ ನಿರ್ಮಿಸುವುದು ಸುಲಭದ ಮಾತಲ್ಲ. hana class

ಇನ್ನು ನಕಲಿ ನೋಟುಗಳ ಹಾವಳಿ ಬಗ್ಗೆ ಹೇಳುವುದಾದರೆ, ಜಗತ್ತಿನ ಎಲ್ಲಾ ದೇಶಗಳೂ ಒಂದಲ್ಲ ಒಂದು ಹಂತದಲ್ಲಿ ನಕಲಿ ನೋಟುಗಳ ಹಾವಳಿಗೆ ತುತ್ತಾಗಿವೆ. ಯೂರೋಪಿಯನ್ ದೇಶಗಳಲ್ಲಿ 2016ರ ಈ ಹೊತ್ತಿನಲ್ಲೂ  ನಕಲಿ ನೋಟುಗಳು ಚಲಾವಣೆಯಲ್ಲಿ ಇವೆ ಎನ್ನುವುದು ಕಹಿಸತ್ಯ. ಆಸ್ಟ್ರೇಲಿಯಾ ದೇಶ ನಕಲಿ ನೋಟುಗಳ ಹಾವಳಿಯಿಂದ ಕಂಗೆಟ್ಟು 1988 ರಲ್ಲಿ ಪಾಲಿಮರ್ ನೋಟನ್ನ ಬಿಡುಗಡೆ ಮಾಡಿತು. ತನ್ಮೂಲಕ ಜಗತ್ತಿನಲ್ಲಿ ಪಾಲಿಮರ್ ನೋಟನ್ನ ಚಲಾವಣೆಗೆ ತಂದ ಪ್ರಥಮ ದೇಶ ಎನ್ನುವ ಹೆಗ್ಗಳಿಕೆಗೂ ಪಾತ್ರವಾಯಿತು.

ಕಳೆದ ತಿಂಗಳಷ್ಟೇ ಯುನೈಟೆಡ್ ಕಿಂಗ್ಡಮ್ ಐದು ಪೌಂಡ್ ಪಾಲಿಮರ್ ನೋಟುಗಳನ್ನ ಬಿಡುಗಡೆ ಮಾಡಿತು. ಪ್ರಮುಖ ಯೂರೋಪಿಯನ್ ದೇಶಗಳ ಪೈಕಿ ಈ ಹೆಜ್ಜೆಯಿಟ್ಟ ಪ್ರಥಮ ದೇಶ ಬ್ರಿಟನ್ ಎನ್ನಬಹುದು.  ಈ ಪಾಲಿಮರ್ ನೋಟನ್ನು ಮಾಡಲು ಪ್ರಾಣಿಯ ಕೊಬ್ಬನ್ನು ಬಳಸಲಾಗಿದೆ ಎನ್ನುವುದು ಹೊಸ ಕೂಗು. ಆ ನೋಟನ್ನ ಬ್ಯಾನ್ ಮಾಡಿ ಎಂದು ಬ್ರಿಟನ್ ಸಸ್ಯಾಹಾರಿಗಳು ಸಹಿ ಸಂಗ್ರಹದಲ್ಲಿ ತೊಡಗಿದ್ದಾರೆ! ಯೂರೋಪಿಯನ್ ಒಕ್ಕೂಟಕ್ಕೆ 2007ರಲ್ಲಿ ಸೇರಿದ ರುಮೇನಿಯಾ ಪಾಲಿಮರ್ ನೋಟನ್ನು ಬಳಸುತ್ತಿದೆ. ಉಳಿದಂತೆ ಯೂರೋಪಿಯನ್ ಒಕ್ಕೂಟ ಈ ದಾರಿಯನ್ನು ತುಳಿಯಲು ಬಾಕಿಯಿದೆ.

ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಮಾಲ್ಡೀವ್ಸ್, ರುಮೇನಿಯಾ, ಇಂಗ್ಲೆಂಡ್ ಪಾಲಿಮರ್ ನೋಟುಗಳನ್ನು ಬಳಸುತ್ತಿರುವ ಪ್ರಮುಖ ದೇಶಗಳು.

ಸಾಮಾನ್ಯ ಪೇಪರ್ ನೋಟಿಗಿಂತ ಪಾಲಿಮರ್ ನೋಟು ಹೆಚ್ಚು ಬಾಳಿಕೆ ಬರುತ್ತದೆ. ಇದನ್ನು ಪೇಪರ್ ನೋಟು ನಕಲು ಮಾಡಿದಂತೆ ನಕಲು ಮಾಡಲು ಬಾರದು. ವಸ್ತು ಸ್ಥಿತಿ ಹೀಗಿದ್ದೂ  ಅಮೇರಿಕಾ, ಯೂರೋಪ್ ದೇಶಗಳು ಇದನ್ನನ್ನು ಇನ್ನೂ ಅಳವಡಿಸಿಕೊಳ್ಳದೆ ಇರುವುದು ಮತ್ತು ಮೋದಿ ಸರಕಾರ ಕೂಡ ಈ ಬಗ್ಗೆ ಚಿಂತನೆ ಮಾಡದೆ ಹೋದದ್ದು  ಆಶ್ಚರ್ಯದ ಜೊತೆ ಜೊತೆಗೆ ಸಂಶಯವನ್ನೂ ಜೊತೆಯಾಗಿಸಿದೆ.

(ಹಣಕ್ಲಾಸು ಅಂಕಣ ಪ್ರತಿ ಸೋಮವಾರ ಪ್ರಕಟವಾಗುತ್ತದೆ. ಹಣಕಾಸು ಜಗತ್ತಿನಲ್ಲಿ ಇದೇಕೆ ಹೀಗೆ ಎಂಬ ಕೌತುಕದ ಯಾವುದೇ ಪ್ರಶ್ನೆಗಳನ್ನು ಓದುಗರೂ ಕೇಳಬಹುದು. ಎಲ್ಲ ಸಂದೇಹಗಳನ್ನೂ ನೀವು ಲೇಖಕ ರಂಗಸ್ವಾಮಿಯವರಿಗೆ ನೇರವಾಗಿ ಕೇಳಿಬಿಡಿ.. ಮಿಂಚಂಚೆ- muraram@yahoo.com)

Leave a Reply