ಜಯಲಲಿತಾ ನಿಧನ ವರದಿಯ ಗೊಂದಲ, ರಾಜ್ಯದ ಅಧಿಕಾರಿಗಳ ಮೇಲೆ ಸಿಬಿಐ ತೂಗುಗತ್ತಿ, ಹಿಂದುಳಿದ ನಿರ್ಗತಿಕರಿಗೆ ಸರ್ಕಾರದಿಂದ ಕೃಷಿ ಭೂಮಿ, ಟೈಮ್ಸ್ ಓದುಗರ ಸನ್ಮಾನ ಗೆದ್ದ ಮೋದಿ

ಚೆನ್ನೈನ ಅಪೊಲೊ ಆಸ್ಪತ್ರೆ ಮುಂದೆ ಜಯಲಲಿತಾರ ಆರೋಗ್ಯ ಸುದ್ದಿಗೆ ಕಾತರಿಸಿರುವ ಜನಸಾಗರ

ಡಿಜಿಟಲ್ ಕನ್ನಡ ಟೀಮ್:

ಜಯಲಲಿತಾ ನಿಧನದ ಗೊಂದಲ

ತೀವ್ರ ಅನಾರೋಗ್ಯದಿಂದ ಬಳಲುತ್ತಾ ಹಲವು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಸೋಮವಾರ ವಿಧಿವಶರಾಗಿದ್ದಾರೆ ಎಂಬ ಮಾಧ್ಯಮಗಳ ವರದಿ ಹಲವು ಗೊಂದಲಕ್ಕೆ ಕಾರಣವಾಗಿತ್ತು. ಅಂಗಾಂಗ ವೈಫಲ್ಯದ ಕಾರಣದಿಂದ ಆಸ್ಪತ್ರೆಗೆ ಸೇರಿದ್ದ ಜಯಲಲಿತಾ ಅವರು ಕಳೆದ ಕೆಲವು ವಾರಗಳಿಂದ ಚಿಕಿತ್ಸೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದರು ಎಂದು ಚೆನ್ನೈನ ಅಪೋಲೊ ಆಸ್ಪತ್ರೆ ಮಾಹಿತಿ ನೀಡಿತ್ತು. ಆದರೆ ಜಯಲಲಿತಾ ಅವರು ಭಾನುವಾರ ರಾತ್ರಿ ಹೃದಯಾಘಾತಕ್ಕೆ ತುತ್ತಾಗಿದ್ದು, ಅವರ ಆರೋಗ್ಯ ಮತ್ತಷ್ಟು ಬಿಗಡಾಯಿಸುವಂತೆ ಮಾಡಿತ್ತು. ಸೋಮವಾರ ಸಂಜೆ ವೇಳೆಗೆ ತಮಿಳುನಾಡಿನ ಸುದ್ದಿ ವಾಹಿನಿಗಳು ಜಯಲಲಿತಾ ನಿಧನ ಎಂಬ ವರದಿ ಪ್ರಸಾರ ಮಾಡಿದ್ದವು. ಈ ವರದಿ ಪ್ರಸಾರ ನಂತರ ಜಯಲಲಿತಾ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತು. ಅಲ್ಲದೆ ಆಸ್ಪತ್ರೆಯ ಆವರಣದಲ್ಲಿ ನೆರೆದಿದ್ದವರಲ್ಲಿ ಕೆಲವರು ಕಲ್ಲುತೂರಾಟ ಆರಂಭಿಸಿದ್ದರು. ನಂತರ ಅಪೋಲೊ ಆಸ್ಪತ್ರೆ ಸ್ಪಷ್ಟನೆ ನೀಡಿ, ಈ ವರದಿ ಸುಳ್ಳು, ಜಯಲಲಿತಾ ಅವರು ಇನ್ನು ಜೀವ ರಕ್ಷಕ ಸಹಾಯದಲ್ಲಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿತು.

ಜಯಲಲಿತಾ ಅವರ ಆರೋಗ್ಯ ಪರಿಸ್ಥಿತಿ ತೀವ್ರ ಹದಗೆಟ್ಟಿದ್ದ ಹಿನ್ನೆಲೆಯಲ್ಲಿ ತಮಿಳುನಾಡಿನ ಪರಿಸ್ಥಿತಿ ತೀವ್ರ ಸೂಕ್ಷ್ಮವಾಗಿತ್ತು. ಹೀಗಾಗಿ ರಾಜ್ಯದಿಂದ ತಮಿಳುನಾಡಿಗೆ ತೆರಳುವ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಇನ್ನು ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದ ವಿವಿಧೆಡೆಗಳಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಹೆಚ್ಚು ತಮಿಳಿಗರು ಇರುವ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತೆ ನಿಯೋಜಿಸಲಾಗಿದೆ.

ಪ್ರಭಾವಿ ಸಚಿವರು, ಅಧಿಕಾರಿಗಳ ಮೇಲೆ ಸಿಬಿಐ ಕತ್ತಿ

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಬಲೆಗೆ ಬಿದ್ದ ಇಬ್ಬರು ಅಧಿಕಾರಿಗಳು ಈಗ ಸಿಬಿಐ ಅಧಿಕಾರಿಗಳ ಮುಂದೆ ಮಹತ್ತರ ಮಾಹಿತಿಗಳನ್ನು ಬಿಚ್ಚಿಟ್ಟಿದ್ದು, ರಾಜ್ಯದ ಮೂವರು ಸಚಿವರು ಹಾಗೂ ಇತರೆ ಅಧಿಕಾರಿಗಳ ಮೇಲೆ ತೂಗು ಕತ್ತಿ ನೇತಾಡುವಂತೆ ಮಾಡಿರುವುದಾಗಿ ಮೂಲಗಳು ತಿಳಿಸಿವೆ. ಸಿಬಿಐ ವಿಚಾರಣೆಯಲ್ಲಿರುವ ಅಧಿಕಾರಿಗಳಾದ ಚಿಕ್ಕರಾಯಪ್ಪ ಮತ್ತು ಜಯಚಂದ್ರ ಅವರು ನೀಡಿರುವ ಮಾಹಿತಿ ಆಧಾರದ ಮೇಲೆ ರಾಜ್ಯದ ಮೂವರು ಸಚಿವರು ಹಾಗೂ ಇತರೆ ಅಧಿಕಾರಿಗಳನ್ನು ಸಿಬಿಐ ಯಾವುದೇ ಕ್ಷಣದಲ್ಲಿ ಬೇಕಾದರೂ ವಿಚಾರಣೆಗೆ ಒಳಪಡಿಸಬಹುದು. ಅಗತ್ಯ ಬಿದ್ದರೆ ಜಾರಿ ನಿರ್ದೇಶನಾಲಯ ಬಂಧಸಬಹುದು ಎಂದು ಹೇಳಲಾಗುತ್ತಿದೆ. ಈ ಎಲ್ಲ ಬೆಳವಣಿಗೆಗಳು ಸಿದ್ದರಾಮಯ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಹೆಚ್ಚಿದೆ ಎಂದು ರಾಜಕೀಯ ವಲಯಗಳಲ್ಲಿ ಚರ್ಚೆಯಾಗುತ್ತಿದೆ.

ಹಿಂದುಳಿದ ವರ್ಗದ ನಿರ್ಗತಿಕರಿಗೆ ಭೂಮಿ

ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ರಾಜ್ಯಾದ್ಯಂತ 30 ಸಾವಿರ ಎಕರೆ ಜಮೀನು ಖರೀದಿಸಿ ಅಲೆಮಾರಿಗಳು, ಸುಡುಗಾಡು ಸಿದ್ದರು, ಹಂದಿ ಜೋಗಿಗಳು ಸೇರಿದಂತೆ ಹಿಂದುಳಿದ ವರ್ಗದ ನಿರ್ಗತಿಕರಿಗೆ ಕೃಷಿ ಭೂಮಿ ನೀಡಿ ಭೂಮಾಲೀಕರನ್ನಾಗಿ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ. ಈ ಭೂಮಿ ಖರೀದಿಯಲ್ಲಿ ದಲ್ಲಾಳಿಗಳು, ಮಧ್ಯವರ್ತಿಗಳಿಗೆ ಅವಕಾಶವಿಲ್ಲ. ಜಿಲ್ಲಾಧಿಕಾರಿಗಳೇ ನೇರವಾಗಿ ಭೂಮಿ ಖರೀದಿಸಲಿದ್ದಾರೆ. ಈ ಭೂಮಿ ಖರೀದಿಗೆ ಸುಮಾರು ₹ 1500 ಕೋಟಿ ವೆಚ್ಚವಾಗುವ ಸಾಧ್ಯತೆ ಇದೆ.

ಇನ್ನುಳಿದಂತೆ ನೀವು ತಿಳಿಯಬೇಕಿರುವ ಪ್ರಮುಖ ಸುದ್ದಿ ಸಾಲುಗಳು…

  • ಭಾರತದ ನೌಕಾ ಪಡೆಯ ಹಡಗು ಐಎನ್ಎಸ್ ಬೆಟ್ವಾ ಸೋಮವಾರ ಮುಂಬೈನಲ್ಲಿ ಪಲ್ಟಿ ಹೊಡೆದಿದೆ. ಪರಿಣಾಮ ಇಬ್ಬರು ನಾವಿಕರು ಕಣ್ಮರೆಯಾಗಿದ್ದು, ಸಣ್ಣ ಪುಟ್ಟ ಗಾಯವಾಗಿದ್ದ 14 ಮಂದಿಯನ್ನು ರಕ್ಷಿಸಲಾಗಿದೆ. 3,850 ಟನ್ ತೂಕದ ಈ ಹಡಗು ದುರಸ್ಥಿಕಾರ್ಯದ ನಂತರ ಮತ್ತೆ ನೀರಿಗೆ ಇಳಿಯುತ್ತಿದ್ದ ಸಂದರ್ಭದಲ್ಲಿ ಪಕ್ಕಕ್ಕೆ ವಾಲಿ ಬಿದ್ದಿದೆ. ನುರಿತ ಈಜುಗಾರರು ಕಣ್ಮರೆಯಾಗಿರುವ ಇಬ್ಬರು ನಾವಿಕರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
  • ಟೈಮ್ಸ್ ಮ್ಯಾಗಜೀನ್ ನಡೆಸಿದ ವರ್ಷದ ವ್ಯಕ್ತಿ (ಓದುಗರ ವಿಭಾಗ) ಸ್ಪರ್ಧೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಜಯ ಸಾಧಿಸಿದ್ದಾರೆ. ಭಾನುವಾರ ಮಧ್ಯರಾತ್ರಿವರೆಗೂ ನಡೆದ ಮತದಾನದಲ್ಲಿ ಮೋದಿ ಶೇ.18ರಷ್ಟು ಮತಗಳನ್ನು ಪಡೆದಿದ್ದಾರೆ ಎಂದು ಟೈಮ್ಸ್ ಮ್ಯಾಗಜೀನ್ ಮಾಹಿತಿ ನೀಡಿದೆ. ಈ ಸ್ಪರ್ಧೆಯಲ್ಲಿ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಫೇಸ್ ಬುಕ್ಕಿನ ಮಾರ್ಕ್ ಜುಕರ್ ಬರ್ಗ್, ಹಿಲರಿ ಕ್ಲಿಂಟನ್ ಸೇರಿದಂತೆ ಇತರೆ ವಿಶ್ವದ ಪ್ರಭಾವಿ ವ್ಯಕ್ತಿಗಳು ಈ ಪ್ರಶಸ್ತಿ ಆಯ್ಕೆ ಪಟ್ಟಿಯಲ್ಲಿದ್ದರು.

Leave a Reply