ವಿಪರೀತ ಆಸಕ್ತಿ ಮಾಧ್ಯಮಗಳಿಗಷ್ಟೇ ಅಲ್ಲ ಮಂದಿಗೂ

author-geetha‘ಟಿ.ವಿ ನೋಡೋಕೆ ಬೇಜಾರು…’

‘ಹೂಂ..’

‘ಮೊದಲು ಸೀರಿಯಲ್ ಗಳನ್ನು ತಪ್ಪದೆ ನೋಡುತ್ತಲ್ಲಿದ್ದೆ. ಈಗ ಇಲ್ಲ. ಸುದ್ದಿ ತಿಳಿದುಕೊಳ್ಳುವ ಉದ್ದೇಶದಿಂದ ಸುದ್ದಿ ವಾಹಿನಿಗಳನ್ನು ನೋಡುತ್ತೇನೆ. ಈಗ ಅದೂ ಸಾಕಾಗ್ತಾ ಇದೆ…’

‘ಯಾಕೆ’

‘ರಾಷ್ಟ್ರೀಯ ಸುದ್ದಿ ವಾಹಿನಿಗಳಿಗೆ ದೆಹಲಿಯ ಸುದ್ದಿಯಷ್ಟೇ ಸುದ್ದಿ. ಕನ್ನಡದ್ದೇ ಎಂಟೋ ಹತ್ತೋ ಸುದ್ದಿ ವಾಹಿನಿಗಳಿವೆ. ಸುದ್ದಿ ಯಾವುದು ವಿಚಾರ ಯಾವುದು ಅಂತಲೇ ಅರ್ಥವಾಗೊಲ್ಲ. ಸುದ್ದಿ ಹೇಳುತ್ತಿದ್ದಾರೋ, ಸುದ್ದಿಯ ಬಗ್ಗೆ ಅಭಿಪ್ರಾಯ ಮಂಡಿಸುತ್ತಿದ್ದಾರೋ, ಎಂಬುದು ತಿಳಿಯುವುದಿಲ್ಲ. ವಿಷಯ, ವಿಚಾರದ ಜೊತೆಗೆ ಊಹೆ, ಗಾಸಿಪ್, ಅಭಿಪ್ರಾಯ ಎಲ್ಲವೂ ಸೇರಿ ಗೊಂದಲ ನನಗೆ. ಆ ಸುದ್ದಿಯನ್ನು ಗಜಾಗುಂಡಲದಿಂದ ಹೆಕ್ಕಿ ತೆಗೆದುಕೊಳ್ಳಬೇಕು ನಾವು…’

‘ಇರ್ಲಿ ಬಿಡಿ.. ನೀವು ಚುರುಕು ಆಗ್ತೀರಿ ಅಷ್ಟೇ…’

‘ನಮ್ಮ ಸುದ್ದಿ ವಾಹಿನಿಗಳಿಗೆ ರಾಜಕೀಯದಲ್ಲಿ ಇರುವವರ ವಿಷಯವಷ್ಟೇ ಸುದ್ದಿ..’

‘ಹೌದಲ್ಲವೇ? ಅವರೇ ತಾನೇ ಅಧಿಕಾರಕ್ಕೆ ಬರುವುದು, ಇರುವುದು…’ ಹಾಗಾಗಿ ಅವರದೇ ಸುದ್ದಿ..

‘ಇನ್ನು ಸಾವು… ಸಾವೆಂದರೆ ಹಬ್ಬ… ಆಸ್ಪತ್ರೆಗೆ ಸೇರಿದ್ದರಿಂದ ಹಿಡಿದು… ಹೂತು ಹಿಡಿ ಮಣ್ಣು ಹಾಕುವವರೆಗೂ ತೋರಿಸುತ್ತಲೇ ಇರುತ್ತಾರೆ. ಅಂತಿಮ ದರ್ಶನ ಪಡೆಯಲು ಬರುವ ಗಣ್ಯರ ಮೂತಿಗೆ ಮೈಕ್ ಹಿಡಿದು ನಿಮಗೇನನಿಸುತ್ತದೆ ಎಂದು ಕೇಳುತ್ತಾರೆ…

ಎದೆ ಬಡಿದುಕೊಂಡು ಅಳುತ್ತಿರುವವರ ಕ್ಲೋಸ್ ಅಪ್ ತೋರಿಸುತ್ತಾರೆ. ಸುದ್ದಿ ಹೇಳುವ ಮಧ್ಯೆ ಸತ್ತವರ ಪರಿಚಯವಿದ್ದ, ಪರಿಚಯವಿಲ್ಲದ ಜನರಿಗೆ ಕರೆ ಮಾಡಿ ಅವರ ಅಭಿಪ್ರಾಯ ಕೇಳುತ್ತಾರೆ.’

‘ಹೂಂ.. ನಂಗೂ ಗಾಬರಿಯಾಗುತ್ತಲ್ಲಿತ್ತು. ನಾನೂ ಬೆಳ್ಳಗೆ ಡುಮ್ಮಗೆ ಇದೀನಲ್ಲ… ನೀವು ಅವರ ಬಳಗವಾ? ನಿಮಗೇನು ಅನ್ನಿಸುತ್ತದೆ ಎಂದು ಕರೆ ಬರಬಹುದೇನೋ ಅಂತ..’

‘ಹಾಸ್ಯವಲ್ಲ..! ಇದು ಸೀರಿಯಸ್ ವಿಚಾರ. ಜನರಿಗೆ ವಿಷಯಗಳು, ಸುದ್ದಿಗಳು… ಗೊತ್ತಾಗುವುದೇ ಸುದ್ದಿ ವಾಹಿನಿಗಳು ಹಾಗೂ ಪತ್ರಿಕೆಗಳಿಂದ. ಪತ್ರಿಕೆಗಳನ್ನು ಓದುವವರು ಅಕ್ಷರಸ್ಥರು. ಸುಳ್ಳು, ಸತ್ಯದ ತೆರೆ ಸರಿಸಿ ನೋಡಬಲ್ಲರೇನೋ.. ಆದರೆ ಸುದ್ದಿ ವಾಹಿನಿಗಳಲ್ಲಿ ಬರುವ ಸುದ್ದಿ, ವಿಚಾರ… ಬಹಳ ನೈಜ್ಯವಾಗಿ ಇರುತ್ತದೆ. ಮಾತಿನ ಜತೆಗೆ ವಿಡಿಯೋ ಕೂಡ ಇರುವುದರಿಂದ, ಜೊತೆಗೆ ನೋಡುಗರು ಎಲ್ಲ ಸ್ಥರದಲ್ಲಿ ಇರುವವರಾಗಿರುವುದರಿಂದ ಸುದ್ದಿ ವಾಹಿನಿಗಳ ಜವಾಬ್ದಾರಿ ಹೆಚ್ಚು…’

‘ಗೊತ್ತು… ನಾನು ಕಮ್ಯುನಿಕೇಷನ್ಸ ಓದಿರುವ ವಿದ್ಯಾರ್ಥಿ. ಮಿಡಿಯಾ ಜವಾಬ್ದಾರಿಯುತವಾಗಿರಬೇಕು ಎಂಬುದು ಮೊದಲನೆಯ ಪಾಠ ನಮಗೆ..’

‘ಮತ್ತೆ.. ಏನು ಮೇಡಂ? ಒಬ್ಬರು… ಅವರು ಮುಖ್ಯಮಂತ್ರಿಗಳಾಗಿದ್ದವರೇ ಆಗಿರಲಿ. ಖಾಯಿಲೆ ಬಿದ್ದು ಹೃದಯಾಘಾತವಾಗಿ ಸತ್ತರೆ. ಈ ರೇಂಜಿಗೆ ಸುದ್ದಿ ಮಾಡೋದಾ?’

‘ನಿಮ್ಮ ಕೈಯಲೇ ರಿಮೋಟ್ ಇರುತ್ತಲ್ಲ… ಚಾನೆಲ್ ಬದಲಾಯಿಸಿ ಅಥವಾ ಟಿ.ವಿ ಆರಿಸಿ ನೆಮ್ಮದಿಯಾಗಿ ಕುಳಿತುಕೊಳ್ಳಿ.. ನೀವು ನೋಡುವುದರಿಂದಲೇ ಆ ಬಗೆಯ ಸುದ್ದಿಗಳು ಹೆಚ್ಚು ಹೆಚ್ಚು ಪ್ರಸಾರವಾಗುವುದು.’

‘ಏನೋ ತಪ್ಪು ತೋರಿಸಲು, ಬುದ್ಧಿ ಹೇಳಲು ಬಂದರೆ ನನ್ನೇ ಅಂತೀರಲ್ಲ ನೀವು…’

‘ಅನ್ನೋದೇನಿಲ್ಲ. ಬೇಕಾದರೆ ಈ ವಿಷಯವನ್ನೇ ಚರ್ಚೆಗೆ ಎತ್ತಿಕೊಂಡು ಒಂದು ಗಂಟೆ ಚರ್ಚೆ ಮಾಡುತ್ತಾರೆ, ನಾಲ್ಕು ಮಂದಿಯನ್ನು ಕರೆಸಿ! ನೀವೂ ನಿಮ್ಮ ಪರಿಚಯವನ್ನು ಹಿಗ್ಗಿಸಿಕೊಳ್ಳಿ.. ನಿಮ್ಮನ್ನೂ ಕರೆಯಬಹುದು ಚರ್ಚೆಗೆ..’

ಅಂದವರು ಮುಖ ಚಿಕ್ಕದು ಮಾಡಿಕೊಂಡು ಹೊರಟುಹೋದರು. ಅವರು ಹೇಳಿದ್ದೂ ನಿಜವೇ… ಸ್ವನಿಯಂತ್ರಣ ಇಲ್ಲದಿದ್ದರೆ ಯಾರು ಏನೂ ಮಾಡಲಾಗುವುದಿಲ್ಲ. ಆದರೆ ಒಂದು ಮಾತಂತೂ ಸ್ಪಷ್ಟ. ನಮಗೆ ಸಾವು, ಕೊಲೆ, ಅಂತ್ಯಸಂಸ್ಕಾರ, ಅನೈತಿಕತೆಯಂತಹ ವಿಷಯಗಳ ಬಗ್ಗೆ ತುಂಬಾ ಆಸಕ್ತಿ.

ಅಮೆರಿಕದಲ್ಲಿ 9/11 ನಲ್ಲಿ ಅಷ್ಟೊಂದು ಮಂದಿ ಸತ್ತರೂ ಯಾವ ಸುದ್ದಿ ವಾಹಿನಿಯೂ ಶವಗಳನ್ನು ತೋರಿಸಲಿಲ್ಲ ಎಂದು ಓದಿದ ನೆನಪು.

ನಮ್ಮಲ್ಲಿ ಹಾಗಲ್ಲ… ಭೀಕರ ಅಪಘಾತವಾದರೆ, ಸತ್ತವರು ಎಷ್ಟು ಮಂದಿ ಎಂಬುದೇ ಮೊದಲ ಪ್ರಶ್ನೆ. ಜೊತೆಗೆ ಬಾಡಿ ಇನ್ನು ಸ್ಪಾಟಲ್ಲೇ ಇದೆಯಾ ಎಂಬುದು ಎರಡನೇ ಪ್ರಶ್ನೆ. ಇಲ್ಲದಿದ್ದರೆ ಕ್ಯಾಮೆರಾಮನ್ ಕಳಿಸುವುದು ದಂಡ.

ಮೊನ್ನೆ ಕೂಡ ಅಷ್ಟೇ. ಅಪೊಲೋ ಆಸ್ಪತ್ರೆಯ ಎದುರು ಕ್ಯಾಮೆರಗಳು ದಂಡು ಹೆಗಲ ಮೇಲೆ ಆ ಮಣಭಾರ ಹೊತ್ತ ಕ್ಯಾಮೆರಾಮನ್ ಗಳು ಜಯಲಲಿತಾ ಅವರ ಮೃತ ದೇಹದ ಮೊದಲ ಫೋಟೋ ಕ್ಲಿಕ್ಕಿಸಲು. ಯಾಕೆ? ಅವರ ಮೃತದೇಹ ನೋಡುವ ಕಾತುರ ನಮಗೆ?

ಬರೀ ಮೀಡಿಯಾ ಎಂದಲ್ಲ. ನಮ್ಮ ಜನರಿಗೇ ಸಾವಿನ ಬಗ್ಗೆ, ಸತ್ತವರ ಬಗ್ಗೆ, ದಹನದ ಬಗ್ಗೆ ವಿಪರೀತ ಆಸಕ್ತಿ.

ರಸ್ತೆಯಲ್ಲಿ ಅಪಘಾತವಾಗಿ ಕೊನೆಯುಸಿರು ಎಳೆಯುತ್ತಿದ್ದ ವ್ಯಕ್ತಿಗೆ ಸಹಾಯ ಮಾಡುವ ಬದಲು ತಮ್ಮ ತಮ್ಮ ಮೊಬೈಲುಗಳಲ್ಲಿ ಫೋಟೋ ತೆಗೆದರಂತೆ ಅಲ್ಲಿದ್ದ ಹಲವರು.

ಈಗ ಎಲ್ಲರ ಕೈಯಲ್ಲೂ ಕ್ಯಾಮೆರಾ ಇರುವ ಮೊಬೈಲು… ಸುದ್ದಿ ಹರಡಲು ವಾಟ್ಸಾಪ್ಪು ಹಾಗೂ ಫೇಸ್ ಬುಕ್ಕು..

ರಸ್ತೆಯಲ್ಲಿ ಅಪಘಾತವಾದರೆ ಸಹಾಯಕ್ಕೆ ಧಾವಿಸುವುದರ ಬದಲು ಫೋಟೋ ಕ್ಲಿಕ್ಕಿಸಿ, ಮುರಿದ ಕೈಯಿ, ಹರಿದ ರಕ್ತದ ಫೋಟೋಗಳನ್ನು upload ಮಾಡಿ ‘I am feeling sick’, ‘I am feeling sad’ ಎಂದು ಕಾಮೆಂಟ್ ಹಾಕಿ ತಮ್ಮ ಮಾನವೀಯತೆಯನ್ನು ತೋರಿಸಿಕೊಳ್ಳುತ್ತಾರೆ.

Demonetisation ಆದ ಮೇಲೆ ಎಟಿಎಂನ ಸರದಿ ಸಾಲಿನಲ್ಲಿ ಸತ್ತವರ ಫೋಟೋ… ಸತ್ತವರು ಸತ್ತು ಬಿದ್ದಿದ್ದಾರೆ… ಸಾಲಿನಲ್ಲಿ ನಿಂತವರು ಫೋಟೋ ಕ್ಲಿಕ್ಕಿಸಿ, ಸಾಲಿನಲ್ಲಿ ನಿಂತೇ ಇದ್ದಾರೆ.

ICUನಲ್ಲಿ ಇರುವ ಜಯಲಲಿತಾ ಎಂದು ಯಾವುದೋ ಫೋಟೋ ವಾಟ್ಸಾಪ್ಪಿನಲ್ಲಿ ಹರಿದಾಡಿತ್ತು ಹಲವು ದಿನಗಳ ಹಿಂದೆ.

ಬದುಕಿದ್ದಾಗ.. ಹೇಗೋ ಅವರು ಬದುಕಿಕೊಳ್ಳುತ್ತಾರೆ. ಸತ್ತಾಗ ಹೋಗಿ ನೋಡಿ ಬರಬೇಕು ಅವರ ಮನೆಯವರಿಗೆ ಸಮಾಧಾನ ಹೇಳಿ ಬರಬೇಕು. ಎಂಬುದು ನಮ್ಮ ಸಂಸ್ಕೃತಿ. ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ಕೂಡ ಇದೆ. ಬಿಸ್ಕೆಟು, ಕೇಕು, ಮಾಡಿಕೊಂಡು ಹೋಗಿ ಸತ್ತವರ ಮನೆಯಲ್ಲಿ ಇರುವವರಿಗಾಗಿ ಇಟ್ಟು ಬರುವ ಪದ್ಧತಿ ಪಾಶ್ಚಾತ್ಯದಲ್ಲಿ ಇದೆ.

ಆ ಪದ್ಧತಿಯಿಂದಲೇ ಲಕ್ಷಾಂತರ ಜನ ಚೆನ್ನೈನ ರಸ್ತಗಳಲ್ಲಿ ನಿಂತು ವಿದಾಯ ಹೇಳಿದ್ದು. ಟಿ.ವಿ ಕ್ಯಾಮೆರಾಗಳು ಇವೆ ಎಂಬ ಅರಿವು ಕೆಲವರನ್ನಷ್ಟೇ ಮಾನವದನರನ್ನಾಗಿ ಮಾಡಿದ್ದು. ಸಾಮಾನ್ಯ ಜನರಂತೂ ತಾವೂ ಟಿ.ವಿಯಲ್ಲಿ ಬರುವುದು ಮನೆಯಲ್ಲಿ ಇರುವ ತಮ್ಮವರು ನೋಡಬಹುದು ಎಂದು ಹಲ್ಲು ಕಿರಿದು ಕೈ ಬೀಸಿದರು.

ಹುಟ್ಟು ಸಂಭ್ರಮ, ಸಾವು ಸಂತಾಪ. ಸಂತಾಪದೊಂದಿಗೆ ಸತ್ತವರ ಬಗ್ಗೆ ಗೌರವವಿರಲಿ. ಮೃತದೇಹವನ್ನು ವಿವಿಧ ಕೋನಗಳಲ್ಲಿ ಸೆರೆ ಹಿಡಿದು ತೋರುವ ಹುಚ್ಚು ನಮಗೆ ಬೇಡ. ನೋಡುವ ದರ್ದು ಕೂಡ ಬೇಡ.

ಬರೆಯುವಾಗ, ಬರೆದಿದ್ದನ್ನು ಓದುವಾಗ (ಭಾಷಣ ಮಾಡುವಾಗ) ಬರೆದವರಿಗೆ ಒಂದು ಸ್ವಯಂ ನಿರ್ಬಂಧ ಇರುತ್ತದೆ. ಆದರೆ ಸುದ್ದಿ ವಾಹಿನಿಗಳಲ್ಲಿ ಲೈವಾಗಿ ಸುದ್ದಿ ಭಿತ್ತರಿಸುತ್ತಿದ್ದರೆ ಯಾವುದೇ ನಿರ್ಬಂಧ ಇರುವುದಿಲ್ಲ. ಹೇಳಿದ್ದು, ಆ ಕ್ಷಣ ಜನರಿಗೆ ತಲುಪಿತು ಎಂತಲೇ. ಹಾಗಾಗಿ ಲೈವ್ ಕವರೇಜ್ ಕಳುಹಿಸುವ ವರದಿಗಾರರ ಭಾಷೆ ಶುದ್ಧವಾಗಿ ಇರಬೇಕು. ವಿಷಯ ಜ್ಞಾನ, ಸಮಯ ಪ್ರಜ್ಞೆ ಸರಿ ಇರಬೇಕು..

ವಿಷಯಗಳೇ ಹಾಗೆ. ಒಂದಕ್ಕೊಂದು ಕೊಂಡಿ. ಬದುಕು ಸಾವು ಕೂಡ ಒಂದಕ್ಕೊಂದು ಕೊಂಡಿ. ಶಾಶ್ವತವಾಗಿ ಉಳಿಯುವುದು ಯಾವುದೂ ಇಲ್ಲ. ಸ್ಥಾವರ, ಜಂಗಮ.. ಎರಡಕ್ಕೂ ಉಂಟು ಅಳಿವು.

Leave a Reply