‘ಬ್ಯಾಂಕಿಗೆ ಹಾಕಿದ ಮಾತ್ರಕ್ಕೆ ಕಪ್ಪುಹಣ ಬಿಳಿಯಾಗೊಲ್ಲ’ ಕಾಳಧನಿಕರಿಗೆ ಅಮಿತ್ ಶಾ ಎಚ್ಚರಿಕೆ

ಡಿಜಿಟಲ್ ಕನ್ನಡ ಟೀಮ್:

‘ತಮ್ಮಲ್ಲಿರುವ ಹಣವನ್ನೆಲ್ಲಾ ಬ್ಯಾಂಕಿಗೆ ಠೇವಣಿ ಮಾಡಿದ ತಕ್ಷಣ ಕಪ್ಪು ಹಣವೆಲ್ಲ ಬಿಳಿಯಾಗುವುದಿಲ್ಲ…’ ಕಾಳಧನಿಕರಿಗೆ ಹೀಗೊಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ.

ಆಜ್ ತಕ್ ವಾಹಿನಿಯ ಅಜೆಂಡಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಅಮಿತ್ ಶಾ ನೋಟು ಅಮಾನ್ಯ ನಿರ್ಧಾರದ ಕುರಿತಂತೆ ಸರ್ಕಾರದ ಸ್ಪಷ್ಟ ನಿಲುವನ್ನು ಬಿಚ್ಚಿಟ್ಟರು. ಈ ಬಗ್ಗೆ ಅವರು ಹೇಳಿದಿಷ್ಟು…

‘ಬ್ಯಾಂಕಿನಲ್ಲಿ ಹಣವನ್ನು ಠೇವಣಿ ಮಾಡಿದ ಮಾತ್ರಕ್ಕೆ ಕಪ್ಪು ಹಣವೆಲ್ಲ ಏಕಾಏಕಿ ಬಿಳಿಯಾಗುವುದಿಲ್ಲ ಎಂಬ ಅಂಶವನ್ನು ಎಲ್ಲರು ಮನದಟ್ಟು ಮಾಡಿಕೊಳ್ಳಬೇಕು. ನೋಟು ಅಮಾನ್ಯ ನಿರ್ಧಾರದಿಂದ ದೊಡ್ಡ ಪ್ರಮಾಣದ ಹಣವೆಲ್ಲ ವ್ಯವಸ್ಥೆಗೆ ಬಂದು ಸೇರಿವೆ. ಸರ್ಕಾರ ಈ ಹಣವನ್ನು ಪರಿಶೀಲಿಸಿ ಯಾವುದು ಕಾನೂನು ಚೌಕಟ್ಟಿನ ಹಣ ಹಾಗೂ ಯಾವುದೂ ಕಾನೂನು ಬಾಹೀರವಾದ ಹಣ ಎಂದು ನಿರ್ಧರಿಸಲಿದೆ. ಕಾನೂನು ಬಾಹೀರವಾಗಿ ಸಂಪಾದಿಸಿದ ಹಣಕ್ಕೆ ತೆರಿಗೆ ಹಾಗೂ ದಂಡ ವಿಧಿಸಲಾಗುತ್ತದೆ.’

‘ಸರ್ಕಾರದ ಈ ನಿರ್ಧಾರದಿಂದ ಜನಸಾಮಾನ್ಯರಿಗೆ ತೊಂದರೆಯಾಗಿರುವುದು ನಿಜ. ಜನರಿಗೆ ತೊಂದರೆಯಾಗಲಿ ಎಂಬ ಉದ್ದೇಶದಿಂದ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದಲ್ಲ. ಅವರ ಭವಿಷ್ಯ ಉಜ್ವಲಗೊಳಿಸುವುದಕ್ಕಾಗಿ ತೆಗೆದುಕೊಳ್ಳಲಾಗಿದೆ. ದೇಶದ ಆರ್ಥಿಕತೆಯನ್ನು ಉತ್ತಮಗೊಳಿಸಬೇಕಾದ ಅಗತ್ಯವಿದೆ. ಹೀಗಾಗಿ ಪ್ರತಿಯೊಂದು ವಹಿವಾಟಿಗೂ ತೆರಿಗೆ ಹಾಕುವ ಅಗತ್ಯವಿದೆ. ಇಂತಹ ಪರಿಸ್ಥಿತಿಯಲ್ಲಿ ಕೆಲವರು ತೆರಿಗೆ ಚೌಕಟ್ಟಿನಿಂದ ಹೊರ ಹೋಗುವ ಪ್ರಯತ್ನದಲ್ಲಿದ್ದರು. ಇನ್ನು ಮುಂದೆ ಇದು ಸಾಧ್ಯವಾಗುವುದಿಲ್ಲ. ಜತೆಗೆ ಈ ನಿರ್ಧಾರದ ಹಿಂದೆ ಲಂಚ ಪದ್ಧತಿಯನ್ನು ನಿರ್ಮೂಲನೆ ಮಾಡುವ ಉದ್ದೇಶವಿದೆ.’

ಹೀಗೆ ನೋಟು ಅಮಾನ್ಯದ ನಿರ್ಧಾರದ ಹಿಂದಿನ ಅಜೆಂಡಾವನ್ನು ವಿವರಿಸುತ್ತಾ ಮಾತನಾಡಿದ ಅಮಿತ್ ಶಾ, ಕಳೆದ ವರ್ಷ ಬಿಜೆಪಿ ಭೂ ಖರೀದಿ ಮಾಡಿರುವುದಕ್ಕೂ ನೋಟು ಅಮಾನ್ಯ ನಿರ್ಧಾರಕ್ಕೂ ಸಂಬಂಧವಿಲ್ಲ. ಕಳೆದ ವರ್ಷ ಈ ಬಗ್ಗೆ ನಿರ್ಧಾರವನ್ನೇ ತೆಗೆದುಕೊಂಡಿರಲಿಲ್ಲ. ಈ ಖರೀದಿಯು ಕಾನೂನಿನ ಚೌಕಟ್ಟಿನಲ್ಲಿದೆ ಎಂದು ವಿರೋಧ ಪಕ್ಷಗಳ ಆರೋಪಕ್ಕೆ ಪ್ರತ್ಯುತ್ತರ ನೀಡಿದರು.

ಇನ್ನು ಸರ್ಕಾರದ ನಿರ್ಧಾರವನ್ನು ಸಂಸತ್ತಿನಲ್ಲಿ ಖಂಡಿಸಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ವಿರುದ್ಧವೂ ಹರಿಹಾಯ್ದ ಶಾ, ‘ಮನಮೋಹನ್ ಸಿಂಗ್ ಅವರು 1975 ರಿಂದ 2014ರವರೆಗೆ ಭಾರತದ ಆರ್ಥಿಕತೆಯ ಭಾಗವಾಗಿದ್ದರು. ಅವರು ತಮ್ಮ ಅಧಿಕಾರ ಬಿಟ್ಟಾಗ ದೇಶದ 60 ಕೋಟಿಯಷ್ಟು ಜನ ಬ್ಯಾಂಕ್ ಖಾತೆಯನ್ನೇ ಹೊಂದಿರಲಿಲ್ಲ’ ಎಂದರು.

ಇನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲರ ಬಗೆಗಿನ ಪ್ರಶ್ನೆಗೆ ಶಾ ಉತ್ತರಿಸಿದ್ದು ಹೀಗೆ… ‘ಜನರು ಅರವಿಂದ ಕೇಜ್ರಿವಾಲರನ್ನು ನಿಜಕ್ಕೂ ಗಂಭೀರವಾಗಿ ಪರಿಗಣಿಸಿದ್ದಾರಾ? ಅವರು ಸರ್ಕಾರದ ವಿರುದ್ಧ ಟೀಕೆ ಮಾಡಿದರೆ ಯಾರು ತಲೆಕೆಡಿಸಿಕೊಳ್ಳುತ್ತಾರೆ? ಹಳೇ ನೋಟು ಠೇವಣಿಗೆ ಡಿ.30 ಗಡವು ಮುಗಿಯುತ್ತಿದ್ದಂತೆ ಯಾವೊಬ್ಬ ಕಾಳಧನಿಕನನ್ನು ನಾವು ಬಿಡುವುದಿಲ್ಲ’ ಎಂದರು.

Leave a Reply