ವಿಯೆಟ್ನಾಮಿಗೆ ಸುಕೋಯ್ ಯುದ್ಧ ವಿಮಾನ ಚಾಲನೆ ತರಬೇತಿ ಕೊಡಲಿರುವ ಭಾರತ, ಏಷ್ಯಾದಲ್ಲಿ ಚೀನಾ ಮಿಲಿಟರಿ ಬಲವನ್ನು ಸಮತೋಲಿತಗೊಳಿಸುವ ಯತ್ನ

ಇಂಟರ್ನೆಟ್ ಕಡತ ಚಿತ್ರ

ಡಿಜಿಟಲ್ ಕನ್ನಡ ಟೀಮ್:

ಭಾರತ ಹಾಗೂ ವಿಯೆಟ್ನಾಂ ಜತೆಗಿನ ಮಿಲಿಟರಿ ಒಪ್ಪಂದ ಈಗ ಮತ್ತಷ್ಟು ಬಲಗೊಳ್ಳುತ್ತಿದೆ. ಈ ಮೊದಲು ಅದಕ್ಕೆ ಬ್ರಹ್ಮೋಸ್ ಕ್ಷಿಪಣಿಗಳನ್ನು ನೀಡುವುದಕ್ಕೆ ಸಮ್ಮತಿಸಿದ್ದ ಭಾರತ ಇದೀಗ ವಿಯೆಟ್ನಾಂ ಮಿಲಿಟರಿಗೆ ಸುಕೋಯ್ 30 ಯುದ್ಧ ವಿಮಾನ ತರಬೇತು ನೀಡಲಿದೆ. ಸಹಜವಾಗಿಯೇ ಇದನ್ನು ಏಷ್ಯಾದಲ್ಲಿ ಚೀನಾದ ಮಿಲಿಟರಿ ಬಲಕ್ಕೆ ಸಮತೋಲನ ಕಂಡುಕೊಳ್ಳುವ ಭಾರತದ ಯತ್ನವಾಗಿ ಬಿಂಬಿಸಲಾಗುತ್ತಿದೆ.

ಕಳೆದ ಸೆಪ್ಟೆಂಬರ್ ನಲ್ಲಿ ನಡೆದ ಜಿ-20 ಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ವಿಯೆಟ್ನಾಂ ಜತೆಗಿನ ಸ್ನೇಹ ಸಂಬಂಧಕ್ಕೆ ಬಲ ನೀಡುವ ನಿಟ್ಟಿನಲ್ಲಿ ಹಲವು ಒಪ್ಪಂದಗಳಿಗೆ ಮುಂದಾಗಿದ್ದರು. ಈಗ ಆ ಸರದಿ ರಕ್ಷಣಾ ಮಂತ್ರಿ ಮನೋಹರ್ ಪರಿಕರ್ ಅವರದು. ನಿನ್ನೆಯಷ್ಟೇ ಮನೋಹರ್ ಪರಿಕರ್ ಹಾಗೂ ವಿಯೆಟ್ನಾಂನ ರಕ್ಷಣಾ ಮಂತ್ರಿ ಜೆನರಲ್ ಗ್ನೊ ಕ್ಸುವಾನ್ ಲಿಚ್ ಅವರನ್ನು ಭೇಟಿಯಾಗಿದ್ದು, ಈ ಪೈಲೆಟ್ ಗಳ ತರಬೇತಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಅಂದಹಾಗೆ ಭಾರತ ಇದೇ ಮೊದಲ ಬಾರಿಗೆ ವಿಯೆಟ್ನಾಂ ಸೇನಾ ಸಿಬ್ಬಂದಿಗೆ ತರಬೇತಿ ನೀಡುತ್ತಿಲ್ಲ. ಈ ಹಿಂದೆ ಕಿಲೋ ವರ್ಗದ ಜಲಾಂತರ್ಗಾಮಿಗಳ ನಿರ್ವಹಣೆಗೆ ಸಂಬಂಧಿಸಿದಂತೆ ಭಾರತ ವಿಯೆಟ್ನಾಂ ಸಿಬ್ಬಂದಿಗೆ ತರಬೇತಿ ನೀಡಿತ್ತು. ಭಾರತ ಹಾಗೂ ವಿಯೆಟ್ನಾಂ ಎರಡೂ ದೇಶಗಳು ಸುಕೋಯ್ 30 ಯುದ್ಧ ವಿಮಾನವನ್ನು ಹೊಂದಿದ್ದು, ಶ್ರೇಣಿಯಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಈಗ ಈ ಯುದ್ಧ ವಿಮಾನಕ್ಕೆ ಸಂಬಂಧಿಸಿದಂತೆ ಪೈಲೆಟ್ ಗಳಿಗೆ ತರಬೇತಿ ನೀಡುತ್ತಿದೆ. ಭಾರತವು ಈವರೆಗೂ 200 ಸುಕೋಯ್- 30 ಎಂಕೆಐ ಯುದ್ಧ ವಿಮಾನ ಹಾಗೂ 9 ಕಿಲೋ ವರ್ಗದ ಜಲಾಂತರ್ಗಾಮಿಯನ್ನು ಹೊಂದಿದೆ.

ಉಭಯ ರಾಷ್ಟ್ರಗಳ ರಕ್ಷಣಾ ಮಂತ್ರಿಗಳ ಈ ಭೇಟಿಯಲ್ಲಿ ವಾಯು ಸೇನೆಗೆ ಸಂಬಂಧಿಸಿದಂತೆ ಹೆಚ್ಚುವರಿ ಸಹಕಾರಕ್ಕೆ ಒಡಂಬಡಿಕೆಗೆ ಸಹಿ ಹಾಕಲಾಗಿದೆ. ಈ ಒಪ್ಪಂದದ ಮೂಲಕ ಪೈಲೆಟ್ ಗಳ ತರಬೇತಿ ಜತೆಗೆ ತಜ್ಞರ ವಿನಿಮಯ ಹಾಗೂ ಎರಡು ದೇಶಗಳ ನಡುವಣ ಇತರೆ ಚಟುವಟಿಕೆಗಳು ಇವೆ.

‘ವಿಯೆಟ್ನಾಂನ ಸ್ಥಳೀಯ ರಕ್ಷಣಾ ಕ್ಷೇತ್ರ ಅಭಿವೃದ್ಧಿಗೆ ಭಾರತ ಸಂಪೂರ್ಣ ಸಹಕಾರ ನೀಡಲಿದೆ. ಹೊಸ ಹೊಸ ತಂತ್ರಜ್ಞಾನ ಪೂರೈಕೆ ಮೂಲಕ ಭಾರತವು ವಿಯೆಟ್ನಾಂಗೆ ಉತ್ತಮ ಜತೆಗಾರನಾಗಿ ನಿಲ್ಲಲಿದೆ.’ ಎಂದಿದ್ದಾರೆ ಮನೋಹರ ಪಾರಿಕರ್.

ಒಟ್ಟಿನಲ್ಲಿ ಚೀನಾ ಏಷ್ಯಾದಲ್ಲಿನ ಪ್ರಾಬಲ್ಯವನ್ನು ನಿಯಂತ್ರಿಸಲು ಜಪಾನ್, ವಿಯೆಟ್ನಾಂ ಸೇರಿದಂತೆ ಇತರೆ ರಾಷ್ಟ್ರಗಳು ಪ್ರಯತ್ನಿಸುತ್ತಿದ್ದು, ಈ ರಾಷ್ಟ್ರಗಳ ಮುಂದಿರುವ ಅತ್ಯುತ್ತಮ ಹಾಗೂ ಭರವಸೆಯ ಆಯ್ಕೆಯಾಗಿ ಉಳಿದಿರೋದು ಭಾರತ ಎಂಬುದಂತೂ ಸ್ಪಷ್ಟ.

Leave a Reply