ಚೆನ್ನೈನಲ್ಲಿ ತೆರಿಗೆ ಅಧಿಕಾರಿಗಳ ಬಲೆಗೆ ಬಿದ್ದ ದೊಡ್ಡ ತಿಮಿಂಗಿಲಗಳು… ₹ 90 ಕೋಟಿಯಲ್ಲಿ ₹ 70 ಕೋಟಿ ಆಗಿವೆ ಹೊಸ ನೋಟು

ಡಿಜಿಟಲ್ ಕನ್ನಡ ಟೀಮ್:

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ರಾಜ್ಯದ ಇಬ್ಬರು ಅಧಿಕಾರಿಗಳ ಮನೆ ಮೇಲೆ ತೆರಿಗೆ ಅಧಿಕಾರಿಗಳು ದಾಳಿ ಮಾಡಿ ₹ 4.7 ಕೋಟಿ ಹೊಸ ನೋಟುಗಳನ್ನು ವಶಪಡಿಸಿಕೊಂಡಿದ್ದನ್ನು ನೋಡಿ ಅಚ್ಚರಿಪಟ್ಟಿದ್ದ ನಿಮಗೆ ಈಗ ಮತ್ತೊಂದು ಶಾಕಿಂಗ್ ಸುದ್ದಿ ಬಂದಿದೆ. ಅದೇನಂದ್ರೆ, ತೆರಿಗೆ ಅಧಿಕಾರಿಗಳು ಚೆನ್ನೈನ 8 ಕಡೆಗಳಲ್ಲಿ ಗುರುವಾರ ದಾಳಿ ಮಾಡಿದ್ದು, ಅಕ್ರಮವಾಗಿ ನಗದು ಬದಲಾವಣೆ ಮಾಡಿಕೊಳ್ಳುತ್ತಿದ್ದ ಜಾಲವನ್ನು ಪತ್ತೆಹಚ್ಚಿದೆ. ಈ ದಾಳಿಯಲ್ಲಿ ₹ 90 ಕೋಟಿ ಹಣವನ್ನು ವಶಪಡಿಸಿಕೊಂಡಿದೆ. ಆ ಪೈಕಿ ₹ 70 ಕೋಟಿಯಷ್ಟು ಹಣ ಹೊಸ ನೋಟುಗಳು ಎಂಬುದು ನಂಬಲೇಬೇಕಾದ ಅಚ್ಚರಿ.

ಉದ್ಯಮಿಗಳಾದ ಶೇಖರ್ ರೆಡ್ಡಿ, ಶ್ರೀನಿವಾಸ ರೆಡ್ಡಿ ಮತ್ತು ಪ್ರೇಮ್ ರೆಡ್ಡಿ ಎಂಬುವವರ ಕಚೇರಿ ಹಾಗೂ ನಿವಾಸಗಳ ಮೇಲೆ ದಾಳಿ ಮಾಡಿರುವ ತೆರಿಗೆ ಅಧಿಕಾರಿಗಳು ಕೋಟಿಗಟ್ಟಲೆ ಹಣದ ಜತೆಗೆ 100 ಕೆ.ಜಿ ಚಿನ್ನ ಹಾಗೂ ₹ 400 ಕೋಟಿಗೂ ಹೆಚ್ಚಿನ ಅಕ್ರಮ ಆಸ್ತಿ ಹೊಂದಿರುವುದನ್ನು ಬೆಳಕಿಗೆ ತಂದಿದೆ. ಇದರೊಂದಿಗೆ ನೋಟು ಅಮಾನ್ಯ ನಿರ್ಧಾರ ಪ್ರಕಟವಾದ ನಂತರ ನಡೆದ ಅತಿ ದೊಡ್ಡ ಪ್ರಮಾಣದ ತೆರಿಗೆ ಅಧಿಕಾರಿಗಳ ದಾಳಿ ಇದಾಗಿದ್ದು, ದೊಡ್ಡ ತಿಮಿಂಗಿಲಗಳೇ ಬಲೆಗೆ ಬಿದ್ದಿವೆ.

ನೋಟು ಅಮಾನ್ಯ ನಿರ್ಧಾರದಿಂದ ಬ್ಯಾಂಕ್ ಹಾಗೂ ಎಟಿಎಂಗಳಲ್ಲಿ ‘ನೋ ಕ್ಯಾಶ್’ ಬೋರ್ಡ್ ನೋಡಿ ನಿರಾಸೆಯಾಗುತ್ತಿರುವ ಜನಸಾಮಾನ್ಯ ಒಂದೆಡೆಯಾದರೆ, ಸದ್ಯ ಎದುರಾಗಿರುವ ನಗದು ಅಭಾವವನ್ನು ನೀಗಿಸಲು ಕೇಂದ್ರ ಸರ್ಕಾರ ಹಲವು ಪ್ರಯತ್ನಗಳನ್ನು ಮಾಡುತ್ತಿರುವುದು ಮತ್ತೊಂದೆಡೆ. ಈ ಎರಡರ ಮಧ್ಯೆ ತೆರಿಗೆ ಅಧಿಕಾರಿಗಳ ದಾಳಿ ಹಾಗೂ ಅಗೆದಷ್ಟು ಸಿಗುತ್ತಿರುವ ಅಕ್ರಮ ಸಂಪತ್ತನ್ನು ನೋಡುತ್ತಿರುವ ಜನರು ಬಾಯಿಯ ಮೇಲೆ ಕೈ ಇಟ್ಟುಕೊಳ್ಳುವಂತಾಗಿದೆ.

Leave a Reply