ರಾಜ್ಯ ಸರ್ವಪಕ್ಷ ನಿಯೋಗಕ್ಕೆ ಸಿಗಲಿಲ್ಲ ಪ್ರಧಾನಿ ಭೇಟಿ ಅವಕಾಶ, ಡಿಜಿಟಲ್ ಪಾವತಿ ಮಾಡಿದರೆ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ರಿಯಾಯ್ತಿ: ಜೇಟ್ಲಿ, ತ್ರಿವಳಿ ತಲಾಕ್ ವಿರುದ್ಧ ಅಲಹಬಾದ್ ಹೈಕೋರ್ಟ್ ತೀರ್ಪು, ಸಂಸತ್ ಕಾಲಹರಣಕ್ಕೆ ರಾಷ್ಟ್ರಪತಿ ಅಸಮಾಧಾನ

ನಾಡಪ್ರಭು ಕೆಂಪೇಗೌಡ ನಾಗರೀಕ ಹಿತರಕ್ಷಣಾ ವೇದಿಕೆ ಆಯೋಜಿಸಿದ್ದ ‘ನುಡಿ ಪರಿಷೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕ ವಿತರಣೆ ಮಾಡಿದ ನಾಡೋಜಾ ಡಾ.ಚಿದಾನಂದ ಮೂರ್ತಿ, ಕವಿ ಹಾಗೂ ಮಾಜಿ ಸಚಿವರಾದ ಬಿ.ಟಿ.ಲಲಿತಾ ನಾಯಕ್, ಕರ್ನಾಟಕ ಹೈಕೋರ್ಟ್ ಮಾಜಿ ಮುಖ್ಯನ್ಯಾಯಮೂರ್ತಿ ಚಂದ್ರಶೇಖರಯ್ಯ, ಕೌನ್ಸಿಲರ್ ಎ.ಎಚ್.ಬಸವರಾಜ್.

ಡಿಜಿಟಲ್ ಕನ್ನಡ ಟೀಮ್:

ಸಿಗದ ಪ್ರಧಾನಿ ಭೇಟಿ ಅವಕಾಶ

ರಾಜ್ಯದ ಬರ ಪರಿಸ್ಥಿತಿ ಮತ್ತು ಮಹದಾಯಿ ನೀರು ವಿವಾದ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲು ಸಿದ್ಧವಾಗಿದ್ದ ರಾಜ್ಯ ಸರ್ವ ಪಕ್ಷ ನಿಯೋಗಕ್ಕೆ ನಿರಾಸೆಯಾಗಿದೆ. ಈ ಹಿಂದೆ ನಿಗದಿಯಾದಂತೆ ನವೆಂಬರ್ 9ರಂದು ರಾಜ್ಯ ಸರ್ವಪಕ್ಷ ನಿಯೋಗ ಪ್ರಧಾನಿ ಅವರನ್ನು ಭೇಟಿ ಮಾಡಿ ರಾಜ್ಯದ ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸಬೇಕಿತ್ತು. ಆದರೆ ಪ್ರಧಾನಿ ಅವರಿಗೆ ಸಮಯದ ಅಭಾವ ಇರುವುದರಿಂದ ಭೇಟಿಗೆ ಕಾಲಾವಕಾಶ ನೀಡಲು ಸಾಧ್ಯವಾಗಿಲ್ಲ. ಸದ್ಯ ಸಂಸತ್ತು ಅಧಿವೇಶನ ನಡೆಯುತ್ತಿದ್ದು, ಇದು ಮುಗಿದ ನಂತರ ಭೇಟಿಗೆ ಅವಕಾಶ ನೀಡಲಾಗುವುದು ಎಂದು ಪ್ರಧಾನಮಂತ್ರಿ ಕಾರ್ಯಾಲಯವು ಮುಖ್ಯಮಂತ್ರಿ ಅವರಿಗೆ ತಿಳಿಸಿದೆ. ರಾಜ್ಯ ಸರ್ವಪಕ್ಷ ನಿಯೋಗದಲ್ಲಿ ಪ್ರತಿಪಕ್ಷ ನಾಯಕರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ, ಬಸವರಾದ ಹೊರಟ್ಟಿ ಜತೆಗೆ ರಾಜ್ಯದಿಂದ ಪ್ರತಿನಿಧಿಸುವ ಎಲ್ಲ ಸಂಸದರು ಹಾಗೂ ಸಚಿವರು ಇದ್ದರು. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಇಂದು ನವದೆಹಲಿಯಲ್ಲಿ ಸಭೆಯನ್ನು ಏರ್ಪಡಿಸಲಾಗಿತ್ತು.

ಕಾರ್ಡ್ ಮೂಲಕ ಪೆಟ್ರೋಲ್, ಡೀಸೆಲ್ ಖರೀದಿಸಿದ್ರೆ ಬೆಲೆ ಕಡಿಮೆ

ದೇಶದ ಜನರು ಕಾರ್ಡ್ ಗಳ ಮೂಲಕ ತಮ್ಮ ವಹಿವಾಟು ನಡೆಸುವುದನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಒಂದರ ಮೇಲೊಂದು ಪ್ರಯತ್ನಗಳನ್ನು ಮಾಡುತ್ತಲೇ ಇದೆ. ₹ 2000 ವರೆಗಿನ ವಹಿವಾಟನ್ನು ಕಾರ್ಡಿನ ಮೂಲಕ ಮಾಡಿದರೆ ಅದಕ್ಕೆ ತಗುಲುವ ಸೇವಾ ತೆರಿಗೆಯಿಂದ ವಿನಾಯಿತಿ ನೀಡುವುದಾಗಿ ಘೋಷಣೆ ಗುರುವಾರ ಘೋಷಣೆ ನೀಡಿದ್ದ ಬೆನ್ನಲ್ಲೆ ಮತ್ತಷ್ಟು ಸವಲತ್ತುಗಳನ್ನು ನೀಡಲು ಮುಂದಾಗಿದೆ. ಕೇಂದ್ರದ ನೋಟು ಅಮಾನ್ಯ ನಿರ್ಧಾರ ಯಶಸ್ವಿಗೊಳಿಸಿದ ದೇಶದ ಪ್ರಜೆಗಳಿಗೆ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಧನ್ಯವಾದ ಅರ್ಪಿಸಿದರು. ಈ ವೇಳೆ ನಗದು ರಹಿತ ವಹಿವಾಟಿನ ಉತ್ತೇಜನಕ್ಕಾಗಿ ಹಲವು ಕ್ರಮಗಳನ್ನು ಪ್ರಕಟಿಸಿದರು. ಅವುಗಳಲ್ಲಿ ಪ್ರಮುಖವಾದವುಗಳು ಇಲ್ಲಿವೆ..

  • ಕಾರ್ಡ್ ಹಾಗೂ ಪೇಟಿಎಂಗಳನಂತಹ ಡಿಜಿಟಲ್ ಮಾದರಿಯಲ್ಲಿ ವಹಿವಾಟು ನಡೆಸಿದರೆ ಶೇ.0.75 ರಷ್ಟು ವಿನಾಯಿತಿದೊರೆಯಲಿದೆ.
  • 10 ಸಾವಿರ ಜನಸಂಖ್ಯೆ ಇರುವ ದೇಶದ 1 ಲಕ್ಷ ಹಳ್ಳಿಗಳಲ್ಲಿ ವ್ಯವಹಾರ ಅನುಕೂಲ ಮಾಡಿಕೊಡಲು ಪ್ರತಿ ಹಳ್ಳಿಗೂ 2 ಸ್ವೈಪ್ ಯಂತ್ರ ಅಥವಾ ಡಿಜಿಟಲ್ ವ್ಯವಹಾರ ಕೇಂದ್ರ ತೆರೆಯಲಾಗುವುದು.
  • ದೇಶದ ಐದು ಕೋಟಿ ರೈತರಿಗೆ ಹೊಸ ಯೋಜನೆ ಮೂಲಕ ಸರ್ಕಾರದಿಂದ ರುಪೇ ಕಾರ್ಡ್ ನೀಡಿ, ಸಣ್ಣ ಎಟಿಎಂ ಕೇಂದ್ರ ಸ್ಥಾಪಿಸಲಾಗುವುದು.
  • ನಗರಪಟ್ಟಣ ರೈಲ್ವೇ ಸಂಪರ್ಕದ ಪ್ರಯಾಣಕ್ಕೆ ಡಿಜಿಟಲ್ ಮೂಲಕ ಟಿಕೆಟ್ ಖರೀದಿಸಿದರೆ ಶೇ.0.5ರಷ್ಟು ರಿಯಾಯಿತಿ ನೀಡಲಾಗುವುದು. ಡಿಜಿಟಲ್ ಮೂಲಕ ಹಣ ಪಾವತಿಸುವ ರೈಲ್ವೇ ಪ್ರಯಾಣಿಕರಿಗೆ ₹ 10 ಲಕ್ಷ ಅಪಘಾತ ಮಿಮೆ ನೀಡಲಾಗುವುದು.

ಚಿಕ್ಕರಾಯಪ್ಪ, ಜಯಚಂದ್ರ ಸಂಬಂಧಿಕರ ಮನೆ ಮೇಲೆ ಎಸಿಬಿ ದಾಳಿ

ಆದಾಯ ತೆರಿಗೆ ಅಧಿಕಾರಿಗಳ ಬಲೆಗೆ ಬಿದ್ದ ರಾಜ್ಯ ಸರ್ಕಾರಿ ಅಧಿಕಾರಿಗಳಾದ ಚಿಕ್ಕರಾಯಪ್ಪ ಹಾಗೂ ಜಯಚಂದ್ರ ಅವರ ಸಂಬಂಧಿಕರ ಮನೆ ಮೇಲೆ ಎಸಿಬಿ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ. ಬೆಂಗಳೂರು ಮತ್ತು ಕೋಲಾರ ಸೇರಿದಂತೆ ಒಟ್ಟು 10 ಕಡೆಗಳಲ್ಲಿ ಎಸಿಬಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ತ್ರಿವಳಿ ತಲಾಕ್ ಸಂವಿಧಾನಬಾಹೀರ

‘ಭಾರತೀಯ ಸಂವಿಧಾನಕ್ಕಿಂತ ಯಾವುದೇ ವೈಯಕ್ತಿಕ ಕಾನೂನು ದೊಡ್ಡದಲ್ಲ, ತ್ರಿವಳಿ ತಲಾಕ್ ಅಸಂವಿಧಾನಿಕವಾಗಿದ್ದು, ಮುಸ್ಲಿಂ ಮಹಿಳೆಯರಿಗೆ ಮಾರಕವಾಗಿದೆ’ ಇದು ಹಲವು ದಿನಗಳಿಂದ ಚರ್ಚೆಗೆ ಕಾರಣವಾಗಿರುವ ತ್ರಿವಳಿ ತಲಾಕ್ ಪದ್ಧತಿ ವಿರುದ್ಧ ಅಲಹಬಾದ್ ಹೈಕೋರ್ಟ್ ಕಿಡಿ ಕಾರಿರುವ ಪರಿ.

ಉತ್ತರಪ್ರದೇಶದ ಬುಲಂದಶಹರ್ ಪ್ರದೇಶದ ಇಬ್ಬರು ಮಹಿಳೆಯರಾದ ಹೀನಾ ಮತ್ತು ಉಮರ್ಬಿ ಎಂಬುವವರು ತ್ರಿವಳಿ ತಲಾಕ್ ವಿರುದ್ಧ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಮಹತ್ವದ ತೀರ್ಪು ಕೊಟ್ಟಿದೆ. ‘ಮುಸಲ್ಮಾನರ ಪವಿತ್ರ ಗ್ರಂಥ ಕುರಾನಿನಲ್ಲೂ ತ್ರಿವಳಿ ತಲಾಕ್ ಪದ್ಧತಿ ಬಗ್ಗೆ ಎಲ್ಲಿಯೂ ತಿಳಿಸಿಲ್ಲ. ಮುಸ್ಲಿಂ ಕಾಯ್ದೆಯನ್ನು ತಪ್ಪಾಗಿ ಬಳಸಿಕೊಳ್ಳಲಾಗುತ್ತಿದೆ. ಈ ಪದ್ಧತಿಯಿಂದ ಇಸ್ಲಾಂ ಮಹಿಳೆಯರಿಗೆ ತೀವ್ರ ಅನ್ಯಾಯವಾಗುತ್ತಿದೆ’ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಇನ್ನು ನ್ಯಾಯಾಲಯದ ಈ ನಿರ್ಧಾರಕ್ಕೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಅತೃಪ್ತಿ ವ್ಯಕ್ತಪಡಿಸಿದ್ದು, ನ್ಯಾಯಾಲಯದ ಈ ನಿರ್ಧಾರ ಇಸ್ಲಾಂ ಶರಿಯತ್ ಪರವಾಗಿಲ್ಲ ಎಂದು ಹೇಳಿದೆ. ಇನ್ನು ನ್ಯಾಯಾಲಯದ ಈ ನಿರ್ಧಾರವನ್ನು ಮುಸ್ಲಿಂ ವಿಚಾರವಾದಿಗಳು ಸೇರಿದಂತೆ ದೇಶದಾದ್ಯಂತ ಬಹುತೇಕರು ಪ್ರಶಂಸೆ ನೀಡಿದ್ದಾರೆ.

ದೇಶದ ಜನತೆಗೆ ಪ್ರಧಾನಿ ಧನ್ಯವಾದ

ನೋಟು ಅಮಾನ್ಯ ನಿರ್ಧಾರ ತೆಗೆದುಕೊಂಡು ಒಂದು ತಿಂಗಳು ಪೂರ್ಣವಾದ ಹಿನ್ನೆಲೆಯಲ್ಲಿ ಸರ್ಕಾರದ ತೀರ್ಮಾನಕ್ಕೆ ಬೆಂಬಲ ಸೂಚಿಸಿದ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಅರ್ಪಿಸಿದ್ದಾರೆ. ಟ್ವಿಟರ್ ಮೂಲಕ ದೇಶದ ಜನರಿಗೆ ಧನ್ಯವಾದ ಅರ್ಪಿಸಿರುವ ಮೋದಿ ಹೇಳಿದಿಷ್ಟು… ‘ದೇಶದಲ್ಲಿ ಕಪ್ಪುಹಣ, ಭ್ರಷ್ಟಾಚಾರ, ಭಯೋತ್ಪಾದನೆ ವಿರುದ್ಧ ಕೇಂದ್ರ ಸರ್ಕಾರದ ಯಜ್ಞಕ್ಕೆ ಬೆಂಬಲ ನೀಡಿರುವ ದೇಶದ ಪ್ರತಿಯೊಬ್ಬರಿಗೂ ಮನಸ್ಫೂರ್ತಿಯಾಗಿ ಧನ್ಯವಾದ ಅರ್ಪಿಸುತ್ತೇನೆ. ರೈತರು, ವ್ಯಾಪಾರಿಗಳು ಹಾಗೂ ಕಾರ್ಮಿಕರು ಈ ದೇಶದ ಬೆನ್ನೆಲುಬು. ಸರ್ಕಾರದ ಈ ನಿರ್ಧಾರದಿಂದ ಈ ವರ್ಗದ ಜನರಿಗೆ ವಿಶೇಷ ಲಾಭಗಳಿವೆ. ಗ್ರಾಮೀಣ ಪ್ರದೇಶಗಳಲ್ಲಿ ಭ್ರಷ್ಟಾಚಾರಗಳನ್ನು ಸಂಪೂರ್ಣವಾಗಿ ತೆಗೆದುಹಾಕಿ ನಮ್ಮ ಹಳ್ಳಿಗಳು ಪಡೆಯಬೇಕಾಗಿರುವುದನ್ನು ಪಡೆಯುವಂತೆ ಮಾಡುತ್ತೇನೆ.’

ರಾಷ್ಟ್ರಪತಿ ಕಿಡಿ

ಸರ್ಕಾರದ ನೋಟು ಅಮಾನ್ಯ ನಿರ್ಧಾರವನ್ನು ವಿರೋಧಿಸಿ ಈ ಬಾರಿಯ ಚಳಿಗಾಲದ ಅಧಿವೇಶನದ ಸಮಯವನ್ನು ನಿರಂತರವಾಗಿ ಹಾಳು ಮಾಡುತ್ತಿರುವ ವಿರೋಧ ಪಕ್ಷಗಳ ವಿರುದ್ಧ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕಿಡಿ ಕಾರಿದ್ದಾರೆ. ನವೆಂಬರ್ 16 ರಂದು ಆರಂಭವಾದ ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆ ಹಾಗೂ ರಾಜ್ಯ ಸಭೆಗಳ ಕಲಾಪ ಗದ್ದಲಗಳಿಂದಲೇ ಮುಂದೂಡಲಾಗುತ್ತಿದೆ. ಡಿಫೆನ್ಸ್ ಎಸ್ಟೇಟ್ ಡೇ ಪ್ರಯುಕ್ತವಾಗಿ ಭಾಷಣ ಮಾಡಿದ ರಾಷ್ಟ್ರಪತಿಗಳು ಈ ಬೆಳವಣಿಗೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಅವರು ಹೇಳಿದಿಷ್ಟು… ‘ದೇವರಿಗೋಸ್ಕರವಾದರೂ ನಿಮ್ಮ ಕೆಲಸಗಳನ್ನು ಸಮರ್ಥವಾಗಿ ನಿಭಾಯಿಸಿ. ದೇಶಕ್ಕಾಗಿ ಕೆಲಸ ನಿರ್ವಹಿಸಲು ಸಂಸತ್ತಿನಲ್ಲಿ ನಿಮಗೆ ಅವಕಾಶ ನೀಡಲಾಗಿದೆ. ಸಂಸತ್ತಿನ ಕಾಲಹರಣ ಸಹಿಸಲು ಸಾಧ್ಯವಿಲ್ಲ. ದೇಶಕ್ಕಾಗಿ ದುಡಿಯಲಿ ಎಂದು ಜನರು ನಿಮ್ಮನ್ನು ಅವರ ಪ್ರತಿನಿಧಿಗಳಾಗಿ ಆರಿಸಿದ್ದಾರೆ. ಈರೀತಿಯಾಗಿ ಕಾಲಹರಣ ಮಾಡಲು ಅಲ್ಲ. ಸಂಸತ್ತಿನ ಕಾಲಹರಣ ಮಾಡುವುದು ಒಂದು ಪದ್ಧತಿಯಾಗಿ ಬೆಳೆಯುತ್ತಿರುವುದು ಆತಂಕ ಸೃಷ್ಟಿಸಿದೆ.’

ನಗರ ವ್ಯಾಪ್ತಿಯ ಪಂಚಾಯ್ತಿ ಮಟ್ಟದಲ್ಲಿ ಭೂ ಮಾಫಿಯಾ

ಅಮಾಯಕರಿಗೆ ಆಸ್ತಿ ಮಾರಾಟ ಮಾಡಿ ನಂತರ ಆಸ್ತಿ ಹಕ್ಕನ್ನೇ ರದ್ದು ಮಾಡಿ ನೂರಾರು ಕೋಟಿ ವಂಚನೆ ಮಾಡುತ್ತಿದ್ದು, ಅದರಲ್ಲಿ ಅಧಿಕಾರಿಗಳೂ ಶಾಮೀಲಾಗಿದ್ದ ಪ್ರಕರಣ ಈಗ ಹೊರಬಂದಿದೆ. ಈ ಬಗ್ಗೆ ಸ್ವತಃ ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ಮಾಹಿತಿ ನೀಡಿದ್ದು, ‘ಸಾರ್ವಜನಿಕರಿಂದ ಬಂದ ದೂರುಗಳನ್ನಾಧರಿಸಿ, ತನಿಖೆ ಮಾಡಿದ ಸಂದರ್ಭದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿತು. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಆರು ಗ್ರಾಮಪಂಚಾಯ್ತಿಗಳ 14 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ’ ಎಂದು ವಿವರಿಸಿದರು.

Leave a Reply