ಎಲ್ಲರೂ ಗುಗ್ಗುವಿನಂತೆ ಕಂಡ ಗಾಜಿಯಾಬಾದಿನ ಈ ಹೆಂಗಸು ಅಷ್ಟೊಳ್ಳೆ ಚಟ್ನಿ ಮಾಡೋದಾದ್ರೂ ಹೇಗೆ? ನೀವು ನೋಡಬೇಕಾದ ಕಿರುಚಿತ್ರ

ಡಿಜಿಟಲ್ ಕನ್ನಡ ಟೀಮ್:

ಪಾರ್ಟಿಯಲ್ಲಿ ಮೇಲ್ಮಧ್ಯಮ ವರ್ಗದವನ ಠಾಕು ಠೀಕು ತೋರುತ್ತಿರುವ ಆತ ಅದು ಹೇಗೋ ಈ ಗಾಜಿಯಾಬಾದಿನ ಹೆಂಗಸನ್ನು ಪತ್ನಿಯಾಗಿಸಿಕೊಂಡಿದ್ದಾನೆ. ಹಾಗೆಂದೇ ಎಲ್ಲ ಗುಸುಪಿಸು- ಅಹಮಿಕೆ ಪ್ರದರ್ಶನದ ಗುರಿ ಅವಳು. ಆಕೆಯ ಉಡುಪಿನಿಂದಲೇ ಆ ಪಾರ್ಟಿಯ ಸ್ಥಿತಿವಂತ ಸಮೂಹಕ್ಕೆ ಅನಿಸುತ್ತಿದೆ ಈಕೆ ಸಲ್ಲದ ಜಾಗದಲ್ಲಿ ನಿಂತಿದ್ದಾಳೆ ಅಂತ. ತಾವೆಲ್ಲಿ, ಈ ಗಾಜಿಯಾಬಾದಿನ ಗುಗ್ಗು ಎಲ್ಲಿ, ಅವನನ್ನು ಮದುವೆಯಾಗಿ ನಮ್ಮ ನಡುವೆ ನಿಂತಿರುವುದಾದರೂ ಏಕೆ? ಹಾಗೆಂದೇ ಬೆನ್ನ ಹಿಂದೆ ಆಕೆಯ ಬಗ್ಗೆ ಗೇಲಿಗಳು, ಎದುರಿಗೆ ಬಂದಾಗ ಗೌರವದ ನಾಟಕೀಯತೆ.

ಇಂಥವಳಿಂದ ಆತನ ಗಂಡನನ್ನು ಸೆಳೆಯುವುದು ಬಹು ಸುಲಭ ಅಂತ ಪಾರ್ಟಿಯಲ್ಲಿದ್ದ ಬೆಡಗಿಯೊಬ್ಬಳಿಗೆ ಅನ್ನಿಸಿದಂತಿದೆ. ಅದಕ್ಕೆ ಮುನ್ನುಡಿ ಹಾಡಿದ್ದಾಳೆ. ನಿಮ್ಮ ಬಳಿ ಏನೆಲ್ಲ ಕಲೀಲಿಕ್ಕಿದೆ ಅಂತ ಈಕೆಯ ಮನೆಗೆ ಬರುವ ಮಾರ್ಗ ತೆರೆಯಿಸಿಕೊಂಡಿದ್ದಾಳೆ. ಬಂದವಳಿಗೆ ಆತಿಥ್ಯಕ್ಕೆ ಕೂರಿಸಿ ಈಕೆ ಕತೆ ಬಿಚ್ಚಿದ್ದಾಳೆ. ತಂದಿಟ್ಟ ಪಕೋಡದೊಂದಿಗಿನ ಚಟ್ನಿ ಸ್ವಾದಕ್ಕೆ ಈ ಬೆಡಗಿ ಮನಸೋತು, ಇದು ಇಷ್ಟು ರುಚಿ ಹೇಗೆ ಅಂತ ಕೇಳಿದ್ದಾಳೆ ಬೆಡಗಿ.

ಮಾತು ಮಾತಿಗೂ ನನಗೇನು ಗೊತ್ತು, ಗಾಜಿಯಾಬಾದಿನವಳು ಎನ್ನುತ್ತಲೇ ಆಕೆ ಚಟ್ನಿ ಮಾಡುವ ವಿಧಾನ ಹೇಳುತ್ತ ತನ್ನ ಕುಟುಂಬದ ಕತೆ ಬಿಚ್ಚಿದ್ದಾಳೆ. ಎದುರಿನ ಬೆಡಗಿಗೆ ಕತೆಯ ಪ್ರತಿ ಅಂಶದಲ್ಲಿ ಚೂರು ಪಾರು ಶಾಕ್ ಕೊಡುತ್ತಾ, ಕೊನೆಯಲ್ಲಿ ಚಟ್ನಿ ಅಷ್ಟೊಂದು ರುಚಿಯಾಗಿದ್ದಕ್ಕೆ ಕಾರಣ ಹೇಳಿದಾಗ ಆ ಆಘಾತ ಪೂರ್ಣಗೊಳ್ಳುತ್ತದೆ!

ಒಂದು ತುಮುಲವನ್ನು ಹೇಗೆಲ್ಲ ಕತೆಯಾಗಿ ಅರಳಿಸಬಹುದೆಂಬುದಕ್ಕೆ ಈ 16 ನಿಮಿಷಗಳ ಕಿರುಚಿತ್ರ ನೋಡಿ. ಆಗಲೇ 1 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ.

Leave a Reply