ಸೌರಮಂಡಲದ ಆಚೆಯಿರುವ ಗ್ರಹ- ನಕ್ಷತ್ರಗಳಿಗೆ ಶುರುವಾಗಿದೆ ನಾಮಕರಣ: ಜಗತ್ತನ್ನೇ ಆವರಿಸಿದೆ ಇದರ ಸಂಭ್ರಮ

author-ananthramuನಿಮಗೆ ವಿಸ್ಮಯ ಎನ್ನಿಸಬಹುದು. ಬೆಥೋವೆನ್, ಬೈರನ್, ಚಕೋವ್, ಡಿಕನ್ಸ್, ಕಿಪ್ಲಿಂಗ್, ಷೇಕ್ಸ್‍ಪಿಯರ್, ಷೆಲ್ಲಿ ಜೊತೆಗೆ ಭಾರತದ ವಾಲ್ಮೀಕಿ, ವ್ಯಾಸ, ಸೂರದಾಸ್ ಕೂಡ ಸ್ಥಳ ಹಂಚಿಕೊಂಡಿದ್ದಾರೆ; ಭೂಮಿಯಲ್ಲಲ್ಲ, ಅದು ಸೂರ್ಯನಿಗೆ ಸಮೀಪದ ಬುಧ ಗ್ರಹದಲ್ಲಿ. ಈ ಗ್ರಹದ ಮೈಮೇಲೆ ಲಕ್ಷಾಂತರ ಕುಳಿಗಳಿವೆ. ಹಿಂದೆ ಸಿಡುಬು ಬಂದವರಿಗೆ ಮುಖದಲ್ಲಿ ಅದು ಕಲೆಯಾಗಿ ಉಳಿಯುತ್ತಿತ್ತಲ್ಲ ಹಾಗೆ. ಬುಧನ ಮೇಲೆ ಅದರ ಆರಂಭಿಕ ಕಾಲದಲ್ಲೇ ಉಲ್ಕೆಗಳು, ಕ್ಷುದ್ರಗ್ರಹಗಳು, ಲಟಪಟ ಬಡಿದು ಗುರುತುಮಾಡಿವೆ. ಕೆಲವು ಕುಳಿಗಳ ವ್ಯಾಸ 300 ಕಿಲೋ ಮೀಟರ್‍ಗೂ ಹೆಚ್ಚು. ಇಂಥ ಕುಳಿಗಳು ನಮ್ಮ ವ್ಯಾಸ, ಕಾಳಿದಾಸ, ಸೂರದಾಸ ಇರಬೇಕೆಂದು ಅಂತಾರಾಷ್ಟ್ರೀಯ ಖಗೋಳ ಒಕ್ಕೂಟ (International Astronomical Union) ಬಹು ಹಿಂದೆಯೇ ತೀರ್ಮಾನಿಸಿ ಅದನ್ನು ಕಾರ್ಯರೂಪಕ್ಕೆ ತಂದಿದೆ. ಬೇರೆ ಬೇರೆ ದೇಶದ ಹೆಸರಾಂತ ಕವಿ, ಕಲಾವಿದರು, ನಾಟಕಕಾರರು, ಸಂಗೀತಗಾರರ ಹೆಸರುಗಳನ್ನು ಕುಳಿಗೆ ಇಡುವುದು ಯುಕ್ತ ಎಂದು ಆ ಸಂಸ್ಥೆ ಅಭಿಪ್ರಾಯವನ್ನು ಸಂಗ್ರಹಿಸಿ ತೀರ್ಮಾನಕ್ಕೆ ಬಂದಿತ್ತು.

ಹೆಸರು ಎಂದೊಡನೆ ನಾವು ಬೇಕಾಬಿಟ್ಟಿ ನಮ್ಮ ಆಪ್ತೇಷ್ಟರ ಹೆಸರನ್ನೋ, ಪ್ರಿಯಕರ, ಪ್ರಿಯತಮೆಯ ಹೆಸರನ್ನೋ ಅಥವಾ ನಿಮ್ಮ ಮನೆಯವರ ಹೆಸರನ್ನೋ ನೀಡುವಂತಿಲ್ಲ. ಅದಕ್ಕೊಂದು ನಿಯಮವಿದೆ. ಪ್ರಸಿದ್ಧ ವ್ಯಕ್ತಿ ಜೀವಿಸಿದ ಕಾಲದಲ್ಲಿ ಕೊನೆಯ ಪಕ್ಷ 50 ವರ್ಷಗಳ ಕಾಲವಾದರೂ ಆ ಸಮಾಜ ಅವರ ಕೊಡುಗೆಯನ್ನು ಸ್ಮರಿಸುವಂತಿರಬೇಕು. ವ್ಯಕ್ತಿ ಸತ್ತ ಮೂರು ವರ್ಷಗಳ ನಂತರವಷ್ಟೇ ಅವರ ಹೆಸರು ಸೇರ್ಪಡೆಯಾಗುತ್ತದೆ. ಇದೊಳ್ಳೆ ಷರತ್ತು! ವಾಲ್ಮೀಕಿ, ವ್ಯಾಸರು ಸಹಸ್ರಾರು ವರ್ಷಗಳಿಂದ ಭಾರತದ ಸಾಹಿತ್ಯಕ ಜಗತ್ತನ್ನೇ ಆಳಿದ್ದಾರೆ.

ಚಂದ್ರನಲ್ಲೂ ಕುಳಿಗಳಿವೆ. ಅದಕ್ಕೆ ಈ ಷರತ್ತುಗಳು ಅನ್ವಯಿಸುವುದಿಲ್ಲ. ಇಂಟರ್‍ನ್ಯಾಷನಲ್ ಲೂನಾರ್ ಜಿಯೋಫಿಸಿಕಲ್ ಸೊಸೈಟಿ ಈ ಹೆಸರುಗಳನ್ನು ಸಿಂಧುಗೊಳಿಸುವ ಪೌರೋಹಿತ್ಯ ವಹಿಸುತ್ತದೆ. ಇದನ್ನು ಒಪ್ಪುವುದು ಐ.ಎ.ಯು ಜವಾಬ್ದಾರಿ. ಅಲ್ಲೂ ನಮ್ಮ ಹೆಸರಾಂತ ವಿಜ್ಞಾನಿಗಳ ಹೆಸರಿನಲ್ಲಿ ದೊಡ್ಡ ದೊಡ್ಡ ಕುಳಿಗಳಿವೆ. ಸರ್. ಸಿ.ವಿ. ರಾಮನ್, ವಿಕ್ರಂ ಸಾರಾಭಾಯಿ, ಹೋಮಿ ಜೆ. ಭಾಭಾ, ಮೇಘನಾದ ಸಹಾ ಎಲ್ಲರೂ ಅರ್ಹರೇ. ಭಾರತದ ವಿಜ್ಞಾನ ನಕ್ಷೆಯನ್ನೇ ಬದಲಿಸಿದವರು. ಆದರೆ ಇನ್ನೊಂದು ಹೆಸರು ಸೇರಿರುವುದು ಹಲವರಿಗೆ ಹುಬ್ಬೇರಿಸುವಂತೆ ಮಾಡಿದೆ. ಅದು ಬಾಲಿವುಡ್‍ನ ಪ್ರಸಿದ್ಧ ನಟ ಶಾರೂಕ್ ಖಾನ್ ಹೆಸರು. ನಾಸಾ ಕಾರ್ಯಕ್ರಮವೊಂದರಲ್ಲಿ ಈ ನಟ ಭಾಗಿಯಾಗಿದ್ದನಂತೆ. ಕಡಲಾಚೆಗೂ ಅಭಿಮಾನಿಗಳಿದ್ದಾರಲ್ಲಾ! ಈ ನಟನ 44ನೆಯ ಹುಟ್ಟುಹಬ್ಬಕ್ಕೆ ಇದು ಭರ್ಜರಿ ಪ್ರೆಸೆಂಟೇಶನ್. ಇನ್ನೂ ವಿಸ್ಮಯವೆಂದರೆ ಇಸ್ರೋ ಸಂಸ್ಥೆಯ ಮಾಜಿ ಅಧ್ಯಕ್ಷ, ವಿಜ್ಞಾನಿ ಕಸ್ತೂರಿ ರಂಗನ್, ಖಾನ್ ಹೆಸರಿಗೆ ಸಮ್ಮತಿ ನೀಡಿದ್ದರಂತೆ.

ಯುರೇನಸ್ ಗ್ರಹ ಗೊತ್ತಲ್ಲ? ಸೂರ್ಯ ಸೆರೆಹಿಡಿದಿರುವ ಎಂಟು ಗ್ರಹಗಳ ಪೈಕಿ ಏಳನೆಯದು. ಇದೂ ಕೂಡ 27 ಉಪಗ್ರಹಗಳನ್ನು ಸೆರೆಹಿಡಿದಿದೆ-ದಾಸಾನುದಾಸರು. ಇವಕ್ಕೂ ಹೆಸರು ಬೇಕಲ್ಲ? ಅದಕ್ಕೆ ಷೇಕ್ಸ್‍ಪಿಯರ್ ನಾಟಕದ ವಿವಿಧ ಪಾತ್ರಧಾರಿಗಳ ಹೆಸರನ್ನು ನೀಡಿದೆ. ಮಿಡ್ ಸಮ್ಮರ್ ನೈಟ್ ಡ್ರೀಮ್ಸ್ನ ಟೈಟಾನಿಯಸ್, ಒಬೆರಾನ್, ಪಕ್; ‘ಟೆಂಪೆಸ್ಟ್ ನಾಟಕದ ಏರಿಯಲ್, ಮಿರಾಂಡ. ಇಷ್ಟೆಲ್ಲಾ ಈಗ ಏಕೆ ಪ್ರಸ್ತಾಪಿಸಬೇಕಾಯಿತು ಎಂದರೆ ಕಳೆದ ವರ್ಷ ಐ.ಎ.ಯು. ಒಂದು ಸ್ಪರ್ಧೆ ಇಟ್ಟಿತ್ತು. ಕೆಪ್ಲರ್ ದೂರದರ್ಶಕವೂ ಸೇರಿದಂತೆ ಯೂರೋಪಿನ ನಾಲ್ಕು ವ್ಯೋಮ ದೂರದರ್ಶಕಗಳು ನಮ್ಮ ಸೌರಮಂಡಲದಿಂದ ಆಚೆಯಿರುವ ನಕ್ಷತ್ರ ಮತ್ತು ಗ್ರಹಗಳನ್ನು ಕುರಿತು ರಾಶಿರಾಶಿ ಚಿತ್ರಗಳನ್ನು ಕಳಿಸಿವೆ. ಅವಕ್ಕೆ ಸಾರ್ವಜನಿಕರಿಂದ ಆಹ್ವಾನಿಸಿ ಹೆಸರನ್ನು ನೀಡುವುದು ಹೇಗೆ ಎಂದು ಯೋಚಿಸಿ, ಅದರ ಜಾಲತಾಣದಲ್ಲಿ ಸ್ಪರ್ಧೆಯ ನಿಯಮಗಳನ್ನು ವಿವರವಾಗಿ ಕೊಟ್ಟಿತ್ತು:

ನಿಮ್ಮ ಪ್ರೀತಿಯ ಸಾಕುಪ್ರಾಣಿಯ ಹೆಸರನ್ನು ಸೂಚಿಸಬೇಡಿ. ನಿಮಗೆ ಆಪ್ತರಾದವರ ಹೆಸರೂ ಬೇಡ. ಹೆಸರು ಸಂಕ್ಷಿಪ್ತವಾಗಿರಲಿ. 16 ಕ್ಯಾರೆಕ್ಟರ್ ಒಳಗೇ ಇರಲಿ. ಸಾಧ್ಯವಾದಷ್ಟೂ ಒಂದೇ ಪದವಿದ್ದರೆ ವಾಸಿ. ಹೆಸರು ಹೇಳಲು ನಾಲಗೆ ತೊಡರಿಸಬಾರದು. ಇನ್ನೂ ಒಂದು ವಿಚಾರ, ನಿಮಗೆ ಆಗದವರ ಹೆಸರನ್ನೂ ಸೂಚಿಸಬೇಡಿ. ಈಗ ಚಾಲ್ತಿಯಲ್ಲಿರುವ ಆಕಾಶಕಾಯಗಳ ಅಥವಾ ಅವಕ್ಕೆ ಸಂಬಂಧಿಸಿದ ಯಾವ ಹೆಸರೂ ಬೇಡ. (ಬೇಕಾದರೆ ನಾವು ಲಗತ್ತಿಸಿರುವ ಪಟ್ಟಿಯನ್ನು ನೋಡಿ). ಬದುಕಿರುವ ಯಾರ ಹೆಸರನ್ನೂ ಸೇರಿಸುವುದು ನಿಷಿದ್ಧ. ಬೌದ್ಧಿಕ ಆಸ್ತಿ ಹಕ್ಕನ್ನು ಉಲ್ಲಂಘಿಸಬೇಡಿ.

exo-planet-0-min

ಇಷ್ಟೆಲ್ಲಾ ಕಿವಿಮಾತು ಹೇಳುತ್ತ, ವೀಕ್ಷಣೆ, ಗ್ರಹ ನಕ್ಷತ್ರಗಳ ಸ್ಥಾನ ಇವೇ ಮುಂತಾದವನ್ನು ಕುರಿತಂತೆ ಸಾರ್ವಜನಿಕರಿಗೆ ವಿವರಗಳನ್ನೂ ಒದಗಿಸಿತ್ತು. ಇದಕ್ಕಿಂತಲೂ ಮುಖ್ಯವಾಗಿ ಅನ್ಯ ಸೌರಮಂಡಲದ (Exosolar) 20 ಗ್ರಹ ವ್ಯವಸ್ಥೆಗೆ ಸಂಬಂಧಿಸಿದಂತೆ 15 ನಕ್ಷತ್ರಗಳ ಮತ್ತು 32 ಗ್ರಹಗಳ ಜಾತಕವನ್ನು ಸ್ಪರ್ಧಿಗಳಿಗೆ ನೀಡಿತ್ತು. ಕೆಲವು ಒಂಟಿಗ್ರಹಗಳು ಮತ್ತೆ ಕೆಲವು ನಕ್ಷತ್ರಗಳಿಗೆ ಹಲವು ಉಪಗ್ರಹಗಳು. ಭಾರತವೂ ಸೇರಿದಂತೆ 182 ದೇಶಗಳು ಖುಷಿಯಾಗಿ ಭಾಗಿಯಾದವು. 5,73,242 ಒಟುಗಳ ಮೂಲಕ ತಮ್ಮ ಅಭಿರುಚಿಯನ್ನು ತೋರಿಸಿದವು. ಒಂದು ಸಂಸ್ಥೆ ಒಂದು ಹೆಸರನ್ನು ಮಾತ್ರ ಸೂಚಿಸಬೇಕೆಂಬ ಷರತ್ತೂ ಇತ್ತು. ವಿಜ್ಞಾನಿಗಳು ಸಾಮಾನ್ಯವಾಗಿ ಹೊಸದಾಗಿ ಪತ್ತೆಹಚ್ಚಿದ ಸೂರ್ಯ ಮತ್ತು ಅದರ ಉಪಗ್ರಹಕ್ಕೆ ಕೆಟಲಾಗ್‍ನಲ್ಲಿ ನಮೂದಿಸುವ ಸಂಖ್ಯೆ ಕೊಡುತ್ತಾರೆ. ಉದಾ: HD81688, ಎಂಬುದನ್ನು ಗಮನಿಸಿ. HD ಎನ್ನುವುದು ಹೆನ್ರಿ ಡೇಪರ್ ಎಂಬ ಖಗೋಳವಿಜ್ಞಾನಿ ಮಾಡಿದ ಕೆಟಲಾಗ್. ಅದರಲ್ಲಿ ಈ ನಕ್ಷತ್ರದ ಸಂಖ್ಯೆ 81688. ಈ ಸಂಖ್ಯೆ ಮುಂದೆ ಬಿ ಎಂದಿದ್ದರೆ ಅದು ಆ ನಕ್ಷತ್ರಕ್ಕೆ ಸಂಬಂಧಿಸಿದಂತೆ ಮೊದಲು ಪತ್ತೆಮಾಡಿದ ಗ್ರಹ ಎಂಬ ಅರ್ಥವಿದೆ. ಸಾಮಾನ್ಯರಿಗೆ ಇದು ಹೇಗೆ ಅರ್ಥವಾಗಬೇಕು? ಹೀಗಾಗಿ ಐ.ಎ.ಯು. ಜಗತ್ತಿನ ವಿವಿಧ ಭಾಗದಲ್ಲಿ ಅವರ ಸಂಸ್ಕೃತಿಯಲ್ಲಿ ಉಲ್ಲೇಖವಾಗಿದ್ದ ಹೆಸರುಗಳನ್ನೂ ಪರಿಗಣಿಸಲು ಯೋಚಿಸಿತು. HD149026 ನಕ್ಷತ್ರ ಈಗ ಓಗ್ಮಾ ಎಂಬ ಹೆಸರು ಪಡೆದಿದೆ. ಐರ್ಲೆಂಡ್ ಮತ್ತು ಸ್ಕಾಡ್‍ಲೆಂಡಿನ ಸೆಲ್ಟಿಕ್ ಸಂಸ್ಕೃತಿಯಲ್ಲಿ ಓಗ್ಮಾ ಎಂದರೆ ನಮ್ಮ ವಿದ್ಯಾಧಿದೇವತೆ ಸರಸ್ವತಿಗೆ ಸಮನಾದ ದೇವತೆ. ಫ್ರಾನ್ಸಿನ Club d_ astronomie de Toussaint ಇದನ್ನು ಸೂಚಿಸಿತ್ತು.

exoworld-min

ಇಷ್ಟೆಲ್ಲಾ ವಿವರಣೆ ಕೊಡುವುದಕ್ಕೆ ಇನ್ನೊಂದು ಮುಖ್ಯ ಕಾರಣವಿದೆ. ಅನ್ಯ ಸೌರಮಂಡಲದಲ್ಲಿ ಹೊಸದಾಗಿ ಪತ್ತೆಹಚ್ಚಿದ ಗ್ರಹ, ನಕ್ಷತ್ರಗಳಿಗೆ ಹೆಸರು ಕೊಡುವ ಸ್ಪರ್ಧೆ ಏರ್ಪಡಿಸಿದ ಸಂದರ್ಭದಲ್ಲೇ ನಾವು ಬಹುಮಟ್ಟಿಗೆ ಬರಿಗಣ್ಣಿನಿಂದಲೇ ನೋಡಬಹುದಾದ ನಕ್ಷತ್ರಪುಂಜಗಳ ಕೆಲವು ಪ್ರಸಿದ್ಧ ನಕ್ಷತ್ರಗಳ ಬಗ್ಗೆ ಬೇರೆ ಬೇರೆ ಸಂಸ್ಕೃತಿಯಲ್ಲಿ ಬೇರೆ ಬೇರೆ ಹೆಸರುಗಳು ಇರುವುದನ್ನು ವ್ಯವಸ್ಥಾಪಕರು ಗಮನಿಸಿದ್ದರು. ಅಲ್ಲದೆ ಗ್ರೀಕ್, ಲ್ಯಾಟಿನ್, ಅರಬ್ ಮೂಲದ ಹೆಸರುಗಳನ್ನು ಸೂಚಿಸುವಾಗ ಕಾಗುಣಿತ ದೋಷಗಳೂ ಆಗುತ್ತಿದ್ದವು. ಇವನ್ನು ತಪ್ಪಿಸಲು ಇವೆಲ್ಲಕ್ಕೂ ಖಚಿತವಾದ, ಎಲ್ಲ ದೇಶಗಳಲ್ಲೂ ಶಿಷ್ಟ ರೂಪದಲ್ಲಿ ಬಳಸಬಹುದಾದ ಹೆಸರು ಸೂಚಿಸಬೇಕೆಂದು ಅದಕ್ಕಾಗಿಯೇ ಒಂದು ಸಮಿತಿಯನ್ನು ಈ ವರ್ಷದ ಆರಂಭದಲ್ಲೇ ಮಾಡಿತ್ತು. ಇದರ ಫಲವಾಗಿ ಈಗ ಅಂತಾರಾಷ್ಟ್ರೀಯ ಖಗೋಳ ಒಕ್ಕೂಟ ಬೇರೆ ಬೇರೆ ನಕ್ಷತ್ರಪುಂಜದ 227 ನಕ್ಷತ್ರಗಳಿಗೆ ಶಿಷ್ಟ ಹೆಸರನ್ನು ಖಚಿತಪಡಿಸಿದೆ. ಉದಾ : ಪ್ರಾಚೀನ ಕಾಲದಿಂದಲೂ ಧ್ರುವನಕ್ಷತ್ರ ನಾವಿಕರಿಗೆ ದಿಕ್ಸೂಚಿಯಂತೆ ಒದಗಿಬಂದಿದೆ. ಇದಕ್ಕೆ ಎಷ್ಟೊಂದು ಹೆಸರುಗಳಿವೆ! ಪೊಲಾರಿಸ್, ಆಲ್ಫಾ ಯುರ್ಸೆಮೈನಾರಿಸ್, HD8880 ಹಾಗೆಯೇ ಎಸ್ಕಿಮೋ ಸಂಸ್ಕೃತಿಯಲ್ಲಿ Niiqirtsuituq ಹೆಸರು ಉಂಟು. ಭಾರತೀಯರಿಗೆ ಅದು ಧ್ರುವನಕ್ಷತ್ರ. ಧ್ರುವನ ಚರಿತ್ರೆಗೆ ಸಂಬಂಧಿಸಿದ್ದು. ಈ ಎಲ್ಲ ಗೊಂದಲಗಳನ್ನೂ ಕೈಬಿಟ್ಟು ಈಗ ಅದಕ್ಕೆ ಸರಳವಾಗಿ ಪೊಲಾರಿಸ್ ಎಂದು ಹೆಸರು ಕೊಟ್ಟಿದ್ದಾರೆ.

ವಿಜ್ಞಾನಿಗಳು ಕೊಡುವ ಹೆಸರುಗಳು ಅಂತಾರಾಷ್ಟ್ರೀಯ ಖಗೋಳ ಅಧ್ಯಯನಕ್ಕಂತೂ ಹೆಚ್ಚು ಅನುಕೂಲಕರವಾಗಿವೆ. ಆದರೆ ಆಯಾ ದೇಶದ ಸಾಂಸ್ಕೃತಿಕ ಹೆಸರುಗಳನ್ನು ಸುಲಭವಾಗಿ ಜನ ಮರೆಯಲಾರರು. ನಮ್ಮ ಅಥರ್ವ ವೇದದಲ್ಲೇ ಅಶ್ವಿನಿಯಿಂದ ರೇವತಿವರೆಗೆ 27 ನಕ್ಷತ್ರಗಳನ್ನು ಬರಿಗಣ್ಣಿನಿಂದಲೇ ನೋಡಿ ಗುರುತಿಸಿದ್ದಾರೆ. ಇಂದಿಗೂ ಹಳ್ಳಿಗಳಲ್ಲಿ ರೈತರಿಗೆ  ಮಳೆ ನಕ್ಷತ್ರಗಳ ಹೆಸರುಗಳು ಬಾಯಿಪಾಠವಾಗಿವೆ.

Leave a Reply