ರಜಾಕಿ ಕುಟುಂಬದ ₹2 ಲಕ್ಷ ಕೋಟಿಗಳ ಆದಾಯ ಘೋಷಣೆಯನ್ನು ತೆರಿಗೆ ಇಲಾಖೆ ಒಪ್ಪದಿರುವುದೇಕೆ ಗೊತ್ತೇ? ಇದು ತನಿಖೆ ಬಯಸುತ್ತಿರುವ ಹಗರಣ!

ಡಿಜಿಟಲ್ ಕನ್ನಡ ಟೀಮ್:

ಕೇಂದ್ರ ಸರ್ಕಾರದ ಆದಾಯ ಘೋಷಣೆ ಯೋಜನೆ (ಐಡಿಎಸ್) ಯಲ್ಲಿ ಬಹಿರಂಗವಾದ ಇಬ್ಬರ ಆದಾಯವನ್ನು ಈ ಯೋಜನೆಯಡಿ ಪರಿಗಣಿಸಲು ಆದಾಯ ತೆರಿಗೆ ಇಲಾಖೆ ಒಪ್ಪಿಲ್ಲ ಎಂಬುದು ನಿನ್ನೆಯ ಸುದ್ದಿ. ಆದರೆ ಈಗ ಈ ಇಬ್ಬರು ಆದಾಯ ಘೋಷಿತರ ವಿರುದ್ಧ ಸರ್ಕಾರ ತನಿಖೆಗೆ ಮುಂದಾಗಿದೆ. ಆ ಮೂಲಕ ಪ್ರಭಾವಿ ವ್ಯಕ್ತಿಗಳು ಹಾಗೂ ರಾಜಕಾರಣಿಗಳು ಕೇಂದ್ರ ಸರ್ಕಾರದ ಯೋಜನೆಯನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಗಟ್ಟುವಲ್ಲಿ ಆದಾಯ ತೆರಿಗೆ ಇಲಾಖೆ ಯಶಸ್ವಿಯಾಗಿದೆ.

ಅಹ್ಮದಾಬಾದ್ ಮೂಲದ ಮಹೇಶ್ ಕುಮಾರ್ ಚಂಪಕ್ಲಾಲ್ ಶಾ ಅವರು ₹ 13,860 ಕೋಟಿ ಆದಾಯ ಘೋಷಣೆ ಮಾಡಿದ್ದರೆ, ಮುಂಬೈನ ಒಂದೇ ಕುಟುಂಬದ ನಾಲ್ವರು (ಅಬ್ದುಲ್ ರಜಾಕಿ ಮೊಹಮದ್ ಸೈಯದ್, ಮೊಹಮದ್ ಆರಿಫ್ ಅಬ್ದುಲ್, ರುಖ್ಸಾನಾ ಅಬ್ದುಲ್ ರಜಾಕಿ ಸೈಯದ್ ಮತ್ತು ನೂರ್ ಜಹಾನ್ ಮೊಹಮದ್ ಸೈಯದ್) ಸೇರಿ ಒಟ್ಟು ₹ 2 ಲಕ್ಷ ಕೋಟಿ ಆದಾಯವನ್ನು ಘೋಷಣೆ ಮಾಡಿದ್ದರು! ಇವು ಈ ಯೋಜನೆಯಲ್ಲಿ ಅತಿಹೆಚ್ಚು ಘೋಷಣೆಯಾದ ಅತಿ ದೊಡ್ಡ ಪ್ರಮಾಣದ ಆದಾಯ ಘೋಷಣೆಯಾಗಿವೆ.

ಸೆಪ್ಟೆಂಬರ್ 30ರ ಗಡವು ಹೊಂದಿದ್ದ ಕೇಂದ್ರ ಸರ್ಕಾರದ ಐಡಿಎಸ್ ಯೋಜನೆಯಲ್ಲಿ, ಆದಾಯ ಘೋಷಿತರನ್ನು ಸರ್ಕಾರ ಹಾಗೂ ಆದಾಯ ತೆರಿಗೆ ಇಲಾಖೆ ಯಾವುದೇ ಕಾರಣಕ್ಕೂ ತಮ್ಮ ಆದಾಯದ ಬಗ್ಗೆ ಪ್ರಶ್ನೆ ಮಾಡುವುದಿಲ್ಲ ಎಂದು ಹೇಳಿತ್ತು. ಆದರೂ ಸಹ ಈಗ ಈ ಎರಡು ಆದಾಯ ಘೋಷಿತರನ್ನು ಪ್ರಶ್ನೆ ಮಾಡುತ್ತಿರುವುದೇಕೆ ಎಂಬ ಪ್ರಶ್ನೆ ಸಹಜವಾಗಿಯೇ ಹುಟ್ಟಿಕೊಳ್ಳುತ್ತದೆ.

champaklal-shah
ಮಹೇಶ್ ಶಾ

ಈ ಸಂದರ್ಭದಲ್ಲಿ ಮಹೇಶ್ ಶಾ ಹಾಗೂ ರಜಾಕಿ ಕುಟುಂಬಸ್ಥರ ಹಿನ್ನೆಲೆ ಏನು ಎಂಬುದನ್ನು ನೋಡುವುದಾದರೆ, ಕೆಲವು ಮಾಧ್ಯಮದ ವರದಿಗಳ ಪ್ರಕಾರ ಮಹೇಶ್ ಶಾ ಹಲವು ತಿಂಗಳುಗಳಿಂದ ತಮ್ಮ ಮನೆಗೆ ಹಾಲು ಹಾಕುವವರಿಗೆ ಹಾಗೂ ಮನೆಯ ಕೇಬಲ್ ಸಂಪರ್ಕಕ್ಕೆ ಪಾವತಿಸಬೇಕಿದ್ದ ಹಣವನ್ನೇ ನೀಡಿರಲಿಲ್ಲ. ಬಿಲ್ಡರ್ ಎಂಬುದೇನೋ ಹೌದಾದರೂ ಇಷ್ಟು ಪ್ರಮಾಣದ ಹಣ ಇವರಲ್ಲಿ ಬಂದು ಸೇರುವಷ್ಟು ವಹಿವಾಟೇ ಇಲ್ಲ. ಹೀಗಿರುವಾಗ, ಇದು ಯಾರ ದುಡ್ಡು ಎಂಬ ಪ್ರಶ್ನೆ ಸಹಜ. ಶಾ ವಿಷಯದಲ್ಲಿ, ದಂಡದ ಮೊದಲ ಕಂತು ತುಂಬಲು ವಿಫಲವಾಗುತ್ತಲೇ, ತನ್ನ ಬಳಿ ಇದ್ದ ಹಣ ತನ್ನದಲ್ಲ ಹಾಗೂ ಇದು ಯಾರಿಗೆ ಸೇರಿದ್ದೆಂಬ ಬಗ್ಗೆ ಆದಾಯ ತೆರಿಗೆ ಇಲಾಖೆಗಳಿಗೆ ಎಲ್ಲ ವಿವರ ನೀಡುತ್ತೇನೆ ಅಂತ ಗುಜರಾತಿನ ಟಿವಿ ವಾಹಿನಿಯಲ್ಲಿ ಕುಳಿತು ಹೇಳಿದರು. ಶಾನನ್ನೀಗ ನಿರಂತರ ವಿಚಾರಣೆಗೆ ಒಳಪಡಿಸಲಾಗುತ್ತಿದೆ.

ಇನ್ನು ರಜಾಕಿ ಕುಟುಂಬದ ನಾಲ್ವರು ಸದಸ್ಯರ ಪೈಕಿ ಮೂರು ಸದಸ್ಯನ ಪ್ಯಾನ್ ಕಾರ್ಡ್ ಸಂಖ್ಯೆ ಸರಿಯಾಗಿದೆ. ಮೂರು ಪ್ಯಾನ್ ಕಾರ್ಡ್ ರಾಜಸ್ಥಾನದ ಅಜ್ಮೇರ್ ನಲ್ಲಿ ನೊಂದಣಿಯಾಗಿದ್ದು, ಒಂದು ಮುಂಬೈನಲ್ಲಿ ನೊಂದಣಿಯಾಗಿದೆ. ಅಜ್ಮೇರ್ ಮೂಲದ ಈ ಕುಟುಂಬಸ್ತರು ಇತ್ತೀಚೆಗಷ್ಟೇ ಮುಂಬೈಗೆ ಆಗಮಿಸಿದ್ದರು. ಇವರು ಪಶ್ಚಿಮ ಬಾಂದ್ರಾ ಪ್ರದೇಶದ ಲಿಂಕಿಂಗ್ ರಸ್ತೆಯಲ್ಲಿರುವ ಐಷಾರಾಮಿ ಅಪಾರ್ಟ್ ಮೆಂಟಿನಲ್ಲಿ ನೆಲೆಸಿದ್ದರು. ಈ ಕುಟುಂಬ ಸದಸ್ಯರಿಗೆ ರಾಜಕೀಯವಾಗಿ ಯಾವುದೇ ಸಂಪರ್ಕವಿಲ್ಲ. ಅಲ್ಲದೆ ಇವರು ಯಾವುದೇ ದೊಡ್ಡ ಉದ್ದಿಮೆಯನ್ನು ಹೊಂದಿರಲಿಲ್ಲ. ಹೀಗಾಗಿ ಇವರ ಆದಾಯದ ಬಗ್ಗೆ ಐಟಿ ಅಧಿಕಾರಿಗಳಿಗೆ ಅನುಮಾನ ಹುಟ್ಟಿತು. ಬಾಂದ್ರಾದ ಯಾವ ಅಪಾರ್ಟ್ಮೆಂಟಿನಲ್ಲಿ ಇವರ ವಿಳಾಸ ಸೂಚಿತವಾಗಿತ್ತೋ ಅಲ್ಲಿಗೆ ಸುದ್ದಿವಾಹಿನಿಗಳು ಹೋಗಿ ಪರೀಕ್ಷಿಸಿದಾಗ ಎರಡು ವರ್ಷಗಳಿಂದ ಅಲ್ಲಿ ಯಾರೂ ವಾಸಿಸುತ್ತಲೇ ಇರಲಿಲ್ಲ ಎಂಬ ಅಂಶ ಬೆಳಕಿಗೆ ಬಂತು.

ತೆರಿಗೆ ಇಲಾಖೆ ಈ ಎರಡು ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿತ್ತು. ಅದಕ್ಕೆ ಕಾರಣ ಏನೆಂದರೆ, ಇವರ ಆದಾಯ ಘೋಷಣೆಗೂ ಹಾಗೂ ಇವರ ಆದಾಯ ಮೂಲಕ್ಕೂ ಸಂಬಂಧವಿಲ್ಲದಷ್ಟು ವ್ಯತ್ಯಾಸ ಕಂಡುಬಂದಿದ್ದು. ಅಂದರೆ ಈ ಕಪ್ಪುಹಣ ಸಹ ಇವರು ಸಂಪಾದಿಸಿದ್ದಲ್ಲ ಎಂಬುದು ಸುಸ್ಪಷ್ಟ. ಒಂದು ಕುಟುಂಬದ ಬಳಿ 2 ಲಕ್ಷ ಕೋಟಿ ರುಪಾಯಿಗಳು ಜಮೆಯಾಗಿರುತ್ತವೆ ಅಂದರೆ ಏನರ್ಥ? ಹಾಗೆಂದೇ ಆದಾಯ ತೆರಿಗೆ ಇಲಾಖೆ ಅದನ್ನು ಒಪ್ಪಿಕೊಳ್ಳದೇ ಪಕ್ಕಕ್ಕಿರಿಸಿತು. ಹೇಗೂ ದಂಡ ಕಟ್ಟಿಸಿಕೊಂಡರಾಯಿತೆಂದು ಒಪ್ಪಿಬಿಟ್ಟಿದ್ದರೆ ಪ್ರಮಾದವಾಗುತ್ತಿತ್ತು. ಈ ಕುಟುಂಬದ ಬಳಿ ಹಣ ಸೇರಿಸಿರುವ ಪ್ರಭಾವಿಗಳು ಮೀಸೆ ಮರೆಯಲ್ಲೇ ನಗುತ್ತಿದ್ದರು. ಬಿಳಿಯಾದ 60 ಪ್ರತಿಶತ ಹಣ ಮತ್ತೆ ಸಂಬಂಧಪಟ್ಟವರಿಗೆ ಹಂಚಿಕೆಯಾಗಿ ಕಾಳಧನ ಉಳಿದುಕೊಳ್ಳುತ್ತಿತ್ತು.

ಇದು ಹೇಗೆಂದರೆ, ಒಟ್ಟಿನಲ್ಲಿ ಯಾರಿಗೋ ಶಿಕ್ಷೆಯಾದರಾಯಿತೆಂದು, ಕಾರು ಹರಿಸಿ ಮುಗ್ಧರನ್ನು ಕೊಂದವನ ಬದಲಿಗೆ ಇನ್ಯಾರೋ ಚಾಲಕನಾಗಿದ್ದ ಎಂದು ಚಿತ್ರಿಸಿ ಶಿಕ್ಷೆಯಾದರೆ ಹೇಗಿರುತ್ತೋ ಅಂತಹದ್ದು. ರಾಜಕೀಯ ಮತ್ತು ಪ್ರಭಾವಿ ವ್ಯಕ್ತಿಗಳು ರಜಾಕ್ ಕುಟುಂಬವನ್ನು ಬಳಸಿಕೊಂಡು ಕಾಳಧನವನ್ನು ತುಸು ಬಿಳಿಯಾಗಿಸಿಕೊಳ್ಳಲು ಹೋದದ್ದು ಸ್ಪಷ್ಟವಿದೆ. ಮಹೇಶ್ ಶಾ ಅಂತೂ ತನಗೆ ರಾಜಕೀಯ ವ್ಯಕ್ತಿಗಳ ಸಂಪರ್ಕವಿರುವುದು ಹೌದೆಂದಿದ್ದಾನೆ.

ಆದಾಯ ಘೋಷಣೆ ಯೋಜನೆಯಲ್ಲಿ ಸೆ.30ರ ವೇಳೆಗೆ ಒಟ್ಟು 71,726 ಮಂದಿ ತಮ್ಮಲ್ಲಿರುವ ಅನಧಿಕೃತ ಹಣವನ್ನು ಬಹಿರಂಗ ಪಡಿಸಿದ್ದರು. ಇದರ ಒಟ್ಟಾರೆ ಮೊತ್ತ ₹67,382 ಕೋಟಿಯಷ್ಟು. ಆದರೆ  ರಜಾಕಿ ಕುಟುಂಬಸ್ಥರ ಆದಾಯ ಘೋಷಣೆಯೇ ಈ ಮೊತ್ತವನ್ನು ಹಲವು ಪಟ್ಟುಗಳಲ್ಲಿ ಮೀರಿಸುವಂಥಾದ್ದು. ಇದನ್ನೂ ಸೇರಿಸಿಕೊಂಡು ಸರ್ಕಾರದ ಆದಾಯ ಘೋಷಣೆ ಯೋಜನೆ ಬಹಳ ಯಶಸ್ವಿಯಾಗಿದೆ ಎಂದು ಘೋಷಿಸಿಕೊಂಡರೆ ಅಂಕಿ- ಸಂಖ್ಯೆಗಳ ಲೆಕ್ಕದಲ್ಲಿ ಭಾರೀ ಯಶಸ್ಸೆಂದೇ ಹೊಗಳಿಕೆ ಸಿಗುತ್ತಿತ್ತು. ಆದರೆ ಈ ಬೃಹತ್ ಮೊತ್ತದ 60 ಶೇಕಡವನ್ನು ಬಿಳಿಯಾಗಿಸಿಕೊಂಡು ರಜಾಕ್ ಕುಟುಂಬ ಅದನ್ನು ತಲುಪಿಸಬೇಕಾದವರಿಗೆ ತಲುಪಿಸಿಬಿಡುತ್ತಿತ್ತು. ಇಲ್ಲಿ ಆದಾಯ ಇಲಾಖೆ ಬುದ್ಧಿವಂತಿಕೆಯನ್ನು ಮೆರೆದಿದೆ.

ಇದರೊಂದಿಗೆ ಈ ಯೋಜನೆಯನ್ನು ದುರುಪಯೋಗಪಡಿಸಿಕೊಳ್ಳುವ ರಾಜಕೀಯ ಷಡ್ಯಂತ್ರವೂ ಬಹಿರಂಗವಾಗಿದೆ. ಈ ಇಬ್ಬರ ದುಬಾರಿ ಆದಾಯದ ಹಿಂದೆ ಇರುವ ಆ ಪ್ರಭಾವಿ ವ್ಯಕ್ತಿಗಳು ಯಾರು ಎಂಬುದನ್ನು ಪತ್ತೆಹಚ್ಚುವ ಜವಾಬ್ದಾರಿ ಈಗ ಸರ್ಕಾರ ಮತ್ದತು ತನಿಖಾ ಏಜೆನ್ಸಿಗಳ ಮೇಲಿದೆ.

1 COMMENT

  1. The very best& right decision from ITD. In the same manner one and each account must be investigated through out the nation especially of politicians irrespective of parties.

Leave a Reply