ಕಾರ್ಡಲ್ಲಿ ಪಾವತಿಸಿದರೆ ಸೇವಾ ತೆರಿಗೆ ಮಾಫಿ, ನಿಲೇಕಣಿಯವರನ್ನೊಳಗೊಂಡ ಸಮಿತಿ- ನಗದು ಅಭಾವಕ್ಕೆ ಮೋದಿ ಸರ್ಕಾರದ ಕ್ರಮಗಳು

ಡಿಜಿಟಲ್ ಕನ್ನಡ ಟೀಮ್:

ನೋಟು ಅಮಾನ್ಯದ ನಂತರ ಎದುರಾಗಿರುವ ನಗದು ಅಭಾವ ಪರಿಸ್ಥಿತಿಯನ್ನು ನಿವಾರಿಸುವತ್ತ ಕೇಂದ್ರ ಸರ್ಕಾರ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿವೆ. ಆ ಪೈಕಿ ಪ್ರಮುಖವಾಗಿರುವುದು ಇನ್ನು ಮುಂದೆ ₹ 2 ಸಾವಿರವರೆಗಿನ ವ್ಯವಹಾರಗಳಲ್ಲಿ ಕಾರ್ಡಿನ ಮೂಲಕ ಹಣ ಪಾವತಿಸಿದರೆ, ಆ ವ್ಯವಹಾರಕ್ಕೆ ವಿಧಿಸುವ ಸೇವಾ ತೆರಿಗೆಯಿಂದ ವಿನಾಯಿತಿ ನೀಡಲಾಗುವುದು.

ದೇಶದ ಜನರು ನಗದು ರಹಿತವಾಗಿ ತಮ್ಮ ವ್ಯವಹಾರಗಳನ್ನು ನಡೆಸುವ ವಾತಾವರಣಕ್ಕೆ ಹಾಗೂ ಡಿಜಿಟಲ್ ಪಾವತಿ ವ್ಯವಸ್ಥೆಗೆ ಒಗ್ಗಿಕೊಳ್ಳಲು ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಅದರೊಂದಿಗೆ ಕಾರ್ಡ್ ಮೂಲಕ ವ್ಯವಹಾರ ನಡೆಸಿದರೆ ಇಷ್ಟು ದಿನಗಳ ಹೊಟೇಲ್ ಹಾಗೂ ರೆಸ್ಟೋರೆಂಟ್ ಬಿಲ್ ಪಾವತಿ ಮಾಡುವಂತಹ ವ್ಯವಹಾರಗಳಲ್ಲಿ ಕಟ್ಟುತ್ತಿದ್ದ ಶೇ.15 ರಷ್ಟು ಸೇವಾ ತೆರಿಗೆಯನ್ನು ಇನ್ನು ಮುಂದೆ ಕಟ್ಟುವಂತಿಲ್ಲ. ಒಂದುವೇಳೆ ಈ ವ್ಯವಹಾರಗಳನ್ನು ನಗದಿನ ಮೂಲಕವೇ ನಡೆಸಿದರೆ ಶೇ.15ರಷ್ಟು ಸೇವಾ ತೆರಿಗೆ ಪಾವತಿಸಲೇಬೇಕು.

ನಗದು ರಹಿತ ವ್ಯವಹಾರ ಹಾಗೂ ದೇಶದಲ್ಲಿನ ನಗದು ಸ್ವಚ್ಛತೆಗಾಗಿ ಸರ್ಕಾರದ ಮತ್ತೊಂದು ಮಹತ್ವದ ಕ್ರಮ ಏನೆಂದರೆ, ದೇಶದಲ್ಲಿ ನಗದು ರಹಿತ ಅರ್ಥ ವ್ಯವಸ್ಥೆ ನಿರ್ಮಾಣ ಮಾಡಲು ಬೇಕಿರುವ ಅಗತ್ಯ ಕ್ರಮಗಳನ್ನು ಸಿದ್ಧಪಡಿಸಲು ಸಮಿತಿಯೊಂದನ್ನು ರಚಿರುವುದು. ಈ ಸಮಿತಿಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರಾದ ನಂದನ್ ನಿಲೇಕಣಿ ಅವರಿಗೆ ಪ್ರಮುಖ ಸ್ಥಾನವನ್ನು ನೀಡಿರುವುದು ಮತ್ತೊಂದು ಪ್ರಮುಖ ಅಂಶ.

ಕಳೆದ ಲೋಕಸಭಾ ಚುನಾವಣೆಯಲ್ಲಿ ನಂದನ್ ನಿಲೇಕಣಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದರು. ಇವರು ಆಧಾರ್ ಕಾರ್ಡ್ ಯೋಜನೆಯ ಜವಾಬ್ದಾರಿ ನಿರ್ವಹಿಸಿದ್ದ ಪ್ರಮುಖರು ಆಗಿದ್ದರು. ಆಧಾರ್ ಯೋಜನೆಗೆ ರಾಜಕೀಯ ವಿರೋಧಗಳಿದ್ದರೂ ಕೂಡ, ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ಆ ಯೋಜನೆಯನ್ನು ಉಳಿಸಿಕೊಂಡಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು. ಈಗ ಮೋದಿ ತಮ್ಮ ಮಹತ್ವಾಕಾಂಕ್ಷಿ ನಗದು ರಹಿತ ಆರ್ಥ ವ್ಯವಸ್ಥೆ ಜಾರಿಗೆ ತರಲು ನಿಲೇಕಣಿ ಅವರ ನೆರವು ಪಡೆಯುತ್ತಿರುವುದು ಗಮನ ಸೆಳೆದಿದೆ.

ಈ ಸಮಿತಿಯಲ್ಲಿ ನಿಲೇಕಣಿ ಜತೆಗೆ ಇತರೆ 13 ಸದಸ್ಯರಿದ್ದಾರೆ. ಈ ಸಮಿತಿಯು ಭಾರತೀಯರು ಹೆಚ್ಚಿನ ಪ್ರಮಾಣದಲ್ಲಿ ಈ ಡಿಜಿಟಲ್ ಪೇಮೆಂಟ್ ವ್ಯವಸ್ಥೆಗೆ ಹೊಂದಿಕೊಳ್ಳುವಂತೆ ಮಾಡಲು ಯಾವ ರೀತಿಯ ಹೆಜ್ಜೆ ಇಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಿ ಒಂದು ಕಾರ್ಯ ಯೋಜನೆಯನ್ನು ರೂಪಿಸಲಿದೆ.

ದೇಶದ ಬಹುತೇಕ ಭಾಗಗಳಿಗೆ ಸ್ಮಾರ್ಟ್ ಫೋನ್ ಹಾಗೂ ಅಂತಾರ್ಜಾಲ ಸಂಪರ್ಕ ಲಭಿಸಿರುವುದರಿಂದ ಜನರನ್ನು ಈ ಸಾಧನಗಳ ಮೂಲಕ ನಗದು ರಹಿತ ವ್ಯವಹಾರದತ್ತ ತಿರುಗುವಂತೆ ಮಾಡಬೇಕಿದೆ. ಜತೆಗೆ ಜನರು ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳ ಬಳಕೆ ಆರಂಭಿಸುವಂತೆ ಮಾಡಿ ಆ ಮೂಲಕ ನಗದು ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬೇಕೆನ್ನುವುದು ಸರ್ಕಾರದ ಮುಖ್ಯ ಉದ್ದೇಶ.

ನೋಟು ಅಮಾನ್ಯದ ನಿರ್ಧಾರದಿಂದಾಗಿ ಎಟಿಎಂಗಳಲ್ಲಿ ಹಣ ಇಲ್ಲ ಎಂಬ ದೂರುಗಳು ವರದಿಯಾಗುತ್ತಿದ್ದು, ಇದರ ಮಧ್ಯೆ ಸರ್ಕಾರ ಈ ಕ್ರಮಗಳನ್ನು ತೆಗೆದುಕೊಂಡಿದೆ.

Leave a Reply