ಕನ್ನಡತಿಯೇ ಆಗಿದ್ದರು ಜಯಲಲಿತಾ ಅಂತರಾತ್ಮ ತಮಿಳನ್ನು ಅಪ್ಪಿಕೊಳ್ಳಲು ಕಾರಣವೇನು?

author-ssreedhra-murthyಕಾವೇರಿ ನದಿಯ ವಿವಾದ ಬಂದಾಗ ಕನ್ನಡಿಗರ ವಿರುದ್ದ ಸದಾ ಗುಡುಗುತ್ತಿದ್ದ ಜಯಲಲಿತಾ ಕಾವೇರಿ ಕಣಿವೆಯ ಮೇಲುಕೋಟೆಯಲ್ಲೇ ಜನಿಸಿದ್ದರು ಎನ್ನುವುದು ಅಚ್ಚರಿಯ ಸಂಗತಿಯಾಗಿ ಕನ್ನಡಿಗರನ್ನು ಕಾಡಿದ್ದಿದೆ. 1971ರಲ್ಲೇ ಗೀತರಚನೆಕಾರ ವಿಜಯನಾರಸಿಂಹ ‘ಅಮ್ಮು ಕನ್ನಡದ ಸಮ್ಮು’ ಎಂಬ ಜಯಲಲಿತಾ ಅವರ ಜೀವನ ಚಿತ್ರಣವನ್ನು ಬರೆದಿದ್ದರು. ಅದು ಅಂದಿನ ಜನಪ್ರಿಯ ವಾರ ಪತ್ರಿಕೆ ‘ಸುಧಾ’ದಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿತ್ತು. ಅದರಲ್ಲಿ ಜಯಲಲಿತಾ ‘ತಾವು ಕನ್ನಡತಿ ಎನ್ನುವ ಕಾರಣದಿಂದ ತಮಿಳು ಚಿತ್ರರಂಗದಲ್ಲಿ ಅನುಭವಿಸಿದ ಹಲವು ಕಷ್ಟಗಳ’ ಚಿತ್ರಣವನ್ನು ನೀಡಿದ್ದಾರೆ. ಆಗ ಅವರು ಚಿತ್ರರಂಗದಲ್ಲಿ ಬೇಡಿಕೆಯ ತಾರೆಯಾಗಿದ್ದರೇ ಹೊರತು ರಾಜಕೀಯದ ಕುರಿತು ಚಿಂತನೆಯನ್ನು ನಡೆಸಿರಲಿಲ್ಲ. ಕನ್ನಡತಿ ಎನ್ನುವ ತಮಿಳರ ಅನುಮಾನವನ್ನು ದೂರ ಮಾಡುವ ಅನಿವಾರ್ಯತೆ ಬಹುಷಃ ರಾಜಕೀಯವನ್ನು ಪ್ರವೇಶಿಸಿದ ನಂತರ ಪ್ರಮುಖ ಅಂಶವಾಗಿರಬಹುದು. ಇದು ಹೊರಗಿನ ಮಾತಾದರೆ ಅಂತರ್ಯದಲ್ಲಿ ಕನ್ನಡದ ನಂಟು ಅವರನ್ನು ಕಾಡುತ್ತಿತ್ತು. 2001ರಲ್ಲಿ ಅಡಿಯಾರ್ ಕ್ಷೇತ್ರದ ಪಿಎಂಕೆ ಶಾಸಕ ಆರ್.ಕೃಷ್ಣನ್ ಗಡಿ ಭಾಗದ ಕನ್ನಡ ಶಾಲೆಗಳ ಕುರಿತು ಕೇಳಿದ ಪ್ರಶ್ನೆಗೆ ಅರ್ಧ ಗಂಟೆಗಳ ಕಾಲ ಕನ್ನಡದಲ್ಲಿಯೇ ಉತ್ತರಿಸಿದ್ದರು.

ಜಯಲಲಿತಾ ಅವರ ತಾತ ಡಾ.ರಂಗಾಚಾರ್ ಮೈಸೂರು ಒಡೆಯರ ಖಾಸಗಿ ವೈದ್ಯರಾಗಿದ್ದರು. ಅವರು ಮಕ್ಕಳಿಗೆ ಹೆಸರನ್ನು ಇಡುವಾಗ ‘ಜಯ’ ಎಂದು ಸೇರಿಸುವ ಅಭ್ಯಾಸವನ್ನು ಇಟ್ಟುಕೊಂಡಿದ್ದರು. ಜಯಚಾಮರಾಜ ಒಡೆಯರ್ ಎಂದು ಆಳುವ ಅರಸರಿಗೆ ಜನಿಸಿದ ಮಗುವಿಗೆ  ಹೆಸರನ್ನು ಇಟ್ಟವರು ಅವರೇ. ಅವರ ಮನೆಯ ಔಟ್‍ ಹೌಸ್‍ನಲ್ಲಿ ಬಾಡಿಗೆಗೆ ಇದ್ದ ಆರ್.ನಾಗೇಂದ್ರ ರಾಯರ ಮಗನಿಗೆ ಜಯಗೋಪಾಲ್ ಎಂದು ಹೆಸರನ್ನು ಇಟ್ಟಿದ್ದರು. ಡಾ.ರಂಗಾಚಾರರ  ಮಗನ ಹೆಸರು ಜಯರಾಂ. ಜಯರಾಂ ಅವರ ಮಗಳೇ ಜಯಲಲಿತಾ, ಅವರ ಅಣ್ಣ ಜಯಕುಮಾರ್. ಅವರಿಂದ ‘ಜಯ’ದ ಲೇಪನ ಪಡೆದವರೆಲ್ಲರೂ ಜಯವನ್ನು ಸಾಧಿಸಿದ್ದು ಈಗ ಇತಿಹಾಸ. ಜಯಲಲಿತಾ ಎರಡನೇ ವಯಸ್ಸಿಗೆ ತಂದೆಯನ್ನು ಕಳೆದುಕೊಂಡರು. ತಾಯಿ ವೇದವಲ್ಲಿ ಆಗಲೇ ಸಂಧ್ಯಾ ಎಂಬ ಹೆಸರಿನಿಂದ ಚಿತ್ರರಂಗದಲ್ಲಿ ಅಭಿನಯಿಸುತ್ತಿದ್ದರು. 1961 ಆರೂರು ಪಟ್ಟಾಭಿಯವರ ‘ಶ್ರೀಶೈಲ ಮಹಾತ್ಮೆ’ ಚಿತ್ರದಲ್ಲಿ ಸಂಧ್ಯಾ ಅಭಿನಯಿಸುತ್ತಿದ್ದರು. ಚಿತ್ರದಲ್ಲಿ ನೃತ್ಯದ ಸನ್ನಿವೇಶದಲ್ಲಿ ಅಭಿನಯಿಸುವ ಕಲಾವಿದೆ ಬರಲಿಲ್ಲ. ತಾಯಿಯ ಜೊತೆ ಬಂದಿದ್ದ ಜಯಲಲಿತಾ ಅವರಿಗೆ ‘ಅನುಪಮ ಭಾಗ್ಯವಿದೆ’ ನೃತ್ಯದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು. ಅದು ಅವರ ಬೆಳ್ಳಿತೆರೆಯ ಪ್ರವೇಶ. ಆಗ ಅವರ ವಯಸ್ಸು ಕೇವಲ ಹದಿಮೂರು. ನಂತರ ‘ಅಮರ ಶಿಲ್ಪ ಜಕಣಾಚಾರಿ’ ಚಿತ್ರದಲ್ಲಿ ‘ಜಂತರ ಮಂತರ ಮಾಟವೋ’ ಗೀತೆಗೆ ನರ್ತಿಸುವ ಅವಕಾಶ ಸಿಕ್ಕಿತು. ಅದೇ ವರ್ಷ ಬಿ.ಆರ್.ಪಂತಲು ಅವರ ‘ಚಿನ್ನದ ಗೊಂಬೆ’ ಚಿತ್ರದಲ್ಲಿ ದ್ವಿತೀಯ ನಾಯಕಿಯಾಗಿ ಅಭಿನಯಿಸಿದರು.

chinnada-gombe-shoot

ಚಿನ್ನದ ಗೊಂಬೆ ಚಿತ್ರದ ಚಿತ್ರೀಕರಣ ಸಂದರ್ಭ…

ಜಯಲಲಿತಾ ನಾಯಕಿಯಾಗಿದ್ದ ‘ನನ್ನ ಕರ್ತವ್ಯ’ ಚಿತ್ರದ ಮೂಲಕ ಸೌಂದರ್ಯ ಅವರ ತಂದೆ ಕೆ.ಎಸ್.ಸತ್ಯನಾರಾಯಣ ಚಿತ್ರದ ನಿರ್ಮಾಪಕರು. ಬಾಲ ವಿಧವೆಯಾಗಿ ಜೀವನವನ್ನು ದಿಟ್ಟವಾಗಿ ಎದುರಿಸುವ ಪಾತ್ರವನ್ನು ಜಯಲಲಿತಾ ಮಾಡಿದ್ದರು. ಈ ಚಿತ್ರದಲ್ಲಿ ಅವರಿಗೆ ನಾಯಕರಾಗಿದ್ದು ಕಲ್ಯಾಣ್ ಕುಮಾರ್. ಮಾತ್ರವಲ್ಲ ಅವರು ಕನ್ನಡದಲ್ಲಿ ಅಭಿನಯಿಸಿದ್ದ ಎಲ್ಲಾ ಚಿತ್ರಗಳ ನಾಯಕರೂ ಕಲ್ಯಾಣ್ ಕುಮಾರ್ ಅವರೇ. ಎಸ್.ಕೆ.ಎ.ಚಾರಿಯವರ ‘ಮನೆ ಅಳಿಯ’ ಮತ್ತು ‘ಮಾವನ ಮಗಳು’ ಚಿತ್ರಗಳಲ್ಲಿ ಜಯಲಲಿತಾ ನಾಯಕಿಯಾಗಿದ್ದರು. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ ಯಲ್ಲಿ ಚಿನ್ನದ ಪದಕ ಪಡೆದಿದ್ದ ಚಾರಿಯವರು ತಮ್ಮ ಚಿತ್ರಗಳಲ್ಲಿ ಕನ್ನಡ ಕವಿತೆಗಳನ್ನು ಅಳವಡಿಸುತ್ತಿದ್ದರು. ಹೀಗಾಗಿ ಜಯಲಲಿತಾ ನರಸಿಂಹ ಸ್ವಾಮಿಯವರು ‘ಪ್ರೀತಿಯ ಹೂಗಳ ಮುಡಿದವಳೆ’ ಮತ್ತು ಕುವೆಂಪು ಅವರ ‘ನಾನೆ ವೀಣೆ ನೀನೆ ತಂತಿ’ ಗೀತೆಗಳಿಗೆ ಅಭಿನಯಿಸಿದ್ದಾರೆ. ‘ಒಲಿಸಿದ ದೇವನ ರಸಪೂಜೆಗೆ ನಾ ನಿಲುಕದ ಹೂವಾದೆ’ ಮಾವನ ಮಗಳು ಚಿತ್ರದ ಇನ್ನೊಂದು ಜನಪ್ರಿಯ ಗೀತೆ.  1965ರಲ್ಲೇ ಜಯಲಲಿತಾ ಅವರು ನಾಯಕಿಯಾಗಿ ಅಭಿನಯಿಸಿದ್ದ ತಮಿಳು ಚಿತ್ರ ‘ವೆನ್ನಿರ ಆಡೈ’ ತೆರೆ ಕಂಡಿತು. ಗ್ಲಾಮರ್ ಪಾತ್ರದಲ್ಲಿ ಕಾಣಿಸಿಕೊಂಡ ಜಯಲಲಿತಾ ಅಚ್ಚರಿಯ ಅಲೆಯನ್ನೇ ಎಬ್ಬಿಸಿದರು. ತಮಿಳು ಚಿತ್ರರಂಗದಲ್ಲಿ ಅವಕಾಶಗಳ ಸುರಿಮಳೆಯೇ ಬಂದಿತು. 1966ರಲ್ಲಿ ತೆರೆ ಕಂಡ ‘ಬದುಕುವ ದಾರಿ’ ಅವರು ಅಭಿನಯಿಸಿದ ಕೊನೆಯ ಕನ್ನಡ ಚಿತ್ರ. ಕೆ.ಎಸ್.ಪ್ರಕಾಶ್ ರಾವ್ ಈ ಚಿತ್ರದ ನಿರ್ದೇಶಕರು. ಹಾಸ್ಯಮಯವಾಗಿದ್ದ ಚಿತ್ರದಲ್ಲಿ ಜಯಲಲಿತಾ ಗಮನ ಸೆಳೆದಿದ್ದರು. ಇಲ್ಲಿಂದ ಮುಂದೆ ತಮಿಳು ತೆಲುಗು ಚಿತ್ರಗಳಲ್ಲಿ ಅವರು ಹೆಚ್ಚಾಗಿ ಕಾಣಿಸಿಕೊಂಡರು. 1965ರಲ್ಲೇ ಎಂ.ಜಿ.ಆರ್ ಅವರಿಗೆ ನಾಯಕಿಯಾಗಿ ‘ಆಯಿರಿತಿಲ್ ಒರುವನ್‍’ ಚಿತ್ರದಲ್ಲಿ ಕಾಣಿಸಿಕೊಂಡರು. ಇಲ್ಲಿಂದ ಮುಂದೆ 28 ಚಿತ್ರಗಳಲ್ಲಿ ಅವರು ಎಂ.ಜಿ.ಆರ್ ಅವರಿಗೆ ನಾಯಕಿಯಾದರು. ಈ ಜೋಡಿ ಬಹಳ ಜನಪ್ರಿಯವಾಯಿತು. ಎಂ.ಜಿ.ಆರ್ ಅವರ ಉತ್ತರಾಧಿಕಾರಿಯಾಗಲೂ ಈ ಜನಪ್ರಿಯತೆಯೇ ಕಾರಣವಾಯಿತು. ಐದು ಸಲ ಶ್ರೇಷ್ಠ ನಟಿ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದ ಜಯಲಲಿತಾ ಅವರ ಬದುಕು ರಾಜಕೀಯದ ಕಡೆ ತಿರುಗಿತು. ಅವರಿಗೆ ಬಾಲಿವುಡ್‍ನಲ್ಲಿ ಹೆಸರು ಮಾಡುವ ಆಸೆ ಸಾಕಷ್ಟಿತ್ತು. ಆದರೆ ಅವರು ಅಭಿನಯಿಸಿದ್ದು ಒಂದೇ ಹಿಂದಿ ಚಿತ್ರ ‘ಇಜ್ಜತ್‍’ ನಲ್ಲಿ ಧರ್ಮೇಂದ್ರ  ಈ ಚಿತ್ರದ ನಾಯಕರಾಗಿದ್ದರು. ಎಪಿಸ್ಟಿಕ್ ಎನ್ನುವ ಇಂಗ್ಲೀಷ್ ಚಿತ್ರದಲ್ಲೂ ಅವರು ಅಭಿನಯಿಸಿದ್ದರು. ಉತ್ತಮ ಗಾಯಕಿಯೂ ಆಗಿದ್ದ ಅವರು ಹದಿನಾಲ್ಕು ಚಿತ್ರಗಳಲ್ಲಿ ಹಾಡಿದ್ದಾರೆ.

jayalalitha-as-singer

ಗಾಯಕಿಯಾಗಿ ಜಯಲಲಿತಾ

ಮುಖ್ಯಮಂತ್ರಿಯ ಗದ್ದುಗೆಯಲ್ಲಿದ್ದಾಗಲೂ ಅವರು ಸಾಗಿ ಬಂದ ದಾರಿಯನ್ನು ಮರೆಯಲಿಲ್ಲ. ಕಾನೂನಿಗೆ ತಿದ್ದುಪಡಿ ತಂದು ತಮ್ಮ ಮೆಚ್ಚಿನ ಗಾಯಕ ಡಾ.ಪಿ.ಬಿ.ಶ್ರೀನಿವಾಸ್ ಅವರನ್ನು ‘ಸಂಸ್ಕೃತಿ ಇಲಾಖೆ’ಯ ನಿರ್ದೇಶಕರನ್ನಾಗಿಸಿದ್ದರು. ಜಯಗೋಪಾಲ್ ಅವರ ‘ವಿದ್ಯಾ ವಿನಯ ವಿನೋದ’ ಕನ್ನಡ ಶಾಲೆಗೆ ಬೆಂಬಲ ನೀಡಿದರು. ಪಿ.ಸುಶೀಲ, ಬಿ.ಸರೋಜ ದೇವಿ ಮೊದಲಾದ ಅನೇಕ ಸಾಧಕರು ಪದ್ಮಭೂಷಣ ಗೌರವ ಪಡೆದಿದ್ದು ಜಯಲಲಿತಾ ಅವರ ಪ್ರಯತ್ನದಿಂದಲೇ. ಸಿನಿಮಾ ಟಿಕೇಟಿನ ಬೆಲೆಯನ್ನು ಹತ್ತು ರೂಪಾಯಿಗೆ ಅನೇಕ ವರ್ಷ ನಿಯಂತ್ರಸಿದ್ದ ಹೆಗ್ಗಳಿಕೆ ಅವರದು. ಮಲ್ಟಿಪ್ಲೆಕ್ಸ್ ಯುಗ ಆರಂಭವಾದ ನಂತರ ಕೂಡ ಟಿಕೇಟಿನ ಬೆಲೆ 125ರೊಳಗಿರುವಂತೆ  ಕಡಿವಾಣವನ್ನು ಹಾಕಿದ್ದರು. ಭಾರತೀಯ ಚಿತ್ರರಂಗ ನೂರು ವರ್ಷವನ್ನು ಕಂಡಾಗ ದಕ್ಷಿಣ ಭಾರತದಲ್ಲಿ ಅದನ್ನು ಅದ್ದೂರಿಯಾಗಿ ಆಚರಿಸಿದ್ದವರು ಜಯಲಲಿತಾ ಅವರೊಬ್ಬರೇ.

ಚಿತ್ರರಂಗದ ಮೂಲಕ ರಾಜಕೀಯಕ್ಕೆ ಬಂದಿದ್ದರೂ ಅವರು ಬೇರು ಮಟ್ಟಕ್ಕಿಳಿದೇ ರಾಜಕೀಯ ಮಾಡಿದರು. ದಂತ ಗೋಪರಗಳಿಗೆ ಸೀಮಿತವಾಗಲಿಲ್ಲ. ಅವರ ಮಾನಸಿಕ ಗುರು ಎಂ.ಜಿ.ಆರ್ ಅವರೂ ಸೇರಿದಂತೆ ಸಿನಿಮಾದಿಂದ ರಾಜಕೀಯಕ್ಕೆ ಬಂದವರು ತೆರೆಯ ವೈಭವಕ್ಕೂ ವಾಸ್ತವದ ಕರಾಳತೆಗೂ ವ್ಯತ್ಯಾಸ ತಿಳಿಯದೆ ಒದ್ದಾಡಿದ್ದನ್ನು ಒದ್ದಾಡುತ್ತಿರುವುದನ್ನೂ ಗಮನಿಸಿದರೆ ಜಯಲಲಿತಾ ಅವರ ಮಹತ್ವ ಅರಿವಾಗುತ್ತದೆ.

Leave a Reply