ಮೋದಿ ವಿರುದ್ಧ ಸಿದ್ದರಾಮಯ್ಯ ಅಸಮಾಧಾನ, ಹೆಲಿಕಾಪ್ಟರ್ ಹಗರಣ: ಪ್ರಧಾನಿ ಕಚೇರಿ ಮೇಲೆ ದೂರಿದ ತ್ಯಾಗಿ, ತೆರಿಗೆ ಅಧಿಕಾರಿಗಳ ದಾಳಿ: ಬಾತ್ ರೂಮಲ್ಲಿ ಸಿಕ್ತು ₹ 5.7 ಕೋಟಿ

ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪ ಅವರ ಜನ್ಮದಿನದ ಅಂಗವಾಗಿ ವಿಧಾನಸೌಧದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ಡಿಜಿಟಲ್ ಕನ್ನಡ ಟೀಮ್:

ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿ ಕುರಿತು ಚರ್ಚಿಸಲು ರಾಜ್ಯದ ಸರ್ವಪಕ್ಷ ನೀಯೋಗಕ್ಕೆ ಸಮಯ ನೀಡದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. ಮಾಜಿ ಮುಖ್ಯಮಂತ್ರಿ ದಿವಂಗತ ನಿಜಲಿಂಗಪ್ಪ ಅವರ ಜನ್ಮದಿನ ಅಂಗವಾಗಿ ವಿಧಾನಸೌಧ ಆವರಣದಲ್ಲಿನ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ‘ಕರ್ನಾಟಕ ರಾಜ್ಯವು ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಇದೆಯೋ ಅಥವಾ ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ. ರಾಜ್ಯದಲ್ಲಿ ಭೀಕರ ಬರಗಾಲವಿದೆ. ಪರಿಹಾರ ಕಾಮಗಾರಿಗಳಿಗೆ ಕೇಂದ್ರದ ನೆರವು ಅಗತ್ಯವಿದೆ. ಇದನ್ನು ಹೇಳಿಕೊಳ್ಳಲು ಒಂದು ರಾಜ್ಯದ ಮುಖ್ಯಮಂತ್ರಿ ಭೇಟಿಗೆ ಸಮಯ ಕೇಳಿದರೆ ಕೊಟ್ಟಿಲ್ಲ. ಜತೆಗೆ ಮಹದಾಯಿ ನದಿ ನೀರು ವಿವಾದ ಕುರಿತು ವಿಧಾನ ಮಂಡಲದ ಉಭಯ ಸದನಗಳಲ್ಲಿ ಚರ್ಚೆಯಾಗಿದೆ. ಸದನದ ಅಭಿಪ್ರಾಯವನ್ನು ಪ್ರಧಾನಿಯವರಿಗೆ ತಿಳಿಸಬೇಕಿದೆ. ಈ ಹಿನ್ನೆಲೆಯಲ್ಲಿಶುಕ್ರವಾರ ಭೇಟಿ ಮಾಡಲು ಸಮಯ ಕೇಳಲಾಗಿತ್ತು. ಆದರೆ ಸಮಯ ನೀಡಲು ನಿರಾಕರಿಸಿರುವುದು ಉತ್ತಮ ಬೆಳವಣಿಗೆಯಲ್ಲ’ ಎಂದರು.

ಮುಖ್ಯಮಂತ್ರಿಗಳ ಈ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಪ್ರಧಾನಿ ಅವರ ವಿರುದ್ಧ ಸಿದ್ದರಾಮಯ್ಯನವರು ಈ ರೀತಿಯಾದ ಆರೋಪ ಮಾಡುವುದು ಸರಿಯಿಲ್ಲ ಎಂದು ತಿಳಿಸಿದ್ದಾರೆ. ಇನ್ನು ಕೇಂದ್ರ ಸರ್ಕಾರ ಬರ ಪರಿಹಾರ ಕಾಮಗಾರಿಗಳಿಗೆ ಬಿಡುಗಡೆ ಮಾಡಿರುವ ಹಣವನ್ನು ರಾಜ್ಯ ಸರ್ಕಾರ ಬಳಕೆ ಮಾಡಿಕೊಂಡಿರುವ ಬಗ್ಗೆ ವಿವರ ನೀಡುವಂತೆಯೂ ಬಿಜೆಪಿ ಸಂಸದರು ಕೇಳಿದ್ದಾರೆ.

ಅಗಸ್ಟಾ ವೆಸ್ಟ್ ಲ್ಯಾಂಡ್: ಬಂಧಿತರು 4 ದಿನ ಸಿಬಿಐ ವಶಕ್ಕೆ

ಬಹುಕೋಟಿಯ ಅಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣದಲ್ಲಿ ಬಂಧಿತರಾಗಿದ್ದ ವಾಯುಸೇನಾ ಮಾಜಿ ಮುಖ್ಯಸ್ಥ ಎಸ್.ಪಿ ತ್ಯಾಗಿ ಹಾಗೂ ಇತರೆ ಮೂವರು ಆರೋಪಿಗಳನ್ನು ಸಿಬಿಐ ನ್ಯಾಯಾಲಯಕ್ಕೆ ಒಪ್ಪಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ನಾಲ್ವರೂ ಬಂಧಿತರನ್ನು 4 ದಿನಗಳ ಕಾಲ ಸಿಬಿಐ ವಶಕ್ಕೆ ನೀಡಿದೆ.

ಶನಿವಾರ ನಡೆದ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯದ ಮುಂದೆ ಮಾಹಿತಿ ನೀಡಿದ ತ್ಯಾಗಿ ಅವರು, ಈ ಹಗರಣಕ್ಕೆ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಕಚೇರಿಯೇ ಕಾರಣ ಎಂದು ಆರೋಪಿಸಿದ್ದಾರೆ ಎಂದು ಮಾಧ್ಯಮಗಳ ವರದಿಗಳು ಬಂದಿವೆ. ಈ ಹೆಲಿಕಾಪ್ಟರ್ ಖರೀದಿ ಟೆಂಡರ್ ಅನ್ನು ಯುಕೆ ಮೂಲದ ಕಂಪನಿಗೆ ಸಿಗುವಂತೆ ಮಾಡುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಕಚೇರಿ ಕೆಲಸ ಮಾಡಿತ್ತು ಎಂದು ತ್ಯಾಗಿ ತಿಳಿಸಿರುವುದಾಗಿ ವರದಿಗಳು ಬಂದಿವೆ. ಇದರೊಂದಿಗೆ ಈ ಹಗರಣದಿಂದ ಯುಪಿಎ ಸರ್ಕಾರಕ್ಕೆ ಮತ್ತಷ್ಟು ಮಸಿ ಬಳಿದಂತಾಗಿದೆ.

ಬಾತ್ ರೂಮ್ನಲ್ಲಿ ಸಿಕ್ತು ಕೋಟಿ ಹಣ

ದೇಶದಾದ್ಯಂತ ತೆರಿಗೆ ಇಲಾಖೆ ಅಧಿಕಾರಿಗಳ ಬೇಟೆ ಶನಿವಾರವೂ ಮುಂದುವರಿದಿದೆ. ರಾಜ್ಯದ ಹುಬ್ಬಳ್ಳಿ, ಚಿತ್ರದುರ್ಗ ಸೇರಿದಂತೆ ಇತರೆ ಕಡೆಗಳಲ್ಲಿ ತೆರಿಗೆ ಅಧಿಕಾರಿಗಳು ದಾಳಿ ಮುಂದುವರಿಸಿದ್ದಾರೆ. ಚಿತ್ರದುರ್ಗದ ಚಳ್ಳಕೆರೆಯಲ್ಲಿ ಹವಾಲಾ ಹಣ ನಿರ್ವಹಿಸುತ್ತಿದ್ದ ವ್ಯಕ್ತಿಯ ಮನೆಯ ಬಾತ್ ರೂಮಲ್ಲಿ ₹ 2000 ಮುಖಬೆಲೆಯ ನೋಟಿನ ರೂಪದಲ್ಲಿ ₹ 5.7 ಕೋಟಿಯಷ್ಟು ಹಣ ಸಿಕ್ಕಿದೆ. ಬಾತ್ ರೂಮಲ್ಲಿ ಒಂದು ಚಿಕ್ಕದಾದ ಲಾಕರ್ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದ್ದು ಅಲ್ಲಿ ಈ ಹಣ ದೊರೆತಿದೆ. ಜತೆಗೆ ಹಳೆ ನೋಟಿನ ರೂಪದಲ್ಲಿ ₹ 90 ಲಕ್ಷ, 28 ಕೆ.ಜಿಯಷ್ಟು ಚಿನ್ನಾಭರಣ ಹಾಗೂ ಚಿನ್ನದ ಬಿಸ್ಕೆಟ್ ಗಳು ಸಿಕ್ಕಿವೆ. ಈ ವ್ಯಕ್ತಿ ಯಾರು ಎಂಬುದನ್ನು ತೆರಿಗೆ ಇಲಾಖೆ ಇನ್ನಷ್ಟೆ ಮಾಹಿತಿ ನೀಡಬೇಕಿದೆ.

ಇನ್ನು ಚೆನ್ನೈನಲ್ಲಿ ಶುಕ್ರವಾರ ರಾತ್ರಿ ನಡೆದ ದಾಳಿಯ ಸಂದರ್ಭ ಹೊಸ ನೋಟಿನ ರೂಪದಲ್ಲಿದ್ದ ₹ 24 ಕೋಟಿಯನ್ನು ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ ಚೆನ್ನೈನಲ್ಲಿ ನಡೆದ ದಾಳಿಯಲ್ಲಿ ₹ 166 ಕೋಟಿಯಷ್ಟು ಕಪ್ಪುಹಣ ಹೊಸ ನೋಟಿನಲ್ಲಿ ಸಿಕ್ಕಂತಾಗಿದ್ದು, 127 ಕೆ.ಜಿಯಷ್ಟು ಚಿನ್ನವೂ ಸಿಕ್ಕಿದೆ.

ಕಪ್ಪು ಹಣ ಬಿಳಿ ಮಾಡುವಲ್ಲಿ ಸರ್ಕಾರದ ಪಾತ್ರ?

ಕಾವೇರಿ ನೀರಾವರಿ ನಿಗಮ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಕೈಲಿ ಹೊಸನೋಟು ಸಿಕ್ಕಿರುವ ಪ್ರಕರಣದಲ್ಲಿ ಸರ್ಕಾರದ ಪಾತ್ರವೂ ಇದೆ ಎಂಬುದು ಭೂ ಕಬಳಿಕೆ ವಿರೋಧಿ ಸಮಿತಿ ಸದಸ್ಯರ ಗಂಭೀರ ಆರೋಪ. ಶಾಸಕರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಮಿತಿಯ ಸದಸ್ಯರುಗಳಾದ ಎ.ಟಿ ರಾಮಸ್ವಾಮಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್.ಎಸ್.ದೊರೆಸ್ವಾಮಿ, ‘ಹೊಸ ನೋಟುಗಳು ಅಧಿಕಾರಿಗಳಿಗೆ ಸಿಕ್ಕಿರುವುದನ್ನು ಗಮನಿಸಿದರೆ ಸರ್ಕಾರವೇ ಕಪ್ಪು ಹಣವನ್ನು ಬಿಳಿ ಮಾಡಿಸುತ್ತಿದೆ. ಈ ಪ್ರಕರಣದಲ್ಲಿ ಹಲವು ಸಚಿವರುಗಳು ಭಾಗಿಯಾಗಿರುವ ಶಂಕೆಯಿಂದೆ. ಹೀಗಾಗಿ ಈ ಬಗ್ಗೆ ಸಮಗ್ರ ತನಿಖೆಯಾಗಬೇಕು’ ಎಂದು ಆಗ್ರಹಿಸಿದರು. ಇದರ ಜತೆಗೆ ಕೆರೆ ಒತ್ತುವರಿ ಸದನ ಸಮಿತಿ ತನ್ನ ವರದಿಯನ್ನು ಸಭಾಧ್ಯಕ್ಷರಿಗೆ ನೀಡಬೇಕು. ಆದರೆ ಈ ಸಮಿತಿಗೆ ಸಭಾಧ್ಯಕ್ಷ ಕೆ.ಬಿ ಕೋಳಿವಾಡ ಅವರೇ ಅಧ್ಯಕ್ಷರಾದರೆ ವರದಿಯನ್ನು ನೀಡುವುದು ಯಾರಿಗೆ? ಹೀಗಾಗಿ ಕೋಳಿವಾಡಾ ಅವರು ಕೆರೆ ಒತ್ತುವರಿ ಸದನ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಶಸ್ತ್ರ ಚಿಕಿತ್ಸೆಗೆ ಒಳಪಟ್ಟ ಸುಷ್ಮಾ ಸ್ವರಾಜ್

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್)ಯಲ್ಲಿ ಕಿಡ್ನಿ ಕಸಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ತಜ್ಞರಾದ ವಿ.ಕೆ ಬನ್ಸಾಲ್ ಮತ್ತು ಸಂದೀಪ್ ಅಗರ್ವಾಲ್ ನೇತೃತ್ವದ ವೈದ್ಯರ ತಂಡ ಐದು ಗಂಟೆಗಳ ಶಸ್ತ್ರ ಚಿಕಿತ್ಸೆ ನಡೆಸಿದೆ.

Leave a Reply