ಜೆಡಿಎಸ್ ರಾಷ್ಟ್ರಾಧ್ಯಕ್ಷರಾಗಿ ಗೌಡ್ರು- ರಾಜ್ಯಾಧ್ಯಕ್ಷರಾಗಿ ಹೆಚ್ಡಿಕೆ ಮರುಆಯ್ಕೆ, ಕಾವೇರಿ ಮೇಲ್ಮನವಿ ಅರ್ಜಿ ವಿಚಾರಣೆಗೆ ಅರ್ಹ- ಸುಪ್ರೀಂನಲ್ಲಿ ರಾಜ್ಯಕ್ಕೆ ಮೇಲುಗೈ, ಹುಬ್ಬಳ್ಳಿಯಲ್ಲೂ ಐಟಿ ದಾಳಿ, ವಿತ್ತೀಯ ನೀತಿ ನ್ಯಾಯಾಂಗ ವಿಮರ್ಶೆಗೆ ಒಳಪಡಲ್ಲ ಎಂದ ಕೇಂದ್ರ

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿದ್ದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ ದೇವೇಗೌಡ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ ಹಾಗೂ ರಾಜ್ಯಾಧ್ಯಕ್ಷ ಕುಮಾರಸ್ವಾಮಿ.

ಡಿಜಿಟಲ್ ಕನ್ನಡ ಟೀಮ್:

ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಜಾತ್ಯಾತೀತ ಜನತಾದಳ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮರು ಆಯ್ಕೆಯಾಗಿದ್ದಾರೆ.

ಕಳೆದ ಎರಡು ದಿನಗಳಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣೆ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಸಭೆಯಲ್ಲಿ ಕರ್ನಾಟಕದ ಜತೆಗೆ ಮಹಾರಾಷ್ಟ್ರ, ಪಂಜಾಬ್, ಕೇರಳ ಮತ್ತು ಗೋವಾ ರಾಜ್ಯಗಳಿಂದ 150ಕ್ಕೂ ಹೆಚ್ಚು ಪಕ್ಷದ ಸದಸ್ಯರು ಭಾಗವಹಿಸಿದ್ದರು. ಕರ್ನಾಟಕ ಹಾಗೂ ಇತರೆ ರಾಜ್ಯಗಳಲ್ಲಿ ಪಕ್ಷದ ಬಲವನ್ನು ಹೆಚ್ಚಿಸುವ ಸಲುವಾಗಿ ಸಭೆಯಲ್ಲಿ ದೇವೇಗೌಡ ಅವರನ್ನೇ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮರುಆಯ್ಕೆ ಮಾಡಲಾಗಿದೆ.

ರಾಷ್ಟ್ರೀಯ ಅಧ್ಯಕ್ಷರಾಗಿ ಮರು ಆಯ್ಕೆಯಾದ ನಂತರ ಮಾತನಾಡಿದ ದೇವೇಗೌಡರು, ‘ಈ ಇಳಿ ವಯಸ್ಸಿನಲ್ಲಿ ಪಕ್ಷದ ಮಹತ್ವದ ಜವಾಬ್ದಾರಿಯನ್ನು ನಿಭಾಯಿಸುವುದು ಸುಲಭವಲ್ಲ. ಆದರೂ ಪಕ್ಷಕ್ಕಾಗಿ ಅಗತ್ಯ ಪರಿಶ್ರಮ ಹಾಕುವೆ. ದೇಶದಲ್ಲಿ ಸಂಸತ್ತಿನಿಂದ ವಿಧಾನಸಭೆವರೆಗೂ ಮಹಿಳೆಯರಿಗೆ ಮೀಸಲಾತಿ ನೀಡಿದ್ದು ನಾವೇ ಮೊದಲು. ಅಲ್ಪಸಂಖ್ಯಾತರಿಗೂ ವಿವಿಧ ಕ್ಷೇತ್ರಗಳಲ್ಲಿ ಮೀಸಲಾತಿ ನೀಡಿದ್ದು ನಾವೇ’ ಎಂದರು.

ಇನ್ನು ಕೇಂದ್ರ ಸರ್ಕಾರದ ನೋಟು ಅಮಾನ್ಯ ನಿರ್ಧಾರದಿಂದ ಆಗಿರುವ ಸಮಸ್ಯೆಗಳಿಗೆ ಅಸಮಾಧಾನ ವ್ಯಕ್ತಪಡಿಸಿದ ಗೌಡರು, ‘ಕೇಂದ್ರ ಸರ್ಕಾರ ನೋಟು ಅಮಾನ್ಯದ ನಿರ್ಧಾರದ ಮೂಲಕ ದೇಶದಲ್ಲಿ ಹುಡುಗಾಟ ಆಡುತ್ತಿದೆ. ಕಪ್ಪು ಹಣ ವಿರುದ್ಧದ ಕೇಂದ್ರದ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಆದರೆ ಎಲ್ಲ ವಹಿವಾಟನ್ನು ಮೊಬೈಲ್ ಬ್ಯಾಂಕುಗಳ ಮೂಲಕ ನಿರ್ವಹಿಸಿ ಎಂದರೆ ಗ್ರಾಮೀಣ ಪ್ರದೇಶದ ಜನರು ಹೇಗೆ ಮಾಡಬಲ್ಲರು. ಹದಿನೆಂಟು ತಿಂಗಳ ಕಾಲ ದೇಶ ಆಳಿದ ನನಗೆ ಮೊಬೈಲ್ ಸರಿಯಾಗಿ ಬಳಸಲು ಗೊತ್ತಿಲ್ಲ. ಹೀಗಿರುವಾಗ ಗ್ರಾಮೀಣ ಪ್ರದೇಶದ ಜನರು, ಅನಕ್ಷರಸ್ಥ ಮಹಿಳೆಯರು ಹಾಗೂ ಹಿರಿಯರ ಕಥೆ ಏನು’ ಎಂದು ಪ್ರಶ್ನಿಸಿದರು.

ಈ ಕಾರ್ಯಕಾರಿಣಿ ಸಭೆಯಲ್ಲಿ ನೋಟು ಅಮಾನ್ಯ ನಿರ್ಧಾರದಿಂದ ಉಂಟಾಗಿರುವ ಸಮಸ್ಯೆಗೆ ಕೇಂದ್ರ ಮುಂದಾಗುವಂತೆ ಮಾಡುವುದು, ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಪರ್ಯಾಯವಾಗಿ ತೃತೀಯ ರಂಗ ಸ್ಥಾಪನೆಗೆ ದೇವೇಗೌಡರು ನಾಯಕತ್ವವಹಿಸಬೇಕು ಎಂಬ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ರಾಜ್ಯದ ಕಾವೇರಿ ಮೇಲ್ಮನವಿ ವಿಚಾರಣೆಗೆ ಅರ್ಹ

ಕಾವೇರಿ ಐ ತೀರ್ಪಿನ ವಿರುದ್ಧ ಕರ್ನಾಟಕ ನಡೆಸುತ್ತಿರುವ ಕಾನೂನು ಹೋರಾಟದಲ್ಲಿ ರಾಜ್ಯಕ್ಕೆ ತಾತ್ಕಾಲಿಕ ಜಯ ಸಿಕ್ಕಿದೆ. ಐ ತೀರ್ಪಿನಲ್ಲಿ ಕರ್ನಾಟಕಕ್ಕೆ ತೀವ್ರ ಅನ್ಯಾಯವಾಗಿದೆ ಎಂದು ರಾಜ್ಯ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯು ವಿಚಾರಣೆಗೆ ಅರ್ಹ ಎಂದು ಸುಪ್ರೀಂ ಕೋರ್ಟ್ ನಿರ್ಧರಿಸಿದ್ದು, ಡಿ.15 ರಿಂದ ವಿಚಾರಣೆ ಆರಂಭಿಸುವುದಾಗಿ ತಿಳಿಸಿದೆ.

2007ರಲ್ಲಿ ಕಾವೇರಿ ನ್ಯಾಯಾಧಿಕರಣ ನೀಡಿದ ತೀರ್ಪಿಗೆ ಅತೃಪ್ತಿ ವ್ಯಕ್ತಪಡಿಸಿ ಕರ್ನಾಟಕ ಸೇರಿದಂತೆ 3 ರಾಜ್ಯಗಳು ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದವು. ಈ ಅರ್ಜಿಯು ವಿಚಾರಣೆಗೆ ಯೋಗ್ಯವೇ ಅಥವಾ ಇಲ್ಲವೆ ಎಂಬುದರ ಬಗ್ಗೆ ಕಳೆದ ಅಕ್ಟೋಬರ್ ನಲ್ಲಿ ಸುಪ್ರೀಂ ಕೋರ್ಟಿನ ತ್ರಿಸದಸ್ಯ ಪೀಠ ವಿಚಾರಣೆಗೆ ಕೈಗೆತ್ತಿಕೊಂಡಿತು. ಈಗ ರಾಜ್ಯದ ಅರ್ಜಿ ವಿಚಾರಣೆಗೆ ಅರ್ಹ ಎಂದು ತಿಳಿಸಿದೆ. ಇದರ ಜತೆಗೆ ಈ ಹಿಂದೆ ನ್ಯಾಯಾಲಯ ನೀಡಿದ್ದ ತೀರ್ಪಿನಂತೆ ತಮಿಳುನಾಡಿಗೆ ನಿತ್ಯ 2 ಸಾವಿರ ಕ್ಯೂಸೆಕ್ಸ್ ನೀರು ಹರಿಸುವುದನ್ನು ಮುಂದುವರಿಸುವಂತೆ ತಿಳಿಸಿದೆ.

ಕೇಂದ್ರಕ್ಕೆ ರಾಜ್ಯದ ಮನವಿ

ರಾಜ್ಯದಲ್ಲಿ ತಲೆದೋರಿರುವ ಭೀಕರ ಬರಗಾಲ ಎದುರಿಸಲು ಅಗತ್ಯ ಪರಿಹಾರ ಕಾಮಗಾರಿಗಳಿಗಾಗೆ ತಕ್ಷಣವೇ ₹ 4703 ಕೋಟಿ ನೆರವು ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿಗಳು ಮನವಿ ಸಲ್ಲಿಸಿ ರಾಜ್ಯದಲ್ಲಿ ಬರ ಹಾಗೂ ಪ್ರವಾಹದಿಂದ ಆಗಿರುವ ಹಾನಿಯ ಪ್ರಮಾಣವನ್ನು ವಿವರಿಸಿದರು. ಜತೆಗೆ ವಿಶೇಷ ಅನುದಾನ ರೂಪದಲ್ಲಿ ₹ 967.76 ಕೋಟಿಯನ್ನು ರಾಜ್ಯಕ್ಕೆ ಬಿಡುಗಡೆ ಮಾಡುವಂತೆ ಕೋರಿದರು.

ವಿತ್ತೀಯ ನೀತಿ ನ್ಯಾಯಾಂಗ ವಿಮರ್ಶೆ ಪರಿದಿಯಲ್ಲಿ ಬರಲ್ಲ: ಕೇಂದ್ರ

ನೋಟು ಅಮಾನ್ಯ ನಿರ್ಧಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿನಲ್ಲಿ ನಡೆಯುತ್ತಿರುವ ಚರ್ಚೆ ವೇಳೆ ಕೇಂದ್ರ ಸರ್ಕಾರ ಮಹತ್ವದ ಹೇಳಿಕೆಯೊಂದನ್ನು ಕೊಟ್ಟಿದೆ. ಅದೇನೆಂದರೆ, ‘ಸರ್ಕಾರದ ವಿತ್ತೀಯ ನೀತಿಯು ನ್ಯಾಯಾಂಗದ ವಿಮರ್ಶೆಯ ಪರಿದಿಯ ಒಳಗೆ ಬರುವುದಿಲ್ಲ’ ಎಂದು. ನವೆಂಬರ್ 8ರಂದು ಘೋಷಣೆಯಾದ ನೋಟು ಅಮಾನ್ಯ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪ್ರತಿನಿಧಿ ಅಟಾರ್ನಿ ಜೆನರಲ್ ಮುಕುಲ್ ರೊಹಟಗಿ ಅವರು ಈ ವಿಷಯವನ್ನು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಅಲ್ಲದೆ ಸರ್ಕಾರದ ಈ ಕ್ರಮದ ವಿರುದ್ಧ ಹೈಕೋರ್ಟ್ ಗಳಲ್ಲಿರುವ ಎಲ್ಲ ಅರ್ಜಿಯ ವಿಚಾರಣೆಗೆ ತಡೆ ನೀಡಬೇಕು ಎಂದು ಕೇಳಿಕೊಳ್ಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ ನೋಟು ಅಮಾನ್ಯ ನಿರ್ಧಾರವನ್ನು ಯಾವ ರೀತಿ ಪ್ರಶ್ನಿಸಲಾಗಿದೆ ಎಂಬುದು ಇಲ್ಲಿ ಪ್ರಮುಖವಾಗುತ್ತದೆ. ಹೀಗಾಗಿ ಅರ್ಜಿಯ ವಿಚಾರಣೆ ನಡೆಸಬೇಕೆ ಅಥವಾ ಸುಪ್ರೀಂ ಕೋರ್ಟಿಗೆ ಕಳುಹಿಸಬೇಕೆ ಎಂಬುದರ ಕುರಿತಾಗಿ ಹೈಕೋರ್ಟ್ ಗಳು ನಿರ್ಧಾರ ತೆಗೆದುಕೊಳ್ಳಲಿವೆ. ಈ ವಿಷಯದ ವಿಚಾರಣೆಗಾಗಿ ನಾವು ವಿವರವಾದ ನಿಯಮಗಳನ್ನು ರಚಿಸುತ್ತೇವೆ ಎಂದು ಮುಖ್ಯ ನ್ಯಾಯಮೂರ್ತಿ ಟಿ.ಎಸ್ ಠಾಕೂರ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ತಿಳಿಸಿದೆ.

ಇದೇ ವೇಳೆ ನೋಟು ಅಮಾನ್ಯ ನಿರ್ಧಾರದಿಂದ ಜನಸಾಮಾನ್ಯರಿಗೆ ಎದುರಾಗಿರುವ ನಗದು ಅಭಾವದ ಸಮಸ್ಯೆ ಸೇರಿದಂತೆ ಎಲ್ಲ ಸಮಸ್ಯೆಗಳು ಮುಂದಿನ 15-20 ದಿನಗಳಲ್ಲಿ ಸಂಪೂರ್ಣವಾಗಿ ಬಗೆಹರಿಯಲಿದೆ’ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ಭರವಸೆ ನೀಡಿದೆ.

ಇನ್ನುಳಿದಂತೆ ನೀವು ತಿಳಿಯಬೇಕಿರುವ ಪ್ರಮುಖ ಸುದ್ದಿ ಸಾಲುಗಳು…

  • ಕಾಶ್ಮೀರದ ದಕ್ಷಿಣ ಭಾಗದಲ್ಲಿರುವ ಅನಂತನಾಗ್ ಜಿಲ್ಲೆಯಲ್ಲಿ ಅಡಗಿ ದಾಳಿ ಮಾಡುತ್ತಿದ್ದ ಇಬ್ಬರು ಉಗ್ರರನ್ನು ಭಾರತೀಯ ಸೇನೆ ಎನ್ ಕೌಂಟರ್ ಮಾಡಿದೆ. ಖಚಿತ ಮಾಹಿತಿ ಮೇರೆಗೆ ಭಾರತೀಯ ಸೇನೆ ನಿನ್ನೆ ಬೆಳಗ್ಗೆಯಿಂದಲೇ ಕಾರ್ಯಾಚರಣೆಗೆ ಇಳಿದಿತ್ತು. ನಿನ್ನೆ ರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ಭಾರತದ ಓರ್ವ ಯೋಧನಿಗೆ ಗಂಭೀರ ಗಾಯವಾಗಿತ್ತು. ಶುಕ್ರವಾರವೂ ಕಾರ್ಯಾಚರಣೆ ಮುಂದುವರಿಸಿದ ಭಾರತೀಯ ಪಡೆ ಉಗ್ರರನ್ನು ಹೊಡೆದುಹಾಕುವಲ್ಲಿ ಯಶಸ್ವಿಯಾಗಿದೆ.
  • ಕೆಎಎಸ್ ಅಧಿಕಾರಿ ಭೀಮಾ ನಾಯ್ಕ್ ಹಾಗೂ ಜನಾರ್ದನ ರೆಡ್ಡಿ ಮತ್ತು ಸಂಸದ ಶ್ರೀರಾಮುಲು ಅವರ ನಡುವೆ ಉತ್ತಮ ಸಂಬಂಧವಿದೆ. ಜನಾರ್ದನ ರೆಡ್ಡಿ ಅವರ ಮಗಳ ಮದುವೆಗೆ ಕಪ್ಪು ಹಣವನ್ನು ಬಿಳಿ ಮಾಡಿಕೊಟ್ಟಿರುವ ಆರೋಪದ ಪ್ರಕರಣವನ್ನು ಸಿಬಿಐ ತನಿಖೆ ನಡೆಸಬೇಕು. ಈ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸಂಸದ ಸ್ಥಾನಕ್ಕೆ ಶ್ರೀರಾಮುಲು ಅವರು ರಾಜಿನಾಮೆ ನೀಡಬೇಕು ಎಂದು ಆಮ್ ಆದ್ಮಿ ಪಕ್ಷದ ಟಪಾಲ್ ಗಣೇಶ್ ಒತ್ತಾಯಿಸಿದ್ದಾರೆ.
  • ಹುಬ್ಬಳ್ಳಿಯಲ್ಲಿ ತೆರಿಗೆ ಇಲಾಖೆ ಅಧಿಕಾರಿಗಳು ಏಕಕಾಲದಲ್ಲಿ 3 ಕಡೆ ದಾಳಿ ನಡೆಸಿದ್ದು, ಕಪ್ಪುಹಣವನ್ನು ಬಿಳಿ ಮಾಡುತ್ತಿದ್ದ ದಂಧೆಯನ್ನು ಪತ್ತೆ ಹಚ್ಚಿದ್ದಾರೆ. ಸಮುಂದರ್ ಫೈನಾನ್ಸ್ ನ ಮುಖ್ಯಸ್ಥ ಸಮುಂದರ್ ಸಿಂಗ್ ಅವರ ಮನೆ ಹಾಗೂ ಕಚೇರಿ, ವ್ಯಾಪಾರಿ ಅನಿಲ್ ಬುರಾಟ್ ಹಾಗೂ ಹಬೀಬ್ ಎಂಬುವವರ ಅಂಗಡಿಗಳ ಮೇಲೆ ದಾಳಿ ನಡೆಸಿದ ತೆರಿಗೆ ಇಲಾಖೆ ಅಧಿಕಾರಿಗಳು ಈ ದಂಧೆಯನ್ನು ಪತ್ತೆ ಹಚ್ಚಿದ್ದಾರೆ. ಇನ್ನು ಹೊರ ರಾಜ್ಯಗಳಲ್ಲಿನ ಐಟಿ ದಾಳಿಯನ್ನು ನೋಡುವುದಾದರೆ ನವದೆಹಲಿಯ ಆಕ್ಸಿಸ್ ಬ್ಯಾಂಕ್ ಶಾಖೆಯೊಂದರ ಮೇಲೆ ದಾಳಿ ಮಾಡಿದಾಗ 44 ನಕಲಿ ಖಾತೆಗಳಲ್ಲಿ ₹ 100 ಕೋಟಿಗೂ ಹೆಚ್ಚು ಹಣ ಠೇವಣಿ ಮಾಡಿರುವುದು ಪತ್ತೆಯಾಗಿದೆ. ಇನ್ನು ಹರ್ಯಾಣ, ಗುಜರಾತ್, ಮಹಾರಾಷ್ಟ್ರಗಳ ವಿವಿಧ ಪ್ರದೇಶಗಳಲ್ಲೂ ದಾಳಿ ನಡೆದಿದ್ದು, ಕ್ರಮವಾಗಿ ₹ 10 ಲಕ್ಷ, ₹ 76 ಲಕ್ಷ ಹಾಗೂ ₹ 85 ಲಕ್ಷ ಹೊಸ ನೋಟಿನ ರೂಪದಲ್ಲಿದ್ದ ಅಕ್ರಮ ಹಣವನ್ನು ವಶಪಡಿಸಿಕೊಳ್ಳಲಾಗಿದೆ.
  • ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಹಗರಣದಲ್ಲಿ ಆರೋಪ ಹೊತ್ತಿರುವ ವಾಯು ಸೇನೆ ಮಾಜಿ ಮುಖ್ಯಸ್ಥ ಎಸ್.ಪಿ ತ್ಯಾಗಿ ಅವರನ್ನು ಬಂಧಿಸಲಾಗಿದೆ. ಬಹುಕೋಟಿಯ ವಿವಿಐಪಿ ಹೆಲಿಕಾಪ್ಟರ್ ಹಗರಣದಲ್ಲಿ ತ್ಯಾಗಿ ಅವರ ಹೆಸರು ಮುಖ್ಯವಾಗಿ ಕೇಳಿಬಂದಿತ್ತಾದರೂ ಇದೇ ಮೊದಲ ಬಾರಿಗೆ ಅವರನ್ನು ಬಂಧಿಸಲಾಗಿದೆ. ಎಸ್.ಪಿ ತ್ಯಾಗಿ ಅವರ ಜತೆಗೆ ಸಹೋದರ ಸಂಬಂಧಿ ಸಂಜೀವ್ ತ್ಯಾಗಿ ಹಾಗೂ ವಕೀಲ ಗೌತಮ್ ಖೈತಾನ್ ಅವರನ್ನು ಸಿಬಿಐ ಬಂಧಿಸಿದೆ.

Leave a Reply