ಜಯಾ ನಂತರದ ತಮಿಳುನಾಡು ರಾಜಕಾರಣದಲ್ಲಿ ಶುರುವಾಗಲಿದೆಯೇ ಕೌಟುಂಬಿಕ ಧಾರಾವಾಹಿ? ಮತ್ತೆ ಮನೆ ಹೊಕ್ಕುತ್ತಿದ್ದಾರೆ ಹೊರದಬ್ಬಿಸಿಕೊಂಡವರು…

ಡಿಜಿಟಲ್ ಕನ್ನಡ ವಿಶೇಷ:

ಜಯಲಲಿತಾ ಮತ್ತು ಶಶಿಕಲಾರ ನಡುವಿನ ಸ್ನೇಹ ಗೊತ್ತಿರುವಂಥದ್ದೇ. ಎಐಎಡಿಎಂಕೆಯ ಸದಸ್ಯರೆಲ್ಲ ನಡು ಬಗ್ಗಿಸಿ ಸಲಾಂ ಹಾಕುತ್ತಿದ್ದ ಜಯಲಲಿತಾರ ಮೇಲೆ ಶಶಿಕಲಾ ಹೊಂದಿದ್ದ ಹಿಡಿತ ಅಚ್ಚರಿಯದ್ದೇ.

ಕೆಲ ವರ್ಷಗಳ ಹಿಂದಷ್ಟೇ ಪೋಸ್ ಗಾರ್ಡನ್’ನ ತಮ್ಮ ನಿವಾಸದಿಂದ ಶಶಿಕಲಾರನ್ನು ಹೊರಹಾಕಿದ್ದರು ಜಯಲಲಿತಾ. ಆ ಸಮಯಕ್ಕೆ, ಶಶಿಕಲಾ ಜಯಾರನ್ನು ನಿಧಾನ ವಿಷಪ್ರಯೋಗದಿಂದ ಸಾಯಿಸಲು ಹೊರಟಿದ್ದಳಂತೆ… ಈ ಬಗ್ಗೆ ನರೇಂದ್ರ ಮೋದಿಯೇ ಸುಳಿವು ಕೊಟ್ಟಿದ್ದರಂತೆ ಎಂಬೆಲ್ಲ ಕತೆಗಳು ಹರಿದಾಡಿದ್ದವು. ಇಂತಿಪ್ಪ ಶಶಿಕಲಾ ಕೆಲ ತಿಂಗಳಲ್ಲೇ ಜಯಾ ನಿವಾಸಕ್ಕೆ ಮರಳಿಬಿಟ್ಟರು. ‘ಅಕ್ಕನ ವಿರುದ್ಧ ಹಲವರು ಕಾರಸ್ಥಾನ ಮಾಡುತ್ತಿದ್ದರು. ಅವರೆಲ್ಲರಿಂದಲೂ ನಾನು ದೂರವಾಗಿದ್ದೇನೆ’ ಎಂಬುದು ಮರಳಿ ಬರುವಾಗ ಕೊಟ್ಟ ಸಮರ್ಥನೆ.

ಆ ನಂತರ ಮತ್ತೆ ಜಯಾ ಒಡ್ಡೋಲಗದಲ್ಲಿ ಶಶಿಕಲಾ ಎಷ್ಟು ಪ್ರಾಮುಖ್ಯ ಪಡೆದರೆಂಬುದು 73 ದಿನಗಳ ಜಯಾ ಆಸ್ಪತ್ರೆ ವಾಸದಲ್ಲೇ ಸ್ಪಷ್ಟವಾಗಿಹೋಯಿತು. ಆಸ್ಪತ್ರೆಗೆ ದಾಖಲಾಗಿದ್ದರಿಂದ ನಿಧನದವರೆಗೂ ಜಯಾರನ್ನು ನೋಡಿಕೊಂಡು ಬರುವುದಕ್ಕೆ ಪಕ್ಷದಲ್ಲಿದ್ದ ನಾಲ್ಕೈದು ಮಂದಿಗೆ ಸಾಧ್ಯವಾಗಿದ್ದಿರಬಹುದು ಅಷ್ಟೆ. ಇಲ್ಲೆಲ್ಲ ಗೇಟ್ಕೀಪರ್ ಆಗಿ ಕೆಲಸ ಮಾಡಿದ್ದು ಶಶಿಕಲಾ. ರಾಜ್ಯಪಾಲರಿಗೆ ಸಹ ಜಯಲಲಿತಾ ದಾಖಲಾಗಿದ್ದ ಆಸ್ಪತ್ರೆ ಅಂತಸ್ತಿನವರೆಗೆ ಪ್ರವೇಶ ನೀಡಿ ಮಾತನಾಡಿಸಿ ಕಳುಹಿಸಲಾಯಿತೇ ಹೊರತು ಕೊಠಡಿಗೆ ಪ್ರವೇಶವಿರಲಿಲ್ಲ ಎಂಬ ವದಂತಿಗಳು ಹರಿದಾಡಿಕೊಂಡಿವೆ. ಶಶಿಕಲಾಗೆ ಇಂಥದೊಂದು ನಿಯಂತ್ರಣ ಸಾಧ್ಯವಾಯಿತು. ನಂತರ ಜಯಾ ಅಂತಿಮ ಕ್ರಿಯೆಯ ಸಾರಥ್ಯವನ್ನೂ ಶಶಿಕಲಾ ವಹಿಸಿದ್ದು ಎಲ್ಲರಿಗೂ ಗೊತ್ತಿರುವ ಅಂಶ.

ಶಶಿಕಲಾ ಎಐಎಡಿಎಂಕೆ ಮೇಲೆ ನಿಯಂತ್ರಣ ಸ್ಥಾಪಿಸುತ್ತಾರಾ? ಅದೇನೇ ಅಮ್ಮನ ಪಕ್ಕ ನಿಂತು ಗುರುತಿಸಿಕೊಂಡಿದ್ದರೂ ಎಐಎಡಿಎಂಕೆ ಇಡಿ ಇಡಿ ನಿಷ್ಠೆಯನ್ನು ಶಶಿಕಲಾ ಪಡೆಯಲಾರಳಾದ್ದರಿಂದ, ಈಕೆಯ ಈ ಪ್ರಯತ್ನದಲ್ಲಿ ಪಕ್ಷ ಹೋಳಾಗುವುದಾ ಎಂಬೆಲ್ಲ ಪ್ರಶ್ನೆಗಳು ಹುಟ್ಟಿಕೊಂಡಿದ್ದೇ ಆವಾಗ.

ಇದೀಗ ಆ ನಿಟ್ಟಿನಲ್ಲಿ ಮತ್ತಷ್ಟು ಗಟ್ಟಿ ವಿದ್ಯಮಾನ ತೆರೆದುಕೊಂಡಿದೆ. ಶಶಿಕಲಾರ ಗಂಡ ನಟರಾಜನ್ ಇದೀಗ ಪೋಸ್ ಗಾರ್ಡನ್’ಗೆ ಬಂದಿರುವ ಸುದ್ದಿಯಿದೆ. ಈ ನಟರಾಜನ್’ರನ್ನು 1996ರಲ್ಲೇ ಜಯಲಲಿತಾ ತಮ್ಮ ನಿವಾಸದಿಂದ ಹೊರಹಾಕಿದ್ದರು. ಅದಕ್ಕೂ ವರ್ಷ ಮೊದಲಷ್ಟೇ ಶಶಿಕಲಾ ನಟರಾಜನ್ ಸಂಬಂಧಿಯ ಮಗ ಸುಧಾಕರನ್’ರನ್ನು ದತ್ತು ಪುತ್ರನನ್ನಾಗಿ ಸ್ವೀಕರಿಸಿ ವೈಭವೋಪೇತ ಮದುವೆ ಮಾಡಿದ ಜಯಾ ಮತ್ತು ಶಶಿಕಲಾ ಇಬ್ಬರ ಹೆಗಲಿಗೂ ವಿವಾದ ಹತ್ತಿ ಕುಳಿತಿತ್ತು, ನಂತರದ ವರ್ಷಗಳಲ್ಲಿ ಇದು ಇವರಿಬ್ಬರನ್ನು ಕಟಕಟೆಯಲ್ಲಿ ಸಹ ನಿಲ್ಲಿಸಿತೆಂಬುದು ಇತಿಹಾಸ. ಈ ದತ್ತುಪುತ್ರನನ್ನೂ ಜಯಾ ದೂವಿಟ್ಟರು. ಇವರೆಲ್ಲ ಸೇರಿ ಎಐಎಡಿಎಂಕೆಯನ್ನು ತಮ್ಮ ನಿಯಂತ್ರಣಕ್ಕೆ ತಂದುಕೊಳ್ಳಲು ಹೊರಟಿದ್ದಾರೆ ಎಂಬುದೇ ಗೇಟ್ಪಾಸ್ ನೀಡುವುದಕ್ಕೆ ಕಾರಣ.

ಇವೆಲ್ಲ ಏರಿಳಿತಗಳ ನಡುವೆಯೂ ಸಾಂಗತ್ಯ ಉಳಿಸಿಕೊಂಡವಳೆಂದರೆ ಶಶಿಕಲಾ. ಕೌತುಕವೆಂದರೆ, ತನ್ನ ಪತ್ನಿ ಶಶಿಕಲಾಳನ್ನು 1980ರಲ್ಲಿ ಜಯಲಲಿತಾರಿಗೆ ಪರಿಚಯಿಸಿದ್ದೇ ನಟರಾಜನ್. ತನ್ನ ಹಿಂದು ವಿರೋಧಿ ಅಭಿಯಾನಗಳಿಂದ ಡಿಎಂಕೆಯಲ್ಲಿ ಸ್ಥಾನ ಪಡೆದಿದ್ದ ಈತ, ಜಯಲಲಿತಾ ಪ್ರಭಾವಳಿ ಶುರುವಾಗುತ್ತಲೇ ಡೇರೆ ಬದಲಿಸಿದವ. ಎಐಎಡಿಎಂಕೆಯಲ್ಲಿ ಅಧಿಕೃತ ಹುದ್ದೆಗಳೇನಿರದಿದ್ದರೂ, ಜಯಲಲಿತಾರಿಂದ ಹೊರದಬ್ಬಿಸಿಕೊಂಡ ನಂತರವೂ ಆತ ದೆಹಲಿ ವಲಯದಲ್ಲಿ ಲಾಬಿಕೋರನಾಗಿ ಉಳಿದುಕೊಂಡಿದ್ದ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಕಾಂಗ್ರೆಸ್ಸಿನ ಹೈಕಮಾಂಡ್ ಜತೆ ಉತ್ತಮ ಬಾಂಧವ್ಯವನ್ನೂ ಹೊಂದಿರುವ ವ್ಯಕ್ತಿ.

ಇದೀಗ ಮತ್ತೆ ಒಗ್ಗೂಡುತ್ತಿರುವ ಶಶಿಕಲಾ-ನಟರಾಜನ್ ಸಂಗಮವು ತಮಿಳುನಾಡಿನ ರಾಜಕೀಯದಲ್ಲಿ ಹುಟ್ಟಿಸಲಿರುವ ಅಲೆಗಳೇನು? ಪನೀರ್ ಸೆಲ್ವಂ ಪ್ರಭಾವ ಮುಂದುವರಿಯುವುದೆಷ್ಟು ದಿನ? ‘ಅಮ್ಮ’ನ ಮೇಲೆ ಎಐಎಡಿಎಂಕೆ ಕಾರ್ಯಕರ್ತರಿಗಿರುವ ನಿಷ್ಠೆಯನ್ನೇನೂ ತನ್ನತ್ತ ತಿರುಗಿಸಿಕೊಳ್ಳಲಾಗದ ಅನುಮಾನದ ಜಾಗದಲ್ಲಿ ನಿಂತಿರುವ ಶಶಿಕಲಾ ನಡೆಗಳು ಪಕ್ಷವನ್ನು ಇಬ್ಭಾಗದತ್ತ ಕೊಂಡೊಯ್ಯುವ ಸಾಧ್ಯತೆಗಳಿವೆಯೇ?

ಕುಟುಂಬ ಕಿತ್ತಾಟ, ಅಧಿಕಾರ ಜಗ್ಗಾಟಗಳ ತಿರುಳನ್ನು ಹೊಂದಿ ಟಿವಿ ವಾಹಿನಿಗಳಲ್ಲಿ ಪ್ರದರ್ಶಿತವಾಗುತ್ತಿರುವ ಧಾರಾವಾಹಿಗಳ ಟಿಆರ್ಪಿಗೆ ತಮಿಳುನಾಡು ರಾಜಕಾರಣವು ಸ್ಪರ್ಧೆ ನೀಡಿದಲ್ಲಿ ಆಶ್ಚರ್ಯವೇನಿಲ್ಲ.

Leave a Reply