ಸಂಸತ್ತಿನಲ್ಲಿ ಮುಂದುವರಿದ ಗದ್ದಲ- ಕಲಾಪ ಮುಂದಕ್ಕೆ, ಆಡಳಿತ- ವಿಪಕ್ಷಗಳ ವಾದ ಪ್ರತಿವಾದಗಳೇನು?

ಡಿಜಿಟಲ್ ಕನ್ನಡ ಟೀಮ್:

ಈ ಬಾರಿಯ ಚಳಿಗಾಲದ ಸಂಸತ್ ಅಧಿವೇಶನಕ್ಕೆ ಇಂದು 15 ದಿನ ಪೂರ್ಣಗೊಳ್ಳಲಿದೆ. ಈ 15 ದಿನಗಳ ಕಾಲ ನಮ್ಮ ಜನಪ್ರತಿನಿಧಿಗಳು ಸಂಸತ್ತಿನಲ್ಲಿ ಕಡಿದು ಕಟ್ಟೆ ಹಾಕಿದ್ದೇನು ಎಂದು ನೋಡಿದರೆ ನಮಗೆ ಸಿಗುವುದು ನಿರಾಸೆಯ ಫಲಿತಾಂಶ. ಕಾರಣ ನವೆಂಬರ್ 16ರಿಂದ ಆರಂಭವಾಗಿರುವ ಅಧಿವೇಶನ ನೋಟು ಅಮಾನ್ಯ ನಿರ್ಧಾರವನ್ನು ಖಂಡಿಸಿ ಪ್ರತಿಭಟನೆ ನಡೆಸುವುದಕ್ಕಷ್ಟೇ ಸೀಮಿತವಾಗಿದೆ. ಅಷ್ಟೇ ಅಲ್ಲ, ಸಂಸತ್ತಿನಲ್ಲಿ ಚರ್ಚಿಸುವ ಬದಲು ಸರ್ಕಾರ ಹಾಗೂ ವಿರೋಧ ಪಕ್ಷದ ನಾಯಕರು ಮಾಧ್ಯಮಗಳ ಮುಂದೆ ವಾದ ಪ್ರತಿವಾದ ಮುಂದುವರಿಸಿ ಕಾಲಹರಣ ಮಾಡುತ್ತಿದ್ದಾರೆ.

ಶುಕ್ರವಾರದ ಚಿತ್ರಣವೂ ಸಹ ಇದೇ ಆಗಿತ್ತು. ನೋಟುಬದಲಾವಣೆ ವಿಷಯವಾಗಿ ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ತೀವ್ರ ಗದ್ದಲ ಎದ್ದ ಪರಿಣಾಮ ಉಭಯ ಸದನಗಳ ಕಲಾಪಗಳನ್ನು ಮುಂದೂಡಲಾಗಿದೆ. ಕಲಾಪ ಮುಂದೂಡುತ್ತಿದ್ದಂತೆ ಪ್ರತಿಪಕ್ಷದ ಪರವಾಗಿ ರಾಹುಲ್ ಗಾಂಧಿ ಹಾಗೂ ಸರ್ಕಾರದ ಪರವಾಗಿ ವೆಂಕಯ್ಯ ನಾಯ್ಡು ಅವರು ಮಾಧ್ಯಮಗಳ ಆರೋಪ ಪ್ರತ್ಯಾರೋಪ ಮಾಡಿದರು.

ಸಂಸತ್ತಿನಲ್ಲಿ ಈ ನಿರ್ಧಾರದ ಸಾಧಕ ಬಾಧಕಗಳನ್ನು ಕೂತು ಪರಸ್ಪರ ಚರ್ಚಿಸಿ ದೇಶದ ಕಲ್ಯಾಣಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಬದಲು ಕ್ಷುಲ್ಲಕ ನೆಪಕ್ಕಾಗಿ ಕೇಂದ್ರ ಸರ್ಕಾರ ಹಾಗೂ ವಿರೋಧ ಪಕ್ಷಗಳು ಈ ವಿಚಾರದಲ್ಲಿ ಹಗ್ಗಜಗ್ಗಾಟ ನಡೆಸುತ್ತಲೇ ಬಂದಿವೆ.

ರಾಹುಲ್ ಗಾಂಧಿಯ ವಾದ…

‘ನೋಟು ಅಮಾನ್ಯ ನಿರ್ಧಾರ ಕುರಿತಂತೆ ಸಂಸತ್ತಿನಲ್ಲಿ ಚರ್ಚೆ ನಡೆಸಲು ಕೇಂದ್ರ ಸರ್ಕಾರ ಹೆದರಿ ಹಿಂದೆಸರಿಯುತ್ತಿದೆ. ಈ ವಿಷಯದ ಬಗ್ಗೆ ಸಂಸತ್ತಿನಲ್ಲಿ ನನಗೆ ಮಾತನಾಡಲು ಅವಕಾಶ ಮಾಡಿಕೊಟ್ಟರೆ ದೇಶದಲ್ಲಿ ಭೂಕಂಪ ಸಂಭವಿಸುವಂತಹ ಮಾಹಿತಿಯನ್ನು ಹೊರಹಾಕುತ್ತೇನೆ. ಈ ಕಾರಣಕ್ಕಾಗಿಯೇ ಈ ವಿಷಯದ ಕುರಿತಾದ ಚರ್ಚೆಯಿಂದ ಸರ್ಕಾರ ಪರಾರಿಯಾಗುವ ಪ್ರಯತ್ನ ನಡೆಸುತ್ತಿದೆ. ಹಿಂದೂಸ್ಥಾನದ ಇತಿಹಾಸದಲ್ಲೇ ಇದೊಂದು ಅತಿದೊಡ್ಡ ಹಗರಣವಾಗಿದೆ. ಈ ವಿಚಾರವಾಗಿ ನಾನು ಲೋಕಸಭೆಯನ್ನು ಮಾತನಾಡಲು ಬಯಸುತ್ತೇನೆ. ಬಡವರ ದೇಶದಲ್ಲಿ ಪ್ರಧಾನಮಂತ್ರಿ ಕೇವಲ ಭಾಷಣಗಳನ್ನು ನೀಡುತ್ತಿದ್ದಾರೆ. ಆದರೆ ಲೋಕಸಭೆಗೆ ಆಗಮಿಸಿ ನಮ್ಮ ಪ್ರಶ್ನೆಗೆ ಉತ್ತರಿಸಲು ಅವರಿಗೆ ಭಯವೇಕೆ?’

ವೆಂಕಯ್ಯ ನಾಯ್ಡು ಪ್ರತಿವಾದ…

‘ಕಾಂಗ್ರೆಸ್ ಪಕ್ಷ ಯಾವುದನ್ನು ವಿರೋಧಿಸುತ್ತಿದೆ. ಕಾಳಧನಿಕರ ವಿರುದ್ಧದ ಸಮರವನ್ನೇ? ಪ್ರತಿಪಕ್ಷಗಳು ಈ ರೀತಿಯಾಗಿ ಸಂಸತ್ತಿನ ಸಮಯವನ್ನು ಪ್ರತಿಭಟನೆಗಳ ಮೂಲಕ ಹಾಳು ಮಾಡುತ್ತಿದೆ. ಈ ಬಾರಿಯ ಅಧಿವೇಶನದಲ್ಲಿ ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಆ ಪೈಕಿ ಮಾನಸಿಕ ಆರೋಗ್ಯ ಮಸೂದೆಯಂತಹ ಪ್ರಮುಖ ಮಸೂದೆಗಳಿಗೆ ಅನುಮೋದನೆ ನೀಡಬೇಕಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಲಕ್ಷಾಂತರ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ನಾಯಕರು ಯಾರಿಗೆ ಪಾಠ ಹೇಳಲು ಪ್ರಯತ್ನಿಸುತ್ತಿದ್ದಾರೆ? ದೇಶದ ಜನರ ಆಜ್ಞೆ ಏನು ಎಂಬುದು ಇತ್ತೀಚೆಗೆ ವಿವಿಧ ರಾಜ್ಯಗಳಲ್ಲಿ ನಡೆದ ಮಧ್ಯಂತರ ಚುನಾವಣೆಗಳಲ್ಲಿ ಗೊತ್ತಾಗಿದೆ. ಅಂತಾರಾಷ್ಟ್ರೀಯ ಟೈಮ್ಸ್ ಮ್ಯಾಗಜೀನ್ ನ ಫಲಿತಾಂಶ ಸಹ ಬಂದಿದೆ. ನಮ್ಮ ಸರ್ಕಾರದ ಯಶಸ್ಸಿಗೆ ಇದಕ್ಕಿಂತ ಉತ್ತಮ ಪ್ರಮಾಣ ಪತ್ರ ಇನ್ನೇನು ಬೇಕಿದೆ.’

ಹೀಗೆ ಕೇಂದ್ರ ಹಾಗೂ ಪ್ರತಿಪಕ್ಷಗಳು ಆರೋಪ ಹಾಗೂ ಪ್ರತ್ಯಾರೋಪಗಳಲ್ಲಿ ನಿರತವಾಗಿ, ಸಂಸತ್ತಿನ ಕಾಲ ಅನ್ಯಾಯವಾಗಿ ವ್ಯರ್ಥವಾಗುತ್ತಿದೆ. ಮುಂದಿನ ಏಪ್ರಿಲ್ ತಿಂಗಳಿನಿಂದ ಜಾರಿಗೆ ಬರಲು ಸಿದ್ಧವಾಗಿರುವ ಜಿಎಸ್ಟಿ ಮಸೂದೆಯ ಪ್ರಮುಖ ಅಂಶಗಳ ಕುರಿತು ಚರ್ಚೆ ಹಾಗೂ ಅನುಮೋದನೆಯಂತಹ ಪ್ರಮುಖ ಅಂಶಗಳು ನೆನೆಗುದಿಗೆ ಬಿದ್ದಿದ್ದು, ಸಾಮಾನ್ಯ ಜನರು ಇವರ ಆಟಗಳನ್ನು ನೋಡಿ ತಲೆತಗ್ಗಿಸುತ್ತಿದ್ದಾರೆ.

Leave a Reply