ಜರ್ಮನಿಯ ಮಾರ್ಕೆಲ್ ಕೂಡ ಬಯಸುತ್ತಿರುವ ಬುರ್ಕಾ ನಿಷೇಧ, ಪಶ್ಚಿಮದಲ್ಲೂ ಬಲವಾಗುತ್ತಿದೆ ರಾಷ್ಟ್ರವಾದ

ಡಿಜಿಟಲ್ ಕನ್ನಡ ಟೀಮ್:

ಜರ್ಮನಿಯ ಚಾನ್ಸಲರ್ ಆಂಜೆಲಾ ಮಾರ್ಕೆಲ್ ಈಗ ಭಾಗಶಃ ಬುರ್ಕಾ ಧರಿಸುವ ಪದ್ಧತಿ ನಿಷೇಧದ ಬಗ್ಗೆ ಧ್ವನಿ ಎತ್ತಿದ್ದಾರೆ. ಈ ಹಿಂದಿನಿಂದಲೂ ಸೆಕ್ಯುಲರ್ ವಾದ ಉದಾರವಾದವನ್ನೇ ಪ್ರತಿಪಾದಿಸಿಕೊಂಡು ವಲಸಿಗರನ್ನು ಸೇರಿಸಿಕೊಳ್ಳಬೇಕೆಂಬ ವಾದವನ್ನು ಪಾಲಿಸುತ್ತಾ ಬಂದಿರುವ ಪಾಶ್ಚಿಮಾತ್ಯ ರಾಷ್ಟ್ರಗಳು ಈಗ ನಿಧಾನವಾಗಿ ತನ್ನ ನಿಲುವು ಬದಲಿಸಿಕೊಳ್ಳುತ್ತಿರುವುದಕ್ಕೆ ಇದು ಸೂಚಕ.

ಇದ್ದಕ್ಕಿದ್ದಂತೆ ಮಾರ್ಕೆಲ್ ಅವರು ಬುರ್ಕಾ ನಿಷೇಧದ ಬಗ್ಗೆ ಗಮನ ಹರಿಸಿರುವುದೇಕೆ ಎಂಬುದನ್ನು ನೋಡುವುದಾದರೆ, ಈ ನಿರ್ಧಾರದ ಹಿಂದೆ ಮುಂದಿನ ವರ್ಷ ನಡೆಯಲಿರುವ ಚುನಾವಣೆ ಪ್ರಮುಖ ಕಾರಣ ಎಂಬುದು ತಿಳಿಯುತ್ತದೆ. ಮುಂದಿನ ವರ್ಷ ನಡೆಯಲಿರುವ ಚುನಾವಣೆ ಮಾರ್ಕೆಲ್ ಹಾಗೂ ಅವರ ಪಕ್ಷದ ಪಾಲಿಗೆ ಅಗ್ನಿ ಪರೀಕ್ಷೆಯಾಗಿ ಪರಿಣಮಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಜನರ ವಿಶ್ವಾಸವನ್ನು ಗಳಿಸಲು ಮಾರ್ಕೆಲ್ ಈ ತಂತ್ರಗಾರಿಕೆ ಪ್ರಯೋಗಿಸುತ್ತಿದ್ದಾರೆ.

ಬುರ್ಕಾ ನಿಷೇಧಕ್ಕೂ ಅಲ್ಲಿನ ಚುನಾವಣೆಯ ತಂತ್ರಗಾರಿಕೆಗೂ ಏನು ಸಂಬಂಧ ಅಂತಾ ಕೇಳುವವರಿಗೆ ಸಿಗುವ ಉತ್ತರ ಹೀಗಿದೆ… ಈಗ ಯೂರೋಪಿಯನ್ ದೇಶಗಳಲ್ಲಿ ಇಸ್ಲಾಂ ಹಾಗೂ ಬೇರೆ ಸಂಸ್ಕೃತಿಗಳು ವೇಗವಾಗಿ ಬೆಳೆಯುತ್ತಿವೆ. ಇದು ಸಹಜವಾಗಿಯೇ ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿದೆ. ಇಂತಹ ಪರಿಸ್ಥಿತಿಯಲ್ಲಿ ಬುರ್ಕಾ ನಿಷೇಧದಂತಹ ಕಟ್ಟರ್ ನಿಲುವುಗಳನ್ನು ತಾಳಿದರೆ, ಅಲ್ಲಿನ ಜನರ ವಿಶ್ವಾಸ ಸುಲಭವಾಗಿ ಗಳಿಸಬಹುದು ಎಂಬುದು ಈ ನಿರ್ಧಾರದ ಹಿಂದಿರುವ ಉದ್ದೇಶ.

ಇತ್ತೀಚೆಗೆ ನಡೆದ ಬಹುನಿರೀಕ್ಷಿತ ಅಮೆರಿಕ ಅಧ್ಯಕ್ಷಿಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಸಹ ಇಂತಹುದೇ ಕಟ್ಟರ್ ನಿರ್ಧಾರದಿಂದ ಜನರ ವಿಶ್ವಾಸ ಗಳಿಸಿ ಚುನಾವಣೆಯಲ್ಲಿ ಗೆದ್ದಿರುವುದು ನಮ್ಮ ಮುಂದಿರುವ ತಾಜಾ ಉದಾಹರಣೆ. ಟ್ರಂಪ್ ಸಹ ವಲಸಿಗರ ಸಮಸ್ಯೆ ನಿವಾರಣೆ ಹಾಗೂ ಮುಸ್ಲಿಂ ಸಮುದಾಯದ ವಿರುದ್ಧ ಬಿಗಿ ನಿಲುವನ್ನು ಅಸ್ತ್ರವನ್ನೇ ಬಳಸಿ ಅಧ್ಯಕ್ಷ ಗಾದಿಗೆ ಆರಿಸಿಬಂದರು. ಚುನಾವಣಾ ಪ್ರಚಾರದ ವೇಳೆ ಟ್ರಂಪ್ ಅವರ ಈ ನಿಲುವುಗಳನ್ನು ಅಲ್ಲಿನ ಮಾಧ್ಯಮಗಳು ಎಷ್ಟೇ ಟೀಕೆ ಮಾಡಿದರೂ, ಅಂತಿಮವಾಗಿ ಜನರು ಟ್ರಂಪ್ ಬೆನ್ನಿಗೆ ನಿಂತರು ಎಂಬುದು ಎಲ್ಲರು ಒಪ್ಪಿಕೊಳ್ಳಲೇಬೇಕಾದ ಸಂಗತಿ.

ಈಗ ಇದೇ ಹಾದಿಯಲ್ಲಿ ಚುನಾವಣೆಯನ್ನು ಎದುರಿಸಲು ಮಾರ್ಕೆಲ್ ನಿರ್ಧರಿಸಿದ್ದಾರೆ. ಮಾಧ್ಯಮಗಳು, ಸೋಕಾಲ್ಡ್ ವಿಚಾರವಾದಿಗಳು ಈ ಕಟ್ಟರ್ ನಿಲುವನ್ನು ಟೀಕಿಸಿದರೂ ಜನರ ಆಲೋಚನಾ ದಾಟಿಗಳು ಭಿನ್ನವಾಗಿವೆ ಎಂಬುದನ್ನು ಪಶ್ಚಿಮ ರಾಷ್ಟ್ರಗಳಲ್ಲಿನ ಈ ಬೆಳವಣಿಗೆಗಳು ಬಿಂಬಿಸುತ್ತಿವೆ. ಇಷ್ಟು ದಿನಗಳ ಕಾಲ ಭಾರತ ಸಂಪ್ರದಾಯವಾದಿ ರಾಷ್ಟ್ರ ಎಂದು ಮೂಗು ಮುರಿಯುತ್ತಿದ್ದ ಪಾಶ್ಚಿಮಾತ್ಯ ರಾಷ್ಟ್ರಗಳು ಪ್ರಸ್ತುತ ಪರಿಸ್ಥಿತಿಯಲ್ಲಿ ತಮ್ಮ ನಿಲುವನ್ನು ಬದಲಿಸಿಕೊಳ್ಳಲೇಬೇಕಾದ ಅಗತ್ಯತೆಯಲ್ಲಿವೆ. ಹೀಗಾಗಿ ಅಲ್ಲಿನ ಜನರು ‘ನಮ್ಮ ಸಂಸ್ಕೃತಿ ಮೊದಲು, ನಮ್ಮ ದೇಶಕ್ಕೆ ಬಂದವರು ನಮ್ಮ ಸಂಸ್ಕೃತಿಯನ್ನೇ ಪಾಲಿಸಲಿ’ ಎಂಬ ಯೋಚನೆ ಮಾಡುತ್ತಿರುವುದು ಸ್ಪಷ್ಟವಾಗಿ ತಿಳಿಯುತ್ತಿದೆ.

Leave a Reply