ತಲೆಮರೆಸಿಕೊಂಡ ಕೆಎಎಸ್ ಅಧಿಕಾರಿ ಭೀಮಾ ನಾಯಕ್- ಪ್ರಕರಣದ ಬಗ್ಗೆ ಮಾಹಿತಿಯೇ ಗೊತ್ತಿಲ್ಲ ಅಂದ್ರು ಸಿದ್ದು- ಪರಂ, 11 ಸಾವಿರ ಪೊಲೀಸರಿಗೆ ಸಿಕ್ತು ಬಡ್ತಿ ಭಾಗ್ಯ, ನ.9ಕ್ಕೆ ರಾಜ್ಯದ ಸರ್ವಪಕ್ಷ ನಿಯೋಗದಿಂದ ಪ್ರಧಾನಿ ಭೇಟಿ

ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಪೊಲೀಸ್ ಸಿಬ್ಬಂದಿ ಬಡ್ತಿ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಬುಧವಾರ ಚರ್ಚೆ ನಡೆಸಿದ ಸಿದ್ದರಾಮಯ್ಯ…

ಡಿಜಿಟಲ್ ಕನ್ನಡ ಟೀಮ್:

ಕೆಎಎಸ್ ಅಧಿಕಾರಿಯ ಚಾಲಕ ರಮೇಶ್ ಗೌಡ ಮಂಗಳವಾರ ಡೆತ್ ನೋಟ್ ಬರೆದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ, ಈಗ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ವಿಶೇಷ ಭೂಸ್ವಾಧೀನಾಧಿಕಾರಿಯಾಗಿರುವ ಭೀಮಾನಾಯಕ್ ತಲೆಮರೆಸಿಕೊಂಡಿದ್ದಾರೆ.

ಆತ್ಮಹತ್ಯೆಗೂ ಮುನ್ನ 17 ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದ ರಮೇಶ್ ಗೌಡ, ಭೀಮಾ ನಾಯಕ್ ಅವರ ಅಕ್ರಮಗಳನ್ನು ಎಳೆ ಎಳೆಯಾಗಿ ವಿವರಿಸಿದ್ದರು. ಜತೆಗೆ ಭೀಮಾ ನಾಯಕ್ ಅವರ ಅಕ್ರಮ ಆಸ್ತಿ ಸಂಪಾದನೆ, ಕಂದಾಯ ಸಚಿವರ ಆಪ್ತ ಕಾರ್ಯದರ್ಶಿಗೆ ಲಂಚ ನೀಡಿದ್ದು, ಜನಾರ್ದನ ರೆಡ್ಡಿ ಮಗಳ ಮದುವೆಗೆ ₹ 100 ಕೋಟಿಯಷ್ಟು ಕಪ್ಪು ಹಣವನ್ನು ಬಿಳಿ ಮಾಡಿಕೊಟ್ಟಿದ್ದು, ಈ ಮಾಹಿತಿಯನ್ನು ಯಾರಿಗೂ ಹೇಳದಂತೆ ತಮಗೆ ಜೀವ ಬೆದರಿಕೆ ಹಾಕಿರುವ ಬಗ್ಗೆ ಉಲ್ಲೇಖ ಮಾಡಿದ್ದರು.

ರಮೇಶ್ ಗೌಡ ಆತ್ಮಹತ್ಯೆಯಾದ ಬೆನ್ನಲ್ಲೇ ಇಂದು ಭೀಮಾ ನಾಯಕ್ ತಮ್ಮ ಕೆಲಸಕ್ಕೆ ಹಾಜರಾಗಿಲ್ಲ. ಈ ಡೆತ್ ನೋಟ್ ನಲ್ಲಿ ತಮ್ಮ ವಿರುದ್ಧ ನೇರ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಭೀಮಾ ನಾಯಕ್ ತಲೆ ಮರಿಸಿಕೊಂಡಿದ್ದಾರೆ.

ಇನ್ನು ಈ ಪ್ರಕರಣದ ಬಗ್ಗೆ ಮಾಧ್ಯಮಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ್ ಅವರನ್ನು ಪ್ರಶ್ನಿಸಿದಾಗ, ಇಬ್ಬರೂ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿ ಜಾರಿಕೊಂಡಿದ್ದಾರೆ. ಈ ಪ್ರಕರಣವನ್ನು ಸ್ಥಳೀಯ ಠಾಣಾ ಅಧಿಕಾರಿಗಳೇ ತನಿಖೆ ನಡೆಸಲಿದ್ದು, ಈ ಪ್ರಕರಣ ತೀವ್ರ ಪ್ರಮುಖವಾಗಿದ್ದರೆ ಮಾತ್ರ ಹಿರಿಯ ಅಧಿಕಾರಿಗಳು ನಮಗೆ ಮಾಹಿತಿ ನೀಡುತ್ತಾರೆ ಎಂದರು ಪರಮೇಶ್ವರ್.

ಇನ್ನು ಡೆತ್ ನೋಟ್ ನಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಗೂ ತಮ್ಮ ಹೆಸರು ಕೇಳಿ ಬಂದಿರುವುದು ರಾಜಕೀಯ ಪಿತೂರಿ ಎಂದು ಶ್ರೀರಾಮುಲು ತಿಳಿಸಿದ್ದಾರೆ. ಅವರು ಸರ್ಕಾರಿ ಅಧಿಕಾರಿ ಇತರರನ್ನು ಭೇಟಿ ಮಾಡಿರುವ ರೀತಿಯಲ್ಲಿ ಅವರನ್ನು ನಾವು ಭೇಟಿ ಮಾಡಿರಬಹುದು. ನಾವು ಕಪ್ಪು ಹಣವನ್ನು ಅವರಿಂದ ಬಿಳಿ ಮಾಡಿಕೊಳ್ಳುವಷ್ಟು ಪ್ರಭಾವಿ ವ್ಯಕ್ತಿ ಆತನಲ್ಲ. ಆತನ ಬಳಿ ಅಷ್ಟು ದೊಡ್ಡ ಪ್ರಮಾಣದಲ್ಲಿ ಹಣ ಇದ್ದಿದ್ದರೆ ತೆರಿಗೆ ಅಧಿಕಾರಿಗಳು ಸುಮ್ಮನೆ ಬಿಡುತ್ತಿದ್ದರೆ ಎಂದು ಶ್ರೀರಾಮುಲು ಪ್ರತಿಕ್ರಿಯಿಸಿದ್ದಾರೆ.

ಪೊಲೀಸರಿಗೆ ಬಡ್ತಿ ಭಾಗ್ಯ

ರಾಜ್ಯ ಪೊಲೀಸ್ ಸಿಬ್ಬಂದಿಯ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದ್ದ ಉದ್ಯೋಗ ಬಡ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಆ ಮೂಲಕ 11 ಸಾವಿರ ಪೊಲೀಸ್ ಸಿಬ್ಬಂದಿ ಹೊಸ ವರ್ಷದ ವೇಳೆಗೆ ಬಂಪರ್ ಗಿಫ್ಟ್ ಪಡೆಯಲಿದ್ದಾರೆ. ಈ 11 ಸಾವಿರ ಸಿಬ್ಬಂದಿ ಪೈಕಿ ಪೇದೆಯಿಂದ ಮುಖ್ಯ ಪೇದೆ, ಮುಖ್ಯ ಪೇದೆಯಿಂದ ಸಹಾಯಕ ಸಬ್ ಇನ್ಸ್ ಪೆಕ್ಟರ್ ಹಾಗೂ ಸಹಾಯಕ ಸಬ್ ಇನ್ಸ್ ಪೆಕ್ಟರ್ ನಿಂದ ಸಬ್ ಇನ್ಸ್ ಪೆಕ್ಟರ್ ವರೆಗೂ ಬಡ್ತಿ ಸಿಗಲಿದೆ.

ಕಳೆದ 25 ವರ್ಷಗಳಲ್ಲೇ ಇಷ್ಟು ದೊಡ್ಡ ಪ್ರಮಾಣದಲ್ಲಿ ಪೊಲೀಸ್ ಸಿಬ್ಬಂದಿಗೆ ಬಡ್ತಿ ನೀಡಲಾಗುತ್ತಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಸೂಕ್ತ ಕಾರಣಗಳಿಲ್ಲದೆ ಸಿಬ್ಬಂದಿಯ ಬಡ್ತಿಯನ್ನು ತಡೆ ಹಿಡಿಯಬಾರದು ಎಂದು ಮುಖ್ಯಮಂತ್ರಿ ಎಚ್ಚರಿಕೆ ನೀಡಿದ್ದಾರೆ. ಈ ನಿರ್ಧಾರ ಪ್ರಕಟಿಸಿ ಮಾತನಾಡಿದ ಸಿಎಂ, ರಾಜ್ಯದ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಶ್ಲಾಘನೀಯ. ಅವರಿಗೆ ಏನು ಸಲ್ಲಬೇಕೋ ಸರ್ಕಾರದ ಅದನ್ನು ನೀಡಲಿದೆ. ಅವರ ಮೇಲಿನ ಒತ್ತಡ ಕಡಿಮೆ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುವುದು ಎಂದರು.

ಇದೇ ವೇಳೆ ರಿಯಲ್ ಎಸ್ಟೇಟ್ ಹಾಗೂ ಭೂ ಮಾಫಿಯಾಗಳಲ್ಲಿ ಕೈವಾಡ ಹೊಂದಿರುವ ಪೊಲೀಸ್ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಿಎಂ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜತೆಗೆ ಅಕ್ರಮ ನೋಟು ಬದಲಾವಣೆ, ಕಪ್ಪುಹಣ ಬಿಳಿ ಮಾಡುವುದು ಸೇರಿದಂತೆ ವಿವಿಧ ಅಕ್ರಮಗಳಲ್ಲಿ ಭಾಗಿಯಾದವರ ವಿರುದ್ಧವೂ ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ.

ಇನ್ನುಳಿದಂತೆ ನೀವು ತಿಳಿಯಬೇಕಿರುವ ಪ್ರಮುಖ ಸುದ್ದಿ ಸಾಲುಗಳು…

  • ಬರ ನಿರ್ವಹಣೆಗೆ ಹೆಚ್ಚಿನ ಅನುದಾನ ಮತ್ತು ಮಹದಾಯಿ ವಿವಾದ ಬಗೆಹರಿಸಲು ಣದ್ಯ ಪ್ರವೇಶಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಲು ಇದೇ ತಿಂಗಳು 9ರಂದು ಸರ್ವ ಪಕ್ಷ ನಿಯೋಗ ಕರೆದೊಯ್ಯಲು ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ನವದೆಹಲಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಲಿರುವ ಸಂಸದರು ಹಾಗೂ ಕೇಂದ್ರ ಸಚಿವರ ಸಭೆ ಕರೆದಿದ್ದು, ಸಭೆಯಲ್ಲಿ ಚರ್ಚಿಸಿದ ಬಳಿಕ ಪ್ರಧಾನಿ ಅವರನ್ನು ಎಲ್ಲ ಪಕ್ಷದ ನಾಯಕರು ಸೇರಿ ಭೇಟಿ ಮಾಡಲು ನಿರ್ಧರಿಸಲಾಗಿದೆ.
  • ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿನ ಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದ ಉಭಯ ರಾಜ್ಯಗಳ ನಡುವಣ ಸಾರಿಗೆ ಸಂಪರ್ಕವನ್ನು ಮತ್ತೆ ಆರಂಭಿಸಲಾಗಿದೆ. ತಮಿಳು ನಾಡಿನಲ್ಲಿ ಪರಿಸ್ಥಿತಿ ಶಾಂತವಾಗಿರುವ ಹಿನ್ನೆಲೆಯಲ್ಲಿ ಸಾರಿಗೆ ಸಂಪರ್ಕ ಮತ್ತೆ ಆರಂಭಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ.
  • ಅಕ್ರಮ ಗಣಿಗಾರಿಕೆಯನ್ನು ವಿರೋಧಿಸಿ ಬಳ್ಳಾರಿಯವರೆಗೆ ಪಾದಯಾತ್ರೆ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಈಗ ಕಪ್ಪತಗುಡ್ಡದ 44 ಸಾವಿರ ಎಕರೆ ಪ್ರದೇಶವನ್ನು ಅಕ್ರಮ ಗಣಿಗಾರಿಕೆಕೆ ಮುಕ್ತ ಮಾಡಲು ಹೊರಟಿರುವುದು ಯಾವ ರೀತಿಯ ನ್ಯಾಯ ಎಂದು ಪ್ರಶ್ನಿಸಿದ್ದಾರೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್. ಈವರೆಗೂ ಸಂರಕ್ಷಿತ ಪ್ರದೇಶ ಎಂದಿದ್ದ ಆದೇಶವನ್ನು ವಾಪಸ್ ಪಡೆಯುವ ಮೂಲಕ ಅಲ್ಲಿ ಗಣಿಗಾರಿಕೆಗೆ ಅವಕಾಶ ಮಾಡಿಕೊಡಲು ಸರ್ಕಾರ ಮುಂದಾಗಿದೆ. ಇಲ್ಲಿ ಗಣಿ ಉದ್ಯಮಿ ಬಲ್ದೋಟ ಅವರಿಗೆ ಸೇರಿದ ರಾಮಘಡ ಮಿನರಲ್ಸ್ ಮೈನಿಂಗ್ ಲಿಮಿಟೆಡ್ ಹಾಗೂ ಎನ್ ಕಾರ್ನ್ ಪವನ್ ವಿದ್ಯುತ್ ಸಂಸ್ಥೆ ಗಣಿಗಾರಿಕೆ ಮಾಡಲು ಅನುಕೂಲ ಮಾಡಿಕೊಡಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಶೆಟ್ಟರ್ ಆರೋಪಿಸಿದ್ದಾರೆ.
  • ನೋಟು ನಿಷೇಧದ ಬಳಿಕ ಮೊದಲ ಬಾರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ನೂತನ ಹಣಕಾಸು ನೀತಿಯನ್ನು ಪ್ರಕಟಿಸಿದೆ. ಈ ನೂತನ ನೀತಿಯಲ್ಲಿ ಈ ಹಿಂದೆ ಇದ್ದ 6.25 ರಷ್ಟಿದ್ದ ರೆಪೋ ದರವನ್ನು ಹಾಗೇ ಮುಂದುವರಿಸಿದೆ. ಈ ಬಗ್ಗೆ ಮಾಹಿತಿ ನೀಡಿದ ಆರ್ಬಿಐ ಗವರ್ನರ್ ಉರ್ಜಿತ್ ಪಟೇಲ್, ಪ್ರಸ್ತುತ ವರ್ಷದ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಚಿಲ್ಲರೆ ಹಣದುಬ್ಬರ ಶೇ.5 ರಷ್ಟಿದೆ ಎಂದು ಪ್ರಕಟಿಸಿದ್ರು.
  • ಇಂಡೋನೆಷ್ಯಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಸಾವಿನ ಸಂಖ್ಯೆ 97ಕ್ಕೆ ಏರಿದೆ. ಭೂಕಂಪದ ಪರಿಣಾಮ ಹಲವು ಕಟ್ಟಡಗಳು ನೆಲಸಮವಾಗಿದ್ದು, ಕಟ್ಟಡ ತೆರವು ಕಾರ್ಯ ನಡೆಸಲಾಗುತ್ತಿದೆ. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯೂ ಇದೆ.
  • ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗೆ ಸೇರಿದ ವಿಮಾನ ಬುಧವಾರ ಸಂಜೆ ಅಬೊಟ್ಟಾಬಾದ್ ನಲ್ಲಿ ಧರೆಗುರುಳಿದೆ. ಈ ವಿಮಾನದಲ್ಲಿ 42 ಪ್ರಯಾಣಿಕರು ಹಾಗೂ 5 ವಿಮಾನ ಸಿಬ್ಬಂದಿ ಪ್ರಯಾಣಿಸುತ್ತಿದ್ದರು ಎಂದು ಮಾಹಿತಿ ಬಂದಿವೆ. ಚಿತ್ರಾಲ್ ನಿಂದ ಮಧ್ಯಾಹ್ನ 3.30ಕ್ಕೆ ಹೊರಟ ಪಿಐಎ ಪಿಕೆ-661 ಸಂಖ್ಯೆಯ ವಿಮಾನ ಇಸ್ಲಾಬಾಬಾದ್ ಕಡೆ ಆಗಮಿಸುತ್ತಿತ್ತು. ಈ ವಿಮಾನ ಸಂಜೆ 4.40ರಸುಮಾರಿಗೆ ಇಸ್ಲಾಮಾಬಾದಿಗೆ ಬಂದು ಸೇರುವ ನಿರೀಕ್ಷೆ ಇತ್ತು. ಈ ಅಪಘಾತದಲ್ಲಿ ಸಾವುನೋವಿನ ಕುರಿತ ಮಾಹಿತಿ ಇನ್ನಷ್ಟೇ ಬರಬೇಕಿದೆ.

Leave a Reply