ಕನ್ನಡದ ನೀರ್ಕುಡಿದು ತಮಿಳರ ಮನದರಸಿ ಆದ ಛಲದಂಕಮಲ್ಲಿ ಜಯಲಲಿತಾ ಇನ್ನಿಲ್ಲ

ಡಿಜಿಟಲ್ ಕನ್ನಡ ಟೀಮ್

ಮೇಲಿಂದ ಮೇಲೆ ತನಗಾದ ಅವಮಾನವನ್ನೇ ಅಧಿಕಾರದ ಮೆಟ್ಟಿಲಾಗಿ ಮಾಡಿಕೊಂಡು, ಕೈಗೆ ಸಿಕ್ಕ ಆ ಅಧಿಕಾರವನ್ನೇ ಕೋಟ್ಯಂತರ ತಮಿಳರ ಅಭಿಮಾನದ ತೊಟ್ಟಿಲಾಗಿ ಪರಿವರ್ತಿಸಿ, ಅದರಲ್ಲಿ ಆರು ಬಾರಿ ಮುಖ್ಯಮಂತ್ರಿಯಾಗಿ ತೂಗಿ ಮೆರೆದ ಕರ್ನಾಟಕ ಮೂಲದ ಜೆ. ಜಯಲಲಿತಾ ಎರಡೂವರೆ ತಿಂಗಳಿಂದ ಬೆಂಬಿಡದೆ ಕಾಡಿದ ಅನಾರೋಗ್ಯವನ್ನು ಜಯಿಸಲಾರದೆ ಸಾವಿನ ಮನೆ ಸೇರಿದ್ದಾರೆ.

ರಾಜಕಾರಣಿ ಪರಿವರ್ತಿತ ನಟಿ ಜಯಲಲಿತಾ ಸಾವು ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪದವಿಯನ್ನು ಅವರ ಮಾನಸಪುತ್ರ ಎಂದೇ ಹೆಸರಾದ ಪನ್ನೀರ ಸೆಲ್ವಂ ಅವರು ಅಲಂಕರಿಸಿದ್ದಾರೆ. ಮಂಗಳವಾರ ಮಧ್ಯರಾತ್ರಿ ನಡೆದ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಶಾಸಕಾಂಗ ಪಕ್ಷದ ಸಭೆಯ ಹೊಸ ನಾಯಕರಾಗಿ ಹೊರಹೊಮ್ಮಿದ ಪನ್ನೀರ ಸೆಲ್ವಂ ದುಃಖದ ಕಡಲಲ್ಲಿಯೇ ಸಿಎಂ ಆಗಿ ರಾಜಭವನದಲ್ಲಿ ತಡರಾತ್ರಿ ರಾಜ್ಯಪಾಲ ವಿದ್ಯಾಸಾಗರ ರಾವ್ ಅವರಿಂದ ಪ್ರಮಾಣ ವಚನ ಸ್ಪೀಕರಿಸಿದರು. ಅವರ ಜತೆ 17 ಮಂದಿ ಸಚಿವರ ತಂಡ ಪ್ರಮಾಣ ಸ್ವೀಕರಿಸಿತು.

ಜಯಲಲಿತಾ ಸಾವು ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಏಳು ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿದೆ. ಮೂರು ದಿನಗಳ ಕಾಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜಯಲಲಿತಾ ಪಾರ್ಥೀವ ಶರೀರವನ್ನು ಆಸ್ಪತ್ರೆಯಿಂದ ಪೋಯೆಸ್ ಗಾರ್ಡನ್ ನಿವಾಸಕ್ಕೆ ಸಾಗಿಸಲಾಗಿದೆ. ಅಲ್ಲಿಂದ ಚೆನ್ನೈನ ರಾಜಾಜಿ ಹಾಲ್ ಗೆ ಮಂಗಳವಾರ ಬೆಳಗ್ಗೆ ಸಾಗಿಸಿ, ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಜಯಲಲಿತಾ ಆತ್ಮಸಂಗಾತಿ, ರಾಜಕೀಯ ಗುರು, ಖ್ಯಾತ ನಟ ಎಂ.ಜಿ. ರಾಮಚಂದ್ರನ್ ಅವರ ಸಮಾಧಿ ಇರುವ ಚೆನ್ನೈನ ಮರೀನಾ ಬೀಚ್ ನಲ್ಲಿ, ಅವರ ಸಮಾಧಿ ಪಕ್ಕದಲ್ಲೇ ಅಂತಿಮ ಸಂಸ್ಕಾರ ನಡೆಸಲು ತೀರ್ಮಾನಿಸಲಾಗಿದೆ. ಮಂಗಳವಾರ ಸಂಜೆ ಅಥವಾ ಬುಧವಾರ ಅಂತಿಮ ಸಂಸ್ಕಾರ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಸೇರಿದಂತೆ ನಾನಾ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಬಹುಅಂಗಾಂಗಗಳ ವೈಫಲ್ಯದಿಂದ ಚೆನ್ನೈನ ಅಪೋಲೋ ಅಸ್ಪತ್ರೆಯ ತೀರ್ವ ನಿಗಾ ಘಟಕದಲ್ಲಿ ಕಳೆದ ಸೆಪ್ಟೆಂಬರ್ 22 ರಿಂದ ಚಿಕಿತ್ಸೆ ಪಡೆಯುತ್ತಿದ್ದ ಪುರುಚ್ಚಿ ತಲೈವಿ ಎಂದೇ ಹೆಸರಾಗಿದ್ದ 68 ವರ್ಷದ ಜಯಲಲಿತಾ ಅವರು ಭಾನುವಾರ ಸಂಜೆ ಆದ ತೀವ್ರ ಹೃದಯಾಘಾತದಿಂದ ಚೇತರಿಸಿಕೊಳ್ಳಲಾಗದೆ ಸೋಮವಾರ ರಾತ್ರಿ 11.30 ರ ವೇಳೆಗೆ ಕೊನೆಯುಸಿರೆಳೆದಿದ್ದಾರೆ. ಆಸ್ಪತ್ರೆಗೆ ದಾಖಲಾದ ಕ್ಷಣದಿಂದಲೂ ಸಾವು-ಬದುಕಿನ ಬಗ್ಗೆ ಸೃಷ್ಠಿಯಾದ ನಾನಾ ಊಹಾಪೋಹಗಳ ನಡುವೆಯೂ 75 ದಿನಗಳನ್ನು ಎಳೆದ ಜಯಲಲಿತಾ ಉಸಿರಿನ ಬಂಡಿ ಕೊನೆಗೂ ತನ್ನ ಚಲನೆಯನ್ನು ನಿಲ್ಲಿಸಿದೆ. ಕೋಟ್ಯಂತರ ಅಭಿಮಾನಿಗಳನ್ನು ದುಃಖದ ಕಡಲಿಗೆ ದೂಡಿದೆ.

ಜಯಲಲಿತಾ ಇಹಲೋಕ ತ್ಯಜಿಸಿರುವ ಬಗ್ಗೆ ಸೋಮವಾರ ಸಂಜೆಯಿಂದಲೇ ತರೇಹವಾರಿ ಸುದ್ದಿಗಳು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಭಿತ್ತರಗೊಂಡಿದ್ದವು. ಜಯಲಲಿತಾ ಒಡೆತನದ ಜಯಾ ಟಿವಿಯಲ್ಲೂ ಅವರು ಇನ್ನಿಲ್ಲ ಎಂಬ ಸುದ್ಧಿ ಪ್ರಸಾರವಾದಷ್ಟೇ ವೇಗದಲ್ಲೇ ವಾಪಸ್ಸಾಗಿತ್ತು. ನಿನ್ನೆ ಸಂಜೆಯಿಂದಲೇ ಅಪೋಲೋ ಆಸ್ಪತ್ರೆಯನ್ನು ಸುತ್ತುವರಿದಿದ್ದ ಸಾವಿರಾರು ಅಭಿಮಾನಿಗಳ ಭಾವೋದ್ವೇಗ ಪಡೆದುಕೊಳ್ಳಬಹುದಾದ ಕಾನೂನು ಸುವ್ಯವಸ್ಥೆ ತಿರುವಿನ ಬಗ್ಗೆ ಇದ್ದ ಆತಂಕ ಇಂಥದೊಂದು ಬೆಳವಣಿಗೆಗೆ ಕಾರಣ ಎಂಬ ಚರ್ಚೆ ಚಾಲ್ತಿಯಲ್ಲಿರುವುದರ ನಡುವೆಯೇ ಅಪೋಲೋ ಆಸ್ಪತ್ರೆಯಿಂದ ರಾತ್ರಿ 12.15 ಕ್ಕೆ ಹೊರಬಿದ್ದ ಪತ್ರಿಕಾ ಪ್ರಕಟಣೆ ಜಯಲಲಿತಾ ಅವರು ಇನ್ನಿಲ್ಲ ಎಂಬ ಸುದ್ದಿಯನ್ನು ಖಾತರಿಪಡಿಸಿತ್ತು. ಆ ವೇಳೆಗಾಗಲೆ ಕೇಂದ್ರ ಸರಕಾರದ ಪ್ರತಿನಿಧಿಗಳಾಗಿ ಸಚಿವರಾದ ರಾಜನಾಥಸಿಂಗ್, ವೆಂಕಯ್ಯನಾಯ್ಡು ಆಸ್ಪತ್ರೆಗೆ ಭೇಟಿ ಕೊಟ್ಟಾಗಿತ್ತು.

ಜಯಲಲಿತಾ ಅವರ ನಿಧನ ವಾರ್ತೆಯನ್ನು ಭಿತ್ತರಿಸುವ ವೇಳೆಗೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಅವರು ಚಿಕಿತ್ಸೆ ಪಡೆಯುತ್ತಿದ್ದ ಅಪೋಲೋ ಅಸ್ಪತ್ರೆಯಿಂದ ಪೋಯೆಸ್ ಗಾರ್ಡನ್ ನಲ್ಲಿರುವ ನಿವಾಸಕ್ಕೆ ಜಯಲಲಿತಾ ಅವರ ಪಾರ್ಥೀವ ಶರೀರ ಸಾಗಿಸುವ ಮಾರ್ಗದ ಮೂರು ಕಿ.ಮೀ. ಉದ್ದಕ್ಕೂ ಮೂರು ಸಾವಿರಕ್ಕೂ ಹೆಚ್ಚು ಪೋಲಿಸರ ಸರ್ಪಗಾವಲು ಏರ್ಪಡಿಸಲಾಗಿತ್ತು. ತಡರಾತ್ರಿ 2 ಗಂಟೆ ಸುಮಾರಿಗೆ ಆಸ್ಪತ್ರೆಯಿಂದ ಅವರ ಪಾರ್ಥೀವ ಶರೀರ ಹೊತ್ತ ಅಂಬುಲೆನ್ಸ್ ವಾಹನ ಪೋಯೆಸ್ ಗಾರ್ಡನ್ ನಿವಾಸದತ್ತ ತೆರಳಿತು. ಪೊಲೀಸರ ಸರ್ಪಗಾವಲಿನ ಹಿಂದಿದ್ದ ಅಪಾರ ಜನಸ್ತೋಮ ಕಂಬನಿಯ ಮಳೆಗರಿಯಿತು. ಅಷ್ಟಾರಲ್ಲಾಗಲೇ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿ ಆಸ್ಪತ್ರೆಗೆ ವಾಪಾಸಾಗಿದ್ದ ಪನ್ನೀರ ಸೆಲ್ವಂ ಮತ್ತವರ ಸಂಪುಟ ಸಚಿವರ ತಂಡ ಜಯಲಲಿತಾ ಪಾರ್ಥೀವ ಶರೀರ ಸಾಗಿಸಿದ ವಾಹನದ ಜತೆಯಾದರು. ಸುದ್ದಿ ತಿಳಿಯುತ್ತಿದ್ದಂತೆ ನಾನಾ ಕ್ಷೇತ್ರಗಳ ಗಣ್ಯರು ಜಯಲಲಿತಾ ಮನೆ ಕಡೆ ದೌಡಾಯಿಸಿದರು.

ಕರ್ನಾಟಕದ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆಯ ಜಯರಾಂ ಮತ್ತು ವೇದವಲ್ಲಿ ದಂಪತಿ ಪುತ್ರಿಯಾಗಿ 1948 ರಲ್ಲಿ ಜನಿಸಿದ ಜಯಲಲಿತಾ ಅವರ ಮೂಲ ಹೆಸರು ಕೋಮಲವಲ್ಲಿ. ಎರಡು ವರ್ಷ ಇರುವಾಗಲೇ ತಂದೆಯನ್ನು ಕಳೆದುಕೊಂಡು ತಾಯಿಯ ಆಶ್ರಯದಲ್ಲಿ ಬೆಳೆದ ಜಯಲಲಿತಾ ಬೆಂಗಳೂರಿನ ಬಿಷಪ್ ಕಾಟನ್ ನಲ್ಲಿ ಹೈಸ್ಕೂಲು ವ್ಯಾಸಂಗ ಮುಗಿಸಿದರು. ಅದರ ಬೆನ್ನಲ್ಲೇ ತಾಯಿಯ ಒತ್ತಾಸೆ ಮೇರೆಗೆ ಚಿತ್ರರಂಗ ಪ್ರವೇಶಿಸಿದ ಅವರು ಅತ್ಯಲ್ಪ ಅವಧಿಯಲ್ಲೇ ತಮಿಳುಚಿತ್ರರಂಗದಲ್ಲಿ ಹೆಸರು ಮಾಡಿದರು. ಆ ಕಾಲಕ್ಕೆ ಖ್ಯಾತ ನಟರಾಗಿದ್ದ ಎಂ.ಜಿ. ರಾಮಚಂದ್ರನ್ ಜೋಡಿಯಾಗಿ ಯಶಸ್ವಿ ತಾರೆ ಎನಿಸಿದ ಜಯಲಲಿತಾ ನಂತರ ಎಂಜಿಆರ್ ಹಾದಿಯಲ್ಲೇ ರಾಜಕೀಯ ರಂಗದಲ್ಲೂ ಹೆಸರು ಮಾಡಿದ್ದು ಈಗ ಇತಿಹಾಸ. ಹುಟ್ಟಿದಂದಿನಿಂದ ಅಳಿಯುವವರೆಗೂ ನಾನಾ ಹಂತಗಳಲ್ಲಿ ಬದುಕಿನ ಸವಾಲುಗಳು ತಂದೊಡ್ಡಿದ ಅವಮಾನ, ಒಂಟಿತನ, ಹತಾಶೆಗಳನ್ನು ಮೆಟ್ಟಿ ನಿಂತು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಆರು ಬಾರಿ ಆಳ್ವಿಕೆ ನಡೆಸಿದ್ದು ಆ ಇತಿಹಾಸದ ಮೇರು ಪರ್ವ!

Leave a Reply