ಅಬಕಾರಿ ಸಚಿವ ಎಚ್.ವೈ ಮೇಟಿ ರಾಸಲೀಲೆ? ಸಿದ್ದರಾಮಯ್ಯ ಸರ್ಕಾರಕ್ಕೆ ಹೊಸ ಕಳಂಕ

ಡಿಜಿಟಲ್ ಕನ್ನಡ ಟೀಮ್:

ದಿನೇ ದಿನೇ ಸಿದ್ದರಾಮಯ್ಯ ಸರ್ಕಾರ ಒಂದಿಲ್ಲೊಂದು ಅವಾಂತರಗಳಿಂದ ನಲುಗುತ್ತಿದೆ. ಮೊನ್ನೆಯಷ್ಟೇ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಸಚಿವ ತನ್ವೀರ್ ಸೇಠ್ ಅವರು ಅಶ್ಲೀಲ ಚಿತ್ರ ವೀಕ್ಷಣೆ ಮಾಡಿದ್ದ ಪ್ರಕರಣದಿಂದ ಮೈಕೊಡವಿಕೊಂಡಿದ್ದ ಸರ್ಕಾರಕ್ಕೆ ಈಗ ಮತ್ತೊಂದು ಕಳಂಕ ಎದುರಾಗಿದೆ. ಅದೇನೆಂದರೆ ಅಬಕಾರಿ ಸಚಿವ ಎಚ್.ವೈ ಮೇಟಿ ಅವರು ಮಹಿಳೆಯೊಬ್ಬರ ಜತೆಗಿನ ರಾಸಲೀಲೆ ಪ್ರಕರಣ.

ಹೌದು, ಸಚಿವ ಮೇಟಿ ಅವರು ಮಹಿಳೆಯೊಬ್ಬರನ್ನು ತಮ್ಮ ಲೈಂಗಿಕವಾಗಿ ಬಳಸಿಕೊಂಡಿರುವುದು ಸಿಡಿಯಲ್ಲಿ ದಾಖಲಾಗಿದೆ ಎಂಬ ಮಾಹಿತಿ ಭಾನುವಾರ ಸ್ಫೋಟಗೊಂಡಿದೆ.

ಈ ಸಿಡಿ ಹೊಂದಿದ್ದಾರೆ ಎನ್ನಲಾದ ಬಳ್ಳಾರಿಯ ಆರ್ ಟಿ ಐ ಕಾರ್ಯಕರ್ತ ರಾಜಶೇಖರ್ ಎಂಬುವವರಿಗೆ ಸಚಿವರ ಬೆಂಬಲಿಗರು ಪ್ರಾಣ ಬೆದರಿಕೆ ಹಾಕಿದ್ದು, ಈ ಬಗ್ಗೆ ಆಡಿಯೋಗಳು ಮಾಧ್ಯಮಗಳಿಗೆ ಲಭ್ಯವಾಗಿವೆ. ಜತೆಗೆ ಸಚಿವರ ಗನ್ ಮ್ಯಾನ್ ಸುಭಾಶ್ ಸಹ ರಾಜಶೇಖರ್ ಅವರ ಬಳಿ ಸಿಡಿ ಬಿಡುಗಡೆ ಮಾಡಬೇಡಿ ಎಂಬ ಮನವಿ ಮಾಡಿರುವುದು ಸಹ ಆಡಿಯೋದಲ್ಲಿದೆ. ತಮಗೆ ಪ್ರಾಣ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ರಾಜಶೇಖರ್ ಮುಂದಾಗಿದ್ದಾರೆ.

ಅಬಕಾರಿ ಇಲಾಖೆಯ ಅಧಿಕಾರಿಯೊಬ್ಬರು ಸಚಿವರಿಗೆ ಈ ಮಹಿಳೆಯನ್ನು ಪರಿಚಯಿಸಿದ್ದು, ನಂತರ ಸಚಿವರು ಈಕೆಯನ್ನು ಬಾಗಲಕೋಟೆಯ ಜಿಲ್ಲಾ ಪಂಚಾಯ್ತಿ ಕಚೇರಿಯಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರ ಕೊಠಡಿಯಲ್ಲಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಈ ರಾಸಲೀಲೆ ಪ್ರಕರಣದ ಬಗ್ಗೆ ಮುಖ್ಯಮಂತ್ರಿಗಳಿಗೂ ಕೆಲ ದಿನಗಳ ಹಿಂದೆ ಮಾಹಿತಿ ರವಾನೆಯಾಗಿದ್ದು, ಈ ಬಗ್ಗೆ ಸಿದ್ದರಾಯಮಯ್ಯನವರು ಸಹ ಮೇಟಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಬಾಗಲಕೋಟೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವರು. ‘ನನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಆ ಸಂತ್ರಸ್ತ ಮಹಿಳೆ ನನ್ನ ಸಂಬಂಧಿ. ನನ್ನನ್ನು ತಂದೆಯ ರೀತಿಯಲ್ಲಿ ನೋಡುತ್ತಾರೆ. ನಾನು ಸಚಿವ ಸ್ಥಾನಕ್ಕೆ ಯಾಕೆ ರಾಜಿನೇಮೆ ನೀಡಬೇಕು? ನನಗೆ ರಾಜಶೇಖರ್ ಯಾರೆಂದು ಗೊತ್ತಿಲ್ಲ. ಒಂದು ವೇಳೆ ಆ ಸಿಡಿ ಇದ್ದರೆ ಬಿಡುಗಡೆ ಮಾಡಲಿ, ಆ ಸಿಡಿಯಲ್ಲಿ ನಾನು ಇದ್ದರೆ ಮುಂದಿನ ನಿರ್ಧಾರದ ಬಗ್ಗೆ ಯೋಚಿಸೋಣ’ ಎಂದಿದ್ದಾರೆ.

ರಾಸಲೀಲೆಯ ಸಿಡಿ ಇನ್ನಷ್ಟೇ ಬಹಿರಂಗವಾಗಬೇಕಿದ್ದು, ಸಚಿವರ ಲೈಂಗಿಕ ತೃಷೆಗೆ ಬಳಕೆಯಾಗಿರುವ ಮಹಿಳೆಗೂ ಪ್ರಾಣ ಬೆದರಿಕೆ ಇದೆ. ಸಿಡಿ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಈ ಸಿಡಿ ಬಿಡುಗಡೆಯಾಗದಿದ್ದರೂ ರಾಜಶೇಖರನ್ ಅವರು ಬಿಡುಗಡೆ ಮಾಡಿರುವ ಆಡಿಯೋಗಳು ಸಿಡಿಯ ಅಸ್ಥಿತ್ವದ ಬಗ್ಗೆ ನಂಬಿಕೆ ಹುಟ್ಟಿಸಿವೆ. ಒಟ್ಟಿನಲ್ಲಿ ಗೊಂದಲದ ಗೂಡಾಗಿರುವ ಈ ಸಿಡಿ ಪ್ರಕರಣ ಮುಂದಿನ ದಿನಗಳಲ್ಲಿ ಬಹಿರಂಗವಾಗುತ್ತದೊ ಅಥವಾ ಸುದ್ದಿ ಹಂತದಲ್ಲೇ ಮರೆಯಾಗಿ ಬಿಡುತ್ತದೋ ಎಂಬುದನ್ನು ಕಾದು ನೋಡಬೇಕು.

Leave a Reply