ಜಯಾ ಹೃದಯಸ್ಥಂಬನ, ಈಗ ಕಾಣುತ್ತಿರುವುದು ಅಮ್ಮನ ಮೇಲಿನ ಪ್ರೀತಿಯ ಜತೆಯಲ್ಲೇ ಅವರ ನಂತರ ಯಾರೆಂಬ ಪ್ರಶ್ನೆಯಿಂದ ತಪ್ಪಿಸಿಕೊಳ್ಳುತ್ತಿರುವ ವಾತಾವರಣ

 

ಡಿಜಿಟಲ್ ಕನ್ನಡ ಟೀಮ್:

ತಿಂಗಳುಗಳಿಂದ ಚೆನ್ನೈನ ಅಪೊಲೊ ಆಸ್ಪತ್ರೆಯಲ್ಲಿ ದಾಖಲಾಗಿದ್ದ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರಿಗೆ ಭಾನುವಾರ ಹೃದಯಾಘಾತವಾಗಿದೆ. ತಜ್ಞವೈದ್ಯರು ಜಯಾ ಅವರ ಶುಶ್ರೂಷೆಯಲ್ಲಿ ನಿರತರಾಗಿದ್ದಾರೆ. ಆಸ್ಪತ್ರೆ ಮೂಲಗಳಿಂದ ಯಾವುದೇ ಹೊಸ ಮಾಹಿತಿಗಳು ಬಂದಿಲ್ಲ.

ಎಐಎಡಿಎಂಕೆ ವಕ್ತಾರರು ಮಾತ್ರ, ‘ಅಮ್ಮ ಚಿಕಿತ್ಸೆಗೆ ಸ್ಪಂದಿಸಿದ್ದಾರೆ. ದೇವರು ಅಮ್ಮನ ಜತೆಗಿದ್ದಾನೆ. ಏನೂ ಅಪಾಯವಿಲ್ಲ. ಗುಣಮುಖರಾಗಿ ಬರುತ್ತಾರೆ’ ಎಂದೆಲ್ಲ ಹೇಳುತ್ತಿದ್ದಾರೆ. ಅಪೊಲೊ ಆಸ್ಪತ್ರೆಯ ಮುಂದಷ್ಟೇ ಅಲ್ಲದೇ ಚೆನ್ನೈನ ನಾನಾ ಕಡೆಗಳಲ್ಲಿ ಜಯಲಲಿತಾ ಬೆಂಬಲಿಗರು ಆತಂಕಿತರಾಗಿ ಬೀದಿಗೆ ಬಂದಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಮಹಿಳಾ ಬೆಂಬಲಿಗರು ಅದಾಗಲೇ ಕಣ್ಣೀರುಗರೆಯುತ್ತಿದ್ದಾರೆ.

70 ದಿನಗಳಿಂದ ಜಯಲಲಿತಾ ಆಸ್ಪತ್ರೆಯಲ್ಲಿದ್ದಾಗಲೂ ಎಐಎಡಿಎಂಕೆ ಏನೇನೂ ಆಗಿಲ್ಲ, ಎಲ್ಲವೂ ಸರಿಹೋಗಿದೆ ಎಂದೇ ಪ್ರತಿಪಾದಿಸಿಕೊಂಡುಬಂದಿತ್ತು. ವಾರ್ಡಿಗೆ ವರ್ಗಾವಣೆ ಆಗಿದ್ದಾರೆ. ಇನ್ನೇನು ಕರ್ತವ್ಯಕ್ಕೆ ಮರಳಿಯೇ ಬಿಡುತ್ತಾರೆ ಎಂದೇ ವಕ್ತಾರರು ಹೇಳುತ್ತ ಬಂದಿದ್ದಾರೆ. ಈಗಲೂ ಸಹ ಎಐಎಡಿಎಂಕೆ ವಕ್ತಾರೆ ಸರಸ್ವತಿಯವರು ಸುದ್ದಿವಾಹಿನಿಗಳಿಗೆ ಹೇಳುತ್ತಿರುವುದು- ‘ವಾರ್ಡಿಗೆ ವರ್ಗಾವಣೆಯಾಗಿದ್ದ ಅಮ್ಮಗೆ ಎಲ್ಲ ಸರಿಹೋಗುತ್ತ ಇತ್ತು. ಹಠಾತ್ ಆಗಿ ಹೃದಯ ಸ್ಥಂಬನವಾಯಿತು. ಆದರೆ ವೈದ್ಯರು ತ್ವರಿತ ಚಿಕಿತ್ಸೆ ಕೊಟ್ಟಿದ್ದಾರೆ. ಎಲ್ಲ ಸರಿಹೋಗಲಿದೆ. ಏನೂ ಭಯಪಡಬೇಕಿಲ್ಲ. ದೇವರು ಅಮ್ಮ ಜತೆಗಿದ್ದಾನೆ.’

ಆದರೆ ಚಿಕಿತ್ಸೆ ನೀಡಿದ ಡಾ. ನರೇಶ್ ತ್ರೆಹಾನ್ ಎನ್ಡಿಟಿವಿಯ ಜತೆ ದೂರವಾಣಿಯಲ್ಲಿ ಮಾತನಾಡುತ್ತ ಹೇಳಿರುವುದು- ‘ಆಗಿರುವುದು ಗಂಭೀರ ಆಘಾತವೇ. ಹಾಗೆಂದು ಚಿಕಿತ್ಸೆಗೆ ಫಲಕಾರಿ ಆಗದಂಥದ್ದೇನಲ್ಲ. ಆದರೆ ಹೃದಯ ಸ್ತಂಭನಕ್ಕೆ ಕಾರಣ ಗೊತ್ತಾಗಿಲ್ಲ. ಅದು ಸರಿಯಾಗುವಂತೆ ಚಿಕಿತ್ಸೆ ನೀಡಲಾಗಿದೆ. ಈ ವೇಳೆಯಲ್ಲಿ ಬೇರೆ ಅಂಗಾಂಗಳು ವಿಫಲವಾಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಇವೆಲ್ಲವಕ್ಕೆ ಸ್ಪಂದಿಸಿದರೆ ಚೇತರಿಕೆ ಸಾಧ್ಯವಾಗುತ್ತದೆ.’

68ರ ಪ್ರಾಯದ ಜಯಲಲಿತಾ ಗುಣಮುಖರಾಗಲಿ ಎಂದು ಬೆಂಬಲಿಗರೊಂದಿಗೆ ಎಲ್ಲರೂ ಈ ಕ್ಷಣದಲ್ಲಿ ಹಾರೈಸುವುದು ಸಹಜವೇ. ಆದರೆ ಪರಿಸ್ಥಿತಿ ಗಂಭೀರವಾಗಿದೆ ಎಂಬುದಂತೂ ಎಲ್ಲರಿಗೂ ಅರಿವಾಗುತ್ತಿರುವ ಸತ್ಯ.

ಹೃದಯ ಸ್ಥಂಬನವಾಗುವುದಕ್ಕೂ ಪೂರ್ವದ ಎರಡು ತಿಂಗಳ ಆಸ್ಪತ್ರೆ ವಾಸದಲ್ಲೂ ಜಯಲಲಿತಾರ ನಾಲ್ಕೈದು ಆಪ್ತರಿಗೆ ಬಿಟ್ಟು ಉಳಿದವರ್ಯಾರಿಗೂ ಅವರ ದರ್ಶನವಾಗಲಿಲ್ಲ. ಈಗಲೂ ಸಹ, ಜಯಲಲಿತಾ ಬಂದೇ ಬರುತ್ತಾರೆ ಎಂಬ ಪ್ರತಿಪಾದನೆಗಿಂತ ಹೊರತಾಗಿ- ‘ವೈದ್ಯರು ಅವರ ಪ್ರಯತ್ನ ಮಾಡಿದ್ದಾರೆ. ಒಳ್ಳೆಯದೇ ಆಗುತ್ತದೆ ಎಂದು ಆಶಿಸಿ, ಅದಕ್ಕಾಗಿ ಪ್ರಾರ್ಥಿಸೋಣ’ ಎಂಬ ಮಾತುಗಳಿಲ್ಲ. ಎಐಎಡಿಎಂಕೆಯ ಈ ಸನ್ನಿವೇಶಕ್ಕೆ ಎರಡು ಕಾರಣಗಳಿವೆ.

  • ಜಯಾ ನಂತರ ಯಾರು ಎಂಬ ಪ್ರಶ್ನೆ ಪಕ್ಷದಲ್ಲೇ ನಿರ್ಧಾರವಾದಂತಿಲ್ಲ. ಹಲವು ಸುಕ್ಕುಗಳು ಅಲ್ಲಿದ್ದಂತೆ ತೋರುತ್ತದೆ. ನಾಯಕತ್ವ ಎಂದರೆ ಅಮ್ಮ ಎಂಬಂತೆ ಸಾಗಿಬಂದ ಪಕ್ಷದಲ್ಲಿ ಈ ಪ್ರಕ್ರಿಯೆ ಅಷ್ಟು ಸುಲಭದ್ದೂ ಅಲ್ಲ. ಜಯಾ ಜತೆಗೆ ದೇವರಿದ್ದಾನೆ, ಗುಣಮುಖರಾಗದೇ ಬೇರೆ ಪ್ರಶ್ನೆಯೇ ಇಲ್ಲ ಎಂಬಂತಿರುವ ಅಭಿವ್ಯಕ್ತಿ ಕೇವಲ ಅಮ್ಮನ ಮೇಲಿನ ಉನ್ಮಾದಿತ ಪ್ರೀತಿ ಮಾತ್ರವಲ್ಲ, ಜತೆಯಲ್ಲೇ ಅದೊಂದು ಭಾವನಾತ್ಮಕ ಎಸ್ಕೇಪ್ ಮಾರ್ಗ ಸಹ. ಜಯಾ ನಂತರ ಯಾರು ಎಂಬ ಪ್ರಶ್ನೆಯನ್ನು ಎದುರಿಸಲಾಗದ ಪರಾರಿ ಭಯವೂ ಇಲ್ಲಿ ಸುಳಿದಾಡುತ್ತಿರುವುದು ಕಠೋರ ವಾಸ್ತವ.
  • ಪರ್ಯಾಯವಿಲ್ಲದಂತೆ ಬೆಳೆದ ಒಂದು ನಾಯಕತ್ವವು ಹಲವು ಮಿಥ್ ಗಳನ್ನು ಸೃಷ್ಟಿಸಿರುತ್ತದೆ. ಮನುಷ್ಯರ ನಡುವೆ ಇದ್ದೂ ಮಾನವಾತೀತತೆಯ ಗಂಧವೊಂದನ್ನು ನಾಯಕತ್ವದ ಸುತ್ತಲಿನ ಕೈಗಳು ಅದಕ್ಕೆ ಮೆತ್ತಿರುತ್ತವೆ. ಅಂಥ ಸದೃಢ ನಾಯಕತ್ವ ದೈಹಿಕ ನೆಲೆಯಲ್ಲಿ ಶಕ್ತಿಹೀನವಾಗಿ ಮಂಚಕ್ಕೊರಗಿರುವ ಚಿತ್ರವು ಸಾರ್ವಜನಿಕರೆದುರು ತೆರೆದುಕೊಂಡು, ಈ ಬಲವಾದ ಮಿಥ್ ಪರಿಕಲ್ಪನೆಗೆ ಭಂಗ ಬರುವುದನ್ನು ನಾಯಕತ್ವದ ಸುತ್ತಲಿನ ಕೋಟೆ ಒಪ್ಪುವುದಿಲ್ಲ. ಹಾಗೆಂದೇ ಇಷ್ಟು ದಿನಗಳ ಕಾಲವೂ ಜಯಲಲಿತಾರ ಗುಣಮುಖದ ಒಂದು ಚಿತ್ರವೂ ಲಭ್ಯವಿಲ್ಲ ಹಾಗೂ ನಾಲ್ಕೈದು ಪರಮಾಪ್ತರಿಗೆ ಬಿಟ್ಟರೆ ಉಳಿದವರು ಅವರ ಬಳಿ ಸಾರಲು ಸಾಧ್ಯವಾಗಿಲ್ಲ.

Leave a Reply