ಸೇನೆಯ ಮೇಲೆ ಸಂಚಿನ ಆರೋಪ ಮಾಡಿದ್ದ ದೀದಿ ವಿರುದ್ಧ ರಕ್ಷಣಾ ಸಚಿವ ಪಾರಿಕರ್ ಪತ್ರ ಸಮರ

ಡಿಜಿಟಲ್ ಕನ್ನಡ ಟೀಮ್:

ಇತ್ತೀಚೆಗೆ ಭಾರತೀಯ ಸೇನೆ ಪಶ್ಚಿಮ ಬಂಗಾಳದಲ್ಲಿ ನಡೆಸಿದ ದಿಢೀರ್ ಕಾರ್ಯಾಚರಣೆಗೆ ಅತೃಪ್ತಿ ವ್ಯಕ್ತ ಪಡಿಸಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇನೆಯ ವಿರುದ್ಧ ಲಘುವಾಗಿ ಮಾತನಾಡಿದ್ದರು. ದೀದಿ ಅವರು ಸೇನೆ ವಿರುದ್ಧ ಆಡಿದ ಮಾತುಗಳಿಗೆ ಬೇಸರ ವ್ಯಕ್ತಪಡಿಸಿರುವ ಕೇಂದ್ರ ರಕ್ಷಣಾ ಮಂತ್ರಿ ಮನೋಹರ್ ಪಾರಿಕರ್ ಈಗ ಮಮತಾ ಅವರಿಗೆ ಪತ್ರ ಬರೆದಿದ್ದಾರೆ.

ಡಿಸೆಂಬರ್ 2ರಂದು ಭಾರತೀಯ ಸೇನೆ ಪಶ್ಚಿಮ ಬಂಗಾಳದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ತಪಾಸಣೆ ನಡೆಸಿತ್ತು. ಈ ಕ್ರಮದ ವಿರುದ್ಧ ಟೀಕೆ ಮಾಡಿದ್ದ ಮಮತಾ ಬ್ಯಾನರ್ಜಿ ಅವರು ‘ಸೇನೆಯು ಪಶ್ಚಿಮ ಬಂಗಾಳದಲ್ಲಿ ಸುಂಕ ವಸೂಲಿ ಮಾಡುತ್ತಿದೆ’ ಎಂದು ನಿಂದಿಸಿದ್ದರು. ನಂತರ ಭಾರತೀಯ ಸೇನೆ ತಮ್ಮ ಕಾರ್ಯಚರಣೆ ಬಗ್ಗೆ ಸೂಕ್ತ ದಾಖಲೆ ನೀಡಿ ಈ ಆರೋಪವನ್ನು ತಳ್ಳಿಹಾಕಿತ್ತು.

ಪಾರಿಕರ್ ಅವರು ಮಮತಾ ಬ್ಯಾನರ್ಜಿ ಅವರಿಗೆ ಬರೆದ ಎರಡು ಪುಟಗಳ ಪತ್ರದಲ್ಲಿ ಭಾರತೀಯ ಸೇನೆ ಅತ್ಯುನ್ನತ ಶಿಸ್ತಿನಿಂದ ದೇಶಕ್ಕೆ ಸಲ್ಲಿಸುತ್ತಿರುವ ಸೇವೆ, ದೇಶವನ್ನು ರಕ್ಷಿಸುತ್ತಿರುವ ವೃತ್ತಿಪರತೆ ಕುರಿತು ವಿವರಿಸಿದ್ದಾರೆ. ಸೇನೆಯು ತನ್ನ ಕಾರ್ಯಾಚರಣೆ ಬಗ್ಗೆ ರಾಜ್ಯ ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡಿಲ್ಲ ಎಂಬ ಗಂಭೀರ ಆರೋಪಕ್ಕೂ ಪಾರಿಕರ್ ತಮ್ಮ ಪತ್ರದಲ್ಲಿ ಉತ್ತರಿಸಿದ್ದಾರೆ. ಪಾರಿಕರ್ ಅವರ ಪತ್ರದ ಸಾರಾಂಶ ಹೀಗಿದೆ…

‘ಪಶ್ಚಿಮ ಬಂಗಾಳದಲ್ಲಿ ನಡೆಸಿದ ಕಾರ್ಯಾಚರಣೆ ಕುರಿತಂತೆ ರಾಜ್ಯದ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿರುವ ಕುರಿತ ದಾಖಲೆಗಳನ್ನು ಸೇನೆ ಒದಗಿಸಿದೆ. ರಾಜಕಾರಣಿಗಳು ಹಾಗೂ ರಾಜಕೀಯ ಪಕ್ಷಗಳ ಒಬ್ಬರ ವಿರುದ್ಧ ಒಬ್ಬರು ಗಂಭೀರ ಆರೋಪಗಳನ್ನು ಮಾಡಲು ಸಾಕಷ್ಟು ಅವಕಾಶಗಳು ಇವೆ. ಆದರೆ, ಭಾರತೀಯ ಸೇನೆ ವಿಷಯಕ್ಕೆ ಬಂದಾಗ ಆರೋಪ ಮಾಡುವ ಮುನ್ನ ಎಚ್ಚರಿಕೆ ವಹಿಸುವ ಅಗತ್ಯ ಖಂಡಿತಾ ಇದೆ. ಕಾರಣ, ಭಾರತೀಯ ಸೇನೆ ದೇಶದ ಅತ್ಯಂತ ಶಿಸ್ತಿನ ಸಂಸ್ಥೆ. ದೇಶಕ್ಕಾಗಿ ಹಲವು ತ್ಯಾಗಗಳನ್ನು ಮಾಡುತ್ತಿರುವ ಸಂಸ್ಥೆ. ದೇಶವನ್ನು ಕಾಯುವ ಕಾಯಕದಲ್ಲಿ ಅವರು ತೋರುತ್ತಿರುವ ವೃತ್ತಿಪರತೆಗೆ ನಾವೆಲ್ಲರೂ ಹೆಮ್ಮೆ ಪಡಬೇಕು. ಮಮತಾ ಅವರಂತಹ ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿಗಳೇ ಸೇನೆಯ ಮೇಲೆ ಆರೋಪ ಮಾಡಿದರೆ, ಸೇನೆಯ ಆತ್ಮಸ್ಥೈರ್ಯವೂ ಕುಗ್ಗುತ್ತದೆ. ಹೀಗಾಗಿ ಸೇನೆಯ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ’

ಪಾರಿಕರ್ ಅವರ ಈ ಪತ್ರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ತೃಣಮೂಲ ಕಾಂಗ್ರೆಸ್ ನಾಯಕ ಡೆರಿಕ್ ಒಬ್ರಿಯಾನ್, ‘ಮುಖ್ಯಮಂತ್ರಿಗಳಿಗೆ ಈ ಪತ್ರ ಸಿಗುವ ಮುನ್ನವೇ ಮಾಧ್ಯಮಗಳಿಗೆ ಸೋರಿಕೆಯಾಗಿದೆ. ಈ ಪತ್ರ ತಲುಪಿದ ಮೇಲೆ ಪಾರಿಕರ್ ಅವರಿಗೆ ಸೂಕ್ತ ಉತ್ತರ ನೀಡುತ್ತೇವೆ’ ಎಂದಿದ್ದಾರೆ.

Leave a Reply