ಜಯಲಲಿತಾ ವಿದಾಯಕ್ಕೆ ಹರಿದುಬಂದ ಜನಸಾಗರ, ಗಣ್ಯರ ನಮನ

ಜಯಲಲಿತಾ ಅವರಿಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ

ಡಿಜಿಟಲ್ ಕನ್ನಡ ಟೀಮ್:

ತಮಿಳುನಾಡಿನ ‘ಅಮ್ಮಾ’ ಖ್ಯಾತಿಯ ಜಯಲಲಿತಾ ಅವರ ಅಂತ್ಯ ಸಂಸ್ಕಾರವನ್ನು ಮಂಗಳವಾರ ಮರಿನಾ ಬೀಚ್ ಬಳಿ ಇರುವ ಎಂಜಿಆರ್ ಸಮಾಧಿ ಪಕ್ಕದಲ್ಲೇ ನೆರವೇರಿಸಲಾಯಿತು. ಜಯಲಲಿತಾ ಅವರ ಆಪ್ತೆ ಶಶಿಕಲಾ ನಟರಾಜನ್ ಅವರು ಅಯ್ಯಂಗಾರ್ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ಮಾಡಲಾಯಿತು.

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಜಯಲಲಿತಾ ಅವರು ಸೋಮವಾರ ಮಧ್ಯರಾತ್ರಿ 11.30ಕ್ಕೆ ಚೆನ್ನೈನ ಅಪೋಲೊ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಚೆನ್ನೈನ ರಾಜಾಜಿ ಹಾಲ್ ನಲ್ಲಿ ಮಂಗಳವಾರ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ನಂತರ ಸಂಜೆ ಅವರನ್ನು ಸರ್ಕಾರಿ ಗೌರವದ ಮೂಲಕ ಹಾಗೂ ಶ್ರೀಗಂಧದ ಮರದಿಂದ ಮಾಡಲಾದ ಪೆಟ್ಟಿಗೆಯಲ್ಲಿ ಜಯಲಲಿತಾ ಅವರ ದೇಹವನ್ನಿಟ್ಟು ಸಾಂಪ್ರದಾಯಿಕವಾಗಿ ಅಂತಿಮ ವಿದಾಯ ಹೇಳಲಾಯಿತು.

ಜಯಲಲಿತಾರ ಅಂತಿಮ ದರ್ಶನಕ್ಕೆ ತಮಿಳುನಾಡಿನ ಜನರು ಸಾಗರೋಪಾದಿಯಲ್ಲಿ ಬಂದು ತಮ್ಮ ನೆಚ್ಚಿನ ನಾಯಕಿಗೆ ಅಂತಿಮ ಗೌರವ ಸಲ್ಲಿಸಿದರು. ಜಯಲಲಿತಾ ಅವರ ಅಂತಿಮ ದರ್ಶನದಿಂದ ಹಿಡಿದು, ಅವರ ಅಂತ್ಯಸಂಸ್ಕಾರದವರೆಗೂ ಸುಮಾರು 10 ಲಕ್ಷ ಅಭಿಮಾನಿಗಳು ಸೇರಿದ್ದರು ಎಂದು ಅಂದಾಜಿಸಲಾಗಿದೆ.

ಗಣ್ಯರ ನಮನ…

ದೇಶದ ಗಣ್ಯಾತಿಗಣ್ಯರು ಆಗಮಿಸಿ ಜಯಲಲಿತಾ ಅವರ ಅಂತಿಮ ದರ್ಶನ ಪಡೆದರು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ವೆಂಕಯ್ಯ ನಾಯ್ಡು, ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂಧನ ಸಚಿವ ಡಿ.ಕೆ ಶಿವಕುಮಾರ್, ಜತೆಗೆ ಕೆಲವು ಸಚಿವರು ತೆರಳಿದ್ದರು. ಇನ್ನು ಭಾರತದ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್, ತಮಿಳು ಚಿತ್ರ ನಾಯಕ ವಿಜಯ್ ಸೇರಿದಂತೆ ಇತರೆ ತಾರೆಯರೂ ಜಯಲಲಿತಾ ಅವರಿಗೆ ಅಂತಿಮ ನಮನ ಸಲ್ಲಿಸಿದರು.

ಇನ್ನು ಜಯಲಲಿತಾ ಅವರ ಸಾವಿಗೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದು, ಜಯಲಲಿತಾ ಅವರು ತಮ್ಮ ಹತ್ತಾರು ಜನಪರ ಯೋಜನೆಗಳ ಮೂಲಕ ಜನರ ಮನಸ್ಸಿನಲ್ಲಿ ಅಮ್ಮಾ ಎಂದು ಚಿರಸ್ಥಾಯಿ ಸ್ಥಾನ ಪಡೆದಿದ್ದಾರೆ ಎಂದರು. ಇನ್ನು ಜಯಲಲಿತಾ ಅವರ ಸಾವಿನಿಂದಾಗಿ ಕೇವಲ ತಮಿಳುನಾಡಷ್ಟೇ ಸ್ತಬ್ಧವಾಗಿರಲಿಲ್ಲ. ರಾಜ್ಯದ ಬಹುತೇಕ ಆಡಳಿತ ಕೇಂದ್ರಗಳು ಸ್ತಬ್ಧವಾಗಿತ್ತು. ರಾಜ್ಯದಲ್ಲಿ ಒಂದು ದಿನ ಶೋಕಾಚರಣೆ ಆಚರಿಸಲು ತೀರ್ಮಾನಿಸಲಾಗಿತ್ತು. ಪರಿಣಾಮ ರಾಜ್ಯದ ಆಡಳಿತ ಕೇಂದ್ರ ವಿಧಾನಸೌಧ ಬಹುತೇಕ ಬಿಕೋ ಎನ್ನುತ್ತಿತ್ತು.

Leave a Reply