‘ನೋಟು ಅಮಾನ್ಯ ನಿರ್ಧಾರದಿಂದ ಭಯೋತ್ಪಾದಕರು- ನಕ್ಸಲರ ಕೈಗಳು ಬಿದ್ದುಹೋಗಿವೆ’ ಗುಜರಾತಿನಲ್ಲಿ ಮೋದಿ ಸಮರ್ಥನೆ

ಡಿಜಿಟಲ್ ಕನ್ನಡ ಟೀಮ್:

ಮುಂದಿನ ವರ್ಷ ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತೆ ತಮ್ಮ ಪಕ್ಷವನ್ನು ಅಧಿಕಾರದ ಗದ್ದುಗೆ ಮೇಲೆ ಕೂರಿಸಲು ಎಲ್ಲ ರೀತಿಯ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಮೊನ್ನೆಯಷ್ಟೇ ಸಿಂಧು ನದಿ ನೀರು ನೀಡುವ ಭರವಸೆ ನೀಡಿದ್ದ ಮೋದಿ, ಈಗ ರೈತರ ಶ್ರಮವನ್ನು ಪ್ರಶಂಶಿಸಿ ಅವರ ಮನವೊಲೈಸಲು ಮುಂದಾಗಿದ್ದಾರೆ. ಜತೆಗೆ ನೋಟು ಅಮಾನ್ಯದ ಸರ್ಕಾರದ ನಿರ್ಧಾರ ಸಮರ್ಥಿಸಿಕೊಳ್ಳುವುದರ ಜತೆಗೆ ಸಂಸತ್ತಿನಲ್ಲಿನ ಗದ್ದಲ ಕುರಿತಂತೆ ವಿಪಕ್ಷಗಳ ಮೇಲೆ ಟೀಕಾ ಪ್ರಹಾರ ನಡೆಸಿದ್ದಾರೆ.

ಗುಜರಾತಿನ ಉತ್ತರ ಭಾಗದಲ್ಲಿರುವ ದೀಸಾ ನಗರದಲ್ಲಿ ಅಮೂಲ್ ಚೀಸ್ ಕೇಂದ್ರವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ ಈ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಂಡು ಪ್ರತಿಪಕ್ಷಗಳ ಮೇಲೆ ಹರಿಹಾಯ್ದರು. ಈ ವೇದಿಕೆಯಲ್ಲಿ ಮೋದಿ ಆಡಿದ ಮಾತುಗಳ ಸಾರಾಂಶ ಹೀಗಿದೆ.

‘ಇಂದು ದೇಶದಲ್ಲಿ ಎಲ್ಲರೂ ನಗದು ನೋಟಿನ ಬಗ್ಗೆ ಮಾತನಾಡುತ್ತಿದ್ದಾರೆ. ನಮ್ಮ ಸರ್ಕಾರ ದೇಶದ ಬಡವರನ್ನು ಬಲಶಾಲಿಯಾಗಿಸುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ. ಈ ನಿರ್ಧಾರದಿಂದ ಕಡಿಮೆ ಮೌಲ್ಯದ ನೋಟುಗಳಿಗೆ ಹೆಚ್ಚು ಪ್ರಾಮುಖ್ಯತೆ ಬಂದಿದೆ. ಹೀಗಾಗಿ ಬಡವರು ಶ್ರೀಮಂತರಿಗಿಂತ ಹೆಚ್ಚು ಬಲ ಹೊಂದುವಂತಾಗಿದೆ. ನಮ್ಮ ದೇಶದ ಬಡವರು ಇನ್ನು ಎಷ್ಟು ದಿನಗಳ ಕಾಲ ತಮ್ಮ ಮನೆಯ ಬಾಡಿಗೆಯನ್ನು ನಗದಿನ ಮೂಲಕವೇ ನೀಡಬೇಕು? ದೇಶದಲ್ಲಿ ಭ್ರಷ್ಟಾಚಾರ ವಿರುದ್ಧ ಅತೃಪ್ತಿ ಹೊಂದಿರುವವರು ಯಾರು? ಈ ಎಲ್ಲ ಅಂಶಗಳ ಜತೆಗೆ ನೋಟು ಅಮಾನ್ಯ ನಿರ್ಧಾರದಿಂದ ನಕಲಿ ನೋಟುಗಳ ಹಾವಳಿ ಸಂಪೂರ್ಣವಾಗಿ ನಾಶವಾಗಿದ್ದು, ಭಯೋತ್ಪಾದಕರು, ನಕ್ಸಲರ ಕೈಗಳು ಬಿದ್ದುಹೋದಂತಾಗಿವೆ.

ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಸಂಸತ್ತನ್ನು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಲು ಬಿಡುತ್ತಿಲ್ಲ. ಇದರ ಪರಿಣಾಮವಾಗಿ ರಾಜಕೀಯವಾಗಿ ಅಪಾರ ಅನುಭವ ಹೊಂದಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರೇ ತಾಳ್ಮೆ ಕಳೆದುಕೊಳ್ಳುವಂತಾಗಿದೆ. ಸರ್ಕಾರ ತನ್ನ ನಿರ್ಧಾರದ ಬಗ್ಗೆ ಚರ್ಚೆ ನಡೆಸಲು ಸಿದ್ಧ ಎಂದು ಮೊದಲಿನಿಂದಲೂ ಹೇಳುತ್ತಲೇ ಬಂದಿದೆ. ಲೋಕಸಭೆಯಲ್ಲಿ ನನ್ನನ್ನು ಮಾತನಾಡಲು ಬಿಡುತ್ತಿಲ್ಲ. ಹೀಗಾಗಿ ನಿಮ್ಮೆಲ್ಲರ ಮುಂದೆ ಜನಸಭೆಯಲ್ಲಿ ಮಾತನಾಡುತ್ತಿದ್ದೇನೆ. ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭಾಯ್ ಪಟೇಲ್ ಅವರಂತಹ ಮಹಾನ್ ವ್ಯಕ್ತಿಗಳನ್ನು ಕೊಡುಗೆಯಾಗಿ ನೀಡಿದ ನೆಲದಲ್ಲಿ ನಿಂತು ನಮ್ಮ ವಿಪಕ್ಷ ಮಿತ್ರರಿಗೆ ಕೆಲವು ಸಲಹೆಗಳನ್ನು ನೀಡಲು ಇಚ್ಛಿಸುತ್ತೇನೆ.

ಚುನಾವಣೆ ಸಂದರ್ಭದಲ್ಲಿ ನಾವು ಪರಸ್ಪರ ದ್ವೇಷದ ವಾಗ್ವಾದವನ್ನು ನಡೆಸಿದ್ದೇವೆ ನಿಜ. ಅದಕ್ಕೆ ತಕ್ಕ ರೀತಿಯಲ್ಲಿ ನೀವು ನನ್ನ ವಿರುದ್ಧ ಟೀಕೆ ಮಾಡಬಹುದು. ಈ ಟೀಕೆಗಳ ಜತೆಗೆ ಜನರು ಬ್ಯಾಂಕಿಂಗ್ ವ್ಯವಸ್ಥೆಗೆ ಹೊಂದುಕೊಳ್ಳುವಂತೆ ಮಾಡಲು ಎಲ್ಲರೂ ಸೇರಿ ಪರಿಶ್ರಮಿಸೋಣ. ಕೇವಲ ಬಡವರ ಬಗ್ಗೆ ಮಾತನಾಡುವುದನ್ನು ಬಿಟ್ಟು ಬಡವರ ಕಲ್ಯಾಣಕ್ಕಾಗಿ ಶ್ರಮಿಸೋಣ. ಸರ್ಕಾರದ ನಿರ್ಧಾರದ ನಂತರ ನಾನು 50 ದಿನಗಳ ಸಮಯಾವಕಾಶ ಕೋರಿದ್ದೆ. ಈ ನಿರ್ಧಾರದಿಂದ ಆಗುವ ಬದಲಾವಣೆಗಳನ್ನು ನೀವು ನೋಡಲಿದ್ದೀರಿ. ದೇಶದಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಇದೊಂದು ಮಹತ್ವದ ನಿರ್ಧಾರವಾಗಲಿದೆ.

ನವೆಂಬರ್ 8ರ ನಂತರ ಕಪ್ಪುಹಣವನ್ನು ಅಕ್ರಮವಾಗಿ ಬಿಳಿಯಾಗಿ ಮಾಡಲು ಮುಂದಾದವರನ್ನು ಸರ್ಕಾರ ಸುಮ್ಮನೆ ಬಿಡುವುದಿಲ್ಲ. ಇಂದು ನಿಮ್ಮ ಬ್ಯಾಂಕ್ ಹಾಗೂ ಪರ್ಸ್ ನಿಮ್ಮ ಮೊಬೈಲ್ ನಲ್ಲಿ ಸೇರಿವೆ. ಇದೇ ರೀತಿಯಲ್ಲಿ ಪರಿಸ್ಥಿತಿಯೂ ಬದಲಾಗಬೇಕಿದೆ. ಪ್ರತಿಯೊಬ್ಬರೂ ಇ ಬ್ಯಾಂಕಿಂಗ್ ನತ್ತ ಆಸಕ್ತಿ ವಹಿಸಿ. ದೇಶ ಅಭಿವೃದ್ಧಿಯ ಪಥದತ್ತ ಹೆಜ್ಜೆ ಹಾಕಬೇಕಿದೆ. ಈ ಹಾದಿಯಲ್ಲಿ ಭ್ರಷ್ಟಾಚಾರ ಹಾಗೂ ಕಪ್ಪು ಹಣ ದೇಶದ ಪ್ರಗತಿಯ ವೇಗವನ್ನು ಕುಂಠಿತವಾಗಿಸುತ್ತಿದೆ. ದೇಶದ ಬಡವರನ್ನು ದೋಚುವುದು, ಮಧ್ಯಮ ವರ್ಗದವರ ಮೇಲೆ ದಬ್ಬಾಳಿಕೆ ನಡೆಸುವುದು ಇನ್ನು ಇತಿಹಾಸದ ಪುಟಗಳನ್ನು ಸೇರಲಿದೆ.

ಗುಜರಾತಿನ ಉತ್ತರ ಭಾಗದ ರೈತರು ತಮ್ಮ ಸಾಮರ್ಥ್ಯ ಏನೆಂಬುದನ್ನು ಈಗಾಗಲೇ ಇಡೀ ವಿಶ್ವಕ್ಕೆ ತೋರಿಸಿದ್ದಾರೆ. ಸುದೀರ್ಘ ಸಮಯದ ನಂತರ ನಾನು ಬನಸ್ಕಂತಾಗೆ ಆಗಮಿಸಿದ್ದೇನೆ. ನಾನು ಇಲ್ಲಿಗೆ ಪ್ರಧಾನಿಯಾಗಿ ಬಂದಿಲ್ಲ. ಈ ಮಣ್ಣಿನ ಮಗನಾಗಿ ಬಂದಿದ್ದೇನೆ. ಒಂದು ಕಾಲದಲ್ಲಿ ಕುಚ್ ಹಾಗೂ ಬನಸ್ಕಂತಾ ಪ್ರದೇಶದ ಜನರು ಉತ್ತಮ ಅವಕಾಶಗಳನ್ನು ಅರಸಿ ಬೇರೆಡೆಗೆ ಹೋಗುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಇಲ್ಲಿನ ರೈತರು ನನ್ನ ಮನವಿ ಸ್ವೀಕರಿಸಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡರು. ನಂತರ ಅವರ ಹಾಗೂ ಮುಂದಿನ ತಲೆಮಾರಿನ ಭವಿಷ್ಯವೇ ಬದಲಾಗಿದೆ. ಜತೆಗೆ ಪಶುಸಂಗೋಪನೆಯತ್ತಲೂ ಆಸಕ್ತಿ ವಹಿಸಿದರು. ಒಂದು ಕಾಲದಲ್ಲಿ ಪಶುಸಂಗೋಪನೆ ಮೂಲಕ ಕ್ಷೀರ ಕ್ರಾಂತಿ (ಶ್ವೇತ ಕ್ರಾಂತಿ) ಮಾಡಿದ್ದ ಈ ಭಾಗದ ರೈತರು ಈಗ ಜೇನಿನ ಸಾಕಾಣೆಗೂ ಮುಂದಾಗಿದ್ದಾರೆ. ಆ ಮೂಲಕ ಈಗ ಸಿಹಿ ಕ್ರಾಂತಿ (ಸ್ವೀಟ್ ಕ್ರಾಂತಿ) ಮಾಡುತ್ತಿದ್ದಾರೆ.’

Leave a Reply