ತೆರಿಗೆ ವಂಚನೆ, ಅಕ್ರಮ ನೋಟು ಬದಲಾವಣೆಯಲ್ಲಿ ಬೆಂಗಳೂರೆ ನಂಬರ್ ಒನ್

ಡಿಜಿಟಲ್ ಕನ್ನಡ ಟೀಮ್:

ಕಳೆದ ಒಂದು ತಿಂಗಳ ಅವಧಿಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಭರ್ಜರಿಯಾಗಿ ನಡೆದಿದ್ದು, ತೆರಿಗೆ ಇಲಾಖೆ ನೋಟು ಅಮಾನ್ಯ ನಿರ್ಧಾರ ಪ್ರಕಟವಾದಾಗಿನಿಂದ ಈವರೆಗೂ ಒಟ್ಟು 18 ಪ್ರಕರಣಗಳನ್ನು ಜಾರಿ ನಿರ್ದೇಶನಾಲಯ (ಇಡಿ)ಕ್ಕೆ ಶಿಫಾರಸ್ಸು ಮಾಡಿದೆ. ಅದರೊಂದಿಗೆ  ನೋಟು ಅಮಾನ್ಯಗೊಂಡ ನಂತರ ದೇಶದಲ್ಲಿ ನಡೆದಿರುವ ತೆರಿಗೆ ಇಲಾಖೆ ದಾಳಿಯಲ್ಲಿ ಬೆಂಗಳೂರು ನಂಬರ್ ಒನ್ ಸ್ಥಾನ ಪಡೆದುಕೊಂಡಿದೆ.

ಇತ್ತೀಚೆಗಷ್ಟೇ ಸರ್ಕಾರದ ಇಬ್ಬರು ಪ್ರಮುಖ ಅಧಿಕಾರಿಗಳ ಮನೆಯ ಮೇಲೆ ದಾಳಿ ಮಾಡಿದ್ದ ತೆರಿಗೆ ಅಧಿಕಾರಿಗಳು ₹ 4 ಕೋಟಿಗೂ ಹೆಚ್ಚು ಹೊಸ ನೋಟುಗಳನ್ನು ವಶಪಡಿಸಿಕೊಂಡಿದ್ದು, ಗೊತ್ತಿರುವ ವಿಚಾರವೆ. ಈ ದೊಡ್ಡ ಪ್ರಕರಣ ಸೇರಿದಂತೆ ಇತರೆ ಚಿಕ್ಕ ಪುಟ್ಟ ಪ್ರಕರಣಗಳು ಸೇರಿದಂತೆ ರಾಜ್ಯದಿಂದ ಹಲವು ಪ್ರಕರಣಗಳು ಸಿಕ್ಕಿವೆ. ಆ ಪೈಕಿ 18 ಪ್ರಕರಣಗಳನ್ನು ತೆರಿಗೆ ಇಲಾಖೆ ಇಡಿಗೆ ವಿಚಾರಣೆ ನಡೆಸಲು ಶಿಫಾರಸ್ಸು ನೀಡಿದೆ. ಅದರೊಂದಿಗೆ ದೇಶದಲ್ಲಿಯೇ ಹೆಚ್ಚು ಅಕ್ರಮ ನೋಟು ಬದಲಾವಣೆ ಹಾಗೂ ಅನುಮಾನಾಸ್ಪದ ಹಣ ಜಮಾ ಮಾಡಿದ ಪೈಕಿ ಕರ್ನಾಟಕ ನಂಬರ್ ಒನ್ ಎಂಬ ಅಪಖ್ಯಾತಿ ಸಂಪಾದಿಸಿದೆ.

ಇನ್ನು ಇತರೆ ನಗರಗಳಿಗೆ ಹೋಲಿಕೆ ಮಾಡುವುದಾದರೆ ಲೂಧಿಯಾನ ಹಾಗೂ ಭೋಪಾಲ್ ನಗರಗಳಲ್ಲಿ ತಲಾ 2 ಪ್ರಕರಣಗಳು, ಮುಂಬೈ, ಹೈದರಾಬಾದ್ ಹಾಗೂ ಪುಣೆಯಲ್ಲಿ ತಲಾ 1 ಪ್ರಕರಣಗಳು ದಾಖಲಾಗಿವೆ.

ತೆರಿಗೆ ವಂಚನೆ ಮಾಡಿ ಕಾಳಧನವನ್ನು ಕೂಡಿಟ್ಟಿದ್ದವರ ವಿರುದ್ಧ ಸಮರ ಸಾರಿರುವ ತೆರಿಗೆ ಇಲಾಖೆ ಅಧಿಕಾರಿಗಳು, ಈವರೆಗೂ ಸುಮಾರು 400 ಪ್ರಕರಣಗಳನ್ನು ಕಲೆಹಾಕಿದ್ದು, ಸುಮಾರು ₹ 2 ಸಾವಿರ ಕೋಟಿಗೂ ಹೆಚ್ಚು ತೆರಿಗೆ ವಂಚಿತ ಆಸ್ತಿಯನ್ನು ಪತ್ತೆ ಹಚ್ಚಿದ್ದಾರೆ. ಅದರಲ್ಲಿ ₹130 ಕೋಟಿಗೂ ಹೆಚ್ಚಿನ ಮೌಲ್ಯದ ಸಂಪತ್ತು ನಗದು ಹಾಗೂ ಆಭರಣ ರೂಪದಲ್ಲಿ ಸಿಕ್ಕಿವೆ.

ಕರ್ನಾಟಕದ ಇಬ್ಬರು ಅಧಿಕಾರಿಗಳ ಮನೆ ಮೇಲೆ ಅಧಿಕಾರಿಗಳು ದಾಳಿ ಮಾಡಿದಾಗ ₹ 4.7 ಕೋಟಿಯಷ್ಟು ಹಣ ಹೊಸ ನೋಟಿನಲ್ಲಿದ್ದು, 7 ಕೆ.ಜಿ ಚಿನ್ನ, ಹಳೇ ನೋಟಿನಲ್ಲಿದ್ದ ಸುಮಾರು ₹ 90 ಲಕ್ಷ ಹಣ ಹಾಗೂ ಐಶಾರಾಮಿ ಕಾರುಗಳು ಸೇರಿದಂತೆ ಒಟ್ಟು ₹ 152 ಕೋಟಿ ಮೌಲ್ಯದ ಸಂಪತ್ತು ವಶವಾಗಿತ್ತು. ಈ ಪ್ರಕರಣ ಹೊರತುಪಡಿಸಿ ತೆರಿಗೆ ಅಧಿಕಾರಿಗಳು ರಾಜ್ಯದಲ್ಲಿ ಸಹಕಾರಿ ಸಂಘಗಳ ಮೇಲೂ ದಾಳಿ ನಡೆಸಿದ್ದು, ಅಕ್ರಮವಾಗಿ ನೋಟು ಬದಲಾವಣೆ ಮಾಡುತ್ತಿದ್ದ ಹಲವು ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ. ಆ ಪೈಕಿ ಹಲವರು ₹ 50 ಲಕ್ಷಕ್ಕೂ ಹೆಚ್ಚಿನ ನಗದನ್ನು ಹೊಸ ನೋಟಿಗೆ ಪರಿವರ್ತಿಸುತ್ತಿದ್ದರು.

ಇದೇ ರೀತಿ ದೇಶದ ಇತರೆ ಸಹಕಾರಿ ಸಂಸ್ಥೆಗಳಲ್ಲೂ ಅಕ್ರಮ ನೋಟು ಬದಲಾವಣೆಯ ಪ್ರಕರಣಗಳನ್ನು ತೆರಿಗೆ ಇಲಾಖೆ ಪತ್ತೆಹಚ್ಚಿದ್ದು, ಈ ಅಲ್ಲ ಅಕ್ರಮ ನೋಟು ಬದಲಾವಣೆಯ ಮೊತ್ತ ಸುಮಾರು ₹ 8 ಸಾವಿರ ಕೋಟಿಯಷ್ಟಿದೆ ಎಂದು ಲೈವ್ ಮಿಂಟ್ ವರದಿ ತಿಳಿಸಿದೆ. ಇನ್ನು ಮುಂಬೈನಲ್ಲಿ ನಡೆದ ರೈಡ್ ನಲ್ಲಿ ಹೊಸ ನೋಟಿನಲ್ಲಿದ್ದ ₹ 80 ಲಕ್ಷ, ಲೂಧಿಯಾನದಲ್ಲಿ 14 ಸಾವಿರ ಅಮೆರಿಕನ್ ಡಾಲರ್ ಮತ್ತು ₹ 72 ಲಕ್ಷ, ಹೈದರಾಬಾದಿನಲ್ಲಿ ₹ 95 ಲಕ್ಷ, ಪುಣೆಯಲ್ಲಿ ₹ 20 ಲಕ್ಷ (10 ಲಕ್ಷ ಹೊಸ ನೋಟಿನದ್ದು) ಸಿಕ್ಕಿದ್ದವು.

ಜನ್ ಧನ್ ಖಾತೆಯಲ್ಲಿ ಅಪಾರ ಹಣ ಜಮಾ ಆಗುವ ಪಟ್ಟಿಯಲ್ಲಿ ಪಶ್ಚಿಮ ಬಂಗಾಳ ಮೊದಲ ಸ್ಥಾನ ಹಾಗೂ ಕರ್ನಾಟಕ ಎರಡನೇ ಸ್ಥಾನ ಪಡೆದಿತ್ತು. ಆದರೆ ಅನುಮಾನಾಸ್ಪದವಾಗಿ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿರುವ ಪ್ರಕರಣಗಳಲ್ಲಿ ಕರ್ನಾಟಕ ಅಗ್ರಸ್ಥಾನ ಪಡೆದಿದೆ.

Leave a Reply